ನವೋದಯ ವಿದ್ಯಾಲಯ: ಸರ್ವೆಗೆ 5 ದಿನದ ಗಡುವು

7
ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

ನವೋದಯ ವಿದ್ಯಾಲಯ: ಸರ್ವೆಗೆ 5 ದಿನದ ಗಡುವು

Published:
Updated:
Deccan Herald

ಕೋಲಾರ: ‘ಜವಾಹರ್‌ ನವೋದಯ ವಿದ್ಯಾಲಯಕ್ಕೆ ಮೀಸಲಿಟ್ಟಿರುವ ಜಾಗವನ್ನು 5 ದಿನಗಳೊಳಗೆ ಸರ್ವೆ ಮಾಡಿಸಿ ಗಡಿ ಗುರುತಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜವಾಹರ್‌ ವಿದ್ಯಾಲಯ ಜಾಗದ ಸರ್ವೆ ಸಂಬಂಧ ಇಲ್ಲಿ ಗುರುವಾರ ನಡೆದ ಕಂದಾಯ ಮತ್ತು ಸರ್ವೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ನವೋದಯ ವಿದ್ಯಾಲಯಕ್ಕೆ ಈಗಾಗಲೇ 2 ಕಡೆ ಜಾಗ ಗುರುತಿಸಿ ಸರ್ವೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಈವರೆಗೂ ಆ ಕೆಲಸ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಾಲ್ಲೂಕಿನ ವಕ್ಕಲೇರಿ ಬಳಿ ಸರ್ವೆ ನಂಬರ್ 259ರಲ್ಲಿ 19 ಎಕರೆ ಹಾಗೂ ಸರ್ವೆ ನಂಬರ್‌ 21ರಲ್ಲಿ 25 ಎಕರೆ ಜಾಗ ಗುರುತಿಸಲಾಗಿದೆ. ಜಾಗ ಮಂಜೂರು ಮಾಡುವಂತೆ ಸರ್ಕಾರದಿಂದ ಆದೇಶವಾಗಿದೆ. ಆದರೆ, ಒಂದೇ ಕಡೆ 30 ಎಕರೆ ಜಾಗ ಲಭ್ಯವಾಗದ ಕಾರಣ ಎರಡೂ ಸರ್ವೆ ನಂಬರ್‌ಗಳಲ್ಲಿನ ಜಾಗವನ್ನು ಮಂಜೂರು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ವಿವರಿಸಿದರು.

‘ಎರಡೂ ಸರ್ವೆ ನಂಬರ್‌ಗಳಲ್ಲಿ ಜಾಗ ಲಭ್ಯವಿರುವ ಸಂಗತಿಯನ್ನು ವಿದ್ಯಾಲಯದ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುತ್ತಾರೆ. ಜಿಲ್ಲಾಡಳಿತದಿಂಲೂ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಜಿಲ್ಲೆಯಲ್ಲಿ ನವೋದಯ ವಿದ್ಯಾಲಯ ಆರಂಭವಾಗಿ 2 ವರ್ಷವಾಗಿದ್ದು, 6ರಿಂದ 12ನೇ ತರಗತಿವರೆಗೆ ತರಗತಿಗಳು ನಡೆಯುತ್ತಿವೆ’ ಎಂದು ಹೇಳಿದರು.

ಡಯಟ್‌ ಕಟ್ಟಡ: ‘ವಿದ್ಯಾಲಯದಲ್ಲಿ ಸದ್ಯ 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ತಾತ್ಕಾಲಿಕವಾಗಿ ಜಿಲ್ಲಾ ಕೇಂದ್ರದ ಹೊರವಲಯದ ಚಿಕ್ಕಹಸಾಳ ಗ್ರಾಮದ ಬಳಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌) ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷ ಮಕ್ಕಳ ದಾಖಲಾತಿ ಹೆಚ್ಚಲಿದ್ದು, ಶೀಘ್ರವೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಬೇಗನೆ ಸರ್ವೆ ಕಾರ್ಯ ಪೂರ್ಣಗೊಳಿಸಿ ವರದಿ ನೀಡಿ’ ಎಂದು ಆದೇಶಿಸಿದರು.

ಬೇಲಿ ನಿರ್ಮಿಸುತ್ತೇವೆ: ‘ವಿದ್ಯಾಲಯಕ್ಕೆ 2 ಕಡೆ ಜಾಗ ಗುರುತಿಸಲಾಗಿದೆ. ಒಂದೇ ಕಡೆ 30 ಎಕರೆ ಜಾಗ ಮಂಜೂರು ಮಾಡಿದರೆ ಸರ್ಕಾರ ನೀಡಿರುವ ನಕ್ಷೆಯಂತೆ ಕಟ್ಟಡ ನಿರ್ಮಿಸಲು ಅನುಕೂಲವಾಗುತ್ತದೆ. ಕೆಲ ಖಾಸಗಿ ವ್ಯಕ್ತಿಗಳು ಜಾಗ ಒತ್ತುವರಿ ಮಾಡಿ ಬೆಳೆ ಬೆಳೆದಿದ್ದಾರೆ. ಗಡಿ ಗುರುತಿಸಿಕೊಟ್ಟರೆ ಬೇಲಿ ನಿರ್ಮಿಸಿಕೊಳ್ಳುತ್ತೇವೆ’ ಎಂದು ಜವಾಹರ್‌ ನವೋದಯ ವಿದ್ಯಾಲಯದ ಪ್ರಾಂಶುಪಾಲ ಎ.ಸಿ.ಎಸ್.ರೆಡ್ಡಿ ಹೇಳಿದರು.

‘ಡಯಟ್ ಕೇಂದ್ರದಲ್ಲಿ ತರಗತಿಗಳು ನಡೆಯುತ್ತಿದ್ದು, ಖಾಲಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ಈಗ ಮಕ್ಕಳ ದಾಖಲಾತಿ ಹೆಚ್ಚಿರುವುದರಿಂದ ಸ್ಥಳಾವಕಾಶ ಇಲ್ಲವಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳಿಲ್ಲ. ಇತ್ತೀಚಿಗೆ 2 ಶೌಚಾಲಯ ನಿರ್ಮಿಸಿರುವುದರಿಂದ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ’ ಎಂದು ತಿಳಿಸಿದರು.

ತಹಶೀಲ್ದಾರ್ (ಪ್ರಭಾರ) ನಾಗವೇಣಿ, ಜಿಲ್ಲಾ ಸರ್ವೆ ಅಧಿಕಾರಿ ಗೋಪಾಲಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !