ರಂಗಭೂಮಿಯ ಕಥನ

7

ರಂಗಭೂಮಿಯ ಕಥನ

Published:
Updated:
Deccan Herald

ನಾಟಕ ಸಾಹಿತ್ಯ ಮತ್ತು ರಂಗಭೂಮಿ ವಿಮರ್ಶೆಗೆ ಸಂಬಂಧಿಸಿದಂತೆ ಕೃತಿಗಳ ಸಂಖ್ಯೆ ವಿರಳ. ಅದರಲ್ಲಿಯೂ, ಹೈದರಾಬಾದ ಕರ್ನಾಟಕದ ರಂಗಭೂಮಿ ಕುರಿತ ಕೃತಿಗಳ ಸಂಖ್ಯೆ ಇಲ್ಲವೇನೋ ಎಂಬಷ್ಟು ಕಡಿಮೆ. ಡಾ. ಬಸವರಾಜ ಸಬರದ ಅವರ ‘ಹೈದರಾಬಾದ್ ಕರ್ನಾಟಕದ ರಂಗಭೂಮಿ’ ಎಂಬ ಕೃತಿ ಈ ಕೊರತೆಯನ್ನು ತಕ್ಕಮಟ್ಟಿಗೆ ನೀಗಿಸುತ್ತದೆ. 

ಈ ಭಾಗದ ಗ್ರಾಮೀಣ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ, ಕಂಪನಿಗಳು ಹಾಗೂ ನಾಟಕಕಾರರ ಪರಿಚಯ ಈ ಕೃತಿಯಲ್ಲಿದೆ. ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಮೊದಲು ಕೊಪ್ಪಳ ಜಿಲ್ಲೆಯಲ್ಲಿ ವೃತ್ತಿ ರಂಗಭೂಮಿ ಜೀವ ತಾಳಿತು ಎಂದು ಸಬರದ ಹೇಳುತ್ತಾರೆ. ಮುಂಬೈ ಕರ್ನಾಟಕ ಭಾಗದಲ್ಲಿ ನಾಟಕ ಕಂಪನಿಗಳು ಹುಟ್ಟಿಕೊಂಡ ಎರಡು ದಶಕಗಳ ನಂತರ ಈ ಭಾಗದಲ್ಲಿ ರಂಗಭೂಮಿ ಚಟುವಟಿಕೆಗಳು ಗರಿಗೆದರಿದವು ಎಂದು ಅವರು ವಿಶ್ಲೇಷಿಸುತ್ತಾರೆ. 

ಹೈದರಾಬಾದ್‌ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಹುಟ್ಟಿಕೊಂಡ ನಾಟಕ ಕಂಪನಿಗಳನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ. ಕಂಪನಿ ಹುಟ್ಟಿಕೊಂಡ ಹಿನ್ನೆಲೆ, ಮಾಲೀಕರು, ಅವುಗಳು ಪ್ರದರ್ಶಿಸುತ್ತಿದ್ದ ಪ್ರಮುಖ ನಾಟಕಗಳು, ಪ್ರಸಿದ್ಧ ಕಲಾವಿದರ ಸಂಕ್ಷಿಪ್ತ ಪರಿಚಯ ಇದರಲ್ಲಿದೆ. ಎಲೆಮರೆಯ ಕಾಯಿಯಂತಿರುವ ಎಷ್ಟೋ ಕಂಪನಿಗಳು, ಕಲಾವಿದರು ಹಾಗೂ ನಾಟಕಕಾರರನ್ನು ಇಲ್ಲಿ ಗುರುತಿಸಿದ್ದಾರೆ.

ಗ್ರಾಮೀಣ ರಂಗಭೂಮಿ ಮತ್ತು ಊರುಗಳಲ್ಲಿ ಅದು ಉಂಟು ಮಾಡುವ ಪ್ರಭಾವದ ಒಳನೋಟಗಳನ್ನೂ ಸಬರದ ಈ ಕೃತಿಯಲ್ಲಿ ನೀಡಿದ್ದಾರೆ. ಹಳ್ಳಿಯ ಜೀವನ ನೋಡಿಕೊಂಡೇ ಅವುಗಳನ್ನು ನಾಟಕಗಳಲ್ಲಿ ಕಟ್ಟಿಕೊಟ್ಟ ನಾಟಕಕಾರರ ಬಗ್ಗೆಯೂ ಕೃತಿ ಚರ್ಚಿಸುತ್ತದೆ. ಜಾಗತೀಕರಣದ ಈ ಸಂದರ್ಭದಲ್ಲಿ ಸ್ಥಳೀಯ ಕಲೆ, ಸಾಹಿತ್ಯ, ಸಂಗೀತ, ಭಾಷೆ ಹಾಗೂ ರಂಗಭೂಮಿಯನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಈಗಿನ ತಲೆಮಾರಿಗೆ ರಂಗಭೂಮಿಯ ಹಿನ್ನೆಲೆ ಮತ್ತು ವೈಭವ ಪರಿಚಯಿಸುವ ಇಂತಹ ಕೃತಿಗಳು ಅಗತ್ಯವಾಗಿವೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !