ಎಪಿಎಂಸಿ ಜಾಗದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶಾಸಕ ಶ್ರೀನಿವಾಸಗೌಡ

7
ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ

ಎಪಿಎಂಸಿ ಜಾಗದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶಾಸಕ ಶ್ರೀನಿವಾಸಗೌಡ

Published:
Updated:
Deccan Herald

ಕೋಲಾರ: ‘ಎಪಿಎಂಸಿಯ ಜಾಗದ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ‘ಮಾರುಕಟ್ಟೆಗೆ ಬರುವ ಟೊಮೆಟೊ ಹಾಗೂ ಇತರ ತರಕಾರಿ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಜಾಗದ ಸಮಸ್ಯೆ ಸೃಷ್ಟಿಯಾಗಿದ್ದು, ಮಾರುಕಟ್ಟೆ ಪಕ್ಕದ ರಸ್ತೆಯಲ್ಲಿ ತರಕಾರಿ ವಹಿವಾಟು ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದರು.

‘ಈ ಹಿಂದೆ ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳ ವಹಿವಾಟು ನಗರದ ಹಳೆ ಬಸ್‌ ನಿಲ್ದಾಣದ ಬಳಿ ನಡೆಯುತ್ತಿತ್ತು. ನಾನು ಶಾಸಕನಾದ ನಂತರ ಎಪಿಎಂಸಿಗೆ ಜಾಗ ಮಂಜೂರು ಮಾಡಿಸಿದೆ. ಜಾಗದ ಸಮಸ್ಯೆ ನಿವಾರಣೆ ಮಾಡಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟದಿಂದ (ನಾಫೆಡ್‌) 4 ಎಕರೆ ಜಾಗ ಬಿಡಿಸಿ ಕೊಟ್ಟಿದ್ದೇನೆ’ ಎಂದು ಹೇಳಿದರು.

‘ಜಾಗದ ಸಮಸ್ಯೆಯನ್ನು ಎಪಿಎಂಸಿ ಆಡಳಿತ ಮಂಡಳಿಯವರು ನನ್ನ ಗಮನಕ್ಕೆ ತಂದಿದ್ದಾರೆ. ತಾಲ್ಲೂಕಿನ ಚಲುವನಹಳ್ಳಿ ಬಳಿ ಅರಣ್ಯ ಇಲಾಖೆಗೆ ಸೇರಿದ 30 ಎಕರೆ ಜಾಗ ಗುರುತಿಸಿದ್ದು, ಜಿಲ್ಲಾಧಿಕಾರಿ ಜತೆ ಚರ್ಚಿಸಿ ಮಂಜೂರು ಮಾಡಿಸಲು ಸರ್ಕಾರದ ಮೇಲೆ ಒತ್ತಡ ತರುತ್ತೇನೆ’ ಎಂದು ತಿಳಿಸಿದರು.

ಶೈತ್ಯಾಗಾರ ನಿಷ್ಪ್ರಯೋಜಕ: ‘ಈ ಹಿಂದೆ ಜಿಲ್ಲೆಯಲ್ಲಿ ಆಲೂಗಡ್ಡೆ ಉತ್ಪಾದನೆ ಹೆಚ್ಚಾಗಿತ್ತು. ಆಲೂಗಡ್ಡೆ ದಾಸ್ತಾನು ಮಾಡಲು ಶೈತ್ಯಾಗಾರ ನಿರ್ಮಿಸಲಾಯಿತು. ಆದರೆ, ಉತ್ಪಾದನೆ ಕಡಿಮೆಯಾದ ನಂತರ ಶೈತ್ಯಾಗಾರ ನಿಷ್ಪ್ರಯೋಜಕವಾಗಿವೆ. ಎಪಿಎಂಸಿ ಆಡಳಿತ ಮಂಡಳಿಯು ಆ ಶೈತ್ಯಾಗಾರ ದುರಸ್ತಿ ಮಾಡಿ ಟೊಮೆಟೊ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ರೈತರ ಶಾಪ: ‘ರೈತರ ಸಮಸ್ಯೆಗಳ ಅರಿವಿದೆ. ಮಾರುಕಟ್ಟೆಯು ರೈತರ ಪರವಾಗಿ ಕೆಲಸ ಮಾಡಬೇಕು. ಅದು ಬಿಟ್ಟು ದಲ್ಲಾಳಿಗಳ ಪರ ನಿಂತರೆ ರೈತರ ಶಾಪ ತಟ್ಟುತ್ತದೆ. ಮಾರುಕಟ್ಟೆ ಆಡಳಿತ ಮಂಡಳಿಯು ರೈತರ ಸಮಸ್ಯೆ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ ತಿಳಿಸಿದರು.

ಆಧಾರ ಸ್ತಂಭ: ‘ದಲ್ಲಾಳಿಗಳು ಮಾರುಕಟ್ಟೆಯ ಆಧಾರ ಸ್ತಂಭಗಳಿದ್ದಂತೆ. ರೈತರ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೂ ಕಳುಹಿಸುವ ಕೆಲಸ ಅವರಿಂದಲೇ ಆಗುತ್ತಿದೆ, ಇತ್ತೀಚೆಗೆ ತರಕಾರಿಗಳಿಗೆ ಸ್ಥಳೀಯವಾಗಿ ಬೇಡಿಕೆ ಕುಸಿದಿದೆ. ಆದರೆ, ದಲ್ಲಾಳಿಗಳು ರೈತರಿಂದ ತರಕಾರಿ ಖರೀದಿಸಿ ಹೊರ ರಾಜ್ಯ ಮತ್ತು ವಿದೇಶಕ್ಕೆ ಕಳುಹಿಸಿದ್ದಾರೆ. ಮಾರುಕಟ್ಟೆ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ’ ಎಂದು ಎಪಿಎಂಸಿ ಅಧ್ಯಕ್ಷ ಬಿ.ವೆಂಕಟೇಶಪ್ಪ ಅಭಿಪ್ರಾಯಪಟ್ಟರು.

‘ಎಪಿಎಂಸಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳ ಪರಿಹಾರಕ್ಕೆ ಹರಸಾಹಸಪಟ್ಟಿದ್ದೇನೆ. ಜಾಗದ ಸಮಸ್ಯೆ ಬಗೆಹರಿಸುವಂತೆ ರೈತರು, ಮಂಡಿ ಮಾಲೀಕರು, ವ್ಯಾಪಾರಿಗಳು ಒತ್ತಡ ಹೇರಿದರು. ಶಾಸಕ ಶ್ರೀನಿವಾಸಗೌಡರು ಸಮಸ್ಯೆಗೆ ಶೇ 30ರಷ್ಟು ಪರಿಹಾರ ಕಲ್ಪಿಸಿದ್ದಾರೆ. ಉಳಿತ ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ ಸಹಕರಿಸಬೇಕು’ ಎಂದು ಕೋರಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು, ಎಪಿಎಂಸಿ ಉಪಾಧ್ಯಕ್ಷೆ ಭಾಗ್ಯಮ್ಮ, ನಿರ್ದೇಶಕರಾದ ಕೆ.ರವಿಶಂಕರ್, ಡಿ.ಎಲ್.ನಾಗರಾಜ್, ದೇವರಾಜ್, ಎಸ್‌.ರೇಖಾ, ಕಾರ್ಯದರ್ಶಿ ಟಿ.ಎಸ್‌.ರವಿಕುಮಾರ್ ಹಾಜರಿದ್ದರು.

ಅಂಕಿ ಅಂಶಗಳು.....
* 18 ಎಕರೆ ಮಾರುಕಟ್ಟೆ ವಿಸ್ತಾರ
* 178 ತರಕಾರಿ ಮಂಡಿಗಳು
* 30 ಎಕರೆ ಜಾಗ ಗುರುತು
* 4 ಎಕರೆ ನಾಫೆಡ್‌ ಜಾಗ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !