ಹಣ ಬಿಡುಗಡೆಗೆ ಲಂಚ ಕೊಡಬೇಕು: ಶಾಸಕರ ಎದುರು ತಾಲ್ಲೂಕು ಪಂಚಾಯಿತಿ ಇಒ ಹೇಳಿಕೆ

7

ಹಣ ಬಿಡುಗಡೆಗೆ ಲಂಚ ಕೊಡಬೇಕು: ಶಾಸಕರ ಎದುರು ತಾಲ್ಲೂಕು ಪಂಚಾಯಿತಿ ಇಒ ಹೇಳಿಕೆ

Published:
Updated:

ಮಂಗಳೂರು: ‘ಗ್ರಾಮ ಪಂಚಾಯಿತಿಗಳಿಗೆ ಅನುದಾನ ತರಬೇಕಾದರೆ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಲಂಚ ಕೊಡಬೇಕು. ಅದಕ್ಕೆ ನಾನು ಎಲ್ಲಿಂದ ಹಣ ತರಲಿ?'

- ಇದು ಮಂಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಸದಾನಂದ ಅವರು ಶನಿವಾರ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್‌ ಶೆಟ್ಟಿ ಅವರ ಮುಂದಿಟ್ಟ ಪ್ರಶ್ನೆ.

ಮಂಗಳೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮ ಪಂಚಾಯಿತಿಗಳ ಬಜೆಟ್‌ಗೆ ಆರು ತಿಂಗಳಿನಿಂದ ಅನುಮೋದನೆ ನೀಡಿರಲಿಲ್ಲ. ಎಲ್ಲ ಕಡತಗಳನ್ನೂ ಸದಾನಂದ ಅವರು ಬಾಕಿ ಇರಿಸಿಕೊಂಡು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರು ಶಾಸಕರನ್ನು ತಲುಪಿತ್ತು. ಶನಿವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ತೆರಳಿದ ಅವರು, ಕಡತ ಬಾಕಿ ಉಳಿಯಲು ಕಾರಣ ನೀಡುವಂತೆ ಪಟ್ಟು ಹಿಡಿದರು. ಆಗ, ಮಾತಿನ ನಡುವೆ ಕಾರ್ಯನಿರ್ವಹಣಾ ಅಧಿಕಾರಿ ಇಂತಹ ಉತ್ತರ ನೀಡಿ ದಂಗುಬಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಭರತ್‌ ಶೆಟ್ಟಿ, ‘ಕಡತ ಬಾಕಿ ಇರುವುದನ್ನು ಇಒ ಒಪ್ಪಿಕೊಂಡರು. ಹಣದ ವಿಷಯ ಏನಾದರೂ ಇದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದರು. ಆಗ ಅಲ್ಲಿಯೇ ಇದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಇಒ ಹಣಕ್ಕೆ ಬೇಡಿಕೆ ಇಟ್ಟಿರುವುದು ನಿಜ ಎಂದರು. ಆಗ ನಾನು ಮತ್ತೆ ಪ್ರಶ್ನಿಸಿದಾಗ, ‘ನೀವು ಹೊಸಬರು. ನಿಮಗೆ ಎಲ್ಲ ವಿಷಯ ತಿಳಿದಿಲ್ಲ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಆಗಬೇಕಾದರೆ ಎಫ್‌ಡಿ (ಹಣಕಾಸು ಇಲಾಖೆ) ಅಧಿಕಾರಿಗಳಿಗೆ ಹಣ ನೀಡಬೇಕು. ನಾನು ಎಲ್ಲಿಂದ ಕೊಡಲಿ. ಅವರ (ಪಿಡಿಒ) ಬಳಿಯೇ ಕೇಳಿದ್ದೇನೆ ಎಂಬ ಉತ್ತರ ನೀಡಿದರು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಮಾತುಕತೆಯ ವಿವರವನ್ನು ಕೆಲವರು ಚಿತ್ರೀಕರಿಸಿದ್ದಾರೆ. ದೃಶ್ಯಾವಳಿಯ ಸಮೇತ ಈ ಬಗ್ಗೆ ದೂರು ನೀಡಲಾಗುವುದು. ಯಾರಿಗೆ ಲಂಚ ನೀಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯನ್ನು ಕೋರಲಾಗುವುದು ಎಂದರು.

ಘಟನೆಯ ಕುರಿತು ಸದಾನಂದ ಅವರನ್ನು ಸಂಪರ್ಕಿಸಿದಾಗ, ‘ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಗೆ ಲಂಚ ಕೊಡಬೇಕು ಎಂದು ನಾನು ಹೇಳಿಲ್ಲ. ಆದರೆ, ಪಂಚಾಯಿತಿ ಅಧಿಕಾರಿಗಳ ಪ್ರಯಾಣ ವೆಚ್ಚದ ಬಿಲ್‌ ವಿಚಾರದಲ್ಲಿ ಮೇಲಧಿಕಾರಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಹೇಳಿರುವುದು ನಿಜ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !