ತಾಲ್ಲೂಕಿಗೊಂದು ರಂಗಮಂದಿರ ನಿರ್ಮಾಣ: ಜೆ.ಲೋಕೇಶ

7
ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಜನ್ಮಶತಮಾನೋತ್ಸವ ಸಮಾರಂಭ

ತಾಲ್ಲೂಕಿಗೊಂದು ರಂಗಮಂದಿರ ನಿರ್ಮಾಣ: ಜೆ.ಲೋಕೇಶ

Published:
Updated:
Deccan Herald

ಬಾಗಲಕೋಟೆ: ’ರಾಜ್ಯದ ಪ್ರತೀ ತಾಲ್ಲೂಕಿನಲ್ಲೂ ರಂಗಮಂದಿರ ನಿರ್ಮಾಣದ ಯೋಜನೆಯನ್ನು ನಾಟಕ ಅಕಾಡೆಮಿ ಹೊಂದಿದ್ದು, ಶಾಸಕರ ನಿಧಿ, ದಾನಿಗಳ ನೆರವು ಹಾಗೂ ಬ್ಯಾಂಕ್‌ಗಳಿಂದ ಸಾಲ ಪಡೆದು ಹಣ ಹೊಂದಿಸಲು ನಿರ್ಧರಿಸಿರುವುದಾಗಿ’ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ ಹೇಳಿದರು.

ಇಲ್ಲಿನ ಕಲಾಭವನದಲ್ಲಿ ಸೋಮವಾರ ನಾಟಕ ಅಕಾಡೆಮಿ ಹಾಗೂ ಬಿ.ವಿ.ವಿ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಚಿತ್ತರಗಿ ಗಂಗಾಧರಶಾಸ್ತ್ರಿಗಳ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

’₹50 ಲಕ್ಷ ವೆಚ್ಚದಲ್ಲಿ ಕನಿಷ್ಠ 500ರಿಂದ 600 ಮಂದಿ ಕುಳಿತುಕೊಳ್ಳಬಹುದಾದ ಈ ರಂಗಭೂಮಿಗಳ ನಿರ್ವಹಣೆ ಹೊಣೆಯನ್ನು ರಂಗಭೂಮಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದಕ್ಕೆ ವಹಿಸುವ ಕನಸು ಹೊಂದಿದ್ದೇನೆ. ನಾಡಿನ ರಂಗ ಇತಿಹಾಸವನ್ನು ಡಿಜಿಟಲೀಕರಿಸಿ ದಾಖಲೀಕರಿಸುವ ಕಾರ್ಯವನ್ನು ಅಕಾಡೆಮಿ ಈಗಾಗಲೇ ಕೈಗೆತ್ತಿಕೊಂಡಿದೆ’ ಎಂದರು.

’ಅಶ್ಲೀಲತೆಯೇ ಇಂದು ವೃತ್ತಿ ರಂಗಭೂಮಿಯ ಅಧಃಪತನಕ್ಕೆ ಕಾರಣವಾಗಿದ್ದು, ಮನೆಮಂದಿಯೆಲ್ಲಾ ಕುಳಿತು ನೋಡುವ ನಾಟಕಗಳ ಯುಗ ಮತ್ತೆ ಆರಂಭವಾಗಲಿ’ ಎಂದು ಶಾಸಕ ವೀರಣ್ಣ ಚರಂತಿಮಠ ಆಶಿಸಿದರು.

ಹೆಣ್ಣು ಮಕ್ಕಳು ನಾಟಕ ನೋಡಲು ಹೋಗುವ ಪರಿಸ್ಥಿತಿ ಈಗ ಇಲ್ಲ. ಪಡ್ಡೆ ಹುಡುಗರು ಮಾತ್ರ ನೋಡಬಹುದಾಗಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ಶನಿಮಹಾತ್ಮೆ, ರಾಜಾವಿಕ್ರಮ, ಯಡಿಯೂರು ಸಿದ್ಧಲಿಂಗೇಶ್ವರ ಮಹಾತ್ಮೆಯಂತಹ ನಾಟಕಗಳನ್ನು ಬಾಗಲಕೋಟೆಯ ಶಿವಾನಂದ ಜಿನ್ನಿನ ಆವರಣದಲ್ಲಿ ಬೀಡುಬಿಡುತ್ತಿದ್ದ ಕಂಪೆನಿಗಳಲ್ಲಿ ನೋಡುತ್ತಿದ್ದ ದಿನಗಳನ್ನು ಸ್ಮರಿಸಿಕೊಂಡರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ’ಇತಿಹಾಸ ಮರೆತರೆ ನಮಗೆ ಭವಿಷ್ಯವಿಲ್ಲ. ಸಮಾಜದ ಲೋಪ–ದೋಷಗಳನ್ನು ತಿದ್ದಿ ಮೌಲ್ಯಗಳನ್ನು ಹೇಳಿಕೊಡುವ ರಂಗಭೂಮಿಯನ್ನೇ ಬದುಕಾಗಿಸಿಕೊಂಡ ಮಹನೀಯರ ಜನ್ಮಶತಮಾನೋತ್ಸವ ಆಚರಿಸುತ್ತಿರುವುದು ಬಹುದೊಡ್ಡ ಕೆಲಸ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೃತ್ತಿ ರಂಗಭೂಮಿ ಇಂದು ನಿಂತ ನೀರಾಗಿದೆ. ಹೊಸ ಬಾಟಲಿಯಲ್ಲಿ ಹಳೆಯ ಮದ್ಯ ಎಂಬಂತಾಗಿದೆ. ಹೊಸ ಪ್ರತಿಭೆಗಳು, ರಂಗಕಥೆಗಳು, ಹೊಸ ವಿಚಾರಗಳು ಹುಟ್ಟುತ್ತಿಲ್ಲ. ಮಹತ್ವ, ಮೌಲ್ಯ, ಶಿಸ್ತು ಇವೆಲ್ಲಾ ನಾಶವಾಗಿ, ಅಸ್ತಿತ್ವಕ್ಕಾಗಿ ಅಶ್ಲೀಲ ನೃತ್ಯಗಳನ್ನು ಅವಲಂಬಿಸಬೇಕಾಗಿದೆ. ಇದರ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

’ರಂಗಭೂಮಿ ಸುಧಾರಣೆಗಾಗಿ ಪ್ರೇಕ್ಷಕರನ್ನು ಬದಲಾಯಿಸುವ ಕೆಲಸ ನಾವು ಮಾಡಬೇಕು. ಸಿದ್ಧ ಮಾದರಿಯ ಬದಲು ಹೊಸತನ ಅಳವಡಿಸಿಕೊಂಡು ಮೌಲ್ಯಗಳನ್ನು ಹಂಚುವ ಕೆಲಸ ಮಾಡಬೇಕಿದೆ’ ಎಂದರು.

ನಾಟಕ ಅಕಾಡೆಮಿ ಸಂಚಾಲಕ ಗಣೇಶ ಅಮೀನಗಡ ಸ್ವಾಗತಿಸಿದರು. ಬಿ.ವಿ.ವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಗಂಗಾಧರ ಶಾಸ್ತ್ರಿಗಳ ಪುತ್ರ ಬಸವರಾಜ ಹಿರೇಮಠ, ಗುರುಪಾದಯ್ಯ ಹಿರೇಮಠ ಹಾಜರಿದ್ದರು. ಚರಂತಿಮಠದ ಪ್ರಭುಸ್ವಾಮಿಗಳು, ಇಳಕಲ್ ಗುರುಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.  ಕಲಾವಿದೆ ಶೋಭಾರಾಣಿ ಭದ್ರಾವತಿ, ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕಡಕೋಳ, ಬಸವೇಶ್ವರ ಕಾಲೇಜು ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ರಂಗಕರ್ಮಿ ಡಾ.ವಿಶ್ವನಾಥ ವಂಶಾಕೃತಮಠ ವಿಚಾರಗೋಷ್ಠಿ ನಡೆಸಿಕೊಟ್ಟರು.

10 ಮಂದಿಗೆ ಅವಕಾಶ: ಸಂಗನಬಸವ ಶ್ರೀ

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ರಾಮಮನಗೂಳಿ, ರಂಗಕಲಾವಿದರ ಮಕ್ಕಳಿಗಾಗಿ ವಸತಿ ಶಾಲೆ ಆರಂಭಿಸಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು. ಅದಕ್ಕೆ ಸ್ಪಂದಿಸಿದ ಶಿವಯೋಗ ಮಂದಿರದ ಅಧ್ಯಕ್ಷ ಡಾ.ಸಂಗನಬಸವ ಸ್ವಾಮೀಜಿ, ’ಹಾಲಕೇರಿ ಅನ್ನದಾನೀಶ್ವರ ಮಠದಲ್ಲಿ 10 ಮಕ್ಕಳಿಗೆ ಪದವಿ ಅಧ್ಯಯನದವರೆಗೆ ಉಚಿತ ಶಿಕ್ಷಣ ಹಾಗೂ ವಸತಿಯ ಜವಾಬ್ದಾರಿ ವಹಿಸಿಕೊಳ್ಳುವುದಾಗಿ’ ಪ್ರಕಟಿಸಿದರು. ಹಿರಿಯ ರಂಗಕಲಾವಿದರಾದ ಚನ್ನಬಸಯ್ಯ ಗುಬ್ಬಿ, ಜುಮ್ಮಣ್ಣ ಮಾಸ್ತರ ಭಜಂತ್ರಿ, ಗುರುಸಂಗಯ್ಯ ಕಳ್ಳಿಮಠ, ಶೋಭಾರಾಣಿ ಭದ್ರಾವತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !