ಪ್ರಚಾರದ ಹುಚ್ಚಿನಿಂದ ಸ್ನೇಹಿತನ ತಲೆ ಕತ್ತರಿಸಿದ: ಗ್ರಾಮಸ್ಥರು

7

ಪ್ರಚಾರದ ಹುಚ್ಚಿನಿಂದ ಸ್ನೇಹಿತನ ತಲೆ ಕತ್ತರಿಸಿದ: ಗ್ರಾಮಸ್ಥರು

Published:
Updated:

ಮಂಡ್ಯ: ‘ಪ್ರಸಿದ್ಧಿಯಾಗಬೇಕು ಎಂಬ ಹುಚ್ಚು ಹಿಡಿಸಿಕೊಂಡಿದ್ದ ಮಳವಳ್ಳಿ ತಾಲ್ಲೂಕು, ಚಿಕ್ಕಬಾಗಿಲು ಗ್ರಾಮದ ಯುವಕ ಪಶುಪತಿ, ತಾಯಿಯ ಜೊತೆ ಅಸಭ್ಯವಾಗಿ ವರ್ತಿಸಿದ ಎಂಬ ನೆಪದಲ್ಲಿ ಸ್ನೇಹಿತ ಗಿರೀಶ್‌ ತಲೆ ಕತ್ತರಿಸಿದ್ದಾನೆ’ ಎಂದು ಗ್ರಾಮದ ಮುಖಂಡ ಸಂತೋಷ್ ಕುಮಾರ್ ಸೋಮವಾರ ದೂರಿದರು.

‘ನಾಲ್ಕು ಜನರ ತಲೆ ಕಡಿದರೆ ರಾಜ್ಯದೆಲ್ಲೆಡೆ ಪ್ರಸಿದ್ಧಿಯಾಗಬಹುದು ಎಂದು ಪಶುಪತಿ ಆಗಾಗ ಹೇಳುತ್ತಿದ್ದ. ಕೆಲ ಕಾಲ ಬೆಂಗಳೂರಿನಲ್ಲಿ ಇದ್ದ ಆತ ಅಲ್ಲೂ ಇದೇ ಮಾತು ಹೇಳುತ್ತಿದ್ದ ಎಂದು ಅಲ್ಲಿಯ ಸ್ನೇಹಿತರು ತಿಳಿಸಿದ್ದಾರೆ. ಆತನ ಮಾತುಗಳನ್ನು ನಾವು ನಿರ್ಲಕ್ಷ್ಯ ಮಾಡಿದ್ದೆವು. ಆದರೆ ಆತ ಹೇಳಿದಂತೆ ಮಾಡಿದ್ದಾನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೊಲೆಯಾದ ಗಿರೀಶ್‌ಗೆ 32 ವರ್ಷ ವಯಸ್ಸು. ಪಶುಪತಿ ತಾಯಿಗೆ 53 ವರ್ಷ ವಯಸ್ಸಾಗಿದೆ. ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿಲ್ಲ ಎಂದು ವಾರದ ಹಿಂದೆಯೇ ಗಿರೀಶ್‌ ಸ್ಟಷ್ಟಪಡಿಸಿದ್ದ. ಅಲ್ಲದೇ ದೇವರ ಮುಂದೆ ಆಣೆಯನ್ನೂ ಮಾಡಿದ್ದ. ಆದರೂ ಸಮಾಧಾನವಾಗದ ಪಶುಪತಿ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ. ಇದಕ್ಕೆ ಪಶುಪತಿಗೆ ಇದ್ದ ಪ್ರಚಾರದ ವಾಂಛೆಯೇ ಕಾರಣ. ಕೇವಲ ಕೊಲೆ ಮಾಡಿದರೆ ಪ್ರಸಿದ್ಧಿಯಾಗುವುದಿಲ್ಲ ಎಂಬ ಉದ್ದೇಶದಿಂದ ತಾಯಿಯ ಹೆಸರು ಬಳಕೆ ಮಾಡಿಕೊಂಡಿದ್ದಾನೆ’ ಎಂದು ಆಗ್ರಹಿಸಿದರು.

ಜಗದೀಶ್‌ ಮಾತನಾಡಿ ‘ಕೊಲೆಯಾದ ಗಿರೀಶ್‌ಗೆ ಮೂರು ತಿಂಗಳ ಮಗುವಿದ್ದು ಪತ್ನಿ ಆಘಾತಕ್ಕೀಡಾಗಿದ್ದಾರೆ. ತಂದೆ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಮಗ ಕೊಲೆಯಾಗಿದ್ದಾನೆ. ಗಿರೀಶ್‌ ಸಾವಿಗೆ ನ್ಯಾಯ ಸಿಗಬೇಕು. ಕೆಲವು ಮಾಧ್ಯಮಗಳು ಆರೋಪಿಯನ್ನು ನಾಯಕನಂತೆ ಬಿಂಬಿಸುತ್ತಿವೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು. ಪ್ರಚಾರಕ್ಕಾಗಿ ಮಾಡಿರುವ ಕೊಲೆ ಇತರರಿಗೆ ಪ್ರೇರಣೆಯಾಗಬಾರದು’ ಎಂದರು.

ಗ್ರಾಮದ ಮುಖಂಡರಾದ ಸಿ.ಎಂ.ರಾಜಶೇಖರಮೂರ್ತಿ, ಮಹದೇವಸ್ವಾಮಿ, ಸಂತೋಷ್ ಇದ್ದರು.

* ಇದನ್ನೂ ಓದಿ...

‌* ತಾಯಿಗೆ ಅಶ್ಲೀಲವಾಗಿ ನಿಂದಿಸಿದ ವ್ಯಕ್ತಿಯ ರುಂಡ ಕಡಿದು ಪೊಲೀಸ್‌ ಠಾಣೆ ತಂದ ಆರೋಪಿ

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 2

  Sad
 • 1

  Frustrated
 • 17

  Angry

Comments:

0 comments

Write the first review for this !