ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ಗೌರವ: ಆಂಜಿನಪ್ಪ

7
ಕೃಷಿ ಅಭಿಯಾನ

ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ಗೌರವ: ಆಂಜಿನಪ್ಪ

Published:
Updated:
Deccan Herald

ಕೋಲಾರ: ‘ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಿದರೆ ರೈತರು ಗೌರವಿಸುತ್ತಾರೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿದರು.

ಕೃಷಿ ಇಲಾಖೆಯು ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಅಭಿಯಾನ ಹಾಗೂ ವಿಜ್ಞಾನಿಗಳ ಜತೆಗಿನ ಸಂವಾದ ಉದ್ಘಾಟಿಸಿ ಮಾತನಾಡಿ, ‘ಸಮಗ್ರ ಕೃಷಿ ಅಭಿಯಾನದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದ ಕಾರಣ ಇಲಾಖೆಯ ಸೌಕರ್ಯಗಳ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಇಲಾಖೆ ಅಧಿಕಾರಿಗಳು ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನಡೆಸಿದ್ದರೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ಮಾತ್ರ ರೈತರಿಗೆ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಜತೆಗೆ ಇಲಾಖೆಯ ಗುರಿಯೂ ಸಾಧನೆಯಾಗುತ್ತದೆ’ ಎಂದು ತಿಳಿಸಿದರು.

ಒಗ್ಗೂಡಿಸಬೇಕು: ‘ರೈತರು ಹಾಗೂ ರೈತ ಮುಖಂಡರು ಸರ್ಕಾರದ ಸೌಕರ್ಯಗಳು ಸಿಕ್ಕಿಲ್ಲ ಎಂದು ಇಲಾಖೆಗಳ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ಅಧಿಕಾರಿಗಳು ಸರ್ಕಾರದ ಸವಲತ್ತುಗಳ ಮಾಹಿತಿ ತಿಳಿಯದ ರೈತರು ಹಾಗೂ ಸಂಘಟನೆ ಸದಸ್ಯರನ್ನು ಒಗ್ಗೂಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಬಯಲುಸೀಮೆ ಜಿಲ್ಲೆಯಲ್ಲಿ ಕೃಷಿ ಹೊಂಡಗಳಲ್ಲಿ ಮಳೆ ನೀರು ಶೇಖರಿಸಿಕೊಂಡು ಬೆಳೆ ಬೆಳೆಯಲಾಗುತ್ತಿದೆ. ಹೀಗಾಗಿ ತಾಲ್ಲೂಕಿನ ರೈತರಿಗೆ ಕೃಷಿ ಹೊಂಡಗಳು ಆಧಾರವಾಗಿವೆ. ಬರ ಪರಸ್ಥಿತಿ ಸಂದರ್ಭದಲ್ಲೂ ಈ ಹೊಂಡಗಳು ರೈತರ ಕೈ ಹಿಡಿದಿವೆ. ಒಣ ಬೇಸಾಯ ಪದ್ಧತಿ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಹೋಬಳಿಯಲ್ಲಿ ಅಭಿಯಾನ: ‘ತಾಲ್ಲೂಕಿನ ಪ್ರತಿ ಹೋಬಳಿ ಕೇಂದ್ರದಲ್ಲಿ ಕೃಷಿ ಅಭಿಯಾನ ನಡೆಸಲಾಗುತ್ತಿದ್ದು, ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ರಂಗಸ್ವಾಮಿ ವಿವರಿಸಿದರು.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ನೂರುಲ್ಲಾ ಅಹಮ್ಮದ್‌, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ರೆಡ್ಡಿ, ತೊರದೇವಂಡಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಣುಕಾ, ಕೃಷಿ ಇಲಾಖೆ ಸಿಬ್ಬಂದಿ ಸುನಿಲ್‌, ಮಧುಸೂದನ್‌, ಹರೀಶ್, ಮಮತಾ, ರೇಣುಕಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !