ಬೊಕ್ಕಸದ ಸ್ಥಿತಿಗತಿ ಬಗ್ಗೆ ಶ್ವೇತಪತ್ರಕ್ಕೆ ಗೋವಿಂದ ಕಾರಜೋಳ ಆಗ್ರಹ

7
‘ಕುಣಿಯಲಾರದವಳು ನೆಲಡೊಂಕು ಅಂದಳಂತೆ ಎಂಬಂತಾಗಿದೆ’ ವ್ಯಂಗ್ಯ

ಬೊಕ್ಕಸದ ಸ್ಥಿತಿಗತಿ ಬಗ್ಗೆ ಶ್ವೇತಪತ್ರಕ್ಕೆ ಗೋವಿಂದ ಕಾರಜೋಳ ಆಗ್ರಹ

Published:
Updated:

ಬಾಗಲಕೋಟೆ: ’ಬಿಜೆಪಿಯವರು ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸುಳ್ಳು ಆರೋಪ ಮಾಡುವುದು ಬಿಟ್ಟು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೊದಲು ರಾಜ್ಯದ ಬೊಕ್ಕಸದ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಿ’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

’ಸರ್ಕಾರದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ಕೆಲಸ ಮಾಡಲು ಆಗುತ್ತಿಲ್ಲ. ಕುಣಿಯಲಾರದವಳು ನೆಲಡೊಂಕು ಅಂದಳಂತೆ ಎಂಬಂತೆ ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ಆಡಳಿತ ನಡೆಸಲು ಬಾರದೇ ಬೇರೆಯವರ ಕಡೆ ಕೈ ತೋರಿಸಿ ಪಲಾಯನ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

’ಇದು ಮೈಸೂರು ವಿಭಾಗದ ಸರ್ಕಾರ ಎಂಬಂತಾಗಿದೆ. ಕೇವಲ ಮೂವರ ಹಿತಕ್ಕಾಗಿ ಸರ್ಕಾರ ನಡೆಯುತ್ತಿದೆ. ಹಾಸನ, ಮಂಡ್ಯ, ರಾಮನಗರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಸಹೋದರ ಎಚ್.ಡಿ.ರೇವಣ್ಣಗೆ ಬೇಕಾದ ಕೆಲಸಗಳು ನಡೆಯುತ್ತಿವೆ. ಅದರ ಮಧ್ಯೆ ಹೆದರಿಸಿ, ಬೆದರಿಸಿ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಕೆಲಸ–ಕಾರ್ಯಗಳಿಗೆ ₹65 ಕೋಟಿ ಕೊಟ್ಟಿರುವುದೇ ಇದಕ್ಕೆ ಸಾಕ್ಷಿ’ ಎಂದು ಕುಟುಕಿದರು. 

’ಕಳೆದ ನಾಲ್ಕೂವರೆ ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಭೀಕರ ಬರ ತಾಂಡವವಾಡುತ್ತಿದೆ. ಆದರೆ ಇಲ್ಲಿಯವರೆಗೂ ಬರ ಪರಿಸ್ಥಿತಿ ವೀಕ್ಷಣೆಗೆ ಯಾರೂ ಬಂದಿಲ್ಲ. ಮುಖ್ಯಮಂತ್ರಿ ಕೂಡ ಭೇಟಿ ಕೊ‌ಟ್ಟಿಲ್ಲ. ಎಲ್ಲಿಯೂ ಮೇವು ಬ್ಯಾಂಕ್, ಗೋಶಾಲೆ ಆರಂಭಿಸಿಲ್ಲ. ಜನರಿಗೆ ಉದ್ಯೋಗ ಹಾಗೂ ಕುಡಿಯುವ ನೀರು ಕಲ್ಪಿಸುವ ಕೆಲಸ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಸಾಲಮನ್ನಾ ನೆಪ ಮಾತ್ರಕ್ಕೆ ಎಂಬಂತಾಗಿದೆ. ಸರ್ಕಾರ ವಿಧಿಸಿರುವ ಷರತ್ತುಗಳು ರೈತರಲ್ಲಿ ಭರವಸೆ ಮೂಡಿಸುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿವೆ. ಸರ್ಕಾರ ಕೇಳಿರುವ ದಾಖಲಾತಿಗಳನ್ನು ಸಲ್ಲಿಸಬೇಕಾದರೆ ಇನ್ನೊಮ್ಮೆ ಹುಟ್ಟಿಬರಬೇಕಿದೆ. ಹಾಗಾಗಿ ಸರ್ಕಾರ ಕೂಡಲೇ ಷರತ್ತುಗಳನ್ನು ತೆಗೆದುಹಾಕಲಿ’ ಎಂದು ಒತ್ತಾಯಿಸಿದರು.

’ಲಕ್ಷ್ಮೀ ಅದ್ಭುತ ಕಲಾವಿದೆ’

’ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅದ್ಭುತ ಕಲಾಕಾರೆ, ಕಲಾವಿದೆ. ಅವರ ಬಗ್ಗೆ ನಾನು ಏನೂ ಹೇಳಲಾರೆ. ಜಾರಕಿಹೊಳಿ ಸಹೋದರರು ಈಗಾಗಲೇ ಅವರನ್ನು ಕೊಂಡಾಡಿದ್ದಾರೆ’ ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದರು.

ಆಪರೇಷನ್ ಕಮಲಕ್ಕೆ ಒಪ್ಪಿದರೆ ಬಿಜೆಪಿಯವರು ನನಗೆ ₹30 ಕೋಟಿ ಕೊಡುವ ಅಮಿಷ ಒಡ್ಡಿದ್ದರು ಎಂದು ಲಕ್ಷ್ಮೀ ಹೆಬ್ಬಾಳಕರ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆದಾಗ ಕಾರಜೋಳ ಮೇಲಿನಂತೆ ಪ್ರತಿಕ್ರಿಯಿಸಿದರು.

’ಲಕ್ಷ್ಮೀ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಜಾರಕಿಹೊಳಿ ಸಹೋದರರನ್ನೇ ಕೇಳಿ. ಶಾಸಕಿ ಬಗ್ಗೆ ಮಾತನಾಡಲು ನನಗಿಂತ ಅವರೇ ಸೂಕ್ತ’ ಎಂದು ಕಟುಕಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !