ಜಾನುವಾರು ಗಣತಿ ಸರಿಯಾಗಿ ನಿರ್ವಹಿಸಿ

7
ತರಬೇತಿ ಕಾರ್ಯಾಗಾರದಲ್ಲಿ ಸಿಬ್ಬಂದಿಗೆ ಜಿ.ಪಂ ಸಿಇಒ ಜಗದೀಶ್‌ ಸೂಚನೆ

ಜಾನುವಾರು ಗಣತಿ ಸರಿಯಾಗಿ ನಿರ್ವಹಿಸಿ

Published:
Updated:
Deccan Herald

ಕೋಲಾರ: ‘ಹೈನೋದ್ಯಮವು ಜಿಲ್ಲೆಯ ರೈತರ ಬೆನ್ನೆಲುಬು. ರೈತರ ಹಿತದೃಷ್ಟಿಯಿಂದ ಜಾನುವಾರು ಗಣತಿ ಸರಿಯಾಗಿ ನಿರ್ವಹಿಸಬೇಕು. ಕಾಟಾಚಾರಕ್ಕೆ ಗಣತಿ ಮಾಡಿದರೆ ಶಿಸ್ತುಕ್ರಮ ಜರುಗಿಸುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಜಿ.ಜಗದೀಶ್ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯು 20ನೇ ಜಾನುವಾರು ಗಣತಿ ಕುರಿತು ಇಲ್ಲಿ ಬುಧವಾರ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ತಪ್ಪು ಅಂಕಿ ಅಂಶ ನೀಡಿದರೆ ಸಮಸ್ಯೆಯಾಗುತ್ತದೆ’ ಎಂದರು.

‘ಗಣತಿ ಸಿಬ್ಬಂದಿಯಿಂದ ಲೋಪವಾದರೆ ನಮಗೆ ಕೆಟ್ಟ ಹೆಸರು ಬರುತ್ತದೆ. ಗಣತಿ ಸಕಾಲಕ್ಕೆ ಪೂರ್ಣಗೊಳ್ಳದೆ ರಾಜ್ಯ ಮಟ್ಟದಲ್ಲಿ ಹಿಂದುಳಿದರೆ ತಲೆ ತಗ್ಗಿಸಿ ಹಿರಿಯ ಅಧಿಕಾರಿಗಳ ಮಾತು ಕೇಳಬೇಕಾಗುತ್ತದೆ. ತಲೆ ಎತ್ತುವಂತೆ ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಗಣತಿಗೆ ತರಬೇತಿ, ಸಲಕರಣೆ ಸೇರಿದಂತೆ ಎಲ್ಲಾ ಸೌಕರ್ಯ ನೀಡುತ್ತೇವೆ. ಅಗತ್ಯವಿದ್ದರೆ ಒಂದು ತಾಸು ಹೆಚ್ಚು ತರಬೇತಿ ಪಡೆದು ಗಣತಿ ಪ್ರಕ್ರಿಯೆ ತಿಳಿದುಕೊಳ್ಳಿ. ಅದನ್ನು ಬಿಟ್ಟು ಕಾಟಾಚಾರಕ್ಕೆ ಇಲ್ಲಿ ಕುಳಿತು ಹೊರಗೆ ಹೋಗಿ ಗಣತಿಯಲ್ಲಿ ನಿರ್ಲಕ್ಷ್ಯ ತೋರಿದರೆ ಸಹಿಸುವುದಿಲ್ಲ. ನಿಮ್ಮನ್ನೇ ಹೊಣೆಗಾರರನ್ನಾಗಿಸುತ್ತೇವೆ’ ಎಂದು ತಿಳಿಸಿದರು.

ಕೊಟ್ಟಿಗೆ ನಿರ್ಮಿಸಿ: ‘ಸದಾ ರೈತರ ಸಂಪರ್ಕದಲ್ಲಿರುವ ಇಲಾಖೆ ಸಿಬ್ಬಂದಿಗೆ ರೈತರಿಗೆ ನರೇಗಾ ಯೋಜನೆಯಡಿ ಅನುಕೂಲವಾಗುವ ದನದ ಕೊಟ್ಟಿಗೆ ಮತ್ತು ನೀರಿನ ತೊಟ್ಟಿ ನಿರ್ಮಿಸಲು ಗಮನ ಹರಿಸಬೇಕು. 2019ರ ಮಾರ್ಚ್ 31ರೊಳಗೆ ಎಲ್ಲಾ ಅರ್ಹ ರೈತರಿಗೂ ಸೌಲಭ್ಯ ಕಲ್ಪಿಸಿರಬೇಕು’ ಎಂದು ಸೂಚಿಸಿದರು.

‘ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೆಚ್ಚಿನ ಕಾರ್ಯ ಒತ್ತಡ ಇರುತ್ತವೆ. ಹೀಗಾಗಿ ಅವರು ಕೊಟ್ಟಿಗೆ ಮತ್ತು ನೀರಿನ ತೊಟ್ಟಿ ನಿರ್ಮಾಣಕ್ಕೆ ಗಮನ ಹರಿಸುವುದಿಲ್ಲ. ಎಲ್ಲಾ ವರ್ಗದ ರೈತರಿಗೂ ಕೊಟ್ಟಿಗೆ ಮತ್ತು ನೀರಿನ ತೊಟ್ಟಿ ನಿರ್ಮಿಸಲು ನಿಮ್ಮ ಸಹಕಾರ ಅಗತ್ಯ. ಈ ಕಾರ್ಯಕ್ಕೆ ಸಹಕರಿಸಿ’ ಎಂದು ಕೋರಿದರು.

ಗೊಂದಲವಿಲ್ಲ: ‘ಕೊಟ್ಟಿಗೆ ನಿರ್ಮಾಣ ಸಂಬಂಧ ಸಿಬ್ಬಂದಿ ಕ್ರಿಯಾ ಯೋಜನೆ ರೂಪಿಸಿಕೊಟ್ಟರೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ. ಪರಿಶಿಷ್ಟರಿಗೆ ₹ 43 ಸಾವಿರ, ಸಾಮಾನ್ಯ ವರ್ಗದವರಿಗೆ ₹ 18 ಸಾವಿರ ನೀಡಲಾಗುತ್ತದೆ ಎಂಬ ಗೊಂದಲವಿಲ್ಲ. ಎಲ್ಲಾ ವರ್ಗದವರಿಗೂ ₹ 43 ಸಾವಿರ ನೀಡಲಾಗುತ್ತದೆ. ರೈತರು ತಮ್ಮ ಜಮೀನುಗಳಲ್ಲಿ ₹ 10 ಸಾವಿರ ವೆಚ್ಚದ ಕಾಮಗಾರಿಯನ್ನು ನರೇಗಾ ಅಡಿ ಮಾಡಿಸಿಕೊಳ್ಳಬೇಕು. ಜತೆಗೆ ಉದ್ಯೋಗ ಚೀಟಿ ಹೊಂದಿರಬೇಕು’ ಎಂದು ವಿವರಿಸಿದರು.

‘ನರೇಗಾ ಅಡಿ ಶಾಲೆಗಳಿಗೆ ಮಾತ್ರ ಕಾಂಪೌಂಡ್ ನಿರ್ಮಿಸಲು ಅವಕಾಶವಿದೆ. ಪಶು ಇಲಾಖೆ ಆಸ್ಪತ್ರೆಗಳಿಗೆ ಕಾಂಪೌಂಡ್ ನಿರ್ಮಿಸಲು ಅವಕಾಶವಿಲ್ಲ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳು ಸಿಬ್ಬಂದಿಗೆ ತರಬೇತಿ ನೀಡಿದರು. ಇಲಾಖೆ ಉಪ ನಿರ್ದೇಶಕ ಡಾ.ಮಧುಸೂಧನರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !