ಇಲ್ಲಿ ಯಾರಿಗೂ ಕೊಂಬುಗಳಿಲ್ಲ: ಸಚಿವ ಎನ್.ಎಚ್.ಶಿವಶಂಕರರೆಡ್ಡಿ

7
ಶಾಸಕ ಡಾ.ಕೆ.ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯೆ

ಇಲ್ಲಿ ಯಾರಿಗೂ ಕೊಂಬುಗಳಿಲ್ಲ: ಸಚಿವ ಎನ್.ಎಚ್.ಶಿವಶಂಕರರೆಡ್ಡಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯತೆ ಕಾಪಾಡಿಕೊಂಡು ಹೋದಾಗ ಅಭಿವೃದ್ಧಿ ಕಾಣಲು ಸಾಧ್ಯ. ಇದರಲ್ಲಿ ಯಾರ ಹೆಚ್ಚುಗಾರಿಕೆ ಇಲ್ಲ. ಪಾಳೇಯಗಾರಿಕೆಯೂ ಇಲ್ಲ. ಪಾಳೆಯಗಾರಿಕೆ ಕಾಲ ಯಾವತ್ತೋ ಹೋಗಿದೆ. ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಷ್ಟೇ. ಇಲ್ಲಿ ಯಾರಿಗೂ ಕೊಂಬುಗಳಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಎನ್‌.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಾಲ್ಲೂಕಿನ ಸುಲ್ತಾನ್‌ಪೇಟೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಥಳೀಯ ಶಾಸಕ ಡಾ.ಕೆ.ಸುಧಾಕರ್ ಅವರ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ ಈ ರೀತಿ ಪ್ರತಿಕ್ರಿಯಿಸಿದರು.

‘ನಾನು ಶಾಸಕರಿಗೆ ಸ್ಪಂದಿಸುತ್ತಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಕಾರ್ಯಕ್ರಮಗಳಿಗೇ ಬರುವುದಿಲ್ಲ. ಜಿಲ್ಲೆಯಲ್ಲಿ ಎಷ್ಟೊಂದು ಕಾರ್ಯಕ್ರಮಗಳು ನಡೆಯುತ್ತವೆ. ನಾನು ಕೂಡ ಅನೇಕ ಕಾರ್ಯಕ್ರಮ, ಸಭೆಗಳಿಗೆ ಅವರನ್ನು ಕರೆದಿದ್ದೇನೆ. ಬರುವುದಿಲ್ಲ. ಅದಕ್ಕೆ ನಾನು ಕಾರಣಾನಾ? ಸ್ಪಂದಿಸುವುದಿಲ್ಲ ಎಂದರೆ ಏನರ್ಥ? ಜಿಲ್ಲಾ ಉಸ್ತುವಾರಿ ಸಚಿವನಾಗಿ ನನ್ನ ಜವಾಬ್ದಾರಿ ನಾನು ನಿರ್ವಹಿಸುತ್ತೇನೆ. ಸಹಕರಿಸುವವರ ಜತೆ ಹೋಗಬೇಕಾಗುತ್ತದೆ. ಸಹಕರಿಸದವರಿಗೆ ನಾನೇನು ಮಾಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಶಾಸಕರು ಬೇರೆ ಬೇರೆ ಕಾರಣಗಳಿಗೆ ಏನೇನು ಹೇಳಿದ್ದಾರೋ ಅದಕ್ಕೆ ನಾನು ಹೊಣೆಯಲ್ಲ. ನಾನು ಮುಕ್ತ ಮನಸ್ಸಿನವನು. ಒಳ್ಳೆಯ ಆಡಳಿತ ಕೊಡಬೇಕು ಎಂದು ನಿರ್ಧರಿಸಿರುವೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ ಅವರಿಗೆ ಸ್ಪಂದಿಸಿ ನಾವು ಉತ್ತಮ ಆಡಳಿತ ಪಡೆಯಬೇಕು. ವ್ಯವಸ್ಥೆಯಲ್ಲಿ ನಾವೆಲ್ಲ ಪಾಲುದಾರರು. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ದೂರ ಇದ್ದರೆ ಯಾರು ಏನೂ ಮಾಡಲು ಆಗುವುದಿಲ್ಲ. ಆದರೆ ವ್ಯವಸ್ಥೆ ಯಾವುದು ನಿಲ್ಲುವುದಿಲ್ಲ. ನಾನು ಬಯಸಿದಾಗ ವ್ಯವಸ್ಥೆ ನಿಲ್ಲುತ್ತದೆ ಎಂದುಕೊಂಡರೆ ನಾನು ಮೂರ್ಖನಾಗುತ್ತೇನೆ. ವ್ಯವಸ್ಥೆ, ಆಡಳಿತ ಮುಂದಕ್ಕೆ ಹೋಗುತ್ತದೆ. ಅದನ್ನು ನಿಲ್ಲಿಸಲು ಆಗುವುದಿಲ್ಲ. ನಾವೂ ಅದರೊಂದಿಗೆ ಹೋಗಬೇಕು’ ಎಂದು ಹೇಳಿದರು.

‘ಸಾಮಾನ್ಯ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾಳೆ ಅವರು ಮನಸ್ಸು ಮಾಡಿದರೆ ನಮ್ಮನ್ನು ಅಧಿಕಾರದಿಂದ ಇಳಿಸುವ ಶಕ್ತಿ ಅವರಿಗಿದೆ. ಆದ್ದರಿಂದ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ನಾವು ಸ್ಪಂದಿಸಬೇಕೇ ಹೊರತು ಇಲ್ಲಿ ಯಾರೂ ದೊಡ್ಡವರು, ಚಿಕ್ಕವರು ಅಂತಿಲ್ಲ. ಯಾರೇ ಜನಪ್ರತಿನಿಧಿಗಳಾಗಲಿ ಇದನ್ನು ಅರ್ಥಮಾಡಿಕೊಂಡಾಗ ಸಮನ್ವಯತೆ ತಾನಾಗಿಯೇ ಬರುತ್ತದೆ. ಬೆಳವಣಿಗೆ ಆಗುತ್ತದೆ’ ಎಂದು ತಿಳಿಸಿದರು.

ಇತ್ತೀಚೆಗೆ ಶಾಸಕ ಸುಧಾಕರ್ ಅವರು, ‘ನಮಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪಂದಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ನಮ್ಮ ಮಂತ್ರಿಗಳು ಸ್ಪಂದಿಸಿದರೆ ಸಾಕಾಗಿದೆ. ನಮ್ಮ ಕಾಂಗ್ರೆಸ್‌ನಿಂದ ಮಂತ್ರಿಗಳಾದವರು ಸ್ಪಂದಿಸಿದರೆ ಪಕ್ಷ ಸಂಘಟನೆ ಮತ್ತಷ್ಟು ಉತ್ತಮಗೊಳ್ಳುವ ಜತೆಗೆ ಅಭಿವೃದ್ಧಿ ಸಹ ಆಗುತ್ತದೆ’ ಎಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !