ನರೇಗಾ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ: ಡಿಸಿ ಅನಿರುದ್ಧ್ ಶ್ರವಣ್

7
ಬರಗಾಲ ಪ್ರಯುಕ್ತ ಗ್ರಾಮೀಣ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಒದಗಿಸುವಂತೆ ಪಿಡಿಒ, ಪಂಚಾಯಿತಿ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ತಾಕೀತು

ನರೇಗಾ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ: ಡಿಸಿ ಅನಿರುದ್ಧ್ ಶ್ರವಣ್

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಬಗ್ಗೆ ಪ್ರತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಕಾರ್ಯದರ್ಶಿಗಳು ಗ್ರಾಮೀಣ ಪ್ರದೇಶದ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

ಬರಗಾಲದ ಪ್ರಯುಕ್ತ ನರೇಗಾ ಅಡಿ ಜನರಿಗೆ ಹೆಚ್ಚು ಕೂಲಿ ಒದಗಿಸುವ ಸಲುವಾಗಿ ಪಿಡಿಒ ಹಾಗೂ ನರೇಗಾ ತಾಂತ್ರಿಕ ಸಿಬ್ಬಂದಿಗೆ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ನರೇಗಾ ಅಡಿ ಕೂಲಿ ಪಡೆಯುವುದು ಕಾರ್ಮಿಕರ ಹಕ್ಕಾಗಿದೆ. ನರೇಗಾ ಯೋಜನೆ ಜಾರಿಗೆ ಬಂದು 13 ವರ್ಷಗಳೇ ಕಳೆದರೂ ಪ್ರಚಾರ ಮತ್ತು ಅರಿವಿನ ಕೊರತೆಯಿಂದ ಯೋಜನೆ ಲಾಭ ಜನರಿಗೆ ತಲುಪುತ್ತಿಲ್ಲ. ಅನಕ್ಷರಸ್ಥ ಕೂಲಿ ಕಾರ್ಮಿಕರಿಗೆ ಗೋಡೆ ಬರಹಗಳು ಅರ್ಥವಾಗುವುದಿಲ್ಲ. ಹಾಗಾಗಿ, ಪಿಡಿಒಗಳು, ಸಹಾಯಕ ಕಾರ್ಯದರ್ಶಿಗಳು ಸೇರಿದಂತೆ ಪಂಚಾಯಿತಿ ಸಿಬ್ಬಂದಿ ನರೇಗಾ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕು’ ಎಂದು ತಿಳಿಸಿದರು.

‘ಸಾಮಾನ್ಯ ಕೂಲಿಕಾರನಿಗೆ ಕೆಲಸ ನೀಡುವುದು ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಸಾಧವಿಲ್ಲ. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿ ಉದ್ಯೋಗ ಚೀಟಿ ನೀಡಬೇಕು. ತಂಡಗಳನ್ನು ರಚಿಸಿಕೊಂಡು ಗ್ರಾಮಗಳಲ್ಲಿರುವ ಜನಸಂಖ್ಯೆ ಕುಟುಂಬ ಸೇರಿದಂತೆ ಜನರ ಪೂರ್ಣ ಮಾಹಿತಿಯನ್ನು ಕಲೆ ಹಾಕಿ ವರದಿಯನ್ನು ಸಿದ್ಧಪಡಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆ ಬರ ಪೀಡಿತ ಪ್ರದೇಶವಾಗಿರುವುದರಿಂದ ಪ್ರಸ್ತುತ ದಿನಗಳಲ್ಲಿ ರೈತರು, ಕೂಲಿ ಕಾರ್ಮಿಕರಿಗೆ ಕೆಲಸಗಳು ಸಿಗುತ್ತಿಲ್ಲ. ಹಾಗಾಗಿ, ಅಧಿಕಾರಿಗಳು ಈ ಭಾಗದ ಜನರಿಗೆ ಕೆರೆ ಹೂಳೆತ್ತುವುದು, ಕೃಷಿ ಹೊಂಡ ನಿರ್ಮಾಣ, ಅರಣ್ಯ ಸಂರಕ್ಷಣೆ ಸಂಬಂಧಿತ ಕೆಲಸ ನೀಡುವುದಕ್ಕೆ ಆದ್ಯತೆ ನೀಡಿ. ನರೇಗಾ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮೆ ಮಾಡಬೇಕು. ಕೂಲಿ ಕಾರ್ಮಿಕರ ನಂಬಿಕೆಗೆ ಅರ್ಹವಾದ ವ್ಯಕ್ತಿಯನ್ನು ಕಾಯಕ ಬಂಧುವಾಗಿ ನಿಯೋಜಿಸಬೇಕು’ ಎಂದರು.

‘ಕುಟುಂಬದ ಉದ್ಯೋಗ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲಾ ವಯಸ್ಕರು ಕರಕುಶಲ ದೈಹಿಕ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಹಕ್ಕು ಹೊಂದಿರುತ್ತಾರೆ. ಉದ್ಯೋಗ ಕೋರಿಕೆಯ 15 ದಿನಗಳಲ್ಲಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ನಿರುದ್ಯೋಗ ಭತ್ಯೆ ಪಡೆಯಲು ಹಕ್ಕು ಉಳ್ಳವರಾಗುತ್ತಾರೆ. ಈ ಕಾಯ್ದೆಯಡಿ ಬರುವ ಎಲ್ಲಾ ಹಕ್ಕುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ತಾಕೀತು ಮಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಮುಖ್ಯ ಲೆಕ್ಕಾಧಿಕಾರಿ ನಾಗೇಶ್ ಉಪಸ್ಥಿತರಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !