ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ: ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್

7

ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ: ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್

Published:
Updated:

ಕೋಲಾರ: ‘ಹಿಂದುಳಿದ ವರ್ಗದವರಿಗೆ ರಾಜಕೀಯವಾಗಿ ಉನ್ನತ ಸ್ಥಾನ ಕಲ್ಪಿಸುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಪಕ್ಷವು ನನಗೆ ನೀಡಿರುವ ಜವಾಬ್ದಾರಿಯನ್ನು ಚಾಚು ತಪ್ಪದೆ ನಿರ್ವಹಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಾನು ಸವಿತ ಸಮಾಜಕ್ಕೆ ಸೇರಿದವನಾಗಿದ್ದು, ನನ್ನ ಜಾತಿ ಕಾಂಗ್ರೆಸ್ ಪಕ್ಷ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ’ ಎಂದರು.

‘ಪಕ್ಷದ ವಿವಿಧ ಘಟಕಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಸೇವೆ ಗುರುತಿಸಿ ಮಹತ್ತರ ಜವಾಬ್ದಾರಿ ನೀಡಿರುವ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಾಂಗ್ರೆಸ್‌ ಪಕ್ಷವು ಅಂಬೇಡ್ಕರ್‌ ಆಶಯದಂತೆ ಶೋಷಿತ ಸಮುದಾಯದವರಿಗೆ ರಾಜಕೀಯ ಅವಕಾಶ ಕಲ್ಪಿಸುತ್ತಿದೆ. ರಾಜ್ಯದಲ್ಲಿ ದಲಿತ ನಾಯಕರು ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಆಶಯ’ ಎಂದು ತಿಳಿಸಿದರು.

ಅಪಪ್ರಚಾರ: ‘ಸಂಸದ ಕೆ.ಎಚ್.ಮುನಿಯಪ್ಪ ಅವರು ಸೋಲಿಲ್ಲದ ಸರದಾರ. ಶೋಷಿತ ಸಮುದಾಯದಿಂದ ಬಂದ ಅವರ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ನಿಭಾಯಿಸುವ ತಂತ್ರಗಾರಿಕೆ ಮುನಿಯಪ್ಪ ಅವರಿಗೆ ಗೊತ್ತಿದೆ. ಟೀಕಾಕಾರರೇ ಚುನಾವಣೆ ಹೊತ್ತಿಗೆ ಅವರ ಹಿಂದೆ ಬರುತ್ತಾರೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಸವಿತ ಸಮಾಜ ಬಹಳ ಹಿಂದುಳಿದಿದೆ. ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಕುಲ ಕಸುಬು ನಂಬಿಕೊಂಡು ಜೀವನ ನಡೆಸುತ್ತಿರುವ ಸಮಾಜಕ್ಕೆ ಸರ್ಕಾರದ ನೆರವು ಬೇಕಿದೆ. ಸಮುದಾಯಕ್ಕೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ’ ಎಂದು ಭರವಸೆ ನೀಡಿದರು.

ಶಕ್ತಿ ತುಂಬಿದೆ: ‘ಕಾಂಗ್ರೆಸ್‌ ಪಕ್ಷವು ವೇಣುಗೋಪಾಲ್‌ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಸವಿತ ಸಮಾಜಕ್ಕೆ ಶಕ್ತಿ ತುಂಬಿದೆ. ವೇಣುಗೋಪಾಲ್‌ ಅವರು ಸಮುದಾಯದ ದುರ್ಬಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ’ ಎಂದು ಸವಿತ ಮಠದ ಪೀಠಾಧ್ಯಕ್ಷ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಸವಿತ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಕೆಜಿಎಫ್ ತಾಲ್ಲೂಕು ಹಿಂದುಳಿದ ಘಟಕದ ಅಧ್ಯಕ್ಷ ಜಿ.ಬಾಲಾಜಿ, ಮುಖಂಡರಾದ ಗೋಕುಲ ನಾರಾಯಣಸ್ವಾಮಿ, ರಾಜೇಶ್‌ಸಿಂಗ್, ಪ್ರಸಾದ್‌ಬಾಬು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !