ಬಾಗಲಕೋಟೆ: ಇ–ಫಾರ್ಮಸಿಗೆ ವಿರೋಧಿಸಿ ಅಂಗಡಿ ಬಂದ್

7
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘಟನೆಯಿಂದ ಪ್ರತಿಭಟನೆ

ಬಾಗಲಕೋಟೆ: ಇ–ಫಾರ್ಮಸಿಗೆ ವಿರೋಧಿಸಿ ಅಂಗಡಿ ಬಂದ್

Published:
Updated:
Deccan Herald

ಬಾಗಲಕೋಟೆ: ಆನ್‌ಲೈನ್‌ ಮೂಲಕ ಔಷಧಿ ಮಾರಾಟಕ್ಕೆ (ಇ–ಫಾರ್ಮಸಿ) ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ಖಂಡಿಸಿ ಅಖಿಲ ಭಾರತ ಔಷಧಿ ವ್ಯಾಪಾರಿ ಸಂಘಟನೆಯ ಜಿಲ್ಲಾ ಘಟಕದಿಂದ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ರ್‍ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ಬಂದ ಸಂಘದ ಸದಸ್ಯರು, ಕೇಂದ್ರದ ನೀತಿ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಪರವಾನಗಿ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಆರ್.ಕಟ್ಟಿ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬಿಜ್ಜಳ ಮಾತನಾಡಿ, ‘ಕೇಂದ್ರ ಸರ್ಕಾರ ರೂಪಿಸಲು ಹೊರಟಿರುವ ಹೊಸ ಔಷಧಿ ಮಾರಾಟ ನೀತಿಯಿಂದ ಅಮಲಿನ ಮಾತ್ರೆಗಳು, ಗರ್ಭಾಶಯದ ಮೇಲೆ ದುಷ್ಪರಿಣಾಮ ಬೀರುವ ಔಷಧಿಗಳನ್ನು ಖರೀದಿಸಲು ಅನುಕೂಲವಾಗಲಿದೆ. ಇವುಗಳಿಂದ ಯುವಕ ಯುವತಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಬಟ್ಟೆ, ಚಪ್ಪಲಿ ಹಾಗೂ ಕಿರಾಣಿ ಸಾಮಗ್ರಿ ರೀತಿ ಔಷಧಿ ಮಾರಾಟವನ್ನು ಪರಿಗಣಿಸಲಾಗದು. ಅದಕ್ಕಾಗಿಯೇ ರೂಪಿಸಲಾದ ಕಾಯ್ದೆ ಹಾಗೂ ಕಾನೂನುಗಳನ್ನು ಪಾಲಿಸಬೇಕು. ಡಿಜಿಟಲ್ ಯುಗದ ಹೆಸರಿನಲ್ಲಿ ಎಲ್ಲ ಕಾಯ್ದೆಗಳನ್ನು ಗಾಳಿಗೆ ತೂರಿದರೆ ಅದರಿಂದ ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾಗಲಿದೆ’ ಎಂದರು.

‘ನೂತನ ಕಾಯ್ದೆಯಿಂದ ದೇಶದಾದ್ಯಂತ ಇರುವ 8.5 ಲಕ್ಷ ಸಾಂಪ್ರದಾಯಿಕ ಔಷಧಿ ಮಾರಾಟಗಾರರ ಜೀವನ ದುಸ್ತರವಾಗಲಿದೆ ಎಂದ ಅವರು, ’ಸರ್ಕಾರ ಈ ಕಾಯ್ದೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಸದಸ್ಯರಾದ ಸುನಿಲ್ ಶಿರಗಣ್ಣವರ, ಗುರುರಾಜ ಜೋಶಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !