ಶಾಸನವೆಂಬ ದಿವ್ಯ– ಶಾಸಕನೆಂಬ ಅಗ್ನಿದಿವ್ಯ

7
ಅಗ್ನಿದಿವ್ಯ

ಶಾಸನವೆಂಬ ದಿವ್ಯ– ಶಾಸಕನೆಂಬ ಅಗ್ನಿದಿವ್ಯ

Published:
Updated:
Deccan Herald

ಶಾಸನಗಳನ್ನು ದೈವವಾಣಿಯೋ ಎಂಬಂತೆ ಗ್ರೀಕರು ಪಾಲಿಸುತ್ತಿದ್ದರು. ಅವುಗಳನ್ನು ಸಾಮಾನ್ಯರೂ ಓದುತ್ತಿದ್ದರು. ತಿಳಿಯುತ್ತಿದ್ದರು. ರೈತರು ಕೂಡ ನಾಡ ಶಾಸನಗಳ ಬಗ್ಗೆ ಜ್ಞಾನವುಳ್ಳವರಾಗಿದ್ದರು. ಯಾವುದೇ ಹೊಸ ಶಾಸನ ಬಂದಾಗಲೂ ಅದರ ವಿಮರ್ಶೆ ಅಥೆನ್ಸಿನ ಬೀದಿಗಳಲ್ಲಿ ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು.

ಶಾಸನಸಭೆ ಕೂಡ ಶಾಸನಗಳ ತಿರುಳನ್ನು ಜನರಿಗೆ ಪ್ರಚುರ ಪಡೆಸುವುದು ತಮ್ಮ ಆದ್ಯ ಕರ್ತವ್ಯವೆಂದು ಬಗೆದಿದ್ದ ಕಾಲ. ಅದಕ್ಕಾಗಿಯೇ ಸಮಿತಿಗಳಿರುತ್ತಿದ್ದವು. ಶಾಸನಗಳನ್ನು ಜನಸಾಮಾನ್ಯರು ತಿಳಿದಿದ್ದರೆ ಅವುಗಳನ್ನು ಅವರು ಉಲ್ಲಂಘಿಸಲಾರರು ಎಂಬುದು ಶಾಸನಸಭೆ ವಿಚಾರವಾಗಿತ್ತು. ಅದಕ್ಕಾಗಿಯೇ ನೇಮಿಸಲ್ಪಟ್ಟ ಅಧಿಕಾರಿಗಳಿರುತ್ತಿದ್ದರು. ಅವರು ದೇಗುಲಗಳಲ್ಲಿ, ಮಾರುಕಟ್ಟೆ, ಬಂದರುಗಳಲ್ಲಿ ಉಪಾಹಾರಗಳಲ್ಲಿ, ಸಂಗೀತ, ನಾಟಕ ಸಭೆಗಳಲ್ಲಿ ಉದ್ಯಾನವನಗಳಲ್ಲಿ– ಹೀಗೆ ಸಾರ್ವಜನಿಕರು ಸೇರುವೆಡೆಗಳಲ್ಲೆಲ್ಲ ಶಾಸನಗಳ ಕರಪತ್ರಗಳನ್ನು ಹಂಚುತ್ತಿದ್ದರು. ಓದಿ ಹೇಳುತ್ತಿದ್ದರು. ಹಳ್ಳಿಗಳಲ್ಲಿ ತಿರುಗಿ ಜನರಿಗೆ ಕಾನೂನುಗಳನ್ನು ತಿಳಿಸುತ್ತಿದ್ದರು.

ವಾಗ್ಮಿಗಳಿಂದ ಈ ವಿಷಯವಾಗಿ ಅಲ್ಲಲ್ಲಿ ಉಪನ್ಯಾಸಗಳನ್ನುಏರ್ಪಡಿಸುತ್ತಿದ್ದುದೂ ಇತ್ತು. ಬೀದಿನಾಟಕ, ಚಿತ್ರಪ್ರದರ್ಶನಗಳೂ ಇರುತ್ತಿದ್ದವು. ಒಟ್ಟಿನಲ್ಲಿ ಶಾಸನಗಳು ರಹಸ್ಯವಾಗಿ ರಚನೆಯಾಗಿ, ರಹಸ್ಯವಾಗಿ, ಏಕಾಏಕಿ ಜಾರಿಯಾಗುತ್ತಿರಲಿಲ್ಲ. ಸಾಕಷ್ಟು ಪಾರದರ್ಶಕತೆ, ಚರ್ಚೆ, ಪರ– ವಿರೋಧಗಳ ಗಣನೆ ಇವೆಲ್ಲವುಕ್ಕೂ ಅವಕಾಶವಿತ್ತು. ಕಾನೂನು, ಶಾಸನಗಳ ಜ್ಞಾನ ಅಥೆನ್ಸಿನ ಪ್ರತಿ ನಾಗರಿಕನಿಗೂ ಇರುತ್ತಿತ್ತು. ತನ್ನ ಹಕ್ಕುಗಳನ್ನಾತ ಅರಿತಿದ್ದ. ಹಾಗೇ ಭಾದ್ಯತೆಗಳನ್ನೂ ತಿಳಿದಿದ್ದ. ಇಂತಹ ಜವಾಬ್ದಾರಿಯನ್ನು ಆತ ಹೊರಲು ಅಣಿಗೊಳಿಸಿದ್ದು ಅಥೆನ್ಸಿನ ಚಿಂತಕರು, ತಂತ್ರಜ್ಞಾನಿಗಳ ಪರಂಪರೆ ಹಾಗೂ ಅವರ ಅವಿರತ ಶ್ರಮ. ಪ್ರಜಾಪ್ರಭುತ್ವದಲ್ಲಿ ಪಾಲುದಾರನಾಗಬೇಕಾದ ಪ್ರಜೆಯ ತಿಳಿವಳಿಕೆಯನ್ನು ವಿಸ್ತರಿಸುವುದರಿಂದ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯ ನಿಜವಾದ ಸೌಂದರ್ಯ ಅರಳುತ್ತದೆಯೇ ಹೊರತು, ಅನಕ್ಷರಸ್ಥರೂ, ತಮ್ಮ ಹಕ್ಕುಗಳ ಅರಿವಿಲ್ಲದವರೂ ಆದ ಪ್ರಜಾಸಂಕುಲವನ್ನು ಪ್ರಜಾರಾಜ್ಯಗಳನ್ನು ನಡೆಸುವವರು ವಂಚಿಸುವುದನ್ನೂ ಲೋಕ ಕಂಡಿದೆ.

ಅದಕ್ಕೆಂದೇ ಶಾಸನಗಳನ್ನು ಗ್ರೀಕರು ಸಾರ್ವಜನಿಕ ಅವಗಾಹನೆಗಾಗಿ ಪ್ರದರ್ಶನಕ್ಕಿಡುತ್ತಿದ್ದರು. ಮುಖ್ಯಬೀದಿಗಳಲ್ಲಿ ಶಾಸನದ ಅಂಶಗಳನ್ನು ಡಂಗೂರ ಸಾರುತ್ತಿದ್ದರು. ಯಾವಾತ ಶಾಸನವನ್ನು  ಪ್ರಸ್ತಾಪಿಸುತ್ತಾನೋ ಅವನೇ ಅದನ್ನು ಕಾರ್ಯರೂಪಕ್ಕೆ ತರಬೇಕಾಗಿತ್ತು. ಅದವನ ಜವಾಬ್ದಾರಿಯಾಗಿತ್ತು. ಅದು ಜನಹಿತಕಾರಿಯಾದರೆ ಅವನಿಗೆ ಶಾಸನಸಭೆಯಲ್ಲಿ ಆಲಿವ್ ಎಲೆಗಳ ಹಾರ ಹಾಕಿ ಸನ್ಮಾನಿಸಲಾಗುತ್ತಿತ್ತು. ಅದು ಶಾಸನಸಭೆಯ ನಡಾವಳಿಗಳಲ್ಲೂ ನಮೂದಾಗುತ್ತಿತ್ತು. ಆ ಶಾಸನದಿಂದೇನಾದರೂ ಪ್ರಜಾವರ್ಗಕ್ಕೆ ನಷ್ಟವಾದರೆ, ಹಾನಿಯಾದರೆ, ಅವನಿಗೆ ಶಿಕ್ಷೆಯೂ ಆಗುತ್ತಿತ್ತು. ಸೆರೆಮನೆ ವಾಸ, ಜುಲ್ಮಾನೆ, ಶಾಸನಸಭೆಯ ಸದಸ್ಯತ್ವ ಹಾಗೂ ಆತನ ಮತದಾನದ ಹಕ್ಕು ರದ್ದಾಗುತ್ತಿತ್ತು.

ಇದರಿಂದ ಶಾಸನಸಭೆಯ ಸದಸ್ಯ ಶಾಸನಗಳನ್ನು ಮಂಡಿಸುವಾಗ ಎಚ್ಚರಿಕೆಯಿಂದಿರುತ್ತಿದ್ದ. ಅವಸರವಾಗಿ, ಸ್ವಜನಹಿತಾಸಕ್ತಿಯಿಂದ, ಇಲ್ಲವೇ ಆಮಿಷಕ್ಕೊಳಗಾಗಿ ಶಾಸನಗಳನ್ನು ಮಾಡುತ್ತಿರಲಿಲ್ಲ. ಲೋಕ ಕಲ್ಯಾಣದ ಗುರಿ ಇದ್ದಂತಹವು ಮಾತ್ರ ಶಾಸನ‌ಗಳಾಗುತ್ತಿದ್ದವು.

ಶಾಸಕನು ತಾನು ಪ್ರಸ್ತಾಪಿಸುವ ಶಾಸನವನ್ನು ಮೊದಲು ನ್ಯಾಯ ಸಭೆಗೆ ಕಳಿಸುತ್ತಿದ್ದ. ನ್ಯಾಯಾಧೀಶರ ತಂಡವೊಂದು ಅದನ್ನು ಪರಿಶೀಲಿಸಿ, ತನ್ನ ಒಪ್ಪಿಗೆ ಸೂಚಿಸಬೇಕಾಗಿದ್ದು ಕಡ್ಡಾಯವಾಗಿತ್ತು. ಆ ಶಾಸನ ಅಥೆನ್ಸ್‌ನ ಕಾನೂನು, ಸಂಸ್ಕೃತಿ, ಸಂಪ್ರದಾಯಗಳಿಗೆ ಒಳಪಡುವುದಾದಲ್ಲಿ ಮಾತ್ರ ಅದು ಶಾಸನವಾಗುತ್ತಿತ್ತು. ನ್ಯಾಯಮಂಡಳಿ ಒಪ್ಪಿಗೆಯ ಹಸಿರು ನಿಶಾನೆ ತೋರಿಸುತ್ತಿತ್ತು. ನ್ಯಾಯಮಂಡಳಿ ಒಪ್ಪಿದ ಮೇಲೂ ಅದೂ ಶಾಸಕರ ಸಹಿಗೆ ಹೋಗುತ್ತಿತ್ತು. ಶಾಸನ ಸಭೆಯ ಅರ್ಧಕ್ಕೂ ಹೆಚ್ಚು ಜನರ ಸಹಿಯ ನಂತರವೇ ಮಂಡನೆಯಾಗುತ್ತಿತ್ತು. ಅಷ್ಟಾಗಿಯೂ ಮತದಾನದ ಅಗ್ನಿಪರೀಕ್ಷೆಗೂ ಅದು ಒಳಪಡಬೇಕಾಗಿತ್ತು. ಹೀಗಾಗಿ ಯಾವುದೇ ಸ್ವಹಿತಾಸಕ್ತಿ ಇಲ್ಲದ, ಅಪ್ಪಟ ಚಿನ್ನದಂತಹ ಶಾಸನಗಳು ಹೊರಹೊಮ್ಮುತ್ತಿದ್ದವು. ಅಥೆನ್ಸಿಗರ ಶಾಸನಗಳು ಇಡೀ ಯೂರೋಪ್ ಖಂಡಕ್ಕೆ ಬೆಳಕಾದವು.

ಅಮೆರಿಕ ಇಂದಿಗೂ ಇದೇ ಪದ್ಧತಿಯನ್ನುಳಿಸಿಕೊಂಡಿದೆ. ಮುಖ್ಯವಾಗಿ ಕಾನೂನು ಮಂಡಳಿ ಹೊಸ ಶಾಸನಗಳನ್ನು ಪರಿಶೀಲಿಸುತ್ತದೆ. ವರದಿ ನೀಡುತ್ತದೆ. ಕಾನೂನು ಮಂಡಳಿಯ ವರದಿ ಅತಿಮುಖ್ಯ ಶಾಸನಗಳನ್ನು ತಿರಸ್ಕರಿಸುವ ಅಧಿಕಾರ ಈ ಮಂಡಳಿಗಿಲ್ಲ. ಆದರೆ, ವರದಿಯನ್ನು ಆಧರಿಸಿಯೇ ಇವು ಶಾಸನಗಳಾಗುವ ಅರ್ಹತೆ ಪಡೆಯುತ್ತವೆ. ಪ್ರಜಾಪ್ರಭುತ್ವ ಕಾನೂನಿನ ಕಟ್ಟುಪಾಡಿಗೊಳಪಟ್ಟಾಗಲೇ ಜನಹಿತಕಾರಿ, ಇಲ್ಲವಾದಲ್ಲಿ ಅನರ್ಥಕಾರಿಯೇ ಸರಿ.

ಅಥೆನ್ಸ್ ಶಾಸನಸಭೆಯಲ್ಲಿ ಸದಸ್ಯರು ತಮ್ಮ ವಯಸ್ಸಿಗನುಗುಣವಾಗಿ ಆಸನಗಳನ್ನು ಪಡೆಯುತ್ತಿದ್ದರು. ಮಾತನಾಡುವ ಅವಕಾಶ ಹಾಗೂ ಕಾಲಮಿತಿಯನ್ನು ಕೂಡ ಅವರ ವಯಸ್ಸೇ ನಿರ್ಧರಿಸುತ್ತಿತ್ತು. ನೀರಿನ ಗಡಿಯಾರಗಳಿಂದ ವೇಳೆ ನಿಗದಿಗೊಳಿಸಿ ಸಮಾನ ಅವಕಾಶಗಳನ್ನು ಒದಗಿಸಲಾಗುತ್ತಿತ್ತು. ಅನಗತ್ಯ ವಾದವನ್ನು ಪುರಸ್ಕರಿಸಲಾಗುತ್ತಿರಲಿಲ್ಲ. ಸ್ವಪ್ರಶಂಸೆ, ಇತರರ ತೆಗಳಿಕೆಯನ್ನೂ ಶಾಸನಸಭೆ ಸಹಿಸುತ್ತಿರಲಿಲ್ಲ. ಎಷ್ಟೇ ಒಳ್ಳೆಯ ಮಾತುಗಾರನೂ ಸಹಾ ಸರಿಯಾದ ತಯಾರಿ, ತಾಲೀಮಿನ ಜೊತೆಗೆ ಶಾಸನಸಭೆಯ ಗೌರವಕ್ಕೆ ಚ್ಯುತಿ ಬಾರದ ಹಾಗೆ ಮಾತನಾಡಬೇಕಿತ್ತು. ಅಗೌರವ ಸೂಚಕ ಪದ, ನಿಂದನೆ, ನಡುವಳಿಕೆಗಳನ್ನು ಖಂಡಿಸಿ ಶಾಸಕರನ್ನು ಜೀವಮಾನ ಪೂರ್ತಿ ಅಮಾತಿನಲ್ಲಿಡಲಾಗುತ್ತಿತ್ತು. ಅಂತಹವರಿಗೆ ಆ ಕಳಂಕ ಭಾರವಾಗುತ್ತಿತ್ತು. ಅವರ ಕುಟುಂಬದ ಜೊತೆಗೆ ಗೌರವಾನ್ವಿತರ್‍ಯಾರೂ ವಿವಾಹ ಸಂಬಂಧಗಳನ್ನು ಬಯಸುತ್ತಿರಲಿಲ್ಲ. ಒಂದು ರೀತಿಯ ಸಾಮಾಜಿಕ ಬಹಿಷ್ಕಾರವನ್ನು ಅವರು ಎದುರಿಸಬೇಕಾಗಿತ್ತು.

ಶಾಸನಸಭೆ– ಗ್ರೀಕ್‌ ಭಾಷೆಯಲ್ಲಿ ಅದು ‘ಎಕ್ಲೇಸಿಯಾ’. ಎಕ್ಲೇಸಿಯಾ ದೇವಸ್ಥಾನದಷ್ಟೆ ಪವಿತ್ರವಾದುದು. ಹಾಗಾಗಿ ಅಲ್ಲಿನ ಸಮಯಕ್ಕೆ, ಸದಾಚಾರಕ್ಕೆ ಮಹತ್ವವಿತ್ತು. ಅದೇ ರೀತಿ ಶಾಸಕನ ಕುಟುಂಬ ಜೀವನ ಸ್ವಚ್ಛವಾಗಿರಲೇ ಬೇಕು ಎಂದು ಬಯಸುತ್ತಿದ್ದರು. ಅವನ ಚಾರಿತ್ಯಕ್ಕೆ ಅತಿಹೆಚ್ಚು ಮಹತ್ವವಿತ್ತು. ಅವನು ಪತ್ನಿಪೀಡಕನಾಗಿದ್ದರೆ, ಸ್ತ್ರೀಯರ ಸಹವಾಸ ಮಾಡಿದರೆ, ಕುಟುಂಬ ವ್ಯವಸ್ಥೆಯನ್ನು ಧಿಕ್ಕರಿಸಿದ ಸ್ವೇಚ್ಛಾಚಾರಿಯಾಗಿದ್ದರೆ ಅವನನ್ನು ಸಭೆಯಿಂದ ಉಚ್ಛಾಟಿಸಬಲ್ಲ ಅಧಿಕಾರ ಸಭಾಧ್ಯಕ್ಷನಿಗಿತ್ತು. ಶಾಸಕರ ವೈಯಕ್ತಿಕ ಚಲನವಲನಗಳ ವರದಿ ಸಭೆಗೆ ತಲುಪುತ್ತಿತ್ತು. ಅವನ ಖರ್ಚು–ವೆಚ್ಚ, ಆಸ್ತಿ, ಗೆಳೆಯರು ಇವುಗಳ ವಿವರವೂ ಸಭೆಗೆ ಇರುತ್ತಿತ್ತು.

ಆತ ಸಾರ್ವಜನಿಕ ಕಣ್ಗಾವಲಿನಲ್ಲೇ ಇರಬೇಕಾಗಿತ್ತು. ಇದರಿಂದ ಶಾಸಕನ ನಡತೆಯು ಸಡಿಲವಾಗಲು ಸಾಧ್ಯವಿರಲಿಲ್ಲ. ಶಾಸಕನಾಗುವುದೆಂದರೆ ಎಚ್ಚರಿಕೆಯಿಂದ ಸನ್ನಡತೆಯ ಜೀವನ ಮಾಡುವುದೇ ಆಗಿತ್ತು. ಅವನ ಇಡೀ ವಂಶ ಈ ಕುರಿತು ಅನೇಕ ತಲೆಮಾರಿನವರಿಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿತ್ತು. ಹಾಗೆ ಅವನು ಬದುಕಿ ಬಾಳಬೇಕಿತ್ತು.

ಈ ಕುರಿತು ಒಂದು ಕಥೆ ಹೀಗಿದೆ: ಇದು ಅಪೊಲೋದೇವನ ಆಲಯದಲ್ಲಿ ಕೆತ್ತಲ್ಪಟ್ಟಿದೆ. ಒಬ್ಬ ವರ್ತಕನಿಗೆ ವ್ಯಾಪಾರದಲ್ಲಿ ಸಾಲ ಬೇಕಾಗಿತ್ತು. ಅವನ ಬಳಿ ಒತ್ತೆಯಿಡಲು ಬೆಲೆ ಬಾಳುವುದೇನೂ ಇರಲಿಲ್ಲ. ಆದರೂ, ಆತ ಊರಿನ ಧನಿಕನ ಬಳಿ ಹೋಗಿ ಸಾಲ ಬೇಕೆಂದು ಕೇಳಿದ. ಆತನೆಂದ ‘ನನ್ನ ಬಳಿ ಅಮೂಲ್ಯವಾದ ವಸ್ತುಗಳೇನೂ ಇಲ್ಲ, ಜಮೀನಿಲ್ಲ, ಮಹಲುಗಳಿಲ್ಲ, ನಾನು ಸತ್ಯವಾಗಿ, ಹೇಳಿದಂತೆ ನಿಮ್ಮ ಹಣ ಮರಳಿಸುತ್ತೇನೆ. ಒಂದೊಮ್ಮೆ ನಾನು ಹಾಗೆ ಮರಳಿಸದಿದ್ದಲ್ಲಿ ಅಥೆನ್ಸಿನ ಶಾಸಕನಾಗಿದ್ದ ನನ್ನ ತಾತ ಥಿಯೋಡೋರಸ್‌ನಿಗೆ ಕೆಟ್ಟ ಹೆಸರು ಬರುತ್ತದೆ’ ಎಂದ. ಮರು ಮಾತನಾಡದೆ ಧನಿಕ ಸಾಲಕೊಟ್ಟ ಹಾಗೂ ಸಾಲಪತ್ರವನ್ನು ಹರಿದು ಎಸೆದ. ಅಥೆನ್ಸಿನ ಶಾಸಕನ ನಡತೆ, ಬದ್ಧತೆಗೆ ಇದಕ್ಕಿಂತ ಪ್ರಯಾಣಬೇಕೆ? ಇದಂತೂ ಅದ್ಭುತ.

ಶಾಸಕನ ಮೇಲೆ ನಾಗರಿಕರು ಶಾಸನಸಭೆಗೆ ದೂರು ಕೊಡಬಹುದಿತ್ತು. ಅದರ ವಿಚಾರಣೆಯನ್ನು ತಕ್ಷಣ ಕೈಗೊಳ್ಳಲಾಗುತ್ತಿತ್ತು. ದೋಷಿಯೆಂದು ಕಂಡುಬಂದಲ್ಲಿ ನಿರ್ದಾಕ್ಷಣ್ಯ ಕ್ರಮಗಳಾಗುತ್ತಿದ್ದವು. ಅದನ್ನು ಊರ ಬೀದಿಗಳಲ್ಲಿ ಸಾರಲಾಗುತ್ತಿತ್ತು. ಶಾಸಕನೂ ಯುದ್ಧಕಾಲದಲ್ಲಿ ಶಸ್ತ್ರ ತೊಡಬೇಕಿತ್ತು. ಯುದ್ಧಕ್ಕೆ ಹೋಗಲು ನಿರಾಕರಿಸುವಂತಿರಲಿಲ್ಲ. ದೇಶಸೇವೆಯ ಭಾಷಣದೊಂದಿಗೇ, ನಿಜವಾಗಿಯೂ ದೇಶಕ್ಕಾಗಿ ಎದೆಯೊಡ್ಡಿ ಸೆಣಸಬೇಕಾಗಿದ್ದ ಕಾಲ ಅದು.

ಕಾಲಕಾಲಕ್ಕೆ ತೆರಿಗೆಯಿಂದ ಆತನಿಗೆ ವಿನಾಯ್ತಿ ಇರಲಿಲ್ಲ. ಸರ್ಕಾರದಿಂದ ಭೂಮಿ ಪಡೆಯುವಂತಿರಲಿಲ್ಲ. ಅವನ ಪೂರ್ವಜರ ಅಥವಾ ಅವನು ಸ್ವಂತ ಸಂಪಾದನೆಯಲ್ಲಿ ಮಾತ್ರ ಆಸ್ತಿ ಕೊಳ್ಳಬಹುದಿತ್ತಲ್ಲದೆ ಬೇರೆ ಮಾರ್ಗವಿರಲಿಲ್ಲ. ಶಾಸಕನ ಮನೆಯ ಮುಂದೆ ಅವನ ವಂಶಾವಳಿ, ಕಸುಬು ಹಾಗೂ ಆಸ್ತಿಪಾಸ್ತಿಗಳ ವಿವರ ತೂಗುಹಾಕುವುದು ಕಡ್ಡಾಯವಾಗಿತ್ತು. ಯಶಸ್ವಿಯಾಗಿ ತನ್ನ ಶಾಸಕಾವಧಿಯನ್ನು ಮುಗಿಸಿದ, ಉತ್ತಮ ಶಾಸನಗಳನ್ನು ರೂಪಿಸಿ, ಜಾರಿಗೊಳಿಸಿದ ಶಾಸಕನಿಗೆ ಸಂಮಾನ, ಗೌರವಗಳೂ ಇದ್ದವು. ಅವನನ್ನು ಊರವರು ಪೌರ ಸನ್ಮಾನದೊಡನೆ ಕೊಂಡಾಡುತ್ತಿದ್ದರು. ಅವನನ್ನು ನ್ಯಾಯಮಂಡಲಿಗೆ ನೇಮಕ ಮಾಡಲಾಗುತ್ತಿತ್ತು. ಒಟ್ಟಿನಲ್ಲಿ ಆಡಳಿತದ ಬೇರೊಂದು ಅಂಗಸಂಸ್ಥೆಯಲ್ಲಿ ಅವನಿರುತ್ತಿದ್ದ. ಒಮ್ಮೆ ಮಾತ್ರ ಚುನಾವಣೆಗೆ ಸ್ವರ್ಧಿಸಲು ಅವಕಾಶ, ಒಮ್ಮೆ ಮಾತ್ರ ಶಾಸನ ಸಭೆಗೆ ಪ್ರವೇಶ– ಇದರಿಂದ ಶಾಸಕ ತಾನೇನಾದರೂ ಉತ್ತಮ ಕೆಲಸ ಮಾಡಬಯಸಿದಲ್ಲಿ, ಇತಿಹಾಸ ನಿರ್ಮಿಸಲು ಬಯಸಿದಲ್ಲಿ ಅದನ್ನು ಸಿಕ್ಕ ಒಂದೇ ಅವಕಾಶದಲ್ಲೇ ಮಾಡಬೇಕಾಗಿತ್ತು. ಇದರಿಂದಾಗಿ ಮನುಷ್ಯನ ಅತ್ಯುತ್ತಮ ಪ್ರಯತ್ನ ಜನರಿಗೆ ಲಭಿಸುತ್ತಿತ್ತು.

ಸಭೆಗಿಂತ ‘ಕೌನ್ಸಿಲ್’ ಇನ್ನೂ ಮೇಲಿನ ಸದನ. ಇದಂತೂ ಪಂಡಿತರ ಮಂಡಳಿ. ಇಡೀ ಅಥೆನ್ಸ್‌ನ ಎಲ್ಲ ವರ್ಗದ ಸಾಧಕರು, ತಜ್ಞರು, ವಿದ್ವಾಂಸರು ಇಲ್ಲಿಗೆ ನಾಮಕರಣಗೊಳ್ಳುತ್ತಿದ್ದರು. ಪ್ರತಿ ಕಸುಬಿನ ಪಂಗಡದಿಂದ ಒಬ್ಬರು ನಾಮಕರಣಗೊಳ್ಳುತ್ತಿದ್ದರು. ಅಂತಹ 50 ಜನರ 6 ತಂಡವಿದ್ದು, ಇದರ ಅವಧಿಯೂ ಒಂದೇ ವರುಷ. ಜೀವಮಾನದಲ್ಲಿ ಒಮ್ಮೆ ಮಾತ್ರ ವ್ಯಕ್ತಿಗೆ ಅವಕಾಶವಿತ್ತು. ಆಗಿನ ಕ್ಯಾಲೆಂಡರ್‌ನಲ್ಲಿ ತಿಂಗಳಿಗೆ ಇಪ್ಪತ್ತಾರು ದಿನಗಳಿರುತ್ತಿದ್ದವು. ಪ್ರತಿದಿನವೂ ಚೀಟಿ ಎತ್ತಿ ಆ ದಿನದ ಸಭಾಧ್ಯಕ್ಷನನ್ನು ಆಯ್ಕೆ ಮಾಡಲಾಗುತ್ತಿತ್ತು. ಆತ ಅಂದಿನ ಸಭಾಪತಿಯಾಗುತ್ತಿದ್ದ. ಅಂದಾತ ದೇಶದ ಅತ್ಯುನ್ನತ ಸ್ಥಾನದಲ್ಲಿರುತ್ತಿದ್ದ. ಹೀಗೆ ಎಲ್ಲ 300 ಜನರಿಗೂ ಸಮಾನ ಅವಕಾಶಗಳಿರುತ್ತಿತ್ತು. ಕೌನ್ಸಿಲ್‌ನ ಎಲ್ಲರೂ ಸಭಾಪತಿಗಳಾಗಿ ದೇಶದ ಆಡಳಿತದ ಸಹಭಾಗಿತ್ವ ಪಡೆಯುತ್ತಿದ್ದರು. ಇದಂತೂ ಅದ್ಭುತ ಪ್ರಯೋಗ. ಇದರಿಂದ ಗುಂಪುಗಾರಿಕೆ, ಅಸಮಾಧಾನ, ತಾರತಮ್ಯ, ಯಾವುದಕ್ಕೂ ಆಸ್ಪದವಿರಲಿಲ್ಲ. ಇದೊಂದು ಚಾರಿತ್ರಿಕ ಮಹತ್ವದ ಮುತ್ಸದ್ದಿತನವೇ ಸರಿ. ಎಲ್ಲ ಭಾಗವಸುವಿಕೆ, ಪಾಲ್ಗೊಳ್ಳುವಿಕೆಯ ಉತ್ತಮ ಮಾದರಿ.

ಈ ವ್ಯವಸ್ಥೆಯಿಂದ ಪ್ರತಿ ವ್ಯಕ್ತಿಯ ಸಾಮರ್ಥ್ಯವೂ ಆಡಳಿತಕ್ಕೆ ಲಭಿಸುತ್ತಿತ್ತು. ಭ್ರಷ್ಟಾಚಾರವಂತೂ ತಲೆ ಎತ್ತುತ್ತಲೇ ಇರಲಿಲ್ಲ. ಅಧಿಕಾರ ಶಾಶ್ವತವಲ್ಲ ಎಂಬ ಪ್ರಜ್ಞೆಯೂ ಆಡಳಿತಗಾರನಲ್ಲಿ ಮೂಡಿ ಆತ ತನ್ನಿಂದಾಗುವ ಎಲ್ಲ ಒಳ್ಳೆಯ ಕೆಲಸಗಳನ್ನು ಇದೇ ಅವಧಿಯಲ್ಲಿ ಮಾಡುತ್ತಿದ್ದ. ಇದರಿಂದ ಪ್ರಜೆಗಳಿಗೆ ಸದಾ ಸುರಕ್ಷತೆಯ ಭಾವ ಉಂಟಾಗುತ್ತಿತ್ತು.

ಪ್ರಾಚೀನ ಗ್ರೀಸ್‌ನಲ್ಲಿ 5ನೇ ಶತಮಾನದಲ್ಲೇ ಸಮಿತಿ, ಸಭೆ, ಕಾನೂನು ಮಂಡಳಿ, ಕೌನ್ಸಿಲ್, ಚುನಾವಣೆಗಳನ್ನು, ಒಳಗೊಂಡ ಒಂದು ಗಂಭೀರ ರಾಜಕೀಯ ವಿದ್ಯಮಾನ ಸದ್ದಿಲ್ಲದೆ ಅಸ್ತಿತ್ವದಲ್ಲಿತ್ತು. ಕಾನೂನುಗಳು ತಾಮ್ರ, ಕಂಚು, ಶಿಲೆಗಳ ಮೇಲೆ ಕೊರೆಯಲ್ಪಟ್ಟು ನಗರದ ಹೃದಯ ಭಾಗದಲ್ಲಿ ಪ್ರದರ್ಶಿಸಲ್ಪಡುತ್ತಿದ್ದವು. ನಾಗರಿಕರು ಕಾನೂನಿಗನುಗುಣವಾಗಿ ತಂತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ನ್ಯಾಯಾಲಯಗಳೂ ಸಮರ್ಪಕವಾಗಿ ಜನರಿಗೆ ಒಳಿತಾಗುವಂತೆ ನ್ಯಾಯದಾನ ಮಾಡುತ್ತಿದ್ದರು.

ಕೊಲೆ ಪ್ರಕರಣಗಳು ಕಡಿಮೆ ಇದ್ದವು. ಯಾಕೆಂದರೆ ಅದು ಕೇವಲ ಕಾನೂನಿನ ಅಪರಾಧ ಮಾತ್ರವಲ್ಲ. ಅದೊಂದು ಗುರುತರ ಧಾರ್ಮಿಕ ಅಪರಾಧವೂ ಆಗಿತ್ತು. ಕೊಲೆ ಅಪರಾಧಿ ಅಥೆನ್ಸ್‌ನ ಪವಿತ್ರಭೂಮಿಯನ್ನು ಮೆಟ್ಟುವಂತಿರಲಿಲ್ಲ. ಅಪರಾಧಿ ಸಮುದ್ರದಲ್ಲಿ ದೋಣಿಯೊಂದರಲ್ಲಿ ಕುಳಿತು ವಿಚಾರಣೆಯನ್ನೆದುರಿಸಬೇಕಾಗಿತ್ತು. ನ್ಯಾಯಾಲಯಗಳು ಸಮುದ್ರ ತೀರದಲ್ಲಿ ರಚನೆಯಾಗುತ್ತಿದ್ದವು. ಅಲ್ಲೇ ವಿಚಾರಣೆ ನಡೆದು, ದೋಷಿ ಎಂದು ತೀರ್ಮಾನವಾದರೆ ಆತನನ್ನು ಸಮುದ್ರದೇವನಿಗೆ ಬಲಿ ಕೊಡಲಾಗುತ್ತಿತ್ತು. ಆದರೂ ಅಂತಹ ಅಪರಾಧಿಯ ಕುಟುಂಬ ವಂಶಪಾರಂಪರ್ಯವಾಗಿ ಸಮಾಜದ ಚುಚ್ಚುಮಾತಿಗೆ, ತಿರಸ್ಕಾರಕ್ಕೆ ಬಲಿಯಾಗಬೇಕಿತ್ತು.

ವಿವಾಹ, ಆಸ್ತಿ, ಸ್ತ್ರೀಧನ, ಉಯಿಲು, ದತ್ತುಪತ್ರ ಮುಂತಾದ ವಿಷಯಗಳಲ್ಲಿ ಗ್ರೀಕ್ ಕಾನೂನು ಬಿಗಿಯಾಗಿತ್ತು. ಮುಂದೆ ರೋಮನ್ ಕಾನೂನುಗಳಿಗೂ ಇದೇ ಅಡಿಪಾಯವಾಯಿತು. ಆದರೂ ಈ ವ್ಯವಸ್ಥೆಯಲ್ಲೂ ಲೋಪದೋಷಗಳಿದ್ದವು. ಮುಖ್ಯವಾಗಿ ಸ್ತ್ರೀಯರಿಗೆ ನಾಗರಿಕ ಹಕ್ಕುಗಳೇ ಇರಲಿಲ್ಲ. ನ್ಯಾಯ ಸ್ಥಾನದೊಳಗೆ ಅವರಿಗೆ ಪ್ರವೇಶವಿರಲಿಲ್ಲ. ಗುಲಾಮರನ್ನಂತೂ ಮನುಷ್ಯರೆಂದೇ ಪರಿಗಣಿಸಿರಲಿಲ್ಲ. ಕೆಲವೊಮ್ಮೆ ನ್ಯಾಯಾಧೀಶರು ಮುಖಸ್ತುತಿಗೆ ಮನಸೋಲುತ್ತಿದ್ದರು. ಮತದಾನದ ಹಕ್ಕನ್ನು ಹಿಂಪಡೆಯುವ ಶಿಕ್ಷೆಯೂ ಇತ್ತು.

ಚರಿತ್ರೆಯಲ್ಲೇ ಅಥೆನ್ಸ್‌ನ ಪ್ರಜಾರಾಜ್ಯ ವಿಶಿಷ್ಟವಾದದ್ದು. ಅಲ್ಲಿನ ಪ್ರಬುದ್ಧ ನಾಗರಿಕರಿಂದಲೇ ರಚಿತವಾಗಿ, ಅವರಿಂದಲೇ ನಿಯಂತ್ರಣಕ್ಕೊಳಪಟ್ಟು, ಅವರಿಂದಲೇ ಆಗಾಗ ತಿದ್ದುಪಡಿಗೊಳಗಾದ ಪ್ರಜಾರಾಜ್ಯವಿದು. ಇದೇ ಅವರ ಸೌಂದರ್ಯ, ಸಮೃದ್ಧಿ ಹಾಗೂ ಸ್ವಂತಿಕೆ ಅದೇ ವೇಳೆಗೆ ಅದು ಕೇವಲ ಅಥೆನ್ಸ್‌ನ ಮಾತ್ರ ಒಳಗೊಂಡಿದ್ದು, ಪೂರ್ಣ ಗ್ರೀಸ್ ಇದರ ಪರಿಧಿಯಲ್ಲಿರಲಿಲ್ಲ.

ಇದು ಅದರ ಸೋಲು ಹಾಗೂ ಮಿತಿ. ಇದಲ್ಲದೆ ಚುನಾವಣೆಗಳು ಅಷ್ಟೇನೂ ನ್ಯಾಯಯುತವಾಗಿರಲಿಲ್ಲ. ಬೆಟ್ಟಗುಡ್ಡಗಳು, ಸುಗಮ ಸಾರಿಗೆಯ ಕೊರತೆ, ಭೂಮಾಲಿಕರು ಮಾತ್ರ ಮತದಾನದ ಹಕ್ಕು ಹೊಂದಿದ್ದು, ಸ್ತ್ರೀಯರ ಭಾಗವಹಿಸುವಿಕೆ ಇಲ್ಲದಿದ್ದದ್ದು. ಇವೆಲ್ಲ ಚುನಾವಣೆಗಳ ಸಮಗ್ರತೆಗೆ ಧಕ್ಕೆ ತರುತ್ತಿದ್ದವು. ಹೀಗಾಗಿ ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವ ಎಂದು ಹೇಳಲಾಗುತ್ತಿರಲಿಲ್ಲ. ಕೆನೆಪದರ ಮಾತ್ರ ಮತದಾನ ಮಾಡುತ್ತಿತ್ತು. ಇದೇ ಈ ರಾಜಕೀಯದಾಟ ವಿದ್ಯಾವಂತರ, ಸಿರಿವಂತರ, ಕಲಾವಿದರ, ಸಾಹಿತಿ– ತತ್ವಜ್ಞಾನಿಗಳ ಸಮೂಹದ ಮೇಲಾಟವಾಗಿತ್ತೆಂದೇ ಹೇಳಬಹುದು.

ಇತ್ತ ಶಾಸನಸಭೆಯಲ್ಲೂ ಕೆಲವು ಮಿತಿಗಳಿದ್ದವು. ಅಲ್ಲೂ ಮುನ್ನುಗ್ಗುವ ಸ್ವಭಾವದವರು, ಉತ್ತಮ ವಾಗ್ಮಿಗಳು ಬಹುಬೇಗ ಪ್ರಸಿದ್ಧಿಗೆ ಬರುತ್ತಿದ್ದರು. ಪ್ರತಿದಿನವೂ ಬದಲಾಗುವ ಸಭಾಧ್ಯಕ್ಷರ ದೆಸೆಯಿಂದ ಕೆಲವು ಕೆಲಸಗಳು ಅಪೂರ್ಣವಾಗುತ್ತಿದ್ದವು. ಅಭಿಪ್ರಾಯ ಭೇದ, ಗೊಂದಲ, ಗುಂಪುಗಾರಿಕೆ, ಅಂತಃಕಲಹ ಇವೂ ಇದ್ದವು.

ಸಾಮಾಜಿಕ ಸುಧಾರಕರಿಂದ ಬೆಸ್ತರು, ಕುರುಬರು, ಕುಂಬಾರರು, ಚರ್ಮದ ಮಾಡುವವರು ಮುಂತಾದವರೂ ಶಾಸಕರಾದರೂ, ಬಲುಬೇಗ ಅವರು ಸುಖಲೋಲುಪರಾದರು. ರೇಶಿಮೆಯ ವಸ್ತ್ರಗಳು, ಪಾದರಕ್ಷೆ, ಸುಗಂಧಗಳು ಇವೆಲ್ಲ ಅವರನ್ನು ಅಲಸಿಗಳನ್ನಾಗಿಸಿದವು. ಇತ್ತ ಯೂರೋಪಿನೆಲ್ಲೆಡೆ ರಾಜಪ್ರಭುತ್ವಗಳು ನಿರ್ದಯವಾಗಿದ್ದವು. ಜನರನ್ನು ರಾಜದಂಡ ನಿಯಂತ್ರಿಸುತ್ತಿತ್ತು. ಇಲ್ಲೋ ಪ್ರತಿ ಮನುಷ್ಯನಿಗೂ ಬೆಲೆ ಕೊಡಬೇಕೆನ್ನುವ ಉದಾರವಾದ ಕಾಲ. ಈ ದ್ವಂದ್ವಗಳಿರುವ ಕಾಲದಲ್ಲೇ ಮಹತ್ವಾಕಾಂಕ್ಷಿಯಾದ ರೋಮನ್ನರು, ತುರ್ಕರು, ಇವರೆಲ್ಲ ಅಥೆನ್ಸ್ ಮೇಲೆ ಸತತವಾಗಿ ದಾಳಿಗಳನ್ನು ನಡೆಸಿ ಸೋಲಿಸಿ, ಪ್ರಜಾಪ್ರಭುತ್ವದ ವಿಕಸಿತ ಕುಸುಮವನ್ನು ಹೊಸಕಿ ಹಾಕಿಬಿಟ್ಟರು.

ಆದರೆ ಗೊಂದಲಮಯವಾಗಿದ್ದರೂ, ಅಥೆನ್ಸ್‌ನ ಅಂತಃಚೈತನ್ಯದ ಪ್ರಚಂಡ ಶಕ್ತಿ, ಸ್ವಾತಂತ್ರ್ಯ ಆ ಪಟ್ಟಣಗಳ ಜ್ಞಾನಗಳ ತವರಾಗಿತ್ತು. ಅವರ ಶಾಸನಸಭೆಗಳು ಕಲಾವಿದರು, ಸಾಹಿತಿಗಳು, ಗಣಿತಜ್ಞರು, ತತ್ವವೇತ್ತರನ್ನೊಳಗೊಂಡ ವಿದ್ವತ್ಸಭೆಗಳಾಗಿದ್ದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !