ಭಾನುವಾರ, ಮೇ 16, 2021
22 °C
ಚಿಕ್ಕಬಳ್ಳಾಪುರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಹೇಳಿಕೆ

ಕೆ.ಸಿ ವ್ಯಾಲಿ ಯೋಜನೆ ವಿರೋಧಿಸುತ್ತಿಲ್ಲ: ಆಂಜನೇಯರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯನ್ನು ನಾವು ವಿರೋಧಿಸುತ್ತಿಲ್ಲ. ಯೋಜನೆ ಮೂಲಕ ಜಿಲ್ಲೆಗೆ ಹರಿಸುತ್ತಿರುವ ನೀರಿನ ಗುಣಮಟ್ಟವನ್ನು ಸರ್ಕಾರ ಖಾತ್ರಿಪಡಿಸಬೇಕು’ ಎಂದು ಚಿಕ್ಕಬಳ್ಳಾಪುರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತ್ಯಾಜ್ಯ ನೀರು ಹರಿಸುವಾಗ 3ನೇ ಹಂತದಲ್ಲಿ ಸಂಸ್ಕರಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆ ಶಿಫಾರಸು ಮಾಡಿದೆ. ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿರುವ ದಾಖಲೆಪತ್ರಗಳಲ್ಲೂ ಈ ಅಂಶವಿದೆ’ ಎಂದರು.

‘ತ್ಯಾಜ್ಯ ನೀರನ್ನು 2ನೇ ಹಂತದಲ್ಲೇ ಸಂಪೂರ್ಣವಾಗಿ ಶುದ್ಧೀಕರಿಸುವ ಸಾಮರ್ಥ್ಯ ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ (ಎಸ್‌ಟಿಪಿ) ಇಲ್ಲ. ಎರಡು ಹಂತದಲ್ಲಿ ಸಂಸ್ಕರಣೆಗೊಂಡ ನೀರನ್ನು ಕೆರೆಗಳಿಗೆ ಹರಿಸುವುದರಿಂದ ತಕ್ಷಣಕ್ಕೆ ಸಮಸ್ಯೆ ಆಗದಿದ್ದರೂ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಬೆಂಗಳೂರಿನ ಕೋರಮಂಗಲ ಮತ್ತು ಚಲ್ಲಘಟ್ಟ ಕೆರೆಗೆ ಗೃಹೋಪಯೋಗಿ ನೀರು ಹಾಗೂ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿದೆ. ಈ ಕೆರೆಗಳ ನೀರು ಹರಿಸುವ ಮೊದಲು ವೈಜ್ಞಾನಿಕ ಅಧ್ಯಯನ ನಡೆಸುವಲ್ಲಿ ಹಾಗೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಇಲಾಖೆಗಳು ವಿಫಲವಾಗಿವೆ’ ಎಂದು ಆರೋಪಿಸಿದರು.

‘ಕೆ.ಸಿ ವ್ಯಾಲಿ ನೀರು ಸಂಸ್ಕರಣಾ ಘಟಕ, ಲಕ್ಷ್ಮೀಸಾಗರ ಮತ್ತು ನರಸಾಪುರ ಕೆರೆ ನೀರಿನ ಮಾದರಿಯನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ನ್ಯಾಯಾಲಯ ನಮ್ಮ ವಾದ ಪುರಸ್ಕರಿಸಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಯಲ್ಲಿ ದೋಷವಿದೆ’ ಎಂದು ದೂರಿದರು.

ನಿಯಮಾವಳಿ ಪಾಲಿಸಿಲ್ಲ: ‘ಸರ್ಕಾರ ಖಾಸಗಿ ಪ್ರಯೋಗಾಲಯದಲ್ಲಿ ನಡೆಸಿದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದೆ. ರಾಜ್ಯ ಸರ್ಕಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿರುವ ನಿಯಮಾವಳಿ ಪಾಲಿಸಿಲ್ಲ. ಈ ಎಲ್ಲಾ ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೈಕೋರ್ಟ್ ತಡೆಯಾಜ್ಞೆ ಆದೇಶ ಮಾರ್ಪಾಡು ಮಾಡಿ ಯೋಜನೆ ನೀರು ಹರಿಸಿ 15 ದಿನದೊಳಗೆ ನೀರಿನ ಶುದ್ಧತೆ ಕುರಿತ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ’ ಎಂದು ವಿವರಿಸಿದರು.

‘ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಲು ಭಾರಿ ವೆಚ್ಚ ತಗುಲುತ್ತದೆ ಎಂಬುದು ಸರ್ಕಾರದ ವಾದ. ಸರ್ಕಾರಕ್ಕೆ ಜನರ ಆರೋಗ್ಯಕ್ಕಿಂತ ಹಣವೇ ದೊಡ್ಡದಾಯಿತೇ? ಸರ್ಕಾರ 7 ದಶಕಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ನೀರಾವರಿ ಸೌಲಭ್ಯಕ್ಕೆ ನಯಾಪೈಸೆ ಖರ್ಚು ಮಾಡಿಲ್ಲ. ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರ ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ಹರಿಸಬೇಕು’ ಎಂದು ಆಗ್ರಹಿಸಿದರು.

ಸಂಶಯವಿದೆ: ‘ಕೆ.ಸಿ ವ್ಯಾಲಿ, ಎಚ್‍.ಎನ್ ವ್ಯಾಲಿ ಯೋಜನೆ ಮೂಲಕ ಹರಿಸುವ ಸಂಸ್ಕರಿತ ನೀರಿನ ಗುಣಮಟ್ಟದ ಬಗ್ಗೆ ಇಡೀ ದೇಶಕ್ಕೆ ಸಂಶಯವಿದೆ. ಹೀಗಾಗಿ ನೀರಿನ ಶುದ್ಧತೆ ಉತ್ತಮಪಡಿಸುವ ಉದ್ದೇಶದಿಂದ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆವು. ನೀರಿನ ಗುಣಮಟ್ಟದ ಬಗ್ಗೆ ನಿರಂತರ ಮೇಲ್ವಿಚಾರಣೆ ನಡೆಸಿ ಕೆರೆಗೆ ಹರಿಸುವುದಾದರೆ ಯಾವುದೇ ಅಭ್ಯಂತರವಿಲ್ಲ. ಜನರಿಗೆ ಮಂಕುಬೂದಿ ಎರಚಿ ಯಾಮಾರಿಸುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ವಿ.ಕೆ.ರಾಜೇಶ್, ರಾಮುಶಿವಣ್ಣ, ಹರೀಶ್, ಸಂತೋಷ್, ಪುಟ್ಟರಾಜು, ಜಿ.ನಾರಾಯಣಸ್ವಾಮಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು