‘ಚಿನ್ನದ’ ಜಿಲ್ಲೆಯ ಜತೆ ‘ರಾಷ್ಟ್ರಪಿತ’ನ ನಂಟು

7

‘ಚಿನ್ನದ’ ಜಿಲ್ಲೆಯ ಜತೆ ‘ರಾಷ್ಟ್ರಪಿತ’ನ ನಂಟು

Published:
Updated:
Deccan Herald

ಕೋಲಾರ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಚಳವಳಿಯ ಕಿಚ್ಚು ಹೊತ್ತಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ‘ಚಿನ್ನದ’ ಜಿಲ್ಲೆಯ ಜತೆಗಿನ ಒಡನಾಟದ ನೆನಪು ಜನಮಾನಸದಲ್ಲಿ ಇನ್ನೂ ಹಸಿರಾಗಿದೆ.

ಜಿಲ್ಲೆಯ ಕೆ.ಪಟ್ಟಾಭಿರಾಮನ್, ಚಿಕ್ಕಮುನಿಯಪ್ಪ, ಶ್ರೀನಿವಾಸಗೌಡ, ಕೆ.ಸಿ.ರೆಡ್ಡಿ, ಅಬ್ಬಣಿ ನಾಗಪ್ಪ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರು ಗಾಂಧೀಜಿಯಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು.

ಗಾಂಧೀಜಿ ಸ್ವಾತಂತ್ರ್ಯ ಹೋರಾಟದ ಜತೆ ಜತೆಗೆ ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಹರಿಜನರ ಉದ್ಧಾರಕ್ಕೆ ಸಂಕಲ್ಪ ಮಾಡಿದ್ದರು. ಅವರ ಉದಾತ್ತ ಕನಸಿಗೆ ಜಿಲ್ಲೆಯ ಬೌರಿಂಗ್‌ಪೇಟೆಯ (ಈಗಿನ ಬಂಗಾರಪೇಟೆ) ಜನ ಕೈಜೋಡಿಸಿದ್ದರು.
ಗಾಂಧೀಜಿ 1915ರ ಮೇ 20ರಂದು ಬೆಂಗಳೂರಿನಿಂದ ಮದ್ರಾಸ್‌ಗೆ (ಈಗಿನ ಚೆನ್ನೈ) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಆಗ ವರ್ತಕರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ್ದರು.

 

ಬೌರಿಂಗ್‌ಪೇಟೆ ನಿವಾಸಿಗಳು ಪಟ್ಟಣದ ದಲಿತರಿಗೆ ವಸತಿ ಸೌಕರ್ಯ ಕಲ್ಪಿಸಲು 1936ರಲ್ಲಿ ₹ 1,600 ದೇಣಿಗೆ ಸಂಗ್ರಹಿಸಿದ್ದರು. ಪುರಸಭೆ ವತಿಯಿಂದ ದಲಿತರಿಗೆ ಉಚಿತವಾಗಿ ನಿವೇಶನ ನೀಡಲಾಗಿತ್ತು. ದಲಿತರ ಕಾಲೊನಿಯಲ್ಲಿ ಬಾವಿ, ವಿದ್ಯುತ್ ದೀಪ, ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ 1936ರ ಮೇ 31ರಂದು ಗಾಂಧೀಜಿ, ಬೌರಿಂಗ್ ಕಿಂಗ್ ಹೆಡ್ವರ್ಡ್ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಅವರ ಜತೆ ಕಸ್ತೂರಬಾ, ಸರೋಜಿನಿ ನಾಯ್ಡು, ಸರ್ದಾರ್‌ ವಲ್ಲಬಾಯ್‌ ಪಟೇಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

₹ 285 ದೇಣಿಗೆ: ಬೌರಿಂಗ್‌ಪೇಟೆಯ ಸ್ವಾತಂತ್ರ್ಯ ಹೋರಾಟಗಾರ ರಾಜ ಎಚ್.ಆದಿನಾರಾಯಣಶೆಟ್ಟಿ ಅವರು ದಲಿತರ ಉದ್ಧಾರಕ್ಕಾಗಿ ಪಟ್ಟಣದ ನಿವಾಸಿಗಳು ರೂಪಿಸಿದ ಯೋಜನೆಗಳನ್ನು ಗಾಂಧೀಜಿಗೆ ತಿಳಿಸಿದ್ದರು. ಪಟ್ಟಣದ ಜನರ ಸಾಮಾಜಿಕ ಕಾಳಜಿಗೆ ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ಪಟ್ಟಣದ ನಿವಾಸಿಗಳು ಹರಿಜನರ ಉದ್ಧಾರಕ್ಕೆ ಸಹಾಯಧನವಾಗಿ ಗಾಂಧೀಜಿಗೆ ₹ 285 ದೇಣಿಗೆ ನೀಡಿದ್ದರು.

ಈ ಸುಸಂದರ್ಭಕ್ಕೆ ಸಾಕ್ಷಿಯಾಗಿದ್ದ ಆದಿನಾರಾಯಣಶೆಟ್ಟಿ ಅವರ ಮಗ ರಾಜ ವೆಂಕಟಾಚಲಪತಿ, ‘ವರ್ತಕರಾಗಿದ್ದ ತಂದೆಯು ಗಾಂಧೀಜಿ ವಿಚಾರಧಾರೆಯಿಂದ ಪ್ರಭಾವಿತರಾಗಿ ವ್ಯಾಪಾರ ವೃತ್ತಿ ಬಿಟ್ಟು ಕಾಂಗ್ರೆಸ್ ಸೇರಿದರು. ಸಂಬಂಧಿಕರು ಹಾಗೂ ಸ್ನೇಹಿತರ ವಿರೋಧ ಲೆಕ್ಕಿಸದೆ ಗಾಂಧೀಜಿಯ ಒಡನಾಟ ಬೆಳೆಸಿಕೊಂಡು ಸೆರೆವಾಸ ಸಹ ಅನುಭವಿಸಿದರು. ನಾನು 10ನೇ ವರ್ಷದವನಾಗಿದ್ದಾಗ ಅಪ್ಪನ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ’ ಎಂದು ‘ಪ್ರಜಾವಾಣಿ’ ಜತೆ ಅನುಭವ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !