ವಿದ್ಯಾರ್ಥಿನಿ ಕೊಲೆ ಪ್ರಕರಣ ಆರೋಪಿಗೆ ಗಲ್ಲು, 45 ದಿನದಲ್ಲಿ ಪ್ರಕರಣ ಇತ್ಯರ್ಥ

7
23 ದಿನದಲ್ಲಿ ಆರೋಪಪಟ್ಟಿ ಸಲ್ಲಿಕೆ

ವಿದ್ಯಾರ್ಥಿನಿ ಕೊಲೆ ಪ್ರಕರಣ ಆರೋಪಿಗೆ ಗಲ್ಲು, 45 ದಿನದಲ್ಲಿ ಪ್ರಕರಣ ಇತ್ಯರ್ಥ

Published:
Updated:
Deccan Herald

ಕೋಲಾರ: ಜಿಲ್ಲೆಯಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿದ್ದ ಮಾಲೂರು ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಯತ್ನ ಪ್ರಕರಣವನ್ನು ಘಟನೆ ನಡೆದ 45 ದಿನದಲ್ಲಿ ಇತ್ಯರ್ಥಗೊಳಿಸಿರುವ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆಪಾದಿತ ಟಿ.ಎನ್‌.ಸುರೇಶ್‌ಬಾಬು ಉರುಫ್‌ ಸೂರಿಗೆ (25) ಶನಿವಾರ ಗಲ್ಲು ಶಿಕ್ಷೆ ವಿಧಿಸಿದೆ.

ಆ.1ರಂದು ವಿದ್ಯಾರ್ಥಿನಿ ಕೊಲೆಯಾದ ನಂತರ ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆದಿತ್ತು. ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮಾಲೂರು ಪೊಲೀಸರು ಘಟನೆ ನಡೆದ ಮೂರೇ ದಿನದಲ್ಲಿ ಸುರೇಶ್‌ಬಾಬುನನ್ನು ಬಂಧಿಸಿದ್ದರು.

ಬಳಿಕ 23 ದಿನದಲ್ಲಿ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ನಂತರ ನ್ಯಾಯಾಲಯ 22 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ಶನಿವಾರಕ್ಕೆ ಅಂತಿಮ ಆದೇಶ ಕಾಯ್ದಿರಿಸಿತ್ತು. ಬೆಳಿಗ್ಗೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶೆ ಬಿ.ಎಸ್‌.ರೇಖಾ ಅವರು ಸುರೇಶ್‌ಬಾಬು ವಿರುದ್ಧದ ಆರೋಪ ಸಾಬೀತಾಗಿದ್ದು, ಆತ ದೋಷಿ ಎಂದು ಪ್ರಕಟಿಸಿದರು.

ವಾದ– ಪ್ರತಿವಾದ: ಸರ್ಕಾರಿ ಅಭಿಯೋಜಕ ಮುನಿಸ್ವಾಮಿಗೌಡ, ‘ವಿದ್ಯಾರ್ಥಿನಿ ಕೊಲೆಯು ಗಂಭೀರ ಪ್ರಕರಣವಾಗಿದ್ದು, ಆಪಾದಿತನಿಗೆ ಗಲ್ಲು ಶಿಕ್ಷೆ ನೀಡಬೇಕು. ಆ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ಸಮಾಜಕ್ಕೆ ಕಠಿಣ ಸಂದೇಶ ರವಾನಿಸಬೇಕು’ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪಾದಿತನ ಪರ ವಕೀಲ ಲಕ್ಷ್ಮಿನಾರಾಯಣಶೆಟ್ಟಿ, ‘ಕಕ್ಷಿದಾರನ ವಯಸ್ಸು ಚಿಕ್ಕದು. ಅಲ್ಲದೇ, ಆತನಿಗೆ ತಂದೆಯಿಲ್ಲ. ತಾಯಿ ಹೂವು ಮಾರಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಮಗನೇ ಆಧಾರ. ಗಲ್ಲು ಶಿಕ್ಷೆ ನೀಡಿದರೆ ಕಕ್ಷಿದಾರನ ಜೀವನ ಹಾಳಾಗುತ್ತದೆ ಮತ್ತು ತಾಯಿ ಬೀದಿ ಪಾಲಾಗುತ್ತಾರೆ. ಈ ಎಲ್ಲಾ ಸಂಗತಿಗಳನ್ನು ಅವಲೋಕಿಸಿ ಶಿಕ್ಷೆ ಪ್ರಮಾಣ ನಿರ್ಧರಿಸಬೇಕು’ ಎಂದು ವಾದಿಸಿದರು.

ವಾದ– ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶಿಕ್ಷೆ ಪ್ರಮಾಣವನ್ನು ಸಂಜೆ ಪ್ರಕಟಿಸುವುದಾಗಿ ಕಲಾಪ ಮುಂದೂಡಿದರು. ಸಂಜೆ ಮತ್ತೆ ಕಲಾಪ ಆರಂಭವಾದಾಗ ವಕೀಲರು, ಪೊಲೀಸರು ಹಾಗೂ ಸಂತ್ರಸ್ತೆಯ ಪೋಷಕರ ಸ್ನೇಹಿತರು ನ್ಯಾಯಾಲಯದಲ್ಲಿ ಕಿಕ್ಕಿರಿದು ಸೇರಿದ್ದರು. ನ್ಯಾಯಾಧೀಶರು ಆಪಾದಿತನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಶಿಕ್ಷೆ ಪ್ರಮಾಣ ಕೇಳಿ ವಿಚಲಿತನಾದ ಸುರೇಶ್‌ಬಾಬುನನ್ನು ಪೊಲೀಸರು ಹೊರಗೆ ಕರೆದೊಯ್ದರು.

ನಿರ್ಭಯಾ ಪ್ರಕರಣ ಉಲ್ಲೇಖ: ‘ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣದಲ್ಲೂ ನ್ಯಾಯಾಲಯ ಆಪಾದಿತರಿಗೆ ಗಲ್ಲು ಶಿಕ್ಷೆ ನೀಡಿತ್ತು. ಮಾಲೂರು ಪ್ರಕರಣ ಸಹ ಅಷ್ಟೇ ಗಂಭೀರವಾದದ್ದು. ಇಲ್ಲಿ ಸಂತ್ರಸ್ತೆಯ ಅಥವಾ ಆಪಾದಿತನ ವಯಸ್ಸು ಮುಖ್ಯವಲ್ಲ. ಕೃತ್ಯದ ಕ್ರೋರತ್ವ ಆಧರಿಸಿ ನಿರ್ಭಯಾ ಪ್ರಕರಣದ ಮಾದರಿಯಲ್ಲೇ ಆಪಾದಿತನಿಗೆ ಗಲ್ಲು ಶಿಕ್ಷೆ ನೀಡಲಾಗಿದೆ’ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !