ಜಿ.ಪಂ ಅಧ್ಯಕ್ಷೆಗೆ ‘ಅಸಹಕಾರದ’ ಬಿಸಿ

7
ಕೋರಂ ಕೊರತೆ: ಸಾಮಾನ್ಯ ಸಭೆ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆ

ಜಿ.ಪಂ ಅಧ್ಯಕ್ಷೆಗೆ ‘ಅಸಹಕಾರದ’ ಬಿಸಿ

Published:
Updated:
Deccan Herald

ಬಾಗಲಕೋಟೆ: ನಿಗದಿಯಷ್ಟು ಸದಸ್ಯರು ಹಾಜರಾಗದ ಕಾರಣ (ಕೋರಂ ಕೊರತೆ) ಗುರುವಾರ ಇಲ್ಲಿ ನಡೆಯಬೇಕಿದ್ದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯನ್ನು ಅಧ್ಯಕ್ಷೆ ವೀಣಾ ಕಾಶಪ್ಪನವರ ಅನಿರ್ದಿಷ್ಟ ಅವಧಿಗೆ ಮುಂದೂಡಿದರು.

ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿತ್ತು. ವೀಣಾ ಕಾಶಪ್ಪನವರ, ಸಿಇಒ ಗಂಗೂಬಾಯಿ ಮಾನಕರ ಬಂದು ಕಾದು ಕುಳಿತರೂ ನಾಲ್ವರು ಸದಸ್ಯರ ಹೊರತಾಗಿ ಉಳಿದವರು ಯಾರೂ ಅತ್ತ ತಲೆಹಾಕಲಿಲ್ಲ. 50 ನಿಮಿಷದ ನಂತರ ಸಭೆಯನ್ನು ಮುಂದೂಡಿರುವುದಾಗಿ ಘೋಷಿಸಿದ ವೀಣಾ ನಿರ್ಗಮಿಸಿದರು.

ಕೋರಂಗೆ 27 ಸದಸ್ಯರ ಅಗತ್ಯ:

36 ಮಂದಿ ಜಿಲ್ಲಾ ಪಂಚಾಯ್ತಿ ಸದಸ್ಯರು, ಆರು ಮಂದಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದ ಸೇರಿದಂತೆ ಒಟ್ಟು 53 ಸದಸ್ಯರು ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅದರಲ್ಲಿ ಕೋರಂ ಭರ್ತಿಯಾಗಲು 27 ಸದಸ್ಯರ ಬಲ ಅಗತ್ಯವಿದೆ.

ನಂತರ ಬಂದರು: ಸಭೆ ಮುಂದೂಡಿ ಅಧ್ಯಕ್ಷೆ ಕೊಠಡಿಗೆ ತೆರಳಿದ ನಂತರ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಸೇರಿದಂತೆ ಉಳಿದ ಸದಸ್ಯರು ಬಂದರು. ಬಿಜೆಪಿ ಸದಸ್ಯರು ಸಭೆಗೆ ಬಂದಿದ್ದರೂ ಅವರಲ್ಲಿ ಯಾರೂ ಕೊಠಡಿ ಬಿಟ್ಟು ಹೊರಗೆ ಬರಲಿಲ್ಲ. 

ಮತ್ತೆ ಸಭೆಗೆ ಅವಕಾಶವಿಲ್ಲ: ಸದಸ್ಯರು ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಅಧ್ಯಕ್ಷರ ಕೊಠಡಿಗೆ ಬಂದ ಮುತ್ತಪ್ಪ ಕೋಮಾರ, ಸಭೆ ನಡೆಸುವಂತೆ ವೀಣಾ ಕಾಶಪ್ಪನವರ ಅವರಿಗೆ ಹೇಳಿದರು. ಆದರೆ ಕೋರಂ ಕೊರತೆಯಿಂದ ಈಗಾಗಲೇ ಸಭೆ ಮುಂದೂಡಲಾಗಿದೆ. ನಿಯಮಾವಳಿ ಅನ್ವಯ ಇಂದೇ ಸಭೆ ನಡೆಸಲು ಬರುವುದಿಲ್ಲ ಎಂಬುದನ್ನು ಸ್ಥಳಕ್ಕೆ ಬಂದ ಸಿಇಒ ಸ್ಪಷ್ಟನೆ ನೀಡಿದರು.

’ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ಅನುದಾನದಡಿ ₹4 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಇಂದಿನ ಸಭೆಯಲ್ಲಿ ಅನುಮೋದನೆ ಕೊಡಬೇಕಿತ್ತು. ಇನ್ನೆರಡು ದಿನಗಳಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗಲಿದೆ. ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ನೀತಿ ಸಂಹಿತೆ ಜಾರಿಯಾಗಿ ಸಾಮಾನ್ಯ ಸಭೆ ನಡೆಸಲು ಇನ್ನು ಮೂರು ತಿಂಗಳು ಕಾಯಬೇಕಿದೆ. ಅಭಿವೃದ್ಧಿ ಪ್ರಕ್ರಿಯೆಯೂ ಈ ಅವಧಿಯಲ್ಲಿ ನಿಧಾನಗೊಳ್ಳಲಿದೆ’ ಎಂಬ ಮಾತು ಸದಸ್ಯರಿಂದ ಜಿಲ್ಲಾ ಪಂಚಾಯ್ತಿ ಸಭಾಭವನದ ಪಡಸಾಲೆಯಲ್ಲಿ ಕೇಳಿಬಂದಿತು.

 

ಬಾಕ್ಸ್...

’ಕಾಂಗ್ರೆಸ್‌ನೊಳಗಿನ ಕಚ್ಚಾಟ ಕಾರಣ’ 

’ತಮ್ಮ ನಡುವೆಯೇ ಕಚ್ಚಾಡಿಕೊಂಡು ಕೋರಂ ಕೊರತೆ ಸೃಷ್ಟಿಸಿ ಸಭೆ ಮುಂದೂಡಿರುವ ಕಾಂಗ್ರೆಸ್‌ನವರು ಅಭಿವೃದ್ಧಿ ವಿರೋಧಿಗಳು. ಅವರಿಗೆ ವೈಯಕ್ತಿಕ ಹಿತಾಸಕ್ತಿ ಮುಖ್ಯವಾಗಿದೆಯೇ ಹೊರತು ಮತಹಾಕಿ ಗೆಲ್ಲಿಸಿದ ಜನರ ಹಿತವಲ್ಲ’ ಎಂದು ಬಿಜೆಪಿ ಸದಸ್ಯರಾದ ಮುರನಾಳ ಕ್ಷೇತ್ರದ ಹೂವಪ್ಪ ರಾಠೋಡ ಹಾಗೂ ಸಾವಳಗಿಯ ಶಿವಾನಂದ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಮುಂದೂಡಿದ ನಂತರ ಸುದ್ದಿಗಾರರ ಎದುರು ಆಕ್ರೋಶ ವ್ಯಕ್ತಪಡಿಸಿದ ಇಬ್ಬರೂ ಸದಸ್ಯರು, ’ನಾವು (ಬಿಜೆಪಿಯವರು) ಎಲ್ಲರೂ ಬಂದಿದ್ದೇವೆ. ಅಧ್ಯಕ್ಷರು ಸೌಜನ್ಯಕ್ಕಾದರೂ ಬಂದು ಕರೆಯಲಿಲ್ಲ. ಹಾಗಾಗಿ ಕೊಠಡಿಯಲ್ಲಿಯೇ ಕುಳಿತಿದ್ದೇವೆ’ ಎಂದು ಸಭೆಗೆ ಗೈರು ಹಾಜರಾಗಿದ್ದಕ್ಕೆ ಸಮರ್ಥನೆ ನೀಡಿದರು. ಅಧ್ಯಕ್ಷರಿಗೆ ಸ್ವಂತ ಪಕ್ಷದ ಸದಸ್ಯರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗಿಲ್ಲ ಎಂದು ಲೇವಡಿ ಮಾಡಿದರು.

’ಜಿಲ್ಲೆಯಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಇದೆ. ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಇದೆ. ಜನರಿಗೆ ಉದ್ಯೋಗವಿಲ್ಲ. ತಾಲ್ಲೂಕು ಮಟ್ಟದ ಕಚೇರಿಗಳಲ್ಲಿ ಅಧಿಕಾರಿಗಳೇ ಇಲ್ಲ. ಎಲ್ಲಾ ಕಡೆ ಪ್ರಭಾರಿಗಳೇ ತುಂಬಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮಟ್ಟದ ಆಹಾರವನ್ನು ರಾತ್ರಿ ವೇಳೆ ಪೂರೈಸಲಾಗುತ್ತಿದೆ. ಅದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸುವ ಯೋಜನೆ ಹೊಂದಿದ್ದೆವು. ಆದರೆ ಸಭೆಗೆ ಅವಕಾಶವೇ ಆಗಲಿಲ್ಲ. ಕಾಂಗ್ರೆಸ್‌ನವರು ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಸಭೆ ಬಲಿ ಕೊಟ್ಟರು. ಇನ್ನಾದರೂ ಆತ್ಮಾವಲಕೋನ ಮಾಡಿಕೊಳ್ಳಲಿ’ ಎಂದು ಶಿವಾನಂದ ಪಾಟೀಲ ತರಾಟೆಗೆ ತೆಗೆದುಕೊಂಡರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !