ಮಾರುಕಟ್ಟೆ, ಬಸ್‌ನಿಲ್ದಾಣದಲ್ಲಿ ಕೈಚಳಕ, ಒಂದೇ ದಿನ 9 ಮೊಬೈಲ್‌ಫೋನ್‌ ಕಳ್ಳತನ

7

ಮಾರುಕಟ್ಟೆ, ಬಸ್‌ನಿಲ್ದಾಣದಲ್ಲಿ ಕೈಚಳಕ, ಒಂದೇ ದಿನ 9 ಮೊಬೈಲ್‌ಫೋನ್‌ ಕಳ್ಳತನ

Published:
Updated:

ಬಾದಾಮಿ: ಪಟ್ಟಣದಲ್ಲಿ ಸೋಮವಾರ ಮೊಬೈಲ್‌ಫೋನ್ ಕಳ್ಳರು ಕೈ ಚಳಕ ತೋರಿದ್ದು, ಒಂದೇ ದಿನ ಒಂಬತ್ತು ಮಂದಿ ಫೋನ್‌ ಕಳೆದುಕೊಂಡಿದ್ದಾರೆ.

ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮೂರು ಹಾಗೂ ಮಾರುಕಟ್ಟೆಯಲ್ಲಿ ಆರು ಮಂದಿ ಮೊಬೈಲ್‌ಫೋನ್ ಕಳೆದುಕೊಂಡಿದ್ದಾರೆ. ’ಕಳ್ಳರು ಕೈಯಲ್ಲಿ ಕೈಚೀಲ ಹಿಡಿದುಕೊಂಡು ಪಕ್ಕದಲ್ಲಿ ನಿಲ್ಲುತ್ತಾರೆ. ನಂತರ ಆ ಚೀಲವನ್ನು ಶರ್ಟ್ ಇಲ್ಲವೇ ಪ್ಯಾಂಟಿಗೆ ತಾಗಿಸಿ ಕಿಸೆಯಲ್ಲಿರುವ ಫೋನ್ ಕಳವು ಮಾಡುತ್ತಾರೆ’ ಎಂಬುದು ಕಳೆದುಕೊಂಡವರ ಅಭಿಮತ.

ಸೋಮವಾರ ಸಂತೆಯ ದಿನವಾದ್ದರಿಂದ ಹೊರಗಿನಿಂದ ಮೊಬೈಲ್ ಕಳ್ಳರ ತಂಡ ಬಂದಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಸಂತೆ ದಿನ ಮಾರುಕಟ್ಟೆಯಲ್ಲಿ ಮತ್ತು ಬಸ್ ನಿಲ್ದಾಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಕ್ಕಳ ಬಳಕೆ: ಮೊಬೈಲ್ ಫೋನ್ ಕಳ್ಳತನಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಶಂಕೆ ವ್ಯಕ್ತವಾಗಿದೆ. 12 ರಿಂದ 14 ವಯಸ್ಸಿನ ಹುಡುಗರು ಬಸ್ ನಿಲ್ದಾಣದಲ್ಲಿ ಕೈಚೀಲ ಹಿಡಿದುಕೊಂಡು ಎಲ್ಲರೊಂದಿಗೆ ಬಸ್ ಹತ್ತುತ್ತಾರೆ. ಬಸ್ ಒಳಗೆ ನಮ್ಮ ಶರ್ಟಿಗೆ ಚೀಲ ತಾಗಿಸಿ ಕೈಚಳಕದ ಮೂಲಕ ಕಿಸೆಯಲ್ಲಿನ ಮೊಬೈಲ್ ಹೊಡೆಯುತ್ತಾರೆ. ಸಾರ್ವಜನಿಕರು ಬಸ್ ನಿಲ್ದಾಣದಲ್ಲಿ ಇಂತಹವರಿಂದ ಎಚ್ಚರದಿಂದ ಇರುವಂತೆ ಮೊಬೈಲ್‌ ಕಳೆದುಕೊಂಡ ಹಿರಿಯ ಪತ್ರಕರ್ತರೊಬ್ಬರು ಸಲಹೆ ನೀಡುತ್ತಾರೆ.

ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆಂದು ಬಗ್ಗಿದಾಗ ಪಕ್ಕದಲ್ಲಿ ನಿಂತು ಮೊಬೈಲ್‌ಫೋನ್ ಕದ್ದಿದ್ದಾರೆ ಎಂದು ಚಿಕ್ಕಮುಚ್ಚಳಗುಡ್ಡ ಗ್ರಾಮದ ಈರಪ್ಪ ಸೊಬರದ ಅಳಲು ತೋಡಿಕೊಂಡರು.

’ಮೊಬೈಲ್ ಕಳೆದುಕೊಂಡವರು ದೂರು ನೀಡಿದ್ದಾರೆ. ಶೀಘ್ರ ಕಳ್ಳರನ್ನು ಪತ್ತೆ ಮಾಡುವುದಾಗಿ’ ಪಿಎಸ್ಐ ಎಚ್.ಎಸ್. ನಡಗಡ್ಡಿ ಪತ್ರಿಕೆಗೆ ಹೇಳಿದರು. 

ಒಂದೇ ತಂಡದ ಕೃತ್ಯ?..

15 ದಿನಗಳ ಹಿಂದೆ ಬಾಗಲಕೋಟೆಯ ನವನಗರದ ಭಾನುವಾರದ ಸಂತೆಯಲ್ಲಿ ಒಂದೇ ದಿನ 15 ಮಂದಿ ಮೊಬೈಲ್‌ಫೋನ್ ಕಳೆದುಕೊಂಡಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಆಗ ಕಳ್ಳರ ಪಾಲಾಗಿತ್ತು. ಅದೇ ತಂಡ ಬಾದಾಮಿಯಲ್ಲೂ ಕೈಚಳಕ ತೋರಿದೆಯೇ?, ಹೊರಗಿನಿಂದ ಬರುವ ವೃತ್ತಿಪರರು ಈ ಕೆಲಸ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !