ರಾಜ್ಯದಿಂದ ದೆಹಲಿಗೆ ಕಾಲ್ನಡಿಗೆ ಜಾಥಾ: ಮಾರುತಿ ಮಾನ್ಪಡೆ

7

ರಾಜ್ಯದಿಂದ ದೆಹಲಿಗೆ ಕಾಲ್ನಡಿಗೆ ಜಾಥಾ: ಮಾರುತಿ ಮಾನ್ಪಡೆ

Published:
Updated:
Deccan Herald

ಕೋಲಾರ: ‘ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಪ್ರತಿ ರಾಜ್ಯದಿಂದ ದೆಹಲಿವರೆಗೆ ನವೆಂಬರ್‌ನಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ಸಮಾವೇಶದಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಮಹಾನ್‌ ಸುಳ್ಳುಗಾರ. ಜನ ಅವರ ಸುಳ್ಳು ಭರವಸೆಗೆ ಮರುಳಾಗಬಾರದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷವಾಗಿದೆ. ಮೋದಿಯವರ ಏಕಪಕ್ಷೀಯ ನಿರ್ಧಾರಗಳಿಂದ ರೋಸಿ ಹೋಗಿರುವ ಕೇಂದ್ರದ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ನಾಲ್ಕೂವರೆ ವರ್ಷದಲ್ಲಿ 42,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡಿ ಎಂದರೆ ಖಜಾನೆಯಲ್ಲಿ ಹಣವಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ಆದರೆ, ಬಂಡವಾಳಶಾಹಿಗಳ ಸಾಲ ಮನ್ನಾ ಮಾಡಲು ಎಲ್ಲಿಂದ ಹಣ ಬಂದಿತು? ಗುಜರಾತಿಗಳು ಕೋಟಿಗಟ್ಟಲೇ ಹಣ ದೋಚಿ ಪರಾರಿಯಾಗಲು ಬಿಜೆಪಿ ನಾಯಕರು ಎಲ್ಲಿಂದ ದುಡ್ಡು ತಂದುಕೊಟ್ಟರು?’ ಎಂದು ಪ್ರಶ್ನಿಸಿದರು.

‘ಮೋದಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೊಳಿಸಿ ಶೇ 28ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ಇದರಿಂದ ಕೈಗಾರಿಕೆಗಳಿಗೆ ಲಾಭವೇ ಹೊರತು ಜನ ಸಾಮಾನ್ಯರಿಗಲ್ಲ. ಮೋದಿ ಕೈಗಾರಿಕೆಗಳು ಹಾಗೂ ವಿದೇಶಿ ಕಂಪನಿ ಮಾಲೀಕರಿಂದ ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

ಅನುಕೂಲವಾಗಿಲ್ಲ: ‘ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ವ್ಯವಸ್ಥೆಯಿಂದ ಬಡವರಿಗೆ, ರೈತರಿಗೆ ಯಾವುದೇ ಅನುಕೂಲವಾಗಿಲ್ಲ. ಬದಲಿಗೆ ದೇಶದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದ್ದು, ಬಂಡವಾಳಶಾಹಿಗಳು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಈ ಹಿಂದೆ ಸಿಐಟಿಯು ಹಾಗೂ ಸೋದರ ಸಂಘಟನೆಗಳ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಹೋರಾಟ ನಡೆಸಿದ್ದರಿಂದ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸಿತು. ಇದರ ಫಲ ನೌಕರರಿಗೆ ಸೇರಬೇಕು. ರಾಜ್ಯದಲ್ಲಿ ಸದ್ಯ 4.33 ಲಕ್ಷ ಮಂದಿ ಕನಿಷ್ಠ ವೇತನ ಪಡೆಯುತ್ತಿದ್ದಾರೆ. ವಿನಾಕಾರಣ 18 ಸಾವಿರ ಮಂದಿಯನ್ನು ಕೈ ಬಿಟ್ಟಿದ್ದು, ಅವರಿಗೂ ಸೌಕರ್ಯ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ’ ಎಂದರು.

ಸಹಕರಿಸಬೇಕು: ‘ಇಂದಿಗೂ ಮಾಸಿಕ ₹ 600 ಸಂಬಳಕ್ಕೆ ಕೆಲಸ ಮಾಡುವ ನೌಕರರಿದ್ದಾರೆ. ಸಂಘಟನೆಯ ಹೋರಾಟ ಫಲವಾಗಿ ಕನಿಷ್ಠ ವೇತನ ಜಾರಿಯಾಗಿದ್ದು, ಒಂದು ವಾರದಲ್ಲಿ ನೌಕರರ ಬ್ಯಾಂಕ್‌ ಖಾತೆಗೆ ವೇತನದ ಹಣ ಜಮಾ ಆಗಲಿದೆ. ವಿನಾಕಾರಣ ಕೈ ಬಿಟ್ಟಿರುವ ನೌಕರರನ್ನು ಸೇರಿಸಲು ಹೋರಾಟ ನಡೆಸುತ್ತೇವೆ. ನೌಕರರ ಹೋರಾಟಕ್ಕೆ ಸಹಕರಿಸಬೇಕು’ ಎಂದು ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾರಾಯಣಸ್ವಾಮಿ ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ವೆಂಕಟೇಶ್, ಚಲಪತಿ, ನಾರಾಯಣಸ್ವಾಮಿ, ಲೋಕೇಶ್ ಪಾಲ್ಗೊಂಡಿದ್ದರು.

ಅಂಕಿ ಅಂಶಗಳು.....
* 42,500 ರೈತರ ಆತ್ಮಹತ್ಯೆ
* ಶೇ 28ರಷ್ಟು ಜಿಎಸ್‌ಟಿ ತೆರಿಗೆ
* 4.33 ಲಕ್ಷ ಮಂದಿಗೆ ಕನಿಷ್ಠ ವೇತನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !