ಆಧುನಿಕ ರಾಜ್ಯದ ಶಿಲ್ಪಿ ಸರ್‌.ಎಂ.ವಿಶ್ವೇಶ್ವರಯ್ಯ

7
ಸರ್‌ಎಂವಿ ಜಿಲ್ಲೆಗೆ ಕೊಟ್ಟ ಕೊಡುಗೆಗಳ ಮೆಲುಕು ಹಾಕಿದ ಮುಖಂಡರು, ಎಂಜಿನಿಯರ್‌ಗಳ ದಿನಾಚರಣೆ

ಆಧುನಿಕ ರಾಜ್ಯದ ಶಿಲ್ಪಿ ಸರ್‌.ಎಂ.ವಿಶ್ವೇಶ್ವರಯ್ಯ

Published:
Updated:
Deccan Herald

ಮಂಡ್ಯ: ನಗರದ ವಿವಿಧೆಡೆ ಶಾಲೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಶನಿವಾರ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಜಯಂತಿ ಆಚರಿಸಲಾಯಿತು. ಸರ್‌.ಎಂ.ವಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅವರು ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ನೆನೆಯಲಾಯಿತು.

ಬ್ರಾಹ್ಮಣ ಸಭಾ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ, ಕಾವೇರಿ ಉದ್ಯಾನದಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೊಳಲು ಶ್ರೀಪಾದ್‌ ‘ಭಾರತ ರತ್ನ ವಿಶ್ವೇಶ್ವರಯ್ಯ ಅವರು ಜಗತ್ತು ಕಂಡ ಅದ್ಭತ ಎಂಜಿನಿಯರ್‌. ಅವರ ಕೊಡುಗೆಗಳು ಭಾರತಕ್ಕಷ್ಟೇ ಸೀಮಿತವಾಗಿಲ್ಲ, ವಿದೇಶಗಳಲ್ಲೂ ಅವರನ್ನು ನೆನೆಯುತ್ತಾರೆ. ಮುಂಬೈ ನಗರ ನಿರ್ಮಾಣಕ್ಕೆ ಅವರು ಮೂರು ಯೋಜನೆ ರೂಪಿಸಿದ್ದರು. ಗಂಗಾನದಿಗೆ ಅತ್ಯಂತ ಉದ್ದದ ಸೇತುವೆ ನಿರ್ಮಾಣಕ್ಕೆ ತಮ್ಮ 95ನೇ ವಯಸ್ಸಿನಲ್ಲೂ ನೀಲನಕ್ಷೆ ರೂಪಿಸಿದ್ದರು. ಪಂಚವಾರ್ಷಿಕ ಯೋಜನೆಯಲ್ಲಿ ಅವರ ಪಾತ್ರ ಪ್ರಮುಖವಾದುದು. ಇಡೀ ದೇಶದಲ್ಲಿ ಮೊದಲ ಬಾರಿಗೆ ಕೆಆರ್‌ಎಸ್‌ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್‌ ಅಳವಡಿಸಿದ್ದರು’ ಎಂದು ಹೇಳಿದರು.

‘ಮೈಸೂರನ್ನು ಜಗತ್ತಿನ ಶ್ರೇಷ್ಠ ರಾಜ್ಯವನ್ನಾಗಿ ನಿರ್ಮಿಸುವುದು ಅವರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನಿರ್ಮಿಸಿದ ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್‌ ಪ್ರಮುಖವಾಗಿವೆ. ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಅವರು ಕೊಟ್ಟ ಕೊಡುಗೆಯನ್ನು ಮರೆಯುವಂತಿಲ್ಲ. ಆಧುನಿಕ ರಾಜ್ಯದಲ್ಲಿ ಅವರು ಶಿಲ್ಪಿಯಾಗಿ ಗುರುತಿಸಿಕೊಂಡಿದ್ದಾರೆ. ಶತಮಾನ ಕಾಲ ಜೀವಿಸಿದ ಅವರು ವಿಶ್ವಕ್ಕೆ ಮಾದರಿ ಸೇವೆ ಮಾಡಿದ್ದಾರೆ’ ಎಂದರು. ಬ್ರಾಹ್ಮಣ ಸಭಾದ ಕಾರ್ಯದರ್ಶಿ ಎಸ್‌.ಶಂಕರನಾರಾಯಣ ಶಾಸ್ತ್ರಿ, ಪದಾಧಿಕಾರಿಗಳಾದ ಶಿವಾನಂದ್‌, ಸೀತಾರಾಮಯ್ಯ, ಮಮತಾ ರಮೇಶ್‌, ಪ್ರೊ.ನರಸಿಂಹಮೂರ್ತಿ ಇದ್ದರು.

ಅಭಿನವಭಾರತಿ ವಿದ್ಯಾಸಂಸ್ಥೆ ವತಿಯಿಂದ ಸರ್‌ಎಂವಿ ಜಯಂತಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಅನಂತಕುಮಾರ ಸ್ವಾಮೀಜಿ ಮಾತನಾಡಿ ‘ವಿಶ್ವೇಶ್ವರಯ್ಯ ಜಯಂತಿಯನ್ನು ಎಂಜಿನಿಯರ್‌ಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ವಿಶ್ವೇಶ್ವರಯ್ಯ ಇಲ್ಲದಿದ್ದರೆ ಮಂಡ್ಯ ಜಿಲ್ಲೆ ಪ್ರಗತಿ ಕಾಣುತ್ತಿರಲಿಲ್ಲ. ಅವರು ನೀರಾವರಿಗೆ ಕೊಟ್ಟಿರುವ ಕೊಡುಗೆಗಳಿಂದಾಗಿ ಮಂಡ್ಯ ಹಸಿರು ಜಿಲ್ಲೆಯಾಗಿ ಕಂಗೊಳಿಸುತ್ತಿದೆ. ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಯಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರ. ಕೆಆರ್‌ಎಸ್‌, ಮೈಷುಗರ್ ಕಾರ್ಖಾನೆ, ಕಾಗದದ ಕಾರ್ಖಾನೆ, ಶಿಂಷಾ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಸೇರಿ ಜಿಲ್ಲೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು. ಮುಖ್ಯ ಶಿಕ್ಷಕರಾದ ಅಂಜಲಿ ಜೋಶಿ, ಜಗನ್ನಾಥ್, ಹಿರಿಯ ಶಿಕ್ಷಕ ನಾಗೇಂದ್ರ, ದೈಹಿಕ ಶಿಕ್ಷಣ ಶಿಕ್ಷಕರಾದ ಶಿವರುದ್ರಸ್ವಾಮಿ, ಜಯರಾಂ ಇದ್ದರು.

ಕಲ್ಲಹಳ್ಳಿಯ ಸರ್‌.ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗ, ಕಾಯಕಯೋಗಿ ಫೌಂಡೇಷನ್‌ ವತಿಯಿಂದಲೂ ಸರ್‌.ಎಂ.ವಿ ಜಯಂತಿ ನಡೆಯಿತು.

ಎಂಜಿನಿಯರ್‌ ದಿನಾಚರಣೆ
ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಕೃಷಿಕ ಲಯನ್ಸ್ ಸಂಸ್ಥೆ ವತಿಯಿಂದ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಎಂಜಿನಿಯರ್ ದಿನಾಚರಣೆ ನಡೆಯಿತು. ಕೃಷಿಕ ಲಯನ್ಸ್ ಸಂಸ್ಥೆಯ 317ಎ ರಾಜ್ಯಪಾಲ ಲಯನ್ ವಿ. ರೇಣುಕುಮಾರ್ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ ‘ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಎಂಜಿನಿಯರ್‌ಗಳ ಹುಟ್ಟಿಗೆ ಶಿಕ್ಷಕರು ಕಾರಣ’ ಎಂದು ಹೇಳಿದರು.

2ನೇ ರಾಜ್ಯಪಾಲ ಡಾ.ಜಿ.ಎ.ರಮೇಶ್ ಮಾತನಾಡಿ, ‘ಎಲ್ಲ ವೃತ್ತಿಗಳು ಶ್ರೇಷ್ಠ. ವಿದ್ಯಾರ್ಥಿಗಳ ಇಂದಿನ ಕಲಿಕೆ ಮುಂದಿನ ವೃತ್ತಿ ಬದುಕನ್ನು ನಿರ್ಧರಿಸಲು ಕಾರಣವಾಗುತ್ತದೆ. ಪ್ರತಿ ಶಿಕ್ಷಕರಿಂದಲೂ ಒಂದೊಂದು ವಿಷಯ ಕಲಿತು ಪರಿಪೂರ್ಣರಾಗಬೇಕು’ ಎಂದರು.

ಲಯನ್ಸ್ ಮಹಾಪೋಷಕ ಕೆ.ಟಿ.ಹನುಮಂತು, ಪ್ರಾಂಸುಪಾಲ ಪ್ರೊ.ಶಿವನಂಜೇಗೌಡ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ನೇತ್ರಾವತಿ, ಕೆ.ಜಗದೀಶ್, ಕೆ.ಎಸ್.ದ್ವಾರಕನಾಥ್, ವೈ.ಡಿ.ಗೋಪಾಲಗೌಡ, ಬಿ.ಎಂ.ಅಪ್ಪಾಜಪ್ಪ, ಬಿ.ಲಿಂಗೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !