ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ ಅವಶ್ಯ

7
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಅಭಿಮತ

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ ಅವಶ್ಯ

Published:
Updated:
Deccan Herald

ಮಂಡ್ಯ: ‘ಎಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಆರು ತಿಂಗಳು ವೇತನ ಸಹಿತ ಕೈಗಾರಿಕಾ ತರಬೇತಿ ಸಿಗಬೇಕು. ಆಗ ಮಾತ್ರ ಗುಣಮಟ್ಟದ ಎಂಜಿನಿಯರ್‌ಗಳನ್ನು ಸೃಷ್ಟಿಸಲು ಸಾಧ್ಯ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

ಜನತಾ ಶಿಕ್ಷಣ ಟ್ರಸ್ಟ್, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಗುರುವಾರ ನಡೆದ ಮುಖ್ಯದ್ವಾರ ಹಾಗೂ ಸಭಾಂಗಣ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ಇಲ್ಲಿ ಪದವಿ ಪಡೆದವರು ವಿಶ್ವದ ಹಲವು ರಾಷ್ಟ್ರಗಳಲ್ಲಿ ಯಶಸ್ವಿ ಎಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಈ ಕಾಲೇಜಿನ ಕೊಡುಗೆ ದೊಡ್ಡದು. ವಿದ್ಯಾರ್ಥಿಗಳು ಭವಿಷ್ಯ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅಡ್ಡಮಾರ್ಗ ಹಿಡಿಯಬಾರದು. ನೇರವಾಗಿ ಸವಾಲುಗಳನ್ನು ಎದುರಿಸಬೇಕು. ಹಿರಿಯರು, ಸಾಧಕರು ಸವಾಲುಗನ್ನು ಮೆಟ್ಟಿ ನಿಂತು ಮುನ್ನಡೆದಿದ್ದಾರೆ. ಅವರ ಬದುಕು, ಆದರ್ಶ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನವೇ ಯಶಸ್ಸಿನ ಅಸ್ತ್ರವಾಗಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದು ಹೇಳಿದರು.

‘ದೇಶದಲ್ಲಿ ಲಕ್ಷಾಂತರ ಎಂಜಿನಿಯರಿಂಗ್‌ ಕಾಲೇಜುಗಳಿವೆ. ಕೋಟ್ಯಂತರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದು ಎಂಜಿನಿಯರ್‌ ಆಗುತ್ತಾರೆ. ಆದರೆ ಇಂದಿಗೂ ಗುಣಮಟ್ಟದ ಎಂಜಿನಿಯರ್‌ಗಳ ಕೊರತೆ ಇದೆ. ಕ್ಷೇತ್ರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ತರಬೇತಿಯನ್ನು ಪದವಿ ಓದುವ ಹಂತದಲ್ಲೇ ಪಡೆಯಬೇಕು. ಇದರಲ್ಲಿ ಕೈಗಾರಿಕಾ ತರಬೇತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಕೈಗಾರಿಕೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದು ತಮ್ಮ ಜ್ಞಾನದ ಪರದಿಯನ್ನು ವಿಸ್ತರಣೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ ಮಾತನಾಡಿ ‘ಮಂಡ್ಯ ಜಿಲ್ಲೆ ಸುಜಲ, ಸುಫಲ, ಸಸ್ಯ ಶ್ಯಾಮಲ ಹೊಂದಿರುವ ಸಮೃದ್ಧ ನಾಡು. ಇಲ್ಲಿ ಪುಣ್ಯಕೋಟಿ ನೆಲೆಸಿದ್ದಾಳೆ. 40 ವರ್ಷದ ಹಿಂದೆ ಶಂಕರಗೌಡರ ಜೀವಿತಾವಧಿಯಲ್ಲಿ ಇಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಮಾಡಿದ್ದೇನೆ. 40 ವರ್ಷ ಕಳೆದರೂ ಇಲ್ಲಿನ ಸ್ನೇಹ ಸಂಬಂಧ ಶಾಶ್ವತವಾಗಿ ಉಳಿದುಕೊಂಡಿದೆ. ಸ್ವತಂತ್ರ ಪಡೆದ ಸಂದರ್ಭದಲ್ಲಿ ಜಿಲ್ಲೆಯ ಸಾಕ್ಷರತೆ ಕೆಳ ಸ್ಥಾನದಲ್ಲಿತ್ತು. ಅನೇಕ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಿದ ಪರಿಣಾಮ ಉತ್ತಮ ಸ್ಥಾನ ಪಡೆಯುವಂತಾಗಿದೆ. ಜಿಲ್ಲೆಯಲ್ಲಿ ಶಿಕ್ಷಣದ ಕ್ರಾಂತಿಯೇ ನಡೆದಿರುವುದು ಸಂತಸದ ವಿಚಾರ’ ಎಂದರು.‌

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ‘ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರದು ಅದ್ಬುತ ವ್ಯಕ್ತಿತ್ವ. ಅವರು ಸೇವೆ ಮಾಡದ ಕ್ಷೇತ್ರವಿಲ್ಲ. ಶಿಕ್ಷಣ, ರಾಜಕೀಯ, ಆಡಳಿತ, ಕಲೆ, ಸಾಹಿತ್ಯ ಎಲ್ಲಾ ವಿಭಾಗದಲ್ಲಿ ಸೇವೆ ಮಾಡಿ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಅವರು ಕೊಟ್ಟಿರುವ ಕೊಡುಗೆಗಳು ಮಾನವ ಸಮಾಜಕ್ಕೆ ಅನುಕೂಲವಾಗುತ್ತಿವೆ. ಅವರು ಕಟ್ಟಿದ ಸಂಸ್ಥೆಗಳನ್ನು ಎಚ್.ಡಿಚೌಡಯ್ಯ ಅವರು ಸಾಕಷ್ಟು ವಿಶಾಲವಾಗಿ ಬೆಳೆಸಿದ್ದಾರೆ. ಅವರು ಆರೋಗ್ಯ ಉತ್ತಮವಾಗಿರಲಿ, ಶಿಕ್ಷಣ ಸಂಸ್ಥೆ ಹೆಚ್ಚು ಎತ್ತರಕ್ಕೆ ಬೆಳೆಯಲಿ’ ಎಂದರು.

ಕರ್ನಾಟಕ ಈಜು ಸಂಸ್ಥೆ ಉಪಾಧ್ಯಕ್ಷ ಟಿ.ಡಿ.ವಿಜಯ ರಾಘವನ್, ಪಿಇಟಿ ಅಧ್ಯಕ್ಷ ಡಾ.ಎಚ್.ಡಿ.ಚೌಡಯ್ಯ, ಕಾರ್ಯದರ್ಶಿ ಎಚ್.ಹೊನ್ನಪ್ಪ, ನಿರ್ದೇಶಕ ಡಾ.ರಾಮಲಿಂಗಯ್ಯ, ಪ್ರಾಚಾರ್ಯ ಡಾ.ಎಚ್.ವಿ.ರವೀಂದ್ರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !