ಭಾನುವಾರ, ಮೇ 22, 2022
27 °C

ಅಶಕ್ತರಿಗೆ ರಾಜಕೀಯ ಸಲ್ಲದು: ಡಾ. ನೀರಜ್ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ರಾಜಕೀಯ ಎಂಬುದು ಅಶಕ್ತ ಜನರಿಗಲ್ಲ; ಸಿಂಹದಷ್ಟೇ ಧೈರ್ಯ ಇರಬೇಕು. ರಾಜಕೀಯ ಎಂದರೇನೇ ಅಧಿಕಾರ. ಆದರೆ ತತ್ತ್ವಗಳಿಲ್ಲದ ರಾಜಕೀಯದಿಂದ ಸಮಯ ವ್ಯರ್ಥ...’‘ರಾಜಕೀಯ ಎಲ್ಲಿದೆ ಎಂದು ಕೇಳಿದರೆ ನಾನು, ಅದು ನಮ್ಮ ನಾಲಿಗೆಯ ತುದಿಯಲ್ಲಿದೆ ಎನ್ನುತ್ತೇನೆ. ಉತ್ತಮ ಸಂವಹನದಿಂದ ಉತ್ತಮ ರಾಜಕಾರಣಿಯಾಗಲು ಸಾಧ್ಯ...’

- ಲಂಡನ್‌ನ ಲ್ಯಾಂಬೆತ್‌ನಗರದ ಮೇಯರ್ ಆಗಿರುವ ಗುಲ್ಬರ್ಗದ ಡಾ. ನೀರಜ್ ಪಾಟೀಲ ಮಂಡಿಸುತ್ತಿದ್ದ ವಾಗ್ಝರಿಗೆ ಜನರು ಮನಸೋತರು. ರಾಜಕೀಯವೆಂದರೆ ಬರೀ ಕಾಲೆಳೆಯುವುದು ಅಥವಾ ಕೆಸರಿನ ಎರಚಾಟ ಎಂದುಕೊಂಡವರಿಗೆ ಬೇರೆಯ ದೃಷ್ಟಿಯನ್ನೇ ತಂದು ಕೊಟ್ಟಿದ್ದು ಡಾ. ನೀರಜ್. ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಸಂವಾದ, ನಂತರ ಪಾಲಿಕೆಯು ನೀಡಿದ ಪೌರಸನ್ಮಾನಕ್ಕೆ ಪ್ರತಿಕ್ರಿಯಿಸಿ ಅವರು ಮಾತನಾಡಿದ್ದು ಇವೇ ವಿಚಾರಗಳ ಬಗ್ಗೆ.“ಈಗ ದಿನಕ್ಕೊಂದು ಹಗರಣಗಳು..! ನಿನ್ನೆ ಕಾಮನ್‌ವೆಲ್ತ್ ಕ್ರೀಡಾಕೂಟ, ಇವತ್ತು 2-ಜಿ ಸ್ಕ್ಯಾಮ್, ನಾಳೆ ಇನ್ನೊಂದು... ಹಾಗಿದ್ದರೆ ರಾಜಕೀಯ ಎಂದರೆ ಹಗರಣಗಳೇ? ಅಲ್ಲ. ವಿನ್‌ಸ್ಟನ್ ಚರ್ಚಿಲ್ ಒಮ್ಮೆ ಹೇಳಿದ್ದರು: ‘ರಾಜಕೀಯವು ನೀಚನ ಕೊನೆಯ ತಾಣ’. ಹಾಗೆಂದು ವೇದಿಕೆ ಮೇಲೆ ಇರುವ ನಾನೂ ಸೇರಿದಂತೆ ಎಲ್ಲ ರಾಜಕಾರಣಿಗಳೂ ಹಾಗಿಲ್ಲ. ರಾಜಕೀಯ ಮಾಡಲು ಸಿಂಹದ ಗುಂಡಿಗೆ ಇರಬೇಕು. ನಾನು ಬಾಲ್ಯದಿಂದಲೂ ನೋಡುತ್ತ ಬಂದಿದ್ದೇನೆ. ಖಮರುಲ್ ಇಸ್ಲಾಂ ಅವರದು ಸಿಂಹದ ಗುಂಡಿಗೆ. ಅಶಕ್ತರಿಗೆ ರಾಜಕೀಯ ಸಲ್ಲದು” ಎಂದು ಡಾ. ನೀರಜ್ ಖಡಕ್ಕಾಗಿ ಹೇಳಿದರು.ಬಸವಣ್ಣನ ಪುತ್ಥಳಿ: ಲಂಡನ್‌ನಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪಿಸುವ ಹಿನ್ನೆಲೆಯಲ್ಲಿ ತಾವು ಅನುಭವಿಸಿದ ತೊಂದರೆಗಳ ಬಗ್ಗೆ ವಿವರಿಸಿದ ಡಾ. ಪಾಟೀಲ, ಮೂರ್ತಿ ಸ್ಥಾಪನೆಯೆಂದರೆ ಅದೊಂದು ದುಸ್ವಪ್ನ ಎಂದು ಬಣ್ಣಿಸಿದರು.“ಬಸವಣ್ಣನ ಕಾಲದಲ್ಲಿ ಇದ್ದ ‘ಅನುಭವ ಮಂಟಪ’ ಜಗತ್ತಿನ ಮೊಟ್ಟಮೊದಲ ಸಂಸತ್ ಎಂಬ ಹೆಗ್ಗಳಿಕೆ ಪಡೆದಿದೆ. ಅದಕ್ಕಾಗಿ ಬಸವಣ್ಣನ ಪುತ್ಥಳಿ ಸ್ಥಾಪನೆ ಮಾಡುವ ಆಸೆ ನನ್ನದು. ಆದರೆ ಈ ಕೆಲಸಕ್ಕೆ ಮುಂದಾದ ಕೂಡಲೇ ನನ್ನ ವಿರುದ್ಧ ಟೀಕೆ ಕೇಳಿ ಬರಲಾರಂಭಿಸಿದವು.ಆಗ ನಾನು ಪಾಕಿಸ್ತಾನ್, ಬಾಂಗ್ಲಾದೇಶದ ಗೆಳೆಯರಿಗೆ ಬಸವಣ್ಣನ ವಿಚಾರ ತಿಳಿಸಿದಾಗ ಅವರಿಂದ ಬೆಂಬಲ ಸಿಕ್ಕಿತು. ಕಳೆದ ಒಂದೂವರೆ ವರ್ಷದಿಂದ ನಡೆಸಿದ ಪ್ರಯತ್ನ ಶೇ 70ರಷ್ಟು ಫಲ ಕೊಟ್ಟಿದೆ. ಇನ್ನೂ ಅಡೆತಡೆಗಳಿವೆ. ಅವುಗಳನ್ನು ಪರಿಹರಿಸಲು ಪಣ ತೊಟ್ಟಿದ್ದೇನೆ” ಎಂದು  ವಿವರಿಸಿದರು.ಸಂಪನ್ಮೂಲ: ಕೃಷಿ ಕ್ಷೇತ್ರದಲ್ಲಿರುವ ಮಾನವ ಸಂಪನ್ಮೂಲವನ್ನು ತಯಾರಿಕಾ ಕ್ಷೇತ್ರಕ್ಕೆ ವರ್ಗಾಯಿಸುವ ಯೋಜನೆ ರೂಪಿಸಬೇಕು. ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯಾಗಿ ದೇಶ ಪ್ರಗತಿಪಥದತ್ತ ಸಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

 

ಲಂಡನ್‌ನಲ್ಲಿ ಕಾರ್ಯಾಲಯ


ಗುಲ್ಬರ್ಗ: ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಇಲ್ಲಿ ಕೈಗಾರಿಕೆ ಸ್ಥಾಪಿಸಲು ಇಂಗ್ಲಂಡ್‌ನ ಉದ್ಯಮಿಗಳು ಬರಬಹುದು.ಅಂಥವರಿಗೆ ಮಾಹಿತಿ- ನೆರವು ನೀಡಲು ಲಂಡನ್‌ನಲ್ಲಿ ಕಾರ್ಯಾಲಯವೊಂದನ್ನು ಆರಂಭಿಸುವಂತೆ ಡಾ. ನೀರಜ್ ಪಾಟೀಲ ಅವರು ಎಚ್‌ಕೆಸಿಸಿಐಗೆ ಸಲಹೆ ಮಾಡಿದರು.“ಈ ಭಾಗದ ಉದ್ಯಮಿಗಳು ಯೂರೋಪ್‌ನಲ್ಲಿ ವಹಿವಾಟು ಆರಂಭಿಸಲು ಈ ಕಾರ್ಯಾಲಯ ಸಹಕಾರ ಕಲ್ಪಿಸಬೇಕು. ಇದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸಿಕೊಡಲು ನಾನು ಸಿದ್ಧ. ಇದರ ಜತೆಗೆ ನನ್ನ ಜತೆ ಸಂಪರ್ಕದಲ್ಲಿರುವ ಉದ್ಯಮಿಗಳ ಮಾಹಿತಿ ಕೊಡಲೂ ಸಿದ್ಧ. ಈ ಹಿನ್ನೆಲೆಯಲ್ಲಿ ಎಚ್‌ಕೆಸಿಸಿಐ ಕಾರ್ಯಾಲಯದಲ್ಲಿ ಈ ಕಾರ್ಯ ನಿರ್ವಹಿಸುವವರನ್ನು ಆಯ್ಕೆ ಮಾಡಿ ಕಳಿಸಬೇಕು” ಎಂದು ಅವರು ಭರವಸೆ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.