ತಯಾರಿ

7

ತಯಾರಿ

Published:
Updated:
Deccan Herald

‘ಒಂ ಚೂರು ಕೇರ್‌ಫುಲ್ ಆಗಿರಿ ಸಾರ್, ನಥಿಂಗ್ ಸೀರಿಯಸ್’ ಎಂದು ಮಾತು ಮುಗಿಸಿದ ಆತ ಫೋನ್ ಇಡುವ ಮುನ್ನ ಮತ್ತೆ ಮೃದುವಾಗಿ, ‘ಏನಿಲ್ಲ ಸಾರ್, ಲ್ಯಾಬಿನಿಂದ ಬರುವಾಗ, ಹೋಗುವಾಗ ಸ್ವಲ್ಪ ಆ ಕಡೆ ಈ ಕಡೆ ವಾಚ್ ಮಾಡ್ಕೊಂಡು ಹೋಗಿ, ಇನ್ನೇನಾದರೂ ಇದ್ರೆ ಹೇಳ್ತೀನಿ’ ಎಂದು, ಯಾವ ಥರ ಎಚ್ಚರಿಕೆ ವಹಿಸಬೇಕೆಂದು ಕೆಲವು ಸೂಚನೆಗಳನ್ನು ಕೊಟ್ಟಿದ್ದ.

ಆತ ಹೇಳಿದ್ದನ್ನೆಲ್ಲ ಸುಮ್ಮನೆ ಕೇಳಿಸಿಕೊಂಡಿದ್ದ ಜಯರಾಂ ಕೊನೇಹಳ್ಳಿಗೆ ಇದೆಲ್ಲ ವಿಚಿತ್ರ ಅನ್ನಿಸಿತು. ಆತ ಹೇಳಿದ್ದನ್ನು ನಂಬಲು ಜಯರಾಂಗೆ ಇಷ್ಟವಿರಲಿಲ್ಲವೋ ಅಥವಾ ನಂಬಲು ಕಷ್ಟವಾಗುತ್ತಿತ್ತೋ, ಅಂತೂ ಅವನೊಳಗೆ ತೀರಾ ದಿಗಿಲು ಮೂಡಿದಂತಿರಲಿಲ್ಲ. ಆದರೂ ಅವತ್ತು ಉಳಿದೆಲ್ಲರಿಗಿಂತ ಮೊದಲೇ ಲ್ಯಾಬ್ ಬಿಟ್ಟು ಇನ್ಸ್ಟಿಟ್ಯೂಟಿನ ಕಾಂಪೌಂಡಿನಲ್ಲೇ ಇದ್ದ ಮನೆಗೆ ಹೋಗುವ ಹಾದಿಯಲ್ಲಿ ಅತ್ತಿತ್ತ ಕಣ್ಣು ಹಾಯಿಸುತ್ತಾ ಚಡಪಡಿಸಿದಾಗ…ತನ್ನ ಆಳದಲ್ಲಿ ದಿಗಿಲು ಹಬ್ಬಿರುವುದು ಅವನ ಅನುಭವಕ್ಕೆ ಬರತೊಡಗಿತು. ಬೇರೆಯವರ ಎದುರು ತೋರಬಹುದಾದ ಧೈರ್ಯವನ್ನು ತನಗೆ ತಾನೇ ತೋರಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ಕೂಡ ಅರಿವಾಗತೊಡಗಿತು. ತಾನು ಎಷ್ಟೇ ಖಡಕ್ ವಿಜ್ಞಾನಿಯಾದರೂ, ಮೂಲತಃ ಹುಲುಮಾನವ ತಾನೇ? ಮನುಷ್ಯ ಎಷ್ಟೇ ಧೀರನ ಭಂಗಿ ರೂಢಿಸಿಕೊಳ್ಳಲೆತ್ನಿಸಿದರೂ ಮೂಲಭೂತ ಭಯಗಳಿಂದ ತಪ್ಪಿಸಿಕೊಳ್ಳಲಾರ ಎಂಬುದು ಮತ್ತೊಮ್ಮೆ ಖಾತ್ರಿಯಾಯಿತು. ಇನ್ಸ್ಟಿಟ್ಯೂಟಿನ ಮೇನ್ ಗೇಟಿನ ಬಳಿ ತರುಣನೊಬ್ಬ ತನ್ನತ್ತಲೇ ನೋಡುತ್ತಿದ್ದಂತೆ ಕಂಡು, ಜಯರಾಂ ಅನುಮಾನದಿಂದ ಅವನನ್ನೇ ದಿಟ್ಟಿಸಿದ. ತರುಣ ಸೆಕ್ಯುರಿಟಿಯ ಬಳಿ ಕೊರಿಯರ್ ಕೊಟ್ಟು ಹೋದ ಮೇಲೆ ಜಯರಾಂ ಪೆಚ್ಚಾದ.

‘ಪ್ರೊಫೆಸರ್ ರಾಮೇಗೌಡರಿಗೆ ಪರ್ಸಿಕ್ಯೂಷನ್ ಕಾಂಪ್ಲೆಕ್ಸು’ ಎಂದು ಸೀನಿಯರ್ ಸೈಂಟಿಸ್ಟುಗಳು ಆಡಿಕೊಳ್ಳುತ್ತಿದ್ದುದನ್ನು ಕೇಳಿದ್ದ ಜಯರಾಂಗೆ, ರಾಮೇಗೌಡರು ‘ತನ್ನನ್ನು ಯಾರೋ ಬೆನ್ನು ಹತ್ತಿದ್ದಾರೆ’ ಎಂದು ಯಾಕೆ ಬೆಚ್ಚುತ್ತಿದ್ದರು ಎಂಬುದು ಈಗ ಅರಿವಾಗತೊಡಗಿತು. ಒಂದು ಗ್ರೌಂಡ್ ಬ್ರೇಕಿಂಗ್ ರಿಸರ್ಚಿನಲ್ಲಿ ತೊಡಗಿದ್ದೇನೆಂದು ಹೇಳುತ್ತಿದ್ದ ರಾಮೇಗೌಡರು, ಕೆಲವೊಮ್ಮೆ ಜಯರಾಂ ತಾನು ಬರುತ್ತಿದ್ದೇನೆಂದು ಮೊದಲೇ ಹೇಳಿ ಅವರ ರೂಮಿಗೆ ಹೋದರೂ ಅವನನ್ನು ಅನುಮಾನದಿಂದ ನೋಡುತ್ತಾ ಥಟ್ಟನೆ ಲ್ಯಾಪ್ ಟಾಪ್ ಮುಚ್ಚುತ್ತಿದ್ದುದರ ಕಾರಣ ಕೂಡ ಅರ್ಥವಾಗತೊಡಗಿತು. ಅವರು ತಲುಪಬಹುದಾದ ಕೆಲವು ನಿರ್ಣಯಗಳು ಇನ್ಸ್ಟಿಟ್ಯೂಟಿನ ಸೀನಿಯರ್ ವಿಜ್ಞಾನಿಗಳ ಹಳೆಯ ನಿರ್ಣಯಗಳನ್ನು ಚಿಂದಿ ಮಾಡಲಿವೆಯೆಂಬುದು ಜಯರಾಂಗೆ ಗೊತ್ತಿತ್ತು. ಅದಕ್ಕೇ ಸೀನಿಯರುಗಳೆಲ್ಲ ಸೇರಿಕೊಂಡು ರಾಮೇಗೌಡರು ರಿಸರ್ಚ್ ವಿದ್ಯಾರ್ಥಿಗಳಿಗೆ ಕಿರುಕುಳ ಕೊಡುತ್ತಿದ್ದಾರೆಂದು ಮೂಕರ್ಜಿ ಬರೆಸಿ ಅವರನ್ನು ಡಿಸ್ಟರ್ಬ್ ಮಾಡುತ್ತಿದ್ದುದು ಕೂಡ ಗೊತ್ತಿತ್ತು. ಇದೀಗ ಒಂದು ಗಳಿಗೆಯ ಕೆಳಗೆ ರಾಮೇಗೌಡರಂತೆ ತಾನೂ ಬೆಚ್ಚಿದಾಗ ಅವರ ಸ್ಥಿತಿ ಸರಿಯಾಗಿ ಅವನ ಅನುಭವಕ್ಕೆ ಬರತೊಡಗಿತು.

ರಾಮೇಗೌಡರಿಗೆ ಫೋನ್ ಮಾಡೋಣವೆನ್ನಿಸಿ ಮೊಬೈಲ್ ತೆಗೆದರೆ ಮಧ್ಯಾಹ್ನ ಕಾಲ್ ಮಾಡಿದ್ದ ಆ ಆಫೀಸರ್ ನಂಬರ್ ಮತ್ತೆ ಕಣ್ಣಿಗೆ ಬಿತ್ತು. ಫೋನ್ ಮಾಡಿ ನೋಡೋಣವೇ ಎಂದುಕೊಂಡ; ‘ಸಾರ್, ಈ ನಂಬರಿಗೆ ಫೋನ್ ಮಾಡೋಕೆ ಹೋಗಬೇಡಿ. ನಾಳೆ ನಾನೇ ಫೋನ್ ಮಾಡಿ ಬೇರೆ ನಂಬರ್ ಕೊಡ್ತೀನಿ’ ಎಂದು ಆತ ಅಂದಿದ್ದು ನೆನಪಾಯಿತು. ಆತ ಮಾತಾಡುತ್ತಿದ್ದಷ್ಟು ಕಾಲ ವಿಷಯ ತಮಾಷೆಯಾಗಿಯೇ ಕಂಡಿದ್ದರಿಂದ ಜಯರಾಂ ಆತ ಹೇಳಿದ್ದಕ್ಕೆಲ್ಲ ‘ಓಕೇ’ ‘ಫೈನ್’ ‘ಥ್ಯಾಂಕ್ಸ್’ಗಳಲ್ಲೇ ಉತ್ತರಿಸಿ ಮುಗಿಸಿದ್ದ. ಆಫೀಸಿನಿಂದ ಹೊರಟಾಗ ದಿಗಿಲಾದರೂ ಮನೆ ತಲುಪುವ ಹೊತ್ತಿಗೆ ದಿಗಿಲು ದೂರ ಸರಿಯತೊಡಗಿತ್ತು. ಮನೆಯ ಕಾಂಪೌಂಡಿನಲ್ಲಿ ಮಲಗಿದ್ದ ಮುಧೋಳ್ ರಾಜ ಎಗರುತ್ತಾ ಬಂತು; ಇವನು ಅದರತ್ತ ಹೆಚ್ಚು ಗಮನ ಕೊಡದೆ ಸುಮ್ಮನೆ ತಲೆ ಸವರಿ ಬೀಗ ತೆಗೆಯುತ್ತಿದ್ದನ್ನು ಕಂಡು ಪೆಚ್ಚಾಗಿ ನಿಂತುಕೊಂಡಿತು. ಮನೆಯ ಬೀಗ ತೆಗೆಯುತ್ತಿರುವಾಗ ಯಾರಾದರೂ ಒಳಗೆ ಸೇರಿಕೊಂಡಿರಬಹುದೇ ಎಂಬ ಅನುಮಾನ ಸುಳಿದು ಮರೆಯಾಯಿತು. ಬೋಲ್ಟ್ ಹಾಕಿದ್ದನ್ನು ಖಾತ್ರಿ ಮಾಡಿಕೊಂಡು ರೂಮಿಗೆ ಹೋಗಿ ಹಾಸಿಗೆಯ ಮೇಲೊರಗಿ ರೀಡಿಂಗ್ ಲ್ಯಾಂಪ್ ಹಾಕಿ, ಬದಿಯಲ್ಲಿದ್ದ ಪುಸ್ತಕವೊಂದನ್ನು ಎಳೆದುಕೊಂಡು ಒಂದೆರಡು ಪುಟ ದಾಟುವ ಹೊತ್ತಿಗಾಗಲೇ… ಎಂದಿನಂತೆ ತನ್ನ ಸುತ್ತ ಏನಾಗುತ್ತಿದೆ, ಎಲ್ಲಿದ್ದೇನೆ ಎಂಬುದು ಪೂರಾ ಮರೆತಂತಾಯಿತು. ಎಷ್ಟೋ ಹೊತ್ತಿನ ಮೇಲೆ ಪುಸ್ತಕದಲ್ಲಿ ಎದುರಾದ ಯಾವುದೋ ಪದದಿಂದಾಗಿ ಮನಸ್ಸು ಮಧ್ಯಾಹ್ನದ ಫೋನ್ ಕಾಲ್ ಗೆ ಮರಳಿತು. ಫೋನ್ ಬಂದ ಗಳಿಗೆಯ ದುಗುಡ ಕಡಿಮೆಯಾಗಿತ್ತು. ಸಾಮಾನ್ಯವಾಗಿ ಕೆಲವು ಥರದ ದಿಗ್ಭ್ರಮೆಗಳು ಒಂದು ಹಗಲು, ಒಂದು ರಾತ್ರಿಯೊಳಗೆ ನಿಧಾನಕ್ಕೆ ಅವನ ಮನಸ್ಸಿನ ಹಿನ್ನೆಲೆಗೆ ಸರಿದುಬಿಡುತ್ತಿದ್ದವು. ಇವತ್ತು ಬೆಟ್ಟದಂತೆ ಕಂಡಿದ್ದು ನಾಳೆ ಕರಗಿ, ಅದು ಎಂದೂ ಇರಲೇ ಇಲ್ಲವೇನೋ ಎಂಬಂತೆ ಚದುರಿ ಹೋಗಿರುತ್ತಿತ್ತು. ಇದು ಕೂಡ ಹಾಗೇ ಸರಿದು ಹೋಗಬಹುದು ಅನ್ನಿಸಿತು.

ಆದರೂ ಇದು ತೀರಾ ಹೊರಗಿನ ಪ್ರಶ್ನೆಯಾಗಿರದೆ ಒಳಗೇ ಸುತ್ತುತ್ತಿದ್ದರಿಂದ ಮತ್ತೆ ಜಯರಾಂ ಮನಸ್ಸು ಅಲ್ಲಿಗೇ ಬಂದು ನಿಂತಿತು. ‘ಓಕೇ! ಯಾರು ನನ್ನ ಹೊಡೆದು ಹಾಕಿದರೂ ಏನೂ ಪರವಾಗಿಲ್ಲ’ ಅಂದುಕೊಂಡ. ತಾರುಣ್ಯದಲ್ಲಿ ಹಾಗೂ ಆನಂತರವೂ ಯಾರು ಏನೇ ಹೇಳಿದರೂ ಮದುವೆಯಾಗಿರಲಿಲ್ಲ. ಊರಿನಲ್ಲಿ ಅಪ್ಪ, ಅಣ್ಣ ಬಿಟ್ಟರೆ ಹತ್ತಿರದ ರಕ್ತಸಂಬಂಧಿಗಳಿರಲಿಲ್ಲ. ತಾನು, ತನ್ನ ಸಂಸಾರ ಎಂದು ಆರಾಮಾಗಿರುವ ಅಣ್ಣನಿಗೆ ಇದು ಒಂದು ದಿನದ ಶಾಕ್ ಮಾತ್ರ ಆಗಬಹುದು! ಕಟ್ಟುನಿಟ್ಟಾದ ಊಟ, ವಾಕಿಂಗುಗಳಿಂದ ಆರೋಗ್ಯವಾಗಿರುವ ಅಪ್ಪನನ್ನು ಇದು ಐದಾರು ತಿಂಗಳು ಕಾಡಬಹುದೇನೋ. ಅಪ್ಪನಿಗೆ ಯಾವುದು ಎಷ್ಟು ಕಾಡುತ್ತದೆ ಎಂಬುದು ತನಗೇನು ಗೊತ್ತು! ಕಳೆದ ಇಪ್ಪತ್ತು ವರ್ಷಗಳಲ್ಲಂತೂ ಅವರ ಬಳಿ ನೂರು ವಾಕ್ಯಗಳಿಗಿಂತ ಹೆಚ್ಚು ಮಾತಾಡಿರಲಿಕ್ಕಿಲ್ಲ ಎನ್ನಿಸಿ ಪಿಚ್ಚೆನ್ನಿಸಿತು.

ಇಪ್ಪತ್ತು ವರ್ಷಗಳ ಕೆಳಗೆ ಅವ್ವ ತೀರಿಕೊಂಡ ಮೇಲೆ ಮೊನ್ನೆಮೊನ್ನೆಯವರೆಗೂ ಊರಿನಲ್ಲೇ ಟೀಚರ್ ಆಗಿದ್ದುಕೊಂಡು ಈಗ ರಿಟೈರ್ಡ್ ಆಗಿರುವ ಅಪ್ಪನಿಗೆ ತಾನು ಹೀಗೆ ಸತ್ತರೆ ನೋವಾಗಬಹುದು ಎಂದು ಜಯರಾಂಗೆ ಒಂಚೂರು ಅಳು ಬಂತು. ಇನ್ಷೂರೆನ್ಸ್ ಹಣವೆಲ್ಲ ಅಪ್ಪನಿಗೇ ಹೋಗುವುದರಿಂದ ಅಪ್ಪನಿಗೆ ನಿಧಾನವಾಗಿ ನೆಮ್ಮದಿಯಾಗಬಹುದು; ಅಪ್ಪನ ನಂತರ ಆ ಹಣ ತನಗೆ ಬರಬಹುದೆಂದು ಅಣ್ಣನೂ ಸಮಾಧಾನ ಮಾಡಿಕೊಳ್ಳಬಹುದು ಅನ್ನಿಸಿದಾಗ, ಇದು ಸಿನಿಕ ಆಲೋಚನೆಯಿರಬಹುದು ಎಂದು ಅನುಮಾನವಾಯಿತು; ಅದರ ಬೆನ್ನಿಗೇ, ಇದು ನಿಷ್ಠುರ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯವೂ ಆಗಿರಬಹುದು ಅನ್ನಿಸಿತು!

ಅದಿರಲಿ, ಆ ಆಫೀಸರ್ ಎಚ್ಚರಿಸಿದ್ದಂತೆ ತನ್ನನ್ನು ಮುಗಿಸಲು ಈ ಊರಿಗೆ ಬಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದ ‘ಬಾಬು’ವಿಗೆ ನನ್ನನ್ನು ಟಾರ್ಗೆಟ್ ಮಾಡಲು ಯಾವ ಕಾರಣವಿರಬಹುದು ಎಂದು ಜಯರಾಂಗೆ ಕುತೂಹಲ ಹುಟ್ಟಿತು. ‘ಬಾಬು’ ಅಂದರೆ ಯಾವ ಜಾತಿಯವನಾದರೂ ಆಗಿರಬಹುದು, ಯಾವ ಧರ್ಮವನಾದರೂ ಆಗಿರಬಹುದು; ಅದು ಸುಳ್ಳು ಹೆಸರೂ ಆಗಿರಬಹುದು. ಈ ಬಾಬುವಿಗೆ ನನ್ನ ಬೆನ್ನು ಹತ್ತಲು ಯಾರ ಒತ್ತಡವಿರಬಹುದು? ‘ಅಯ್ಯೋ! ನಮ್ಮ ಮೇಲೆ ಯಾರಿಗೆ ಯಾವ ಕಾರಣಕ್ಕೆ ಕೋಪವಿರುತ್ತೋ ಅಂತ ಹೇಗೆ ಹೇಳುವುದು!’ ಎಂದು ಪೊಲೀಸ್ ಮಿತ್ರ ಸಿದ್ಧರಾಜು ಹೇಳಿದ್ದ ಮಾತು ತೇಲಿ ಬಂತು. ಅವನೇ ‘ಇವತ್ತಿಗೂ ಬಹುತೇಕ ಅಪರಾಧಗಳು ಹೆಣ್ಣು ಹೊನ್ನು ಮಣ್ಣಿಗಾಗಿ ನಡೆಯುತ್ತಿರುತ್ತವೆ’ ಅಂದಿದ್ದ. ತನ್ನ ಹತ್ತಿರ ಅಂಥ ಹಣವಾಗಲೀ ಆಸ್ತಿಯಾಗಲೀ ಇರಲಿಲ್ಲ! ಇನ್ನು ಹೆಣ್ಣು! ಅದೆಲ್ಲ ಹದಿನೈದು ವರ್ಷದ ಹಿಂದಿನ ಮಾತು.

‘ನಿನ್ನನ್ನೇಕೆ ಮದುವೆಯಾಗಬಾರದು?’ ಎನ್ನುತ್ತಾ ಒಮ್ಮೆ ನಾಚಿದ್ದ ಅವಳು ಮುಂದೆ ಎಲ್ಲೋ ಮದುವೆಯಾಗಿ ಕಾಣದಾಗಿದ್ದಳು. ಆದರೂ ಈಗ ತಾನು ಸತ್ತರೆ ಈ ಲೋಕದಲ್ಲಿ ನಿಜಕ್ಕೂ ಅಳಬಹುದಾದ ವ್ಯಕ್ತಿ ಅವಳೇ ಅನ್ನಿಸಿ, ಅವತ್ತು ಅವಳ ಕಾಲು ಹಿಡಿದಾದರೂ ಅವಳ ಕೈ ಹಿಡಿಯಬೇಕಿತ್ತು ಅನ್ನಿಸಿ ಜಯರಾಂಗೆ ನಗು ಬಂತು. ತಮಾಷೆಗೆ, ಆಫೀಸಿನಲ್ಲಿ ಯಾರಿಗಾದರೂ ತನ್ನ ಸಾವು ಕಾಡಬಹುದೇ ಎಂದು ಯೋಚಿಸಿದ. ಫೆಲೋಶಿಪ್ಪು, ಫಂಡಿಂಗು, ಫೈಲು, ಕಾನ್ಫರೆನ್ಸು, ಖ್ಯಾತಿ, ರಿಸರ್ಚ್ ಪೇಪರುಗಳಲ್ಲಿ ಮುಳುಗಿರುವ ಅವರೆಲ್ಲ ಒಂದು ದಿನಕ್ಕಿಂತ ಹೆಚ್ಚು ಶೋಕಿಸಲಾರರು ಅನ್ನಿಸಿತು. ಒಂದು ದಿನ? ಅರ್ಧ ದಿನ? ಒಂದು ಗಂಟೆ…ಎಂದುಕೊಳ್ಳುತ್ತಿರುವಾಗ, ಕಾಲೇಜಿನಲ್ಲಿ ಓದಿದ್ದ ‘ಡೆತ್ ಆಫ್ ಇವಾನ್ ಇಲ್ಯಿಚ್’ ಕತೆ ನೆನಪಾಯಿತು: ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಇವಾನ್ ಇಲ್ಯಿಚ್ ಗೆ ಮನೆಯವರೆಲ್ಲ ಆರಾಮಾಗಿರುವುದನ್ನು ಕಂಡಾಗ ತಾನು ಸತ್ತರೂ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲವೆಂಬುದು ಹೊಳೆಯುತ್ತದೆ! ಎಂದೋ ಓದಿದ್ದ ಟಾಲ್ ಸ್ಟಾಯ್ ಕತೆಯ ಸತ್ಯ ಈಗ ತನ್ನನ್ನು ಕುಟುಕುತ್ತಿದೆಯಲ್ಲ ಎನ್ನಿಸಿ ಜಯರಾಂಗೆ ಅಚ್ಚರಿಯಾಯಿತು. ಇನ್ನೊಬ್ಬರ ಆತಂಕ ನಮಗೇ ಎದುರಾಗುವ ತನಕ ಆ ಆತಂಕ ನಮಗೆ ಅರ್ಥವಾಗುವುದೇ ಇಲ್ಲವೆನ್ನುವುದೂ ಗೊತ್ತಾಯಿತು.

ಅದೇನೇ ಇರಲಿ, ತನ್ನನ್ನು ಗುರಿ ಮಾಡಿಕೊಳ್ಳಲು ಆ ಬಾಬುವಿಗೆ ಇದ್ದ ಕಾರಣಗಳೇನು ಎಂದು ಆ ಆಫೀಸರ್ ನಾಳೆ ಫೋನ್ ಮಾಡಿದರೆ ಕೇಳಬೇಕೆಂದುಕೊಂಡ ಜಯರಾಂಗೆ, ಇದ್ದಕ್ಕಿದ್ದಂತೆ ಇದು ತನ್ನ ಇನ್ಸ್ಟಿಟ್ಯೂಟಿನಲ್ಲೇ ಯಾರೋ ಮಾಡಿರಬಹುದಾದ ಕೆಟ್ಟ ಜೋಕಿರಬಹುದೇ ಅನ್ನಿಸಿತು. ತಕ್ಷಣ ಮೊಬೈಲ್ ಕೈಗೆತ್ತಿಕೊಂಡು ಇನ್ ಕಮಿಂಗ್ ಕಾಲ್ ನಲ್ಲಿದ್ದ ಆಫೀಸರ್ ನಂಬರ್ ಒತ್ತಿದ. ಫೋನ್ ರಿಂಗಾಗದೆ ಕಟ್ಟಾಯಿತು. ಅದು ಒನ್ ವೇ ಫೋನಿರಬೇಕು ಅನ್ನಿಸಿದರೂ, ಇದೆಲ್ಲ ನಿಜಕ್ಕೂ ತಮಾಷೆಯೇ ಇರಬೇಕೆಂದು ನಂಬಲೆತ್ನಿಸಿದ. ಮನುಷ್ಯನ ಮನಸ್ಸು ಭೀಕರ ಸತ್ಯಗಳನ್ನು ಮುಂದೂಡಲು ತನಗೆ ತಾನೇ ಹುಸಿ ಸಾಂತ್ವನದ ಹಾದಿಗಳನ್ನು ಸೃಷ್ಟಿಸಿಕೊಳ್ಳುತ್ತದೆ ಎಂಬುದು ಆಗಾಗ ಅವನ ಅನುಭವಕ್ಕೆ ಬಂದಿತ್ತು. ರಾತ್ರಿ ಉಂಡು ಮಲಗಿ ಬೆಳಗ್ಗೆ ಏಳುವ ಹೊತ್ತಿಗೆ ವಿಷಯ ಮರೆತೇಹೋಗಿತ್ತು. ಬೆಳಗ್ಗೆ ವಾಕ್ ಹೋಗುವಾಗ ಫೋನ್ ಕಾಲ್ ನೆನಪಾಯಿತು. ‘ಅಯ್ಯೋ! ಸತ್ತರೆ ಕತ್ತೇಬಾಲ!’ ಎಂದು ತನಗೇ ಕೇಳಿಸುವಂತೆ ಬಾಯಿಬಿಟ್ಟು ಹೇಳಿಕೊಂಡು ಸುತ್ತಾಡಿ ಮನೆಗೆ ಬಂದು ಹತ್ತು ಗಂಟೆಗೆ ಆಫೀಸಿಗೆ ಹೋದ.

ರೂಮ್ ಬಾಗಿಲು ಹಾಕಿಕೊಂಡು ನಿನ್ನೆ ಬೆಳಗ್ಗೆ ಟಿಪ್ಪಣಿ ಮಾಡಿದ್ದ ಐಡಿಯಾಗಳನ್ನೆಲ್ಲ ಸೆಮಿನಾರ್ ಪೇಪರಿನೊಳಕ್ಕೆ ಜೋಡಿಸಿ ಕೊನೆಯ ಪುಟ ತಲುಪುವಾಗ ಜಯರಾಂಗೆ ಮತ್ತೆ ಫೋನ್ ಕಾಲ್ ನೆನಪಾಗಿ, ಫೋನ್ ಮಾಡಿದ; ಫೋನ್ ನಿನ್ನೆಯ ಹಾಗೇ ರಿಂಗಾಗದೆ ಕಟ್ಟಾಯಿತು. ಈ ಬಾಬು ಯಾಕೆ ತನ್ನನ್ನು ಬೆನ್ನು ಹತ್ತಲು ಬಂದಿದ್ದ ಎಂದು ಮತ್ತೆ ಕುತೂಹಲ ಹುಟ್ಟಿತು. ಲ್ಯಾಪ್ ಟಾಪ್ ಸ್ಕ್ರೀನಿನ ಮೇಲಿದ್ದ ಐಡಿಯಾಗಳನ್ನು ತನ್ನ ಭಾವನೆಗಳಿಗೆ ಸಂಬಂಧವೇ ಇಲ್ಲವೇನೋ ಎಂಬಂತೆ ದೂರ ನಿಂತು ನೋಡುವುದು ರೂಢಿಯಾಗಿದ್ದ ಜಯರಾಂ ಇದೀಗ ಬಾಬುವಿನ ಟಾರ್ಗೆಟ್ ಆಗಿರುವ ಜಯರಾಂ ಎಂಬ ವಿಜ್ಞಾನಿಯನ್ನು ಲ್ಯಾಬಿನಲ್ಲಿ ಯಾವುದೋ ವಸ್ತುವನ್ನು ಮೈಕ್ರೋಸ್ಕೋಪಿನಡಿ ಇಟ್ಟು ನೋಡುವಂತೆ ಸುಮ್ಮನೆ ನೋಡತೊಡಗಿದ:

ಈಗ ಟಾರ್ಗೆಟ್ ಆಗಿರುವ ಡಾ.ಜಯರಾಂ ಕೊನೇಹಳ್ಳಿ ಆಸ್ಟ್ರೋಫಿಸಿಕ್ಸಿನಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿರುವ ವಿಜ್ಞಾನಿ. ಮೊನ್ನೆ ತಾನೇ ಲೀಡ್ಸ್ ಯೂನಿವರ್ಸಿಟಿಯ ಅಪರೂಪದ ಫೆಲೋಶಿಪ್ ಪಡೆದವನು. ತನ್ನ ಕ್ಷೇತ್ರದಲ್ಲಿ ಏಳೆಂಟು ಗಟ್ಟಿ ರಿಸರ್ಚ್ ಸ್ಟೂಡೆಂಟುಗಳನ್ನು ಬೆಳೆಸಿರುವವನು. ಎಂಟ್ರೆನ್ಸಿನಲ್ಲಿ ಒಳ್ಳೆಯ ಅಂಕ ಪಡೆದರೂ ಉಳಿದ ವಿಜ್ಞಾನಿಗಳು ಗೈಡ್ ಮಾಡಲು ಸಿದ್ಧರಿರದ ಬಸಪ್ಪ, ಶಫಿಉಲ್ಲಾ, ಕೂಡ ಇವನ ವಿದ್ಯಾರ್ಥಿಗಳೇ. ಸ್ಕಾಲರ್‌ಶಿಪ್ಪಿಗಾಗಿ ಕಾಯುತ್ತಿರುವ ಒಂದಿಬ್ಬರು ಹುಡುಗರ ಹಾಸ್ಟೆಲ್ ಫೀಸನ್ನು ಕೂಡ ಜಯರಾಂ ನೋಡಿಕೊಳ್ಳುತ್ತಾನೆ. ಇದೆಲ್ಲ ಹುಡುಗರ ನಡುವೆ ಪಾಪ್ಯುಲರ್ ಆಗಲು ಜಯರಾಂ ಆಡುತ್ತಿರುವ ಆಟವೆಂದು ಆಡಿಕೊಳ್ಳುವ ಸಹೋದ್ಯೋಗಿಗಳಿದ್ದಾರೆ. ಹಾಗೆಯೇ, ರಿಸರ್ಚ್ ಏರಿಯಾದಲ್ಲೂ ಅವನಿಗೆ ಸ್ಪರ್ಧಿಗಳಿದ್ದಾರೆ. ಈ ದುರಹಂಕಾರಿ ಜಯರಾಂ ತೊಲಗಿದರೆ, ಯಾವುದಾದರೂ ಸ್ಕ್ಯಾಂಡಲ್ಲಿನಲ್ಲಿ ಸಿಕ್ಕಿಹಾಕಿಕೊಂಡು ತಲೆ ಕೆಡಿಸಿಕೊಂಡರೆ ತಮ್ಮ ಹಾದಿ ಸುಗಮ ಎಂದು ಅವರಿಗೆ ಅನ್ನಿಸಿರಬಹುದು. ಪ್ರತಿಯೊಬ್ಬ ಸ್ಪರ್ಧಿಯೂ ತನ್ನ ಎದುರಾಳಿಯನ್ನು ‘ಮುಗಿಸಲು’ ಪ್ರಯತ್ನಿಸುತ್ತಲೇ ಇರುತ್ತಾನೆ; ಹೀಗೆ ‘ಮುಗಿಸುವುದು’ ಯಾವ ಥರವಾದರೂ ಇರಬಹುದು! ಇಂಥದೇ ಭಾವ ತನ್ನೊಳಗೂ ತನ್ನ ಸ್ಪರ್ಧಿಗಳ ಬಗ್ಗೆ ಸುಳಿದು ಹೋಗಿರುವುದರಿಂದ ಇದು ನಿಜವೆಂಬುದು ಜಯರಾಂಗೆ ಗೊತ್ತಿತ್ತು.

ಹಿಂದೆ ಜಯರಾಂ ವಿರುದ್ಧ ಹೆಡ್ ಆಫೀಸಿಗೆ ಮೂಕರ್ಜಿ ಬರೆದಿದ್ದ ಈ ಸ್ಪರ್ಧಿಗಳು ಇವನ ಸೀನಿಯರ್ ಸೈಂಟಿಸ್ಟ್ ಪ್ರಮೋಶನ್ ತಪ್ಪಿಸಲೆತ್ನಿಸಿದ್ದರು. ಆದರೆ ಕಮಿಟಿಯ ಛೇರ್ಮನ್ ಪ್ರೊ.ಪಾರ್ಥಸಾರಥಿ ‘ರೂಲ್ ಮೈಂಡೆಡ್’ ವ್ಯಕ್ತಿಯಾಗಿದ್ದರಿಂದ ಜಯರಾಂ ಹೆಸರನ್ನೇ ಪ್ರಮೋಶನ್ ಲಿಸ್ಟಿನ ಮೊದಲಲ್ಲಿಟ್ಟಿದ್ದರು. ಇದಕ್ಕೂ ಮೊದಲು, ಯಾವುದೋ ಹುಡುಗಿಯಿಂದ ಲೈಂಗಿಕ ಕಿರುಕುಳದ ಕೇಸು ಹಾಕಿಸಬೇಕೆಂದು ಹೊರಟವರು, ಸಣ್ಣದೊಂದು ತಪ್ಪಿಗೆಲ್ಲ ಹುಯಿಲೆಬ್ಬಿಸಿದವರು, ಜಯರಾಂ ಎಲ್ಲಿ ಹೋಗುತ್ತಾನೆ, ಯಾರ ರೂಮಿನಲ್ಲಿ ಹೆಚ್ಚು ಹೊತ್ತು ಕಳೆಯುತ್ತಾನೆ, ಯಾರ ಜೊತೆ ಮಾತಾಡುತ್ತಾನೆ ಎಂದು ಅಟೆಂಡರುಗಳ ಕೈಯಲ್ಲಿ ‘ರಿಸರ್ಚ್’ ಮಾಡಿಸುತ್ತಿರುವ ಪ್ರೊಫೆಸರುಗಳೂ ಇನ್ಸ್ಟಿಟ್ಯೂಟಿನಲ್ಲಿದ್ದರು…

ಅಂದರೆ, ಇವರೆಲ್ಲ ಒಂದು ಥರದಲ್ಲಿ ಜಯರಾಂ ಎಂಬ ವಿಜ್ಞಾನಿಯನ್ನು ‘ಮುಗಿಸಲು’ ಬಯಸಿದ್ದವರೇ! ಒಂದು ಸಲವಂತೂ ಒಂದು ಬಿಳಿ ಇನ್ನೋವಾ ಕಾರು ಜಯರಾಂ ಕಾರನ್ನೇ ಫಾಲೋ ಮಾಡುತ್ತಿತ್ತು. ಜಯರಾಂ ಇದ್ದಕ್ಕಿದ್ದಂತೆ ಪೊಲೀಸ್ ಸ್ಟೇಷನ್ನಿನ ಬಳಿ ಕಾರು ನಿಲ್ಲಿಸಿದಾಗ ಇನ್ನೋವಾ ಮುಂದೆ ಹೋಗಿ ನಿಂತಿತು. ಜಯರಾಂ ಕಾರಿಳಿದು ಪೋಲೀಸ್ ಸ್ಟೇಶನ್ನಿನ ಕಡೆಗೆ ಹೋಗುತ್ತಿದ್ದಂತೆ ಇನ್ನೋವಾ ಮಂಗಮಾಯವಾಗಿತ್ತು. ಜಯರಾಂ ಕಾರಿನ ನಂಬರ್ ನೋಟ್ ಮಾಡಿಕೊಂಡ; ಅದು ಮತ್ತೆಂ– ದೂ ಕಣ್ಣಿಗೆ ಬೀಳಲಿಲ್ಲ. ಅದು ತನ್ನನ್ನು ಫಾಲೋ ಮಾಡಿದ್ದು ನಿಜವೋ ಅಥವಾ ಯಾವುದೋ ದಿಗಿಲಿನಿಂದಾಗಿ ಹಾಗೆ–ನ್ನಿಸಿತ್ತೋ ಇವತ್ತಿಗೂ ಅವನಿಗೆ ಗ್ಯಾರಂಟಿಯಿರಲಿಲ್ಲ. ಈ ಬಾಬುವನ್ನು ಇವರಲ್ಲಿ ಯಾರಾದರೂ ಛೂ ಬಿಟ್ಟಿರಬಹುದೆ? ಅಬ್ಬಬ್ಬಾ ಎಂದರೆ ತನ್ನ ಕೆಲಸ ಕಳೆಯುವವರೆಗೂ ಹೋಗ–ಬಹುದಾಗಿದ್ದ ಈ ಕಿರುಕುಳ ಜೀವಿಗಳು ಆ ಮಟ್ಟಕ್ಕೆ ಇಳಿದಿರಲಾರರು ಅಂದುಕೊಂಡ.

ಹೀಗೆಲ್ಲ ಯೋಚಿಸುತ್ತಾ ತನ್ನನ್ನು ತಾನು ಒಳ್ಳೆಯವನೆಂದುಕೊಂಡು ಸೆಲ್ಫ್ ಪಿಟಿಯಲ್ಲಿ ಮುಳುಗುವುದು ಮುಜುಗರ ಹುಟ್ಟಿಸತೊಡಗಿ ಜಯರಾಂ ಮೇಲೆದ್ದ; ಮತ್ತೆ ಮನಸ್ಸು ಅದೇ ಜಾಡಿಗೆ ಮರಳಿದಾಗ…ಯಾರ ಕೋಪ ಯಾವ ಗಳಿಗೆಯಲ್ಲಿ ಯಾರ ಕಡೆಗೆ ಯಾಕೆ ತಿರುಗುತ್ತದೆ ಎಂದು ಹೇಳುವುದು ಕಷ್ಟ ಅನ್ನಿಸಿತು. ಮೊನ್ನೆ ದಾರಿಯಲ್ಲಿ ಯಾರೋ ‘ಆ ನನ್ಮಗನಿಗೆ ಮಕ್ಕಳ ಕಳ್ಳ ಅಂತ ಗಲಾಟೆ ಮಾಡಿಸಿ ಧರ್ಮದೇಟ್ ಹಾಕ್ಸುದ್ರೆ ಗೊತ್ತಾಗುತ್ತೆ ಗುರೂ!’ ಎಂದು ಯಾರ ಬಗೆಗೋ ಫೋನಿನಲ್ಲಿ ಚೀರುತ್ತಿದ್ದುದು ನೆನಪಾಯಿತು. ಅಂಥವರು ಇನ್ಸ್ಟಿಟ್ಯೂಟಿನಲ್ಲೂ ಇದ್ದರು. ನ್ಯಾಶನಲ್ ಸೆಮಿನಾರುಗಳಲ್ಲಿ ನಡೆದ ವಾಗ್ವಾದಗಳಲ್ಲಿ ಹಲ್ಲು ಕಡಿದು ಮಾತಾಡಿದ್ದ ಸೀನಿಯರ್ ಸೈಂಟಿಸ್ಟುಗಳು ನೆನಪಾದರು. ‘ಟೆಸ್ಟ್ ಟ್ಯೂಬ್ ಬೇಬಿಯನ್ನು ಕಂಡು ಹಿಡಿದವರು ನಾವೇ…ಮಹಾಭಾರತದಲ್ಲಿ…’ ಎಂದು ಅವತ್ತು ಬಾಹ್ಯಾಕಾಶ ವಿಜ್ಞಾನಿ ಪ್ರೊ.ಷಣ್ಮುಗಂ ಹಳೇ ಪ್ಲೇಟು ಹಾಕಿದ ತಕ್ಷಣ ಜಯರಾಂ ನಕ್ಕಿದ್ದ. ಷಣ್ಮುಗಂ ಉರಿಗಣ್ಣು ಬಿಟ್ಟಿದ್ದ; ಕೊನೆಗೆ, ‘ನಮ್ಮ ವೇದಿಕ್ ಸೈನ್ಸ್ ಬಗ್ಗೆ ಗೌರವವಿಲ್ಲದ, ಪಶ್ಚಿಮದ ಗುಲಾಮರಾಗಿರುವ ವಿಜ್ಞಾನಿಗಳನ್ನು ನೇಣಿಗೆ ಹಾಕಿದರೂ ತಪ್ಪಿಲ್ಲ’ ಎಂದು ಕರೆ ಕೊಟ್ಟು ಭಾಷಣ ಮುಗಿಸಿದ್ದ. ಹಿಂದೊಮ್ಮೆ, ರಾಕೆಟ್ಟೊಂದನ್ನು ಉಡಾವಣೆ ಮಾಡುವಾಗ ಅಡಚಣೆಯಾಗಿದ್ದಕ್ಕೆ ‘ಅದು ರಾಹುಕಾಲದಲ್ಲಿ ಹಾರಿದ್ದೇ ಕಾರಣ’ ಎಂದಿದ್ದ ಷಣ್ಮುಗಂ ಮಾತನ್ನು ಪತ್ರಿಕೆಯೊಂದರಲ್ಲಿ ಜಯರಾಂ ಟೀಕಿಸಿದ್ದ; ಜರ್ನಲ್ಲೊಂದರಲ್ಲಿ ಪ್ರಕಟವಾದ ಷಣ್ಮುಗಂನ ಲೇಖನದ ದೋಷಗಳನ್ನು ಅದರ ಮುಂದಿನ ಸಂಚಿಕೆಯಲ್ಲಿ ಎತ್ತಿ ತೋರಿಸಿದ್ದ. ಅವತ್ತು ಭಾಷಣದ ಕೊನೆಯಲ್ಲಿ ಷಣ್ಮುಗಂ ಕೊಟ್ಟಿದ್ದ ನೇಣಿನ ಕರೆಯ ಹಿನ್ನೆಲೆಯಲ್ಲಿ ಇವೆಲ್ಲ ಇದ್ದಿರಬಹುದೇ… ಈ ಬಾಬುವನ್ನು ಷಣ್ಮುಗಂ ಕಳಿಸಿರಬಹುದೇ ಎಂದು ಅನುಮಾನ ಬಂತು!

ಇದೆಲ್ಲದರ ಜೊತೆಗೆ, ಎರಡು ಮೂರು ವರ್ಷಗಳಿಂದ ಸೂರ್ಯಗ್ರಹಣ, ಚಂದ್ರಗ್ರಹಣಗಳ ಬಗ್ಗೆ ಜನರಲ್ಲಿದ್ದ ಮೂಢನಂಬಿಕೆಗಳನ್ನು ನಿವಾರಿಸಲು ಲೋಕಲ್ ಪತ್ರಿಕೆಗಳಲ್ಲಿ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ತಾನು ಬರೆಯುತ್ತಿದ್ದ ಬರಹಗಳ ಬಗ್ಗೆ ನಡೆಯುತ್ತಿದ್ದ ಚಕಮಕಿಗಳು ಜಯರಾಂಗೆ ನೆನಪಾದವು. ಪ್ರಜ್ಞಾ ಸಾಹಿತ್ಯ ವೇದಿಕೆಯವರು ವಿದ್ಯಾರ್ಥಿಗಳ ಸಭೆಯೊಂದರಲ್ಲಿ ಈ ಬಗ್ಗೆ ಮಾತಾಡಲು ಕರೆದಾಗ ಗ್ರಹಣಗಳು ಹೇಗಾಗುತ್ತವೆಂಬುದನ್ನು ಜಯರಾಂ ಸರಳವಾಗಿ ವಿವರಿಸಿದ್ದ. ಆ ಸಭೆಯಲ್ಲಿ ಬಿಳಿ ಪಂಚೆ, ಬಿಳಿ ಶರಟು ತೊಟ್ಟು, ಹೆಗಲಲ್ಲಿ ಬ್ಯಾಗು ನೇತು ಹಾಕಿಕೊಂಡಿದ್ದವನೊಬ್ಬ ಮೇಲೆದ್ದು ಹುಬ್ಬು ಗಂಟಿಕ್ಕಿಕೊಂಡು, ‘ನಿಮ್ಮಂಥ ವಿದೇಶಿ ವಿಚಾರಗಳನ್ನು ಬಿತ್ತುವ ವಿಜ್ಞಾನಿಗಳಿಂದಲೇ ಈ ದೇಶದ ದಿವ್ಯ ಸಂಸ್ಕೃತಿಗೆ ಧಕ್ಕೆ ಬಂದಿರೋದು’ ಎಂದು ಷಣ್ಮುಗಂ ಥರವೇ ಚೀರಿದ್ದ. ಇವತ್ತು ಜಯರಾಂ ಕುತೂಹಲಕ್ಕೆ ಮನಸ್ಸಿನಲ್ಲೇ ಇಬ್ಬರ ಮುಖಗಳನ್ನೂ ಒಟ್ಟಿಗಿಟ್ಟು ನೋಡಿದರೆ, ಅವು ಬಾಲ್ಯದಲ್ಲಿ ಬೇರ್ಪಟ್ಟ ಅವಳಿಗಳ ಮುಖಗಳಂತಿದ್ದವು! ಬಿಳಿ ಪಂಚೆ ಬಿಳಿ ಶರಟಿನವನೂ ಷಣ್ಮುಗಮ್ಮೂ ಸೇರಿ ಬಾಬುವನ್ನು ಕಳಿಸಿರಬಹುದೇ ಎನ್ನಿಸಿ ಜಯರಾಂಗೆ ನಗು ಬಂತು. ಈ ಇಬ್ಬರ ಮುಖವೂ ಮಂತ್ರಿಯೊಬ್ಬನ ಮುಖವನ್ನೇ ಹೋಲುತ್ತಿದ್ದುದನ್ನು ಕಂಡು ವಿಸ್ಮಯವಾಯಿತು.

ಪೊಲೀಸ್ ಮಿತ್ರ ಸಿದ್ಧರಾಜು ‘ನಮ್ಮ ಮೇಲೆ ಯಾರಿಗೆ ಯಾವ ಕಾರಣಕ್ಕೆ ಕೋಪವಿರುತ್ತೋ ಅಂತ ಹೇಗೆ ಹೇಳುವುದು!’ ಎಂದಿದ್ದರ ಹಿನ್ನೆಲೆಯಲ್ಲಿ ಇವೆಲ್ಲವೂ ಜಯರಾಂ ಕಣ್ಣೆದುರು ಹಳೆಯ ಸಿನಿಮಾದ ರೀಲುಗಳಂತೆ ಕಟ್ ಕಟ್ ಆಗಿ ಹಾದು ಹೋಗುತ್ತಿದ್ದವು… ಈಚೆಗೆ ರಿಸರ್ಚ್ ಸಿಲಬಸ್ ಕಮಿಟಿಯಲ್ಲಿ, ‘ಅಲ್ರೀ! ವೆಸ್ಟರ್ನ್ ರಿಸರ್ಚಿನ ಹೊಸ ಟ್ರೆಂಡ್ಸ್ ಸೇರಿಸದೆ ಎಂಥ ಸಿಲಬಸ್ ಮಾಡ್ತಿದೀರ?’ ಎಂದು ಜಯರಾಂ ರೇಗಿದಾಗ, ‘ನಮ್ಮ ದೇಶದ ನೇಟೀವ್ ಏನ್ಷಿಯೆಂಟ್ ರಿಸರ್ಚ್ ಟ್ರೆಂಡ್ಸ್ ಸಿಲಬಸ್ಸಿನಲ್ಲಿ ಇರಲೇಬೇಕು’ ಎಂದು ಇಬ್ಬರು ಸದಸ್ಯರು ಕೂಗಿದ್ದರು. ‘ಅದೇನೇನು ನೇಟೀವ್ ಟ್ರೆಂಡ್ಸ್ ಇದೆ ಅನ್ನೋದನ್ನ ಸರಿಯಾಗಿ ಹೇಳ್ರೀ. ಬರೀ ಬುಲ್ ಶಿಟ್ ಮಾತಾಡಬೇಡಿ’ ಎಂದು ಜಯರಾಂ ಹೇಳಿದಾಗ ಮಗುಮ್ಮಾದ ಅವರು ಇನ್ನೆಲ್ಲೋ ಜಗಳ ಮುಂದುವರಿಸುವವರಂತೆ ಸುಮ್ಮನಾಗಿದ್ದರು. ಅವರು ಇನ್ನೆಂದೂ ತನ್ನನ್ನು ಸಿಲಬಸ್ ಕಮಿಟಿಗೆ ಕರೆಯುವುದಿಲ್ಲವೆನ್ನುವುದು ಅವತ್ತೇ ಗ್ಯಾರಂಟಿಯಾಗಿತ್ತು!

ಅವತ್ತು ರಾತ್ರಿ ಕ್ಲಬ್ಬಿನಲ್ಲಿ ಸಿಕ್ಕ ಪ್ರೊ.ಚಲಂ ಬೆಳಗಿನ ಮಿಂಟಿಂಗಿನ ತಮಾಷೆಯನ್ನು ನೆನಸಿಕೊಳ್ಳುತ್ತಾ, ‘ನಿನ್ನ ಕನ್ಸರ್ನ್ಸ್ ಎಲ್ಲಾನೂ ನಾನೂ ಒಪ್ತೀನಪ್ಪಾ, ಹೇಳೋದನ್ನ ಒಂಚೂರು ನಯವಾಗಿ, ಅಕ್ಯಾಡೆಮಿಕ್ಕಾಗಿ ಹೇಳಿದ್ರೆ ಆಗಲ್ವಾ?’ ಎಂದಿದ್ದರು. ಪ್ರೊ.ಚಲಂ ಸೀರಿಯಸ್ ಜರ್ನಲ್ಲುಗಳಲ್ಲಿ ಮಾತ್ರ ಬರೆಯುತ್ತಿದ್ದುರಿಂದ, ಅವರನ್ನು ಅಟ್ಯಾಕ್ ಮಾಡುವ ಮಟ್ಟದ ಇಂಗ್ಲಿಷ್ ಆ ಸಭೆಯಲ್ಲಿದ್ದ ಯಾರಿಗೂ ಬರುತ್ತಿರಲಿಲ್ಲ; ಹೀಗಾಗಿ ಯಾರೂ ಅವರ ತಂಟೆಗೆ ಹೋಗುತ್ತಿರಲಿಲ್ಲ! ಆದರೂ ಮೈಯೆಲ್ಲ ಎಣ್ಣೆ ಸವರಿಕೊಂಡು ಯಾವುದಕ್ಕೂ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ ಚಲಂ ಮಾತಿನಂತೆ ಜಯರಾಂ ಇನ್ನೊಂದೆರಡು ಮೀಟಿಂಗುಗಳಲ್ಲಿ ಹೇಳುವುದನ್ನು ನಯವಾಗಿ ಹೇಳಲು ಪ್ರಯತ್ನಿಸಿದರೂ ಅದೇನೂ ವರ್ಕೌಟ್ ಆದಂತಿರಲಿಲ್ಲ! ಈ ನಯವಾದ ಮಾತಿಗೂ ಒಂದಿಬ್ಬರು ಉರಿಗಣ್ಣು ಬಿಟ್ಟಾಗಲಂತೂ, ತನ್ನ ವ್ಯಕ್ತಿತ್ವಕ್ಕೆ ಒಗ್ಗದ ಭಾಷೆ ಬಳಸಿದರೆ ಅದು ಎಲ್ಲೂ ತಲುಪುವುದಿಲ್ಲ ಎನ್ನುವುದು ಹೊಳೆದು ಜಯರಾಂಗೆ ತನ್ನ ಬಗೆಗೇ ಅಸಹ್ಯ ಹುಟ್ಟತೊಡಗಿತು. ‘ಇವನು ಏನು ಹೇಳಿದರೂ ಒಪ್ಪಬಾರದು’ ಎಂದು ತೀರ್ಮಾನ ಮಾಡಿರುವವರ ಎದುರು ಯಾವ ಭಾಷೆಯಲ್ಲಿ ಮಾತಾಡಿದರೂ ಒಂದೇ; ಅಂಥವರ ಎದುರು ತಾನು ಕಂಡ ಸತ್ಯವನ್ನು ನಯವಾಗಿ ಹೇಳಿದರೂ ಅರ್ಥವಿಲ್ಲ ಅನ್ನುವುದೂ ಹೊಳೆಯಿತು…

ಅಂತೂ ಯಾವಯಾವುದೋ ಕಾರಣಕ್ಕೆ ತನ್ನ ಬಗ್ಗೆ ಸಿಟ್ಟಾಗಿರಬಹುದಾದ ಮುಖಗಳು ಮಿಂಚಿ ಮಾಯವಾಗುತ್ತಿದ್ದವು. ಅವು ನಗುತ್ತಿದ್ದವು, ನಗಲೆತ್ನಿಸಿ ಬಿಗಿದುಕೊಳ್ಳುತ್ತಿದ್ದವು, ಹುಬ್ಬು ಗಂಟಿಕ್ಕುತ್ತಿದ್ದವು, ದುರುಗುಟ್ಟುತ್ತಿದ್ದವು, ಮುಗಿಸಲು ಹೊಂಚುತ್ತಿರುವಂತಿದ್ದವು, ನಡುನಡುವೆ ನಾರ್ಮಲ್ ಆಗಿಯೂ ಕಾಣುತ್ತಿದ್ದವು… ಛೇ! ಇವರಲ್ಲಿ ಯಾರಿಗೂ ತನ್ನನ್ನು ಮುಗಿಸುವಷ್ಟು ಸೀರಿಯಸ್ ಕಾರಣಗಳು ಇರಲಾರವು ಅನ್ನಿಸಿತು; ಬರುವ ಜನವರಿಯಲ್ಲಿ ಲೀಡ್ಸ್ ಯೂನಿವರ್ಸಿಟಿ ಸೇರಿ ಈ ದರಿದ್ರದ ವಾತಾವರಣದಿಂದಲೇ ದೂರವಾದರಾಯಿತು ಅಂದುಕೊಂಡು ಜಯರಾಂ ಸುಮ್ಮನಾದ.

ಇನ್ಸ್ಟಿಟ್ಯೂಟ್ ಡೈರೆಕ್ಟರು ಮೊನ್ನೆ ಇವನ ಹಳೆಯ ಲೀಡ್ಸ್ ಪ್ರಾಜೆಕ್ಟಿನ ಫೈನಲ್ ರಿಪೋರ್ಟ್ ಫಾರ್ವರ್ಡ್ ಮಾಡುವಾಗ, ತನ್ನ ಸಿಡಿಮಿಡಿಯನ್ನು ಬಚ್ಚಿಟ್ಟುಕೊಳ್ಳಲೆತ್ನಿಸುತ್ತಾ, ‘ಕಂಗ್ರಾಟ್ಸ್ ಮ್ಯಾನ್! ಇದೇನ್ರೀ! ಈ ಪ್ರಾಜೆಕ್ಟ್ ಮುಗಿಯೋ ಮೊದಲೇ ಲೀಡ್ಸ್ ಫೆಲೋಶಿಪ್ ಕ್ಲಿಕ್ಕಾಗಿದೆ! ಹಾಂ? ನಾನೇ ಬಂದು ವಿಶ್ ಮಾಡಬೇಕೂಂತಿದ್ದೆ…’ ಎಂದು ನಿಲ್ಲಿಸಿ, ‘ಅಯ್ಯೋ! ನನಗೂ ಐದಾರು ಸಲ ಲೀಡ್ಸ್ ಫೆಲೋಶಿಪ್ ಆಫರ್ ಬಂದಿತ್ತಪ್ಪಾ! ಏನು ಮಾಡೋದು, ನಾವು ಹಳೇ ಕಾಲದೋರು. ನಮಗೆ ಜನನೀ ಜನ್ಮಭೂಮೀ ಇವೆಲ್ಲ ಸ್ವರ್ಗಕ್ಕಿಂತ ಹೆಚ್ಚಪ್ಪಾ! ಈ ದೇಶ ಬಿಟ್ಟು ಇಂಗ್ಲೆಂಡಿಗೆ ಹೋಗಿ ಏನು ಮಣ್ಣು ರಿಸರ್ಚ್ ಮಾಡೋದು…’ ಎಂದು ನಗಲೆತ್ನಿಸಿದ. ಹೀಗೆ ದೇಶಾವರಿ ನಗುವಾಗ, ಅವನು ಹಿಂದೆ ಹಲವು ಸಲ ಅಪ್ಲೈ ಮಾಡಿದ್ದರೂ ಆ ಫೆಲೋಶಿಪ್ ಸಿಕ್ಕಿರಲಿಲ್ಲವೆಂಬ ಸತ್ಯ ಎದ್ದು ಬಂದು ಅವನ ಎದೆಗೆ ಒದ್ದಿದ್ದರಿಂದಲೋ ಏನೋ ಅವನ ಮುಖ ವಿಚಿತ್ರವಾಗಿತ್ತು. ನಗಲಾರದೆ ನಗಲೆತ್ನಿಸುವ ಮುಖ ಎಷ್ಟೊಂದು ವಿಕಾರವಾಗಿ ತಿರುಚಿಕೊಂಡಿರುತ್ತದೆ ಅನ್ನಿಸಿ ಜಯರಾಂ ಅಚ್ಚರಿಗೊಂಡ.

‘ಥ್ಯಾಂಕ್ಯೂ’ ಎನ್ನುತ್ತಾ ಜಯರಾಂ ಮೇಲೆದ್ದಾಗ ತಾನೂ ಕುರ್ಚಿ ಬಿಟ್ಟು ಮೇಲೆದ್ದ ಡೈರೆಕ್ಟರು ಬಲಗೈ ಚಾಚಿ ಕೈ ಕುಲುಕುವಾಗಲೂ ಎಲ್ಲೋ ಅವನ ಅಂಗೈ ಚರ್ಮದಡಿ ಒಂದು ತೆಳು ಚೂರಿಯನ್ನು ಹುದುಗಿಸಿಟ್ಟುಕೊಂಡಂತೆಯೇ ಕಾಣುತ್ತಿತ್ತು. ಆ ಅಗೋಚರ ಚೂರಿ ಮೆಮೋ, ಕಿರುಕುಳ, ರಿಸರ್ಚ್ ಫಂಡಿಗೆ ಕತ್ತರಿ, ಫೈಲಿಟ್ಟುಕೊಂಡು ಸತಾಯಿಸುವುದು, ಅಪಪ್ರಚಾರ… ಹೀಗೆ ಯಾವ ರೂಪದಲ್ಲಾದರೂ ಇರುತ್ತಿತ್ತು! ಇವತ್ತು ಡೈರೆಕ್ಟರು ಇವನ ಲೀಡ್ಸ್ ಫೆಲೋಶಿಪ್ ತಪ್ಪಿಸುವುದು ಸಾಧ್ಯವೇ ಇಲ್ಲ ಅನ್ನಿಸಿ ಅನಿವಾರ್ಯವಾಗಿ ರಿಪೋರ್ಟಿಗೆ ಸೈನ್ ಹಾಕಿದಂತಿತ್ತು; ಇಲ್ಲದಿದ್ದರೆ ರಿಪೋರ್ಟನ್ನು ಫೈಲಿನಲ್ಲಿಟ್ಟುಕೊಂಡು ಆ ಡಾಕ್ಯುಮೆಂಟ್ ಬೇಕು, ಈ ಡಿಟೈಲ್ಸ್ ಬೇಕು ಎಂದು ಸತಾಯಿಸಿ ಹಿಂಸಾನಂದ ಪಡುತ್ತಿರುತ್ತಿದ್ದ. ಈ ಹುಳು ಕೂಡ ಆ ಕೊಲೆಗಡುಕ ಬಾಬುವನ್ನು ಕಾಂಟ್ಯಾಕ್ಟ್ ಮಾಡಿದ್ದರೆ ಅಚ್ಚರಿಯಲ್ಲ! ಅಥವಾ ತನ್ನ ಜಾತಿಯ ಶೂರರಿಗೆ ಫೋನ್ ಮಾಡಿ ವಿದೇಶಿ ವಿಶ್ವವಿದ್ಯಾಲಯದ ಫೆಲೋಶಿಪ್ ಪಡೆದಿರುವ ಜಯರಾಂ ಕೊನೇಹಳ್ಳಿ ಒಬ್ಬ ದೇಶದ್ರೋಹಿ ಎಂದು ಕಿವಿ ಕಚ್ಚಿ… ಅವರು ಬಾಬುವನ್ನು ತಯಾರು ಮಾಡಿ… ಇದೆಲ್ಲ ಶುರುವಾಗಿದ್ದರೂ ಅಚ್ಚರಿಯಲ್ಲ…

ಜಯರಾಂಗೆ ಏಕಾಏಕಿ ತನ್ನ ಸೈಂಟಿಸ್ಟ್ ತಲೆ ಇವತ್ತು ಸಿಐಡಿಯ ತಲೆಯಂತೆ ಓಡುತ್ತಿದೆಯೆನ್ನಿಸಿ ನಗು ಬಂತು. ಇಷ್ಟೆಲ್ಲ ಊಹೆ ಯಾಕೆ, ಇವತ್ತು ಆ ಆಫೀಸರ್ ಪೋನ್ ಮಾಡಿದರೆ ಎಲ್ಲ ಕ್ಲಿಯರ್ ಮಾಡಿಕೊಳ್ಳೋಣ ಅನ್ನಿಸಿ, ಕೆಲಸ ಮಾಡುತ್ತಲೇ ಇಡೀ ದಿನ ಕಾದರೂ ಫೋನ್ ಬರಲಿಲ್ಲ. ಮೊಬೈಲ್ ಡೆಡ್ ಆಗಿರಬಹುದೇ ಎಂದು ಮತ್ತೆ ಮತ್ತೆ ಚೆಕ್ ಮಾಡಿದ. ನಿನ್ನೆ ಫೋನ್ ಮಾಡಿದ್ದವನ ಆಫೀಸು ಎಲ್ಲಿದೆಯೆಂಬ ಅಂದಾಜಿದ್ದುದರಿಂದ ನಾಳೆ ಅಲ್ಲಿಗೇ ಹೋಗಿ ಅವನನ್ನೇ ನೇರವಾಗಿ ಕೇಳೋಣ ಅನ್ನಿಸಿ ಸಂಜೆ ಮನೆಗೆ ಬಂದು, ಆರಾಮಾಗಿ ಓದಿ ಎರಡು ಲಾರ್ಜ್ ಹಾಕಿ ಉಂಡು ಅಡ್ಡಾಗಿ ಮಾರನೆಯ ದಿನ ಎದ್ದು, ಆಫೀಸಿಗೆ ರಜಾ ಹೇಳಿ ಕಾರು ಹತ್ತಿದ. ಕಾರು ಇನ್ಸ್ಟಿಟ್ಯೂಟಿನ ಕಾಂಪೌಂಡ್ ದಾಟುವಾಗ ಹುಷಾರಾಗಿ ಅತ್ತಿತ್ತ ನೋಡಿದ.

ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಜಯರಾಂಗೆ, ‘ಅರೆ! ಇವತ್ತು ಆ ಬಾಬು ಎನ್ನುವವನು ಸಿಕ್ಕಿದರೆ ನನ್ನನ್ನು ಟಾರ್ಗೆಟ್ ಮಾಡಲು ಏನು ಕಾರಣ ಎಂದು ಅವನನ್ನೇ ಕೇಳಿಬಿಡೋಣ!’ ಅನ್ನಿಸಿತು. ಬಾಬು ಯಾವ ಭಾಷೆಯವನೋ! ತನಗೆ ಗೊತ್ತಿರುವ ನಾಲ್ಕು ಭಾಷೆಗಳಲ್ಲಿ ಒಂದಾದರೂ ಅವನಿಗೆ ಗೊತ್ತಿದ್ದರೆ, ‘ಅಲ್ಲಪ್ಪಾ! ನಾನು ಯಾರು, ಏನು ಮಾಡುತ್ತಿದ್ದೇನೆ ಅನ್ನುವುದಾದರೂ ನಿನಗೆ ಗೊತ್ತೆ? ಎಂದಾದರೂ ನನ್ನನ್ನು ನೋಡಿದ್ದೆಯಾ…’ ಹೀಗೆ ಏನೇನೋ ಕೇಳಬೇಕೆನ್ನಿಸಿತು. ಅದೆಲ್ಲ ಕೇಳಲು ಅಲ್ಲಿ ಅವಕಾಶವಿದೆಯೋ ಇಲ್ಲವೋ…ಇಷ್ಟು ಕಾಂಪ್ಲಿಕೇಟೆಡ್ ಹುಡುಗ ಇವಕ್ಕೆಲ್ಲ ನೇರವಾಗಿ ಉತ್ತರ ಹೇಳುತ್ತಾನೆಂದು ಯಾವ ಗ್ಯಾರಂಟಿ! ತಾನು ಎದುರಾದ ತಕ್ಷಣ ಎಗರಿ ಕುತ್ತಿಗೆ ಹಿಸುಕಿದರೇನು ಗತಿ ಎನ್ನಿಸಿ ಬೆಚ್ಚಿದ. ಕಸ್ಟಡಿಯಲ್ಲಿದ್ದಾಗ ಹಾಗೆ ಎಗರಲಾರ ಎನ್ನಿಸುತ್ತಿರುವಾಗ, ಎಷ್ಟು ರೂಪಾಯಿನ ಆಸೆಯಿಂದ ಆತ ಬಂದಿರಬಹುದು ಎಂದು ಕುತೂಹಲವಾಯಿತು… ಹತ್ತು ಸಾವಿರ…ಐವತ್ತು ಸಾವಿರ… ಒಂದು ಲಕ್ಷ… ಇದರ ಮೇಲೆ ಅಂದಾಜು ದಾಟಲಿಲ್ಲ! ಥತ್ ತನ್ನ ಜೀವನದ ಬೆಲೆ ಒಂದು ಲಕ್ಷ ಮೀರಲಿಲ್ಲವಲ್ಲ ಅನ್ನಿಸಿ ಜಯರಾಂ ಪೆಚ್ಚಾದ.

ಯ್ಯೋ! ಈ ಹುಡುಗ ನನ್ನ ಪ್ರಾಜೆಕ್ಟಿನಲ್ಲಿ ಅಟೆಂಡರಾಗಿದ್ದರೂ ನಾಲ್ಕು ತಿಂಗಳ ಸಂಬಳದಲ್ಲೇ ಅವನಿಗೆ ಒಂದು ಲಕ್ಷ ಬರುವಂತೆ ಮಾಡುತ್ತಿದ್ದೆನಲ್ಲ ಅನ್ನಿಸಿತು. 
ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರು ನಿಂತಾಗ ಜಯರಾಂಗೆ ಯಾಕೋ ಇಡೀ ಕಸರತ್ತು ವ್ಯರ್ಥ ಅನ್ನಿಸಿ, ಸಿಗ್ನಲ್ ಮತ್ತೆ ಬಿದ್ದಾಗ ‘ಯೂ ಟರ್ನ್’ ತೆಗೆದುಕೊಂಡು ವಾಪಸ್ ಇನ್ಸ್ಟಿಟ್ಯೂಟಿನ ಕಡೆಗೆ ಬಂದ. ಸೆಕ್ಯುರಿಟಿಯವನು ಕಾಂಪೌಂಡಿನ ಗೇಟು ತೆಗೆಯುತ್ತಿರುವಾಗ ಬಾಬುವಿನಂಥ ಹುಡುಗರು ಇಷ್ಟು ಭದ್ರತೆಯಿರುವ ಇನ್ಸ್ಟಿಟ್ಯೂಟಿನ ಗೇಟು ಕೂಡ ದಾಟಿ ಬಂದಿರಲಾರರು ಅನ್ನಿಸಿತು. ಇನ್ಸ್ಟಿಟ್ಯೂಟಿಗೆ ಹೋಗಿ ರೂಮಿನ ಬಾಗಿಲು ತೆಗೆದು ಕೂರುವ ಹೊತ್ತಿಗೆ ಬಾಗಿಲು ಕೂಡ ಬಡಿಯದೆ ಡೈರೆಕ್ಟರು ಒಳ ನುಗ್ಗಿದ. ಮುಖದಲ್ಲಿ ಗಾಬರಿಯಿದ್ದಂತಿತ್ತು.

‘ವೈ ಮ್ಯಾನ್? ಏನು ಸಮಾಚಾರ? ರಜಾ ಹಾಕ್ತೀನಿ ಅಂದ್ರಂತೆ…’ ಎಂದು ಒಂದೇ ಸಮನೆ ಕೇಳಿದ. ‘ಏನಿಲ್ಲ ಸಾರ್, ಒಂಚೂರು ಹೆಲ್ತ್ …’ ಎಂದ ಜಯರಾಂ ಮಾತು ಮುಗಿಸುವ ಮೊದಲೇ, ‘ಐ ನೋ! ಐ ನೋ! ಐ ಅಂಡರ್ ಸ್ಟ್ಯಾಂಡ್’ ಎಂದ ಡೈರೆಕ್ಟರ್ ದನಿ ಅವನಿಗೇ ದೊಡ್ಡ ಕುತ್ತೊಂದು ಎದುರಾಗಿರುವಂತೆ ಸಣ್ಣಗಾಯಿತು; ‘ಈ ಕಾಲ ಗೊತ್ತಲ್ಲಪ್ಪಾ, ಬೀ ಕೇರ್ ಫುಲ್!’ ಎಂದು ಪಿಸುಗುಡುತ್ತಾ, ಬೆದರಿದವನಂತೆ ಹೊರಟವನು ಹಾಗೇ ನಿಂತು, ‘ಅಂತೂ ಇಂಟರ್ ನ್ಯಾಶನಲ್ ಫೇಮ್ ಬರೋ ಥರಾ ಇದೆಯಲ್ಲಪ್ಪಾ!’ ಎಂದು ವಿಚಿತ್ರವಾಗಿ ನಕ್ಕು, ಇದ್ದಕ್ಕಿದ್ದಂತೆ ಎಂದೂ ಇಲ್ಲದಷ್ಟು ಮೃದುವಾಗಿ ‘ಟೇಕ್ ಕೇರ್’ ಅನ್ನುತ್ತಾ ಸರಸರ ಹೊರಟು ಹೋದ. ಡೈರೆಕ್ಟರ್ ಗಲಿಬಿಲಿ ಕಂಡ ಜಯರಾಂಗೆ, ಮೊನ್ನೆ ತನಗೆ ಫೋನ್ ಮಾಡಿದ್ದ ಆಫೀಸರ್ ಇವನಿಗೂ ಫೋನ್ ಮಾಡಿರಬಹುದೇ ಎಂದು ಅನುಮಾನವಾಯಿತು.‘ಇಂಟರ್ ನ್ಯಾಶನಲ್ ಫೇಮ್’ನ ಮಾತು ಅವನ ಬಾಯಲ್ಲಿ ಬಂದಿದ್ದು ಲೀಡ್ಸ್ ಫೆಲೋಶಿಪ್ಪಿಗೋ, ತಾನೀಗ ಟಾರ್ಗೆಟ್ ಆಗಿರುವುದಕ್ಕೋ? ಗೊತ್ತಾಗಲಿಲ್ಲ; ಅದನ್ನು ಕೇಳುವ ಉತ್ಸಾಹವೂ ಹುಟ್ಟಲಿಲ್ಲ.

ಜಯರಾಂ ಸುಮ್ಮನೆ ಲ್ಯಾಪ್ ಟಾಪ್ ತೆಗೆದ. ಕೊನೆಯ ಭಾಗಗಳನ್ನು ಬರೆಯಬೇಕಾಗಿದ್ದ ಒಂದೆರಡು ಬರಹಗಳು ಮೂರು ತಿಂಗಳಿಂದ ಹಾಗೇ ಕೂತಿದ್ದವು. ಮುನ್ನುಡಿ ಬರೆದು ಪ್ರೆಸ್ಸಿಗೆ ಕಳಿಸಬೇಕಾದ ಎರಡು ಪುಸ್ತಕಗಳ ಫೈನಲ್ ಕಾಪಿಗಳೂ ಸ್ಕ್ರೀನಿನ ಮೇಲಿದ್ದವು. ಒಂದೊಂದನ್ನೇ ಓಪನ್ ಮಾಡಿ ಮುಗಿಸಲೆತ್ನಿಸಿದ. ‘ಅಂಥ ಕೆಟ್ಟ ಕಾಲ ಬಂದರೆ ನನ್ನ ಈ ನೋಟ್ಸುಗಳನ್ನೆಲ್ಲ ಹೇಗಿವೆಯೋ ಹಾಗೆಯೇ ಪಬ್ಲಿಷ್ ಮಾಡು’ ಎಂದು ರಿಸರ್ಚ್ ಅಸಿಸ್ಟೆಂಟ್ ಶಂಕರಪ್ಪನಿಗೆ ಹೇಳಬೇಕೆಂದುಕೊಂಡ. ತನಗೇನಾದರೂ ಆದರೆ ಶಂಕರಪ್ಪ ನಿಜಕ್ಕೂ ದುಃಖಪಡಬಹುದೇನೋ; ಇನ್ನೇನು ಮುಗಿಯಲಿರುವ ಅವನ ಪ್ರಾಜೆಕ್ಟ್ ಪೇಪರುಗಳಿಗೆಲ್ಲ ಸೈನ್ ಹಾಕಿ ಅವನಿಗೆ ಯಾವುದೇ ತಾಂತ್ರಿಕ ತೊಂದರೆಯಾಗದಂತೆ ನೋಡಿಕೊಳ್ಳಬೇಕೆನ್ನಿಸಿತು.

ಶಂಕರಪ್ಪನ ಹಾಗೇ ಒಂಚೂರು ಬೇಜಾರಾಗಬಹುದಾಗಿದ್ದ ಗೆಳೆಯ ಸಿಂಗ್ ಹೋದ ವರ್ಷ ಜಲಪಾತವೊಂದರ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರಿನಲ್ಲಿ ಮುಳುಗಿಹೋಗಿದ್ದು ಜಯರಾಂಗೆ ನೆನಪಾಗಿ, ‘ಇಷ್ಟೇ ಲೈಫು!’ ಎಂದುಕೊಂಡ; ದಾರಿಯಲ್ಲಿ ಹೋಗುವಾಗ ಯಾವುದೇ ಮಿನಿಟ್ಟಿನಲ್ಲಾದರೂ ಆಕ್ಸಿಡೆಂಟ್ ಆಗಿ ತೀರಿಕೊಳ್ಳುವ ಸಾಧ್ಯತೆ ಇರುವುದರಿಂದ ಇದೆಲ್ಲದರ ಬಗ್ಗೆ ತೀರಾ ಯೋಚಿಸುವುದು ವೇಸ್ಟ್ ಅನ್ನಿಸಿತು. ಕೀ ಬೋರ್ಡಿನ ಮೇಲೆ ಓಡುತ್ತಿದ್ದ ಬೆರಳುಗಳು ತಮ್ಮ ಕೆಲಸ ಮಾಡುತ್ತಲೇ ಇದ್ದವು. ಮಧ್ಯಾಹ್ನ ಲಂಚಿಗೂ ಹೋಗದೆ, ಎರಡು ಜೂಸ್ ಕುಡಿದು ಪಟ್ಟಾಗಿ ಕೂತು ಕೆಲಸ ಮಾಡುತ್ತಾ ಸಂಜೆ ಮೇಲೇಳುವ ಹೊತ್ತಿಗೆ, ಲ್ಯಾಪ್ ಟಾಪಿನ ಮೇಲೆ ಅವತ್ತು ಫೈನಲ್ ಮಾಡಿದ್ದ ಪುಟಗಳನ್ನು ನೋಡಿದ: ತಿಂಗಳುಗಟ್ಟಲೆ ತಿಣುಕಿ ಆಗೊಂದು ಪ್ಯಾರಾ, ಈಗೊಂದು ಪ್ಯಾರಾ ಡೆವಲಪ್ ಮಾಡುತ್ತಿದ್ದ ಮೂರು ಡಾಕ್ಯುಮೆಂಟುಗಳು ಇವತ್ತು ಹೆಚ್ಚುಕಡಿಮೆ ಮುಗಿದೇಬಿಟ್ಟಿದ್ದು ಕಂಡು ಅಚ್ಚರಿಯಾಗಿತ್ತು.

ಸೂರ್ಯ ಕಂತುವ ಹೊತ್ತಿಗೆ ಹಗುರಾಗಿ ಮನೆಯತ್ತ ಬಂದ ಜಯರಾಂ ಕಾಂಪೌಂಡಿನ ಗೇಟು ಕಿರುಗುಟ್ಟಿಸಿದ ತಕ್ಷಣ ಬಾಗಿಲ ಬಳಿ ಮಲಗಿದ್ದ ಮುಧೋಳ್ ರಾಜ ಎಗರಿ ಬಂತು. ಮೆಲ್ಲಗೆ ಅದರ ತಲೆ ಸವರಿದಾಗ ನೆಮ್ಮದಿಯಿಂದ ಎಳೆಹುಡುಗಿಯಂತೆ ಕಣ್ಮುಚ್ಚಿಕೊಂಡಿತು. ಈ ರಾಜ ಕಾಂಪೌಂಡಿನಲ್ಲಿ ಕಾವಲಿರುವಾಗ ನನಗ್ಯಾತರ ಭಯ ಅನ್ನಿಸಿತು! ಕೆಲಸಕ್ಕೆ ಬಾರದ್ದಕ್ಕೆಲ್ಲ ದುಡ್ಡು ಸುರಿಯುವ ಬದಲು ಇಂಥ ಇನ್ನೆರಡು ನಾಯಿಗಳನ್ನು ಸಾಕಿದರೆ ಸಾಕು, ನನ್ನನ್ನು ಆರಾಮಾಗಿ ನೋಡಿಕೊಳ್ಳುತ್ತವೆ ಅನ್ನಿಸಿತು. ಥತ್! ಎಷ್ಟೊಂದು ಸೆಲ್ಫ್ ಸೆಂಟರ್ಡ್ ಆಗಿ ಯೋಚಿಸುತ್ತಿದ್ದೇನೆ ಅನ್ನಿಸಿ ತಲೆ ಕೊಡವುತ್ತಾ ಒಳಗೆ ಬಂದು ಮಂಚದ ಮೇಲೊರಗಿದ.

ರಾಜ ಅವನ ಹಿಂದೆಯೇ ಬಂದು ನೆಲದ ಮೇಲೆ ಬಿದ್ದುಕೊಂಡಿತು.

ಏನೋ ನೆನಸಿಕೊಂಡವನಂತೆ ಮೇಲೆದ್ದವನಿಗೆ ಇನ್ನೂ ಎಷ್ಟೋ ಕೆಲಸಗಳು ಬಾಕಿ ಉಳಿದಿವೆ ಎನ್ನಿಸತೊಡಗಿತು. ಅಪ್ಪನ ಹತ್ತಿರ ಸಾಕಷ್ಟು ದುಡ್ಡಿರುವುದರಿಂದ, ತನ್ನ ಹಣವನ್ನೆಲ್ಲ ತನ್ನ ಹಳ್ಳಿಯಿಂದ ಬಂದ ಬಡ ಹುಡುಗ, ಹುಡುಗಿಯರ ಶಿಕ್ಷಣಕ್ಕೆ ಮೀಸಲಾಗಿಡಬೇಕು ಎಂದು ವಿಲ್ ತಯಾರಿಸಬೇಕೆಂದುಕೊಂಡು ಲಾಯರ್ ಮೂರ್ತಿಗೆ ಫೋನ್ ಮಾಡಿದ. ಇದ್ದಕ್ಕಿದ್ದಂತೆ ಇನ್ನೂ ಏನೇನೋ ತಯಾರಿ ಮಾಡಿಕೊಳ್ಳಬೇಕೆನ್ನಿಸಿತು. ಯಾವುದಕ್ಕೆ ತಯಾರಿ? ಇನ್ನು ಮೂರು ತಿಂಗಳಾದ ಮೇಲೆ ಸೇರಲಿರುವ ಲೀಡ್ಸ್ ಯೂನಿವರ್ಸಿಟಿಯ ರಿಸರ್ಚಿಗೋ? ಹಟಾತ್ತನೆ ಎರಗಲು ತಯಾರಾಗಿರುವ ಸಾವಿಗೋ? ಉಳಿಯಬಹುದಾದ ಕುಟುಕು ಜೀವಕ್ಕೋ? ಆ ಆಫೀಸರ್ ಜೊತೆ ಮಾತಾಡಿ ಸಂಚಿನ ವಿವರ ತಿಳಿಯುವುದಕ್ಕೋ ಅಥವಾ…

ಮಾರನೆಯ ಬೆಳಗ್ಗೆ ಎದ್ದಾಗ, ಮೊನ್ನೆ ಫೋನ್ ಮಾಡಿದ್ದ ಆಫೀಸರ್ ‘ಯಾವುದಕ್ಕೂ ಇರಲಿ ಸಾರ್, ನಿಮ್ಮ ಪ್ರೊಟೆಕ್ಷನ್ ಗೆ…’ ಎಂದು ಹೇಳಿದ್ದ ಕಿವಿಮಾತು ರಾತ್ರಿ ಎರಡುಮೂರು ಸಲ ಗುಂಯ್ ಗುಟ್ಟಿದ್ದು ಜಯರಾಂಗೆ ನೆನಪಾಯಿತು. ಆ ಕಿವಿಮಾತಿನಂತೆ ಡೆಪ್ಯುಟಿ ಕಮಿಷನರ್ ಆಫೀಸಿಗೆ ಹೋಗಿ ಒಂದು ಫಾರ್ಮ್ ತೆಗೆದುಕೊಂಡು ವಾಪಸ್ ಮನೆಗೆ ಬಂದ. ನಿಧಾನಕ್ಕೆ ರಿವಾಲ್ವರ್ ಲೈಸನ್ಸಿನ ಅರ್ಜಿ ತುಂಬತೊಡಗಿದ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !