ದಸರಾ ಗಜಪಡೆಯ 2ನೇ ಪೀಳಿಗೆಗೆ ಸಿದ್ಧತೆ

7
ರಾಜ್ಯದ ಇತರೆ ಶಿಬಿರಗಳ ಆನೆಗಳ ಪರಿಗಣನೆಗೆ ಚಿಂತನೆ l 4 ಆನೆಗಳಿಗೆ ನಿವೃತ್ತಿ ನೀಡಲು ಅರಣ್ಯ ಇಲಾಖೆ ನಿರ್ಧಾರ

ದಸರಾ ಗಜಪಡೆಯ 2ನೇ ಪೀಳಿಗೆಗೆ ಸಿದ್ಧತೆ

Published:
Updated:
Deccan Herald

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಗಜಪಡೆಯ ವಯೋಮಿತಿ ಮೀರುತ್ತಿದ್ದು, 2ನೇ ಪೀಳಿಗೆಯ ಆನೆಗಳನ್ನು ಸಜ್ಜುಗೊಳಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ದಸರಾದಲ್ಲಿ ಭಾಗವಹಿಸುವ 12 ಆನೆಗಳ ಪೈಕಿ 4ಕ್ಕೆ 60 ವರ್ಷಗಳು, 2 ಆನೆಗಳಿಗೆ 50 ವರ್ಷಗಳು ತುಂಬಿವೆ. ಕೆಲವೇ ವರ್ಷಗಳಲ್ಲಿ 4 ಆನೆಗಳಿಗೆ ನಿವೃತ್ತಿ ನೀಡಬೇಕಿದೆ.

ಸಾಮಾನ್ಯವಾಗಿ ಅರಣ್ಯ ಇಲಾಖೆಯ ಕೆಲಸಗಳಲ್ಲಿ ಪಾಲ್ಗೊಳ್ಳುವ ಆನೆಗಳಿಗೆ 60ರಿಂದ 65 ವರ್ಷಕ್ಕೆ ನಿವೃತ್ತಿ ನೀಡಲಾಗುತ್ತದೆ. ಆದರೆ, ದಸರೆ ಮಹೋತ್ಸವದಲ್ಲಿ ಈ ನಿಯಮ ಪಾಲನೆ ಮಾಡುವುದು ಕಷ್ಟಕರ ಎನ್ನಲಾಗುತ್ತಿದೆ.

ಆನೆಗಳನ್ನು ಕರೆತರಲು ಸುಲಭವಾಗಲಿದೆ ಎಂಬ ಕಾರಣಕ್ಕೆ ಈವರೆಗೂ ಕೇವಲ ಮೈಸೂರು ಜಿಲ್ಲೆ ಹಾಗೂ ಆಸುಪಾಸಿನ ಶಿಬಿರಗಳಲ್ಲಿರುವ ಆನೆಗಳನ್ನಷ್ಟೇ ದಸರೆಗೆ ಪರಿಗಣಿಸಲಾಗುತ್ತಿತ್ತು. ಮುಂದಿನ ವರ್ಷದಿಂದ ರಾಜ್ಯದ ಇತರೆ ಶಿಬಿರಗಳಲ್ಲಿರುವ
ಆನೆಗಳನ್ನು ಪರಿಗಣಿಸುವ ಕುರಿತು ಗಂಭೀರ ಚಿಂತನೆ ಅರಣ್ಯ ಇಲಾಖೆಯಲ್ಲಿ ನಡೆದಿದೆ.

ಕಳೆದ ಬಾರಿ ಒಟ್ಟು 15 ಆನೆಗಳನ್ನು ಕರೆತರಲಾಗಿತ್ತು. ಈ ಬಾರಿ ಸಂಪ್ರದಾಯದಂತೆ 12 ಆನೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಇವುಗಳಲ್ಲಿ 30ರಿಂದ 50 ವರ್ಷ ವಯಸ್ಸಿನ ಆನೆಗಳ ಸಂಖ್ಯೆ 6 ಮಾತ್ರ.

ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಇಂತಿಷ್ಟೇ ವಯಸ್ಸು ಇರಬೇಕು ಎನ್ನುವ ನಿಯಮ ಇಲ್ಲ. ಆದರೆ, 30ಕ್ಕಿಂತ ಕಡಿಮೆ ವಯಸ್ಸಿನ ಆನೆಗಳನ್ನು ಮಹೋತ್ಸವಕ್ಕೆ ಪರಿಗಣಿಸುವುದು ಉಚಿತವಲ್ಲ. ತೀರಾ ಯೌವನಾವಸ್ಥೆಯಲ್ಲಿರುವ ಆನೆಗಳು ವಯೋಸಹಜ ತುಂಟಾಟ
ಗಳನ್ನು ಆಡುತ್ತವೆ. ಇದು ಮೆರವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ರೀತಿ 50 ವರ್ಷ ದಾಟಿದ ಆನೆಗಳ ದೇಹಸ್ಥಿತಿಯು ವಯೋಸಹಜ ಬೇನೆಗಳಿಂದ ಕೂಡಿರುತ್ತದೆ.

ಕುಮ್ಕಿ ಆನೆಗಳ ಕೊರತೆ: ರಾಜ್ಯದ ಆನೆ ಶಿಬಿರಗಳಲ್ಲಿ ಕುಮ್ಕಿ (ಹೆಣ್ಣಾನೆ) ಆನೆಗಳ ಕೊರತೆ ಇದೆ. 9 ಶಿಬಿರಗಳಲ್ಲಿ 96 ಆನೆಗಳು ಇವೆ. ಇವುಗಳಲ್ಲಿ ಹೆಣ್ಣಾನೆಗಳ ಸಂಖ್ಯೆ ಕೇವಲ 18. ಮುಖ್ಯವಾಗಿ ಹೆಣ್ಣಾನೆಗಳ ಪಾತ್ರ ದಸರೆಯಲ್ಲಿ ಮಾತ್ರವಲ್ಲ ಬಹಳಷ್ಟು ಸಂದರ್ಭಗಳಲ್ಲಿ ಮುಖ್ಯವಾಗುತ್ತದೆ. ನಾಡಿಗೆ ಬಂದ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಇವು ಇರಲೇಬೇಕು.

‘ಹೆಚ್ಚಿನ ಸಂದರ್ಭಗಳಲ್ಲಿ ಗಂಡಾನೆಗಳು ಕಾಡಿನಿಂದ ಹೊರಗೆ ಬಂದು ಗಲಾಟೆ ಮಾಡುತ್ತವೆ. ಇವುಗಳನ್ನಷ್ಟೇ ಸೆರೆ ಹಿಡಿಯಲಾಗುತ್ತದೆ. ಹೆಣ್ಣಾನೆಗಳು ಸ್ವಲ್ಪಮಟ್ಟಿಗೆ ಶಾಂತ ಸ್ವಭಾವದವು. ಅವುಗಳನ್ನು ಸೆರೆ ಹಿಡಿಯುವ ಪ್ರಮೇಯ ಕಡಿಮೆ. ಹಾಗಾಗಿ, ಶಿಬಿರದಲ್ಲಿ
ಹೆಣ್ಣಾನೆಗಳ ಸಂಖ್ಯೆ ಕಡಿಮೆ ಇದೆ’ ಎಂದು ಡಿಸಿಎಫ್ ಸಿದ್ದರಾಮಪ್ಪ ಹೇಳುತ್ತಾರೆ.

ಸದ್ಯಕ್ಕೆ ಆತಂಕಗೊಳ್ಳುವ ಸ್ಥಿತಿ ಇಲ್ಲ. ಬೇರೆ ಶಿಬಿರದಲ್ಲಿರುವ ಆನೆಗಳಿಗೆ ದಸರೆಯಲ್ಲಿ ಅವಕಾಶ ನೀಡಲು ಚಿಂತಿಸಲಾಗುತ್ತಿದೆ. ಹೆಣ್ಣಾನೆಗಳ ಮೇಲೆ ಭಾರ ಹೇರುವುದಿಲ್ಲ. ಹಾಗಾಗಿ, ಅವುಗಳಿಗೆ ವಯಸ್ಸಾದರೂ ತೊಂದರೆ ಇಲ್ಲ.

– ಸಿದ್ದರಾಮಪ್ಪ, ಉಪಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ).

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !