ಸಮಾಜಮುಖಿ ಬರಹ ಪುರಾಣಿಕರ ಶಕ್ತಿ: ಸಿದ್ದಲಿಂಗಯ್ಯ

7
ಬಸವೇಶ್ವರ ಕಲಾ ಕಾಲೇಜು: ಸಿದ್ಧಯ್ಯ ಪುರಾಣಿಕ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಸಮಾಜಮುಖಿ ಬರಹ ಪುರಾಣಿಕರ ಶಕ್ತಿ: ಸಿದ್ದಲಿಂಗಯ್ಯ

Published:
Updated:
Deccan Herald

ಬಾಗಲಕೋಟೆ: ‘ಪ್ರಕೃತಿ ವರ್ಣಿಸುವುದರಲ್ಲಿ, ವಚನಗಳ ಸಂಗ್ರಹ, ಮಕ್ಕಳ ಕವಿತೆ ಸೇರಿದಂತೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದರೂ ಸಿದ್ಧಯ್ಯ ಪುರಾಣಿಕರು ಬದುಕಿದ್ದಾಗ ಅವರಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ಸಿದ್ದಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿದ್ದಯ್ಯ ಪುರಾಣಿಕರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಿದ್ಧಯ್ಯ ಪುರಾಣಿಕರು ಇಹಲೋಕ ತ್ಯಜಿಸಿದ ನಂತರ ಅವರಿಗೆ ಅಪಾರ ಗೌರವ ಸಲ್ಲುತ್ತಿದೆ’ ಎಂದರು.

‘ಪುರಾಣಿಕರು ಸಾಮಾಜಿಕ ಕಳಕಳಿಯುಳ್ಳ ಪದ್ಯಗಳನ್ನು ರಚಿಸಿದ್ದಾರೆ. ಭಾರತೀಯ ಆಡಳಿತ ಸೇವೆ(ಐ.ಎ.ಎಸ್) ಅಧಿಕಾರಿಯಾಗಿದ್ದರೂ ತಮ್ಮ ಸಾಹಿತ್ಯ ಕೃಷಿಯಲ್ಲಿ ಆಳುವವರನ್ನೂ ಟೀಕಿಸುವ ಮೂಲಕ ಬರಹ ಸದಾ ಸಮಾಜಮುಖಿಯಾಗಿರಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದರು.

‘ಪುರಾಣಿಕರು ಬಡವರ ಪಕ್ಷಪಾತಿಯಾಗಿದ್ದರು. ಕಪ್ಪು ಬಣ್ಣವನ್ನು ವಿಶೇಷ ರೀತಿಯಲ್ಲಿ ನೋಡುತ್ತಿದ್ದರೂ ಎಂದಿಗೂ ಬಿಳಿ ಬಣ್ಣ ಹಿಯಾಳಿಸಲಿಲ್ಲ. ಕಪ್ಪು ಬಿಳುಪು ಮೈತ್ರಿಯಿಂದ ಇರಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು’ ಎಂದರು.

ಕಥೆಗಾರ ಅಮರೇಶ ನುಗಡೋಣಿ ಮಾತನಾಡಿ, ‘ಉರ್ದು ಪ್ರಭಾವ ಹೆಚ್ಚಿದ್ದ ಕಾಲದಲ್ಲಿ ರಾಯಚೂರಿನಲ್ಲಿ ಹುಟ್ಟಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಕೀರ್ತಿ ಪುರಾಣಿಕರಿಗೆ ಸಲ್ಲುತ್ತದೆ. ಇವರ ಕಾವ್ಯಗಳು ಪ್ರತಿಯೊಬ್ಬ ಮನುಷ್ಯನ ಕಣ್ಣಿಗೆ ಹಾಗೂ ಮನಸ್ಸಿಗೆ ಮುಟ್ಟುವಂತದ್ದು’ ಎಂದರು.

‘ಸ್ವಾತಂತ್ರ್ಯ ಚಳುವಳಿ ಹಾಗೂ ಏಕೀಕರಣದ ಸಂದರ್ಭದಲ್ಲಿ ಬೆಳೆಯುತ್ತಿದ್ದ ಇವರು ಉನ್ನತ ಅಧಿಕಾರಿಯಾಗಿದ್ದರಿಂದ ಚಳುವಳಿಯಲ್ಲಿ ಭಾಗವಹಿಸಲಾಗಲಿಲ್ಲ’ ದ.ರಾ.ಬೇಂದ್ರೆ ಹೆಚ್ಚಾಗಿ ಜಾನಪದ ಪದಗಳನ್ನು ಬಳಸುತ್ತಿದ್ದರು, ಆದರೆ ಪುರಾಣಿಕ ಅವರಿಗೆ ತಮ್ಮದೇ ಆದ ಶಬ್ದಕೋಶವಿತ್ತು. ತತ್ವಪದಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ಕಾವ್ಯ ರಚಿಸಿದ್ದಾರೆ’ ಎಂದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ ದೊಡ್ಡ ಮನೆತನದಲ್ಲಿ ಹುಟ್ಟಿದ್ದ ಪುರಾಣಿಕರು ಬಡವರ, ಶೋಷಿತ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದವರು. ಉನ್ನತ ಹುದ್ದೆ ಅಲಂಕರಿಸಿದ್ದ ಅವರು ನಾಡು ನುಡಿಗಾಗಿ ಶ್ರಮಿಸಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಸಿದ್ದಯ್ಯ ಪುರಾಣಿಕ ಪುತ್ರ ಪ್ರಸನ್ನ ಕುಮಾರ ದಂಪತಿಯನ್ನು ಬಿ.ವಿ.ವಿ ಸಂಘದ ಪರವಾಗಿ ಸನ್ಮಾನಿಸಲಾಯಿತು.

ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ.ಮಹಾಲಿಂಗೇಶ್ವರ, ಕನ್ನಡ ಸಲಹಾ ಸಮಿತಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ, ಕರ್ನಾಟಕ ಸಾಹಿತ್ಯ ಸಂಘದ ಸಂಚಾಲಕ ಡಾ. ಕೆ.ಪ್ರಲ್ಹಾದ, ಸಂಘದ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಕಾಲೇಜಿನ ಪ್ರಾಚಾರ್ಯ ಡಾ. ವಿ.ಎಸ್.ಕಟಗಿಹಳ್ಳಿಮಠ ಪಾಲ್ಗೊಂಡಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !