ಸುಬ್ಬಲಕ್ಷ್ಮಿಯ ಕ್ರಾಂತಿಕಾರಿ ಹೆಜ್ಜೆ

7

ಸುಬ್ಬಲಕ್ಷ್ಮಿಯ ಕ್ರಾಂತಿಕಾರಿ ಹೆಜ್ಜೆ

Published:
Updated:
Deccan Herald

ನಾಲ್ಕು ಗೋಡೆಗಳ ಮಧ್ಯೆ ಮಜ್ಜಿಗೆ ಹುಳಿ ಮಾಡುತ್ತ, ಸಂಧ್ಯಾವಂದನೆಗೆ ಅಣಿಗೊಳಿಸುವುದಕ್ಕೆ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ವಿದ್ಯಾವಂತಳಾದ ಸುಬ್ಬಲಕ್ಷ್ಮಿಯ ಒಡಲಾಳದಲ್ಲಿ ದಲಿತ ಸಂವೇದನೆ ಅರಳುವುದೇ ಅಗ್ರಹಾರ ಕಾದಂಬರಿಯ ಕಥಾವಸ್ತು. ಕನ್ನಡದಲ್ಲಿ ಬ್ರಾಹ್ಮಣಶಾಹಿಯೊಳಗಿನ ಗೊಡ್ಡು ಸಂಪ್ರದಾಯದ ವಿರುದ್ಧ ಬಂಡೆದ್ದು, ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಹೋರಾಡುವ ಪುರುಷ ಕೇಂದ್ರಿತ ಕಾದಂಬರಿಗಳು ಸಾಕಷ್ಟು ಬಂದಿವೆ. ಆದರೆ, ಸ್ತ್ರೀ ನೆಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮೂಲಕ ಸಾಮಾಜಿಕ ಬದಲಾವಣೆ ಬಯಸುವ ಕಥಾ ಹಂದರ ಇರುವ ಕೃತಿಗಳು ವಿರಳ. ವೆಂಕೋಬ ಶಾಸ್ತ್ರಿ, ಕೇಶವ ಶಾಸ್ತ್ರಿ ಮತ್ತು ಗದಿಗಯ್ಯರ ಮೂರು ತಲೆಮಾರುಗಳ ವಾಸ್ತವ, ಸುಬ್ಬಲಕ್ಷ್ಮಿಯ ಕ್ರಾಂತಿಕಾರಿ ಹೆಜ್ಜೆಗಳು ದೊಣ್ಣೆಹಳ್ಳಿಯ ಅಭಿವೃದ್ಧಿಗೆ ದಾರಿಯಾಗಿವೆ.

ಜನಪದ ಪರಂಪರೆಯ ಪ್ರತೀಕಗಳಾದ ಅರಳಿ ಮರ, ಬೇವಿನ ಮರ ಮತ್ತು ನಾಗರಕಲ್ಲುಗಳ ಚರ್ಚೆಯೊಂದಿಗೆ ‘ಅಗ್ರಹಾರ’ ಕಾದಂಬರಿ ಆರಂಭವಾಗುತ್ತದೆ. ಇವುಗಳ ಚರ್ಚೆ ದೊಣ್ಣೆಹಳ್ಳಿಯ ತಳಸಮುದಾಯದವರ ಏಳಿಗೆಯ ಕುರಿತಾದದ್ದು. ಈ ಊರಿಗೂ ಜ್ಞಾನದ ಬೆಳಕು ಹರಿದು ದಲಿತರು, ಕುಂಬಾರರು, ಚಮ್ಮಾರರು ಮುಂದುವರಿಯಬೇಕು ಎಂಬುದು ಅವುಗಳ ಕಾಳಜಿ! ಈ ಹಳ್ಳಿಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶಾಲೆ(ಮಠ) ಪ್ರಾರಂಭಿಸುವುದಕ್ಕಾಗಿ ನಡೆಯುವ ಹೋರಾಟವೇ ಕಾದಂಬರಿಯ ಒಟ್ಟು ಆಶಯ.

ಪಾತ್ರಗಳ ಮಾತು ಮತ್ತು ನಿರೂಪಣೆಯಲ್ಲಿ ಗ್ರಾಮ್ಯ ಭಾಷೆ ಮನಸ್ಸಿಗೆ ಆಪ್ತವೆನಿಸುತ್ತದೆ. ಅದರೆ ಇದನ್ನು ಓದಿ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯವಂತೂ ಬೇಕೆ ಬೇಕು! ಇಡೀ ಕಾದಂಬರಿ ಹಳ್ಳಿ ಮಾತಿನ ಕಂಪಿನಲ್ಲೇ ಮಾರ್ದನಿಸಿದೆ. ವಿಪರ್ಯಾಸವೆಂದರೆ ವಿದ್ಯಾವಂತೆಯಾಗಿರುವ ಕಥಾ ನಾಯಕಿ ಸುಬ್ಬಲಕ್ಷ್ಮಿ ಮಾತಿನಲ್ಲೂ ಸಾಕ್ಷರತೆಯ ಘಮಲು ಕಾಣಿಸುವುದಿಲ್ಲ! ಇಂತಹ ವೈರುಧ್ಯವನ್ನು ಬಿಟ್ಟರೆ ಅಗ್ರಹಾರದ ಕಥೆ ಮನಸಿಗೆ ಮುದ ನೀಡಿ, ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ.

ದೊಣ್ಣೆಹಳ್ಳಿಯಲ್ಲಿ ಶಿಕ್ಷಣ ಕ್ರಾಂತಿಯಾಗಬೇಕು ಎಂದು ಕೆಲ ಗೌಡರು, ಆಚಾರಿಗಳು, ಲಿಂಗಾಯತರ ಒತ್ತಾಸೆ. ಆದರೆ ಮಠದಲ್ಲಿ ದಲಿತರು, ಸಾಬಾರು, ಕುಂಬಾರರ ಮಕ್ಕಳಿಗೆ ಅವಕಾಶ ನೀಡಬಾರದು ಎಂಬುದು ಅಗ್ರಹಾರ ಬ್ರಾಹ್ಮಣರ ಲೆಕ್ಕಾಚಾರ! ಮಠ ಆರಂಭವಾಗಿ, ಶಿಕ್ಷಕ ಬಫೂನಿನಂತೆ ಬಂದು ಹೋಗುವ ಹೊತ್ತಿಗೆ ಕಾದಂಬರಿ ಅರ್ಧ ಸವೆದಿರುತ್ತದೆ. ಆದರೆ ಶಿಕ್ಷಣ ಕ್ರಾಂತಿಯ ಆಶಯ ಮಾತ್ರ ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಸಂಕೀರ್ಣ ಘಟ್ಟದಲ್ಲಿ ಸುಬ್ಬಲಕ್ಷ್ಮಿಯ ಬರುವಿಕೆ ಕಥೆಯ ವೇಗವನ್ನು ಹೆಚ್ಚಿಸುತ್ತದೆ. 

ಸಿದ್ಧ ಸೂತ್ರಗಳಂತೆ, ಅಗ್ರಹಾರದಲ್ಲಿ ನಡೆಯುವ ಬ್ರಾಹ್ಮಣರ ದುರಾಚಾರ, ಆಷಾಢಭೂತಿತನ, ಸಾಂಬ್ರಾಣಿ, ಪಾಯಸದ ವಾಸನೆ ಮತ್ತು ಮಂತ್ರಗಳ ಸದ್ದನ್ನು ಕೇಳಬಹುದು. ಇದಕ್ಕೆ ವಿರುದ್ಧವಾಗಿ ಹೊಲೆಯರ ಕೇರಿಯವರು ತುತ್ತಿನ ಚೀಲಕ್ಕಾಗಿ ಪರಿಪಾಟಲು ಪಡುವುದನ್ನು ನೋಡಬಹುದು. ಅಗ್ರಹಾರದಲ್ಲಿ ಮೋಸ, ಕಪಟ, ಢಾಳಾಗಿದ್ದರೆ, ಹಟ್ಟಿಯಲ್ಲಿ ಮುಗ್ಧತೆ ಮತ್ತು ಶ್ರಮ ಪ್ರಕಾಶಮಾನವಾಗಿ ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !