ನರೇಗಾ ಯೋಜನೆ: ನಿರೀಕ್ಷಿತ ಸಾಧನೆಯಾಗಿಲ್ಲ: ಮಂಜುಳಾ ಅಸಮಾಧಾನ

7

ನರೇಗಾ ಯೋಜನೆ: ನಿರೀಕ್ಷಿತ ಸಾಧನೆಯಾಗಿಲ್ಲ: ಮಂಜುಳಾ ಅಸಮಾಧಾನ

Published:
Updated:
Deccan Herald

ಕೋಲಾರ: ‘ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಇಲಾಖೆಯಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಪ್ರಮುಖ ಇಲಾಖೆಗಳಲ್ಲಿ ನರೇಗಾ ಅನುದಾನ ಬಳಕೆಯಾಗಿಲ್ಲ. ಇದರಿಂದ ಉದ್ದೇಶಿತ ಗುರಿ ಸಾಧನೆಯಾಗಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ?’ ಎಂದು ಕೆಂಡಾಮಂಡಲರಾದರು.

‘ನರೇಗಾ ಯೋಜನೆಯಡಿ 25.88 ಲಕ್ಷ ಮಾನವ ದಿನ ಸೃಜಿಸುವ ಗುರಿಯಿತ್ತು. ಈವರೆಗೆ 11.90 ಲಕ್ಷ ಗುರಿ ಸಾಧನೆ (ಶೇ 45) ಆಗಿದೆ. ಹಿಂದಿನ ವರ್ಷದ ಸಲಕರಣೆ ವೆಚ್ಚ ₹ 8 ಕೋಟಿ ಬಾಕಿ ಇದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ವಿವರಿಸಿದರು.

‘ಕೃಷಿ ಇಲಾಖೆಯಲ್ಲಿ ₹ 14.90 ಕೋಟಿ ಮೊತ್ತದ ಕ್ರಿಯಾ ಯೋಜನೆ ಗುರಿಗೆ ಈವರೆಗೆ ₹ 4.18 ಕೋಟಿ, ತೋಟಗಾರಿಕೆ ಇಲಾಖೆಯಲ್ಲಿ ₹ 8.40 ಕೋಟಿ ಗುರಿಯಲ್ಲಿ ₹ 1.45 ಕೋಟಿ, ಸಾಮಾಜಿಕ ಅರಣ್ಯ ವಿಭಾಗದಲ್ಲಿ ₹ 9 ಕೋಟಿ ಗುರಿಯಲ್ಲಿ ₹ 2.68 ಕೋಟಿ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ (ಪಿಆರ್‌ಇಡಿ) ₹ 13.22 ಕೋಟಿ ಗುರಿಯಲ್ಲಿ ₹ 1.46 ಕೋಟಿ ಖರ್ಚಾಗಿದೆ’ ಎಂದು ಮಾಹಿತಿ ನೀಡಿದರು.

ಸಹಾಯವಾಣಿ ಕೇಂದ್ರ: ‘ಜಿಲ್ಲೆಯಲ್ಲಿ ಸದ್ಯ ಯಾವುದೇ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಮುಂದೆ 124 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಟ್ಯಾಂಕರ್ ಮೂಲಕ ನೀರು ಪೂರೈಸಲು ₹ 4.18 ಕೋಟಿ ಅನುದಾನ ಅಗತ್ಯವಿದೆ. ವಿಪತ್ತು ನಿರ್ವಹಣಾ ನಿಧಿಯಲ್ಲಿ ₹ 6.18 ಕೋಟಿ ಅನುದಾನವಿದೆ. ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಕಾಮಗಾರಿ ಪೂರ್ಣಗೊಳಿಸಿ: ‘ಮಾರ್ಕಂಡೇಯ ಜಲಾಶಯದಿಂದ ಮಾಲೂರು ತಾಲ್ಲೂಕಿಗೆ ಕುಡಿಯುವ ನೀರು ಪೂರೈಸಲು ಕೈಗೆತ್ತಿಕೊಂಡಿರುವ ಯೋಜನೆ ಕಾಮಗಾರಿಯನ್ನು ನವೆಂಬರ್ ಒಳಗೆ ಪೂರ್ಣಗೊಳಿಸಬೇಕು’ ಎಂದು ಮಂಜುಳಾ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ (ಪಿಆರ್‌ಇಡಿ) ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುಳ್ಳಪ್ಪನವರ್‌, ‘ಯೋಜನೆಯಿಂದ 6 ವಲಯಗಳಿಗೆ ನೀರು ಪೂರೈಸಲು ಉದ್ದೇಶಿಸಲಾಗಿತ್ತು. ನ.1ರೊಳಗೆ 4 ವಲಯಗಳ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಉಸ್ತುವಾರಿ ಸಚಿವರಿಗೆ ತಿಳಿಸಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ಸ್ಪಷ್ಟಪಡಿಸಿದರು.

ವೈದ್ಯರ ಕೊರತೆ: ‘ಆಸ್ಪತ್ರೆಯಲ್ಲಿ ತಜ್ಞ ವೈದ್ಯರು, ನರ್ಸ್ ಮತ್ತು ಡಿ ಗ್ರೂಪ್ ನೌಕರರ ಕೊರತೆಯಿದೆ. ವೈದ್ಯರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಲು ಒಪ್ಪುತ್ತಿಲ್ಲ. ಬಂದವರೂ ಕೆಲವೇ ತಿಂಗಳಲ್ಲಿ ಕೆಲಸ ಬಿಟ್ಟು ಹೋಗುತ್ತಿದ್ದಾರೆ. ಖಾಸಗಿ ವೈದ್ಯರ ಸೇವೆ ಬಳಸಿಕೊಳ್ಳಲು ಅವಕಾಶವಿದ್ದರೂ ಯಾರೂ ಬರುತ್ತಿಲ್ಲ’ ಎಂದು ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ನಾರಾಯಣಸ್ವಾಮಿ ಹೇಳಿದರು.

‘ವೈದ್ಯಕೀಯ ಸಿಬ್ಬಂದಿ ಕೊರತೆ ವಿಷಯವನ್ನು ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುತ್ತೇವೆ’ ಎಂದು ಮಂಜುಳಾ ಭರವಸೆ ನೀಡಿದರು.

₹ 20 ಕೋಟಿ: ‘ಜಿಲ್ಲೆಯ ಕೆರೆ, ರಾಜಕಾಲುವೆಗಳ ಅಭಿವೃದ್ಧಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹ 20 ಕೋಟಿ ನೀಡುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲು ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ವಿದ್ಯಾರ್ಥಿವೇತನಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅ.14 ಕಡೆ ದಿನ. ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಸಿಬ್ಬಂದಿ ಸಹಕರಿಸುತ್ತಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಆರೋಪಿಸಿದರು.

‘ಶಿಕ್ಷಣ ಇಲಾಖೆ ಬಿಆರ್‌ಸಿಗಳಿಗೆ ಆಯಾ ವ್ಯಾಪ್ತಿಯ ಶಾಲೆಗಳನ್ನು ಹಂಚಿಕೆ ಮಾಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿ. ನಿರ್ಲಕ್ಷ್ಯ ವಹಿಸುವವರ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಮಂಜುಳಾ ಆದೇಶಿಸಿದರು.

ಪೋಡಿ ಅರ್ಜಿ: ‘ಜಿಲ್ಲೆಯಾದ್ಯಂತ 4,000ಕ್ಕೂ ಹೆಚ್ಚು ಪೋಡಿ ಅರ್ಜಿಗಳು ವಿಲೇವಾರಿಯಾಗಿಲ್ಲ. ಅಗತ್ಯವಿದ್ದರೆ ಹೊರ ಜಿಲ್ಲೆಯ ಸರ್ವೇಯರ್‌ಗಳನ್ನು ಕರೆಸಲು ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವ ಸಲ್ಲಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್, ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್‌ ಹಾಜರಿದ್ದರು.

ಅಂಕಿ ಅಂಶಗಳು.....
* 7,660 ಮನೆ ನಿರ್ಮಾಣ ಗುರಿ
* 2688 ಮನೆಗಳು ಪೂರ್ಣ
* 4,972 ಮನೆ ನಿರ್ಮಾಣ ಬಾಕಿ
* ₹ 75 ಸಾವಿರ ಮನೆ ನಿರ್ಮಾಣ ವೆಚ್ಚ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !