ಬುಡಕಟ್ಟು ಜನರು ಅಕ್ಷರ ಕಲಿತ ತಾಣಕ್ಕೆ ಗ್ರಹಣ

7
ಬಿಳಿಗಿರಿರಂಗನ ಬೆಟ್ಟದಲ್ಲಿ ಅರ್ಧ ಶತಮಾನ ಪೂರೈಸಿದ ಗಾಂಧಿ ಸೇವಾಶ್ರಮ

ಬುಡಕಟ್ಟು ಜನರು ಅಕ್ಷರ ಕಲಿತ ತಾಣಕ್ಕೆ ಗ್ರಹಣ

Published:
Updated:
Deccan Herald

ಯಳಂದೂರು: ಸುತ್ತಲೂ ಹಬ್ಬಿದ ಬಳ್ಳಿಗಳು, ಉದುರುತ್ತಿರುವ ಹೆಂಚುಗಳು, ಹಾದಿ ತುಂಬ ಕುರುಚಲು ಗಿಡಗಳು, ಹತ್ತಿರಕ್ಕೆ ಸುಳಿಯದಂತೆ ರಾತ್ರೀ ಪೂರ ನುಗ್ಗುವ ವನ್ಯ ಜೀವಿಗಳು, ನಿರ್ವಹಣೆ ಕಾಣದೆ ಏಕಾಂಗಿಯಾಗಿ ಮೌನ ವೇದನೆ.

–ಇದು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ, ನೂರಾರು ಗಿರಿಜನರಿಗೆ ಆಶ್ರಯ ಮತ್ತು ಅನ್ನವನ್ನು ನೀಡಿ ಪೋಷಿಸಿದ ಗಾಂಧಿ ಸೇವಾಶ್ರಮದ ಕತೆ.

ಇಲ್ಲಿ ಕಲಿತ ಬಹಳಷ್ಟು ಮಂದಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಸೋಲಿಗರ ಹಾಡಿಯಲ್ಲಿ ಅಡ್ಡಾಡಿದರೆ ಆಶ್ರಮದಲ್ಲಿ ಕಲಿತ ಅನೇಕರು ಬನದ ನಡುವಿನ ಆಶ್ರಮದ ಚರಿತ್ರೆಯನ್ನು ಈಗಲೂ ಬಿಚ್ಚಿಡುತ್ತಾರೆ.

1963ರಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ಅಂಗನವಾಡಿ, ಶಾಲೆ ನಡೆಯುತ್ತಿತ್ತು. ಪ್ರತಿ ದಿನ ಪ್ರಾರ್ಥನೆ ಮತ್ತು ಸ್ವಯಂ ಉದ್ಯೋಗ ತರಬೇತಿ ನೀಡಲಾಗುತ್ತಿತ್ತು. ಗಿರಿವಾಸಿಗಳಿಗೆ ಹೊಲಿಗೆ, ಊದುಬತ್ತಿ ತಯಾರಿಕೆ, ಬಟ್ಟೆ ನೇಯ್ಗೆಯ ಕೌಶಲ ಕಲಿಸಲಾಗುತ್ತಿತ್ತು. ಆದರೆ, 1991ರಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಸ್ಥಾಪನೆಯಾದ ನಂತರ ಗಾಂಧಿ ಆಶ್ರಮವನ್ನು ಸಂಪೂರ್ಣ ನಿರ್ಲಕ್ಷಿಸಲಾಯಿತು ಎನ್ನುತ್ತಾರೆ ಗ್ರಾಮಸ್ಥರು.

ಬೇಂದ್ರೆ ಬಂದಿದ್ದರು: ‘60 ವರ್ಷಗಳ ಹಿಂದೆ, ಜಿಲ್ಲೆಯಲ್ಲಿ ಮೊದಲ ಆದಿವಾಸಿಗಳ ಕಲ್ಯಾಣಕ್ಕಾಗಿ ಗಾಂಧಿ ಸೇವಾಶ್ರಮ ಟ್ರಸ್ಟ್‌ ಸ್ಥಾಪಿಸಲಾಯಿತು. ಆಶ್ರಮದ ಉದ್ಘಾಟನೆಗೆ ಅಂದು ವರಕವಿ ದ.ರಾ.ಬೇಂದ್ರೆ ಬಂದಿದ್ದರು. ಅವರು ನನ್ನ ತಲೆಯ ಮೇಲೆ ಕೈಯಿಟ್ಟು ಆಶಿರ್ವಾದಿಸಿದರು’ ಎಂದು ಸ್ಮರಿಸುತ್ತಾರೆ ಇಲ್ಲಿ 4ನೇ ತರಗತಿ ಕಲಿತ 70 ವರ್ಷದ ಯರಕನಗದ್ದೆಯ ಬಿ.ಜಡೇಗೌಡ.

ಪ್ರಾರ್ಥನಾ ಗೀತೆ ಮೆಲುಕು: ಯರಕನಗದ್ದೆ ಕಾಲೊನಿ ಸ್ಥಾಪನೆ ಆಗುವ ಮೊದಲೇ ಇಲ್ಲಿ ಆಶ್ರಮ ಇತ್ತು. ಮಕ್ಕಳಿಗೆ ಊಟ ನೀಡಿ ಕಲಿಸಲಾಗುತ್ತಿತ್ತು. ಬೆಂಗಳೂರಿನ ಸ್ವಯಂ ಸಂಸ್ಥೆಯೊಂದು ಶಿಕ್ಷಕರನ್ನು ನೇಮಿಸಿತ್ತು. ಪ್ರತಿ ಶುಕ್ರವಾರ ಗಾಂಧೀಜಿಯ ಮೆಚ್ಚಿನ ಪ್ರಾರ್ಥನಾ ಗೀತೆ ‘ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ’ ಕಲಿಸಲಾಗುತ್ತಿತ್ತು. ಇದೂ ಇನ್ನೂ ಸ್ಮರಣೆಯಲ್ಲಿದೆ ಎನ್ನುತ್ತಾರೆ ಇಲ್ಲಿ ಓದಿದ ಹೊಸಪೋಡಿನ ಸಿದ್ದೇಗೌಡ, ಪೋಸ್ಟ್‌ ಮಾದೇಗೌಡ.

‘ಬುಡಕಟ್ಟು ಜನರಿಗೆ ಶಿಕ್ಷಣ ನೀಡಿದ ಗಾಂಧಿ ಆಶ್ರಮವನ್ನು ಅಭಿವೃದ್ಧಿ ಪಡಿಸಬೇಕು. ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಆಸಕ್ತಿಯಿಂದ ಆಶ್ರಮವನ್ನು ಪ್ರವಾಸಿ ತಾಣ ಮಾಡಬೇಕು’ ಎಂಬುದು ಇಲ್ಲಿನ ಗಾಂಧಿ ಅನುಯಾಯಿಗಳ ಒತ್ತಾಸೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !