ಪಿಂಚಣಿ ಪರಿಷ್ಕರಣೆಗೆ ಒತ್ತಾಯ: ಧರಣಿ

7

ಪಿಂಚಣಿ ಪರಿಷ್ಕರಣೆಗೆ ಒತ್ತಾಯ: ಧರಣಿ

Published:
Updated:
Deccan Herald

ಕೋಲಾರ: ಕನಿಷ್ಠ ₹ 5 ಸಾವಿರ ಪಿಂಚಣಿ ನೀಡುವಂತೆ ಒತ್ತಾಯಿಸಿ ನಿವೃತ್ತ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸದಸ್ಯರು ಇಲ್ಲಿ ಸೋಮವಾರ ಕಾರ್ಮಿಕ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.

‘ಸರ್ಕಾರ ನಿವೃತ್ತ ಅಸಂಘಟಿತ ಕಾರ್ಮಿಕರಿಗೆ ಯಾವುದೇ ಸವಲತ್ತು ನೀಡದೆ ನಿರ್ಲಕ್ಷಿಸಿದೆ. ಇದರಿಂದ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಪಿಂಚಣಿ ನೀಡುವಂತೆ ಹಲವು ಬಾರಿ ಹೋರಾಟ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಸರ್ಕಾರ ಹಿರಿಯ ನಾಗರಿಕರೆಂದು ಪರಿಗಣಿಸಿದೆ. ಆದರೆ, ನಿವೃತ್ತ ಅಸಂಘಟಿತ ಕಾರ್ಮಿಕರನ್ನು ಕಡೆಗಣಿಸಿದೆ. ನಿವೃತ್ತ ಕಾರ್ಮಿಕರು ಸಹ ನಾಗರಿಕರು. ಅವರಿಗೂ ಕುಟುಂಬವಿದೆ. ಕಾರ್ಮಿಕರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲವೆ?’ ಎಂದು ಒಕ್ಕೂಟದ ಜಿಲ್ಲಾ ಘಟಕದ ಸಂಚಾಲಕ ಸಿ.ನಾಗೇಶ್ ಪ್ರಶ್ನಿಸಿದರು.

‘ನಿವೃತ್ತ ಕಾರ್ಮಿಕರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಇಲ್ಲವಾಗಿದೆ. ನಿವೃತ್ತಿ ನಂತರ ಜೀವನ ರೂಪಿಸಿಕೊಳ್ಳಲು ಕೂಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಹಣಕಾಸು ತೊಂದರೆಯಿಂದಾಗಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ’ ಎಂದು ಹೇಳಿದರು.

ಕಾಳಜಿಯಿಲ್ಲ: ‘ಸರ್ಕಾರ ಸದ್ಯ ತಿಂಗಳಿಗೆ ₹ 600 ಪಿಂಚಣಿ ನೀಡುತ್ತಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜೀವನ ನಿರ್ವಹಣೆಗೆ ಪಿಂಚಣಿ ಸಾಲುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ಪಿಂಚಣಿ ಪರಿಷ್ಕರಿಸಿಲ್ಲ. ಸರ್ಕಾರಕ್ಕೆ ನಿವೃತ್ತ ಕಾರ್ಮಿಕರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಧರಣಿನಿರತರು ಅಳಲು ತೋಡಿಕೊಂಡರು.

‘ಅಂತರರಾಷ್ಟ್ರೀಯ ಕಾರ್ಮಿಕರ ಸಂಸ್ಥೆಯ ಒಡಂಬಡಿಕೆಗೆ ಸಹಿ ಹಾಕಿರುವ ದೇಶವು ನಿವೃತ್ತ ಅಂಘಟಿತ ಕಾರ್ಮಿಕರಿಗೆ ನ್ಯಾಯಯುತವಾಗಿ ಪಿಂಚಣಿ ಮತ್ತು ಸೌಕರ್ಯ ನೀಡಬೇಕು. ಕಾಲ ಕಾಲಕ್ಕೆ ಪಿಂಚಣಿ ಪರಿಷ್ಕರಿಸಬೇಕು. ವಸತಿ ಹಾಗೂ ನಿವೇಶನ ಸೌಕರ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷೆ ಎನ್.ವೆಂಕಟರಾಜಮ್ಮ, ಪದಾಧಿಕಾರಿಗಳಾದ ವೆಂಕಟೇಶಪ್ಪ, ಎಂ.ನಾಗರಾಜು, ಮುನಿವೆಂಕಟಮ್ಮ, ಕೇಶವ, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !