ಭೂ ಸ್ವಾಧೀನ, ಮರಗಳ ತೆರವು ತ್ವರಿತಗೊಳಿಸಲು ಸಿ.ಎಂ ಸೂಚನೆ

7
ಬೆಂಗಳೂರು- ಮೈಸೂರು ಷಟ್ಪಥ ರಸ್ತೆ ಕಾಮಗಾರಿ: ತಿಂಗಳಾಂತ್ಯಕ್ಕೆ ಶಂಕುಸ್ಥಾಪನೆ

ಭೂ ಸ್ವಾಧೀನ, ಮರಗಳ ತೆರವು ತ್ವರಿತಗೊಳಿಸಲು ಸಿ.ಎಂ ಸೂಚನೆ

Published:
Updated:

ಬೆಂಗಳೂರು: ಬೆಂಗಳೂರು- ಮೈಸೂರು ಷಟ್ಪಥ ರಸ್ತೆ ಕಾಮಗಾರಿಗೆ ಇದೇ ತಿಂಗಳ ಅಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುವ ಉದ್ದೇಶವಿದೆ. ಹೀಗಾಗಿ, ಭೂ ಸ್ವಾಧೀನ, ಮರಗಳ ತೆರವು, ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ವತಿಯಿಂದ ಕೈಗೊಳ್ಳಲಾಗುತ್ತಿರುವ ಪ್ರಮುಖ ರಸ್ತೆ ಕಾಮಗಾರಿಗಳ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆಯಿತು.

ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚನೆ ನೀಡಿದರು.

ಬೆಂಗಳೂರು- ಮೈಸೂರು ಷಟ್ಪಥ ರಸ್ತೆ ಕಾಮಗಾರಿಗೆ ಪ್ಯಾಕೇಜ್ -1ರಲ್ಲಿ ₹ 3,890 ಕೋಟಿ ಮತ್ತು ಪ್ಯಾಕೇಜ್ 2ರಲ್ಲಿ ₹ 3,300 ಕೋಟಿ ವೆಚ್ಚ ಅಂದಾಜಿಸಲಾಗಿದೆ.

ರಾಜ್ಯದಲ್ಲಿ ಎನ್‌ಎಚ್‌ಎಐ ಸಹಭಾಗಿತ್ವದ 7,556 ಕಿ.ಮೀ ರಸ್ತೆಯ ಪೈಕಿ 3,463 ಕಿ.ಮೀ ರಸ್ತೆಯನ್ನು ಚತುಷ್ಪಥ ಮತ್ತು ಷಟ್ಪಥ ರಸ್ತೆಗಳನ್ನಾಗಿ ಪರಿವರ್ತಿಸಲು ₹ 36,000 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ಯೋಜನೆಗಳು ಅನುಷ್ಠಾನಕ್ಕೆ ಬರಲು ಇಂಧನ, ಅರಣ್ಯ ಹಾಗೂ ಕಂದಾಯ ಇಲಾಖೆಗಳ ಸಹಯೋಗದಲ್ಲಿ ಕೆಲಸ ಆಗಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ತೊಡಕುಗಳನ್ನು ನಿವಾರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಅಗತ್ಯವಿರುವ ಕಡೆಗಳಲ್ಲಿ ರಾಜ್ಯ ಭೂಸ್ವಾಧೀನ ಅಧಿಕಾರಿಯನ್ನು ಶೀಘ್ರವಾಗಿ ನೇಮಿಸಲು ಸೂಚನೆ ನೀಡಿದರು.

ಅರಣ್ಯ ಕಾಯ್ದೆ ನಿಯಮಗಳ ಕಾರಣಕ್ಕೆ ಕೆಲವು ಕಡೆ ಕಾಮಗಾರಿಗಳು ಕುಂಠಿತವಾಗುತ್ತಿದೆ‌. ಈ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ಮುಖ್ಯ ಕಾರ್ಯದರ್ಶಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಮಂಗಳೂರು, ಕಲಬುರ್ಗಿ, ಬಳ್ಳಾರಿ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳಲು ಇರುವ ಸಮಸ್ಯೆಗಳನ್ನು ನಿವಾರಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದೂ ಮುಖ್ಯಮಂತ್ರಿ ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ , ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಟಕರಾವ್ ನಾಡಗೌಡ, ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್. ಪುಟ್ಟರಾಜು, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಜಿಲ್ಲೆಗಳ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !