ಸಕಲೇಶಪುರ- ಸುಬ್ರಹ್ಮಣ್ಯ ರೈಲು ಮಾರ್ಗ ಭೂಕುಸಿತ, ಚುರುಕಾಗಿದೆ ತೆರವು ಕಾರ್ಯ

150 ಅಡಿಗೂ ಹೆಚ್ಚು ಎತ್ತರದ ಕಡಿದಾದ ಇಳಿಜಾರಿನ ಬೆಟ್ಟದಲ್ಲಿ ಯಂತ್ರಗಳಿಂದ ಮಣ್ಣು ತೆರವುಗೊಳಿಸುತ್ತಿದ್ದ ದೃಶ್ಯವನ್ನು ನೋಡುವುದಕ್ಕೇ ಭಯವಾಗುತ್ತಿತ್ತು. ರೈಲು ಪ್ರಯಾಣಿಕರ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹಗಲು, ರಾತ್ರಿ ಸಕಲೇಶಪುರ- ಸುಬ್ರಹ್ಮಣ್ಯ ನಡುವಿನ ರೈಲು ಮಾರ್ಗದಲ್ಲಿ ಭೂ ಕುಸಿತವನ್ನು ತೆರವುಗೊಳಿಸುತ್ತಿದ್ದ ರೈಲ್ವೆ ಸಿಬ್ಬಂದಿಯ ಸಾಹಸದ ಕೆಲಸಕ್ಕೆ ಕೈ ಮುಗಿಯಲೇಬೇಕು.
ಕಳೆದ ಆಗಸ್ಟ್ನ ಮೊದಲ ಹಾಗೂ ಎರಡನೇ ವಾರದಲ್ಲಿ ಸುರಿದ ಮಹಾಮಳೆಯಿಂದ ಪಶ್ಚಿಮಘಟ್ಟದ ಬೆಟ್ಟ, ಗುಡ್ಡ, ಮಳೆಕಾಡು, ಕಂದಕಗಳ ನಡುವೆ ಹಾದು ಹೋಗಿರುವ ಸಕಲೇಶಪುರ- ಸುಬ್ರಹ್ಮಣ್ಯ ನಡುವಿನ ರೈಲು ಹಳಿಗಳ ಮೇಲೆ ಬೆಟ್ಟಗಳೇ ಕುಸಿದು ಬಿದ್ದವು. 2 ಲಕ್ಷ ಕ್ಯೂಬಿಕ್ ಮೀಟರ್ಗೂ ಹೆಚ್ಚು ಪ್ರಮಾಣದ ಮಣ್ಣು, ಭಾರೀ ಗಾತ್ರದ ಬಂಡೆಗಳು, ಮರ, ಗಿಡಗಳು ರೈಲು ಹಳಿಗಳನ್ನು ಮುಚ್ಚಿಕೊಂಡಿದ್ದವು. ಕಡಗರವಳ್ಳಿಯಿಂದ ಎಡಕುಮೇರಿ, ಶಿರಿವಾಗಿಲು ಹಾಗೂ ಸುಬ್ರಹ್ಮಣ್ಯದವರೆಗೆ 64 ಕಡೆಯಲ್ಲಿ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾಯಿತು. ನೂರಾರು ಅಡಿ ಎತ್ತರದ ಬೆಟ್ಟಗಳೇ ಜಾರಿಹೋದವು. ಬೆಟ್ಟದಿಂದ ಉರುಳಿ ಬಿದ್ದ ಬಂಡೆಗಳಿಗೆ ರೈಲ್ವೆ ಹಳಿಗಳೇ ತುಂಡಾಗಿ ಕೊಚ್ಚಿಹೋಗಿದ್ದವು.
ಈ ಮಾರ್ಗದ (ಕಿ.ಮೀ. 63/700-800ರಲ್ಲಿ) ಸೇತುವೆಯ ಪಿಲ್ಲರ್ಗಳನ್ನು ಹೊರತುಪಡಿಸಿ ಮೇಲ್ಭಾಗ ಕೊಚ್ಚಿ ಪ್ರಪಾತಕ್ಕೆ ಬಿದ್ದಿತ್ತು. ಕಿ.ಮೀ. 86/500ರಲ್ಲಿ ಬೆಟ್ಟವೊಂದು ಕುಸಿದು, ರೈಲು ಹಳಿಗಳ ಮೇಲೆ 25 ಮೀಟರ್ ಎತ್ತರಕ್ಕೆ ಮಣ್ಣು ಹಾಗೂ ಬಂಡೆಗಳು ಬಿದ್ದಿದ್ದವು. ಹಳಿ ಮೇಲೆ 10 ಮೀಟರ್, 8 ಮೀಟರ್ ಹೀಗೆ ಮೇಲ್ಭಾಗದ ಬೆಟ್ಟದಿಂದ ರಾಶಿ ರಾಶಿ ಮಣ್ಣು, ಮರ, ಬಂಡೆಗಳು ಬಿದ್ದಿದ್ದವು. ಹಲವೆಡೆ ಸುರಂಗಗಳೇ ಮುಚ್ಚಿಕೊಂಡಿದ್ದವು. ಪ್ರಕೃತಿ ವಿಕೋಪಕ್ಕೆ ತಡೆಗೋಡೆಗಳು ಸಹ ಉಳಿಯಲಿಲ್ಲ. ಬೆಟ್ಟಗಳನ್ನು ಸೀಳಿಕೊಂಡು ಹೋಗಿರುವ ಈ ಭಯಾನಕ ಮಾರ್ಗದಲ್ಲಿ ಉಂಟಾಗಿದ್ದ ಭಾರೀ ಭೂಕುಸಿತವನ್ನು ಕಂಡವರು ದುರಸ್ತಿಗೆ ಕನಿಷ್ಠ 6 ತಿಂಗಳಾದರೂ ಬೇಕು ಎಂದಿದ್ದರು.
ಸದ್ದಿಲ್ಲದೆ ನಡೆಯುತ್ತಿದೆ ತೆರವು ಕಾರ್ಯ
ಹುಬ್ಬಳ್ಳಿ, ಮಂಗಳೂರು, ಮೈಸೂರು, ಹಾಸನ ಸೇರಿದಂತೆ ಹಲವೆಡೆಯಿಂದ 250 ಸಿಬ್ಬಂದಿ, 45 ಯಂತ್ರಗಳು ಹಗಲು– ರಾತ್ರಿ ಕೆಲಸ ಮಾಡುತ್ತಿರುವುದರಿಂದ ದುರಸ್ತಿ ಕಾರ್ಯ ಮುಕ್ತಾಯದ ಘಟ್ಟ ತಲುಪಿದೆ. ರೈಲು ಹಳಿ ಮೇಲೆ ಬಿದ್ದಿರುವ ಮಣ್ಣು, ಬಂಡೆಗಳನ್ನು ತೆರವುಗೊಳಿಸುವುದು ದೊಡ್ಡ ಸಾಹಸ.
‘ಒಂದೊಂದು ಸ್ಥಳದಲ್ಲಿ ನಾಲ್ಕು, ಐದು ಯಂತ್ರಗಳನ್ನು ಬಳಸಿ ಟ್ರ್ಯಾಕ್ ಮೇಲೆಯೇ ಚಲಿಸಿ ತೆರವುಗೊಳಿಸಿದ ಮಣ್ಣು, ಕಲ್ಲುಗಳನ್ನು ತಗ್ಗು ಪ್ರದೇಶಕ್ಕೆ ಹಾಕುವ ಕೆಲಸವನ್ನು ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ಮಾಡಿದ್ದಾರೆ’ ಎಂದು ಸ್ಥಳದಲ್ಲಿ ಕಾಮಗಾರಿ ಪರಿಶೀಲಿಸುತ್ತಿದ್ದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗಾರ್ಗ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯದ ಬಗ್ಗೆ ಹೆಮ್ಮೆ ಯಿಂದ ಹೇಳುತ್ತಾರೆ.
‘75 ಮೀಟರ್ ಎತ್ತರದಿಂದ ಇಡೀ ಬೆಟ್ಟವೇ ಟ್ರ್ಯಾಕ್ ಮೇಲೆ ಬಿದ್ದಿತ್ತು. ಮಣ್ಣು ಮಾತ್ರವಲ್ಲ ಭಾರೀ ಗಾತ್ರದ ಬಂಡೆಗಳೂ ಬಿದ್ದಿವೆ. ಇದೊಂದೇ ಸ್ಥಳದಲ್ಲಿ ಸುಮಾರು ಒಂದು ಲಕ್ಷ ಕ್ಯೂಬಿಕ್ ಮೀಟರ್ನಷ್ಟು ಮಣ್ಣು ಬಿದ್ದಿದೆ. 10 ಯಂತ್ರಗಳಿಂದ 24 ಗಂಟೆಯೂ ತೆರವು ಕಾರ್ಯವನ್ನು ಕಳೆದ ಒಂದು ತಿಂಗಳಿಂದ ಮಾಡುತ್ತಿದ್ದೇವೆ. ಮುಚ್ಚಿಹೋಗಿದ್ದ ರೈಲು ಮಾರ್ಗದ ಸುರಂಗ ಸತತ ಒಂದು ತಿಂಗಳ ಕಾರ್ಯಾಚರಣೆ ನಂತರ ಪತ್ತೆಯಾಗಿದೆ’ ಎಂದು ವಿವರಿಸುತ್ತಾರೆ ಅವರು.
ಪಶ್ಚಿಮಘಟ್ಟದ ದಟ್ಟ ಮಳೆಕಾಡಿನ ಮಧ್ಯೆ ಯುದ್ಧ ನಡೆಯುತ್ತಿದೆಯೇನೋ ಎಂಬಂತೆ ಯಂತ್ರಗಳು ಸದ್ದು ಮಾಡುತ್ತಿವೆ. ಭಾರೀ ಗಾತ್ರದ ಬಂಡೆಗಳನ್ನು ಉರುಳಿಸುವುದು, ಕೆಲವು ಯಂತ್ರಗಳು ಪುನಃ ಮಣ್ಣು ಬೀಳದಂತೆ ಬೆಟ್ಟದ ಮೇಲೆ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬರುತ್ತದೆ. ಟ್ರ್ಯಾಕ್ ಮೇಲೆ ಬೆಟ್ಟದಂತೆ ಬಿದ್ದಿರುವ ಮಣ್ಣನ್ನು ಕೆಲವು ಯಂತ್ರಗಳು ತೆರವುಗೊಳಿಸುತ್ತಿವೆ.
ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಿತ್ಯ ಹರಿದ್ವರ್ಣದ ಮಳೆಕಾಡು, ಮುಗಿಲಿಗೆ ಮುಖ ಮಾಡಿ ನಿಂತ ಸಾಲು ಸಾಲು ಬೆಟ್ಟಗಳು ರಸದೌತಣ ನೀಡುತ್ತವೆ. ಈ ಸುರಕ್ಷಿತ ಪ್ರಯಾಣದ ಹಿಂದಿರುವ ರೈಲ್ವೆ ಸಿಬ್ಬಂದಿಯ ಈ ಸಾಹಸ ಹಾಗೂ ಪ್ರಾಮಾಣಿಕ ಕರ್ತವ್ಯಕ್ಕೆ ಹ್ಯಾಟ್ಸಾಫ್ ಹೇಳಲೇಬೇಕಿದೆ.
ಮಾರ್ಗದ ಪರಿಚಯ
ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ 55.26 ಕಿ.ಮೀ. ಈ ರೈಲು ಮಾರ್ಗವನ್ನು ಸಂಪೂರ್ಣ ಪಶ್ಚಿಮಘಟ್ಟದ ಬೆಟ್ಟಗಳನ್ನು ಸೀಳಿಕೊಂಡು ನಿರ್ಮಾಣ ಮಾಡಲಾಗಿದೆ. ಈ ಮಾರ್ಗದಲ್ಲಿ 11.05 ಕಿ.ಮೀ. ಉದ್ದಕ್ಕೂ 58 ಸುರಂಗಗಳಿವೆ. ಕಡಿದಾದ 109 ತಿರುವುಗಳ ಉದ್ದವೇ 34.970 ಕಿ.ಮೀ. ಇದೆ. 241 ಸೇತುವೆಗಳಿವೆ. ತಲೆ ಎತ್ತಿದರೆ ನೂರಾರು ಅಡಿ ಎತ್ತರಕ್ಕೆ ಮೈಮೇಲೆ ಬೀಳುವಂತಿರುವ ಬೆಟ್ಟಗಳು, ತಲೆತಗ್ಗಿಸಿದರೆ ಅಷ್ಟೇ ಆಳವಾದ ಪ್ರಪಾತವಿದೆ.
ಅತ್ಯಂತ ಕಡಿದಾದ 50:1 ಪರಿಮಾಣದ ಇಳಿಜಾರಿನ ಉದ್ದ 8.89 ಕಿ.ಮೀ. ಇದೆ. ಈ ಮಾರ್ಗ ದಕ್ಷಿಣ ಭಾರತದಲ್ಲಿ ಕೊಂಕಣ್ ರೈಲು ಮಾರ್ಗಕ್ಕಿಂತಲೂ ಭಯಾನಕ ಹಾಗೂ ಅಪಾಯಕಾರಿಯಾಗಿದೆ. ಇದರಿಂದ ರೈಲು ಸಂಚಾರದ ವೇಗ ಗರಿಷ್ಠ ಗಂಟೆಗೆ 30 ಕಿ.ಮೀ. ಮಾತ್ರ.
ಪ್ರಸಕ್ತ ಮುಂಗಾರಿನಲ್ಲಿ ಈವರೆಗೆ ಈ ಮಾರ್ಗದ ಯಡಕುಮೇರಿಯಿಂದ ಶಿರಿವಾಗಿಲುವರೆಗೆ ದಾಖಲೆ ಮಳೆಯಾಗಿದೆ. ಇದರ ಪರಿಣಾಮ ಉಂಟಾಗಿರುವ ಭೂ ಕುಸಿತಧ ತೆರವು ಕಾರ್ಯಕ್ಕೆ ರೈಲು ಹಳಿ ಮಾರ್ಗ ಬಿಟ್ಟರೆ ಬದಲಿ ರಸ್ತೆ ವ್ಯವಸ್ಥೆಯೇ ಇಲ್ಲ. ಹಲವೆಡೆ ಎರಡೂ ಕಡೆ ಬೆಟ್ಟಗಳು, ಟ್ರ್ಯಾಕ್ ಮೇಲೆ ಬಿದ್ದಿರುವ ಬಂಡೆ ಹಾಗೂ ಕಲ್ಲುಗಳನ್ನು ತೆಗೆದರೂ ಹಾಕುವುದಕ್ಕೆ ಸ್ಥಳವಿಲ್ಲ. ರೈಲ್ವೆ ಇಲಾಖೆ ಮುಂದೆ ಇದ್ದ ಈ ದೊಡ್ಡ ಸವಾಲನ್ನು ಕೇವಲ ಒಂದೂವರೆ ತಿಂಗಳಲ್ಲಿ ಯಶಸ್ವಿಗೊಳಿಸಿರುವುದೂ ಒಂದು ಅದ್ಭುತವೇ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.