ಪೊಲೀಸ್ ಕಮಿಷನರ್‌ ಫೋನ್‌ ಇನ್‌ ಕಾರ್ಯಕ್ರಮ: ಸಿಟಿ ಬಸ್‌ ವಿರುದ್ಧ ದೂರುಗಳ ಮಹಾಪೂರ

7

ಪೊಲೀಸ್ ಕಮಿಷನರ್‌ ಫೋನ್‌ ಇನ್‌ ಕಾರ್ಯಕ್ರಮ: ಸಿಟಿ ಬಸ್‌ ವಿರುದ್ಧ ದೂರುಗಳ ಮಹಾಪೂರ

Published:
Updated:
Deccan Herald

ಮಂಗಳೂರು: ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ಶುಕ್ರವಾರ ನಡೆಸಿದ ನೇರ ಫೋನ್‌ ಇನ್‌ ಕಾರ್ಯಕ್ರಮವೂ ನಗರ ಸಾರಿಗೆ ಖಾಸಗಿ ಬಸ್‌ ಸೇವೆಯಲ್ಲಿನ ಲೋಪಗಳು, ಸಿಬ್ಬಂದಿಯ ಆಟಾಟೋಪದ ಸುತ್ತವೇ ಗಿರಕಿ ಹೊಡೆಯಿತು. ಕಾರ್ಯಕ್ರಮಕ್ಕೆ ಕರೆ ಮಾಡಿದ ಶೇಕಡ 80ಕ್ಕೂ ಹೆಚ್ಚು ಮಂದಿ ಬಸ್‌ ಪ್ರಯಾಣಿಕರಿಗೆ ಟಿಕೆಟ್‌ ನೀಡದಿರುವುದು, ಪರವಾನಗಿ ಷರತ್ತು ಉಲ್ಲಂಘನೆ, ಸಿಬ್ಬಂದಿಯ ದುರ್ವರ್ತನೆ ಕುರಿತೇ ದೂರು ಹೇಳಿದರು.

ಆಕಾಶಭವನ, ಕಂಕನಾಡಿ, ಶಿಬರೂರು, ಕಾವೂರು, ಕುಲಶೇಖರ, ತಾರೆತೋಟ ಸೇರಿದಂತೆ ಹಲವು ಪ್ರದೇಶಗಳಿಂದ ಕರೆ ಮಾಡಿದ ನಾಗರಿಕರು ಖಾಸಗಿ ಬಸ್‌ ಸಿಬ್ಬಂದಿ ವಿರುದ್ಧ ದೂರು ಹೇಳಿದರು. ‘ಬಹುತೇಕ ಬಸ್‌ಗಳಲ್ಲಿ ಟಿಕೆಟ್‌ ನೀಡುವುದಿಲ್ಲ. ಟಿಕೆಟ್‌ ಕೇಳಿದರೆ ಬಸ್ ನಿರ್ವಾಹಕರು ನಿಂದಿಸುತ್ತಾರೆ. ಕೆಲವರು ಬಸ್‌ನಿಂದ ಇಳಿಯುವಂತೆ ಬೆದರಿಸುತ್ತಾರೆ. ಕೆಲವು ಬಸ್‌ಗಳಲ್ಲಿ ಫುಟ್‌ಬೋರ್ಡ್‌ ಎತ್ತರವನ್ನು ಇನ್ನೂ ಕಡಿಮೆ ಮಾಡಿಲ್ಲ’ ಎಂಬ ದೂರುಗಳು ಹೆಚ್ಚು ಮಂದಿಯಿಂದ ಬಂದವು.

‘ಕುಲಶೇಖರ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳಲ್ಲಿ ಟಿಕೆಟ್ ನೀಡುವುದಿಲ್ಲ. ಟಿಕೆಟ್‌ ಕೇಳಿದರೆ ಬಸ್‌ನಿಂದ ಇಳಿಯುವಂತೆ ಸಿಬ್ಬಂದಿ ಬೆದರಿಸುತ್ತಾರೆ. ನಾವು ಹಣ ಪಡೆಯುವುದಷ್ಟೇ, ಟಿಕೆಟ್‌ ನೀಡುವುದಿಲ್ಲ ಎಂದು ಹೇಳುತ್ತಾರೆ’ ಎಂದು ಕುಲಶೇಖರದಿಂದ ಕರೆ ಮಾಡಿದ್ದ ಹಿರಿಯ ನಾಗರಿಕರೊಬ್ಬರು ದೂರಿದರು.

‘ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಟಿಕೆಟ್‌ ಕೊಡುತ್ತಾರೆ. ಆದರೆ, ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ನೀಡುವುದಿಲ್ಲ. ಟಿಕೆಟ್ ಕೇಳಿದರೆ ಬಸ್‌ ಸಿಬ್ಬಂದಿ ಕೆಟ್ಟದಾಗಿ ವರ್ತಿಸುತ್ತಾರೆ. ಕೆಲವು ಬಸ್‌ಗಳನ್ನು ಮನಸ್ಸಿಗೆ ಬಂದಂತೆ ಓಡಿಸಲಾಗುತ್ತದೆ. ಕೆಲವೊಮ್ಮೆ ಸಮಯದ ಪ್ರಕಾರ ಬಸ್‌ ಓಡಿಸುವುದೇ ಇಲ್ಲ’ ಎಂದು ಶಿಬರೂರಿನ ವ್ಯಕ್ತಿಯೊಬ್ಬರು ಹೇಳಿದರು.

ಕಠಿಣ ಕ್ರಮದ ಭರವಸೆ

ದೂರುಗಳ ಕುರಿತು ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಕಮಿಷನರ್, ‘ಈ ಹಿಂದೆ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾಗಿರುವ ಟಿಕೆಟ್‌ ನೀಡದ ಬಸ್‌ಗಳ ಪರವಾನಗಿ ರದ್ದು ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಶಿಫಾರಸು ಮಾಡಲಾಗಿದೆ. ಅವರಿಂದ ಯಾವುದೇ ಕ್ರಮ ಆಗಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಷರತ್ತು ಉಲ್ಲಂಘಿಸುತ್ತಿರುವ ಬಸ್‌ಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು’ ಎಂದು ತಿಳಿಸಿದರು.

ದೊಡ್ಡ ರಸ್ತೆಗಳು ಸಂಧಿಸುವ ಜಂಕ್ಷನ್‌ಗಳಲ್ಲಿ 50ರಿಂದ 100 ಮೀಟರ್‌ವರೆಗೆ ವಾಹನ ನಿಲುಗಡೆ ನಿಷೇಧಿಸುವಂತೆ ಮತ್ತು ಬಸ್‌ ಬೇಗಳಲ್ಲಿ ಇತರೆ ವಾಹನಗಳು ಪ್ರವೇಶಿಸದಂತೆ ಹಳದಿ ಬಣ್ಣದ ಪಟ್ಟಿ ಹಾಕಲು ಕುಲಶೇಖರ ನಿವಾಸಿ ಅನಿಲ್‌ ಸಲಹೆ ನೀಡಿದರು. ಈ ಕುರಿತು ಅಧ್ಯಯನ ನಡೆಸಿ, ತೀರ್ಮಾನಕ್ಕೆ ಬರುವುದಾಗಿ ಕಮಿಷನರ್ ಭರವಸೆ ನೀಡಿದರು.

ಮೀನಿನ ಲಾರಿಗಳ ಸಮಸ್ಯೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೀನು ಸಾಗಣೆ ಲಾರಿಗಳಿಂದ ಸೋರಿಕೆಯಾಗುವ ನೀರಿನಿಂದ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕೊಡಿಯಾಲಬೈಲ್‌ ನಿವಾಸಿಯೊಬ್ಬರು ದೂರಿದರು. ನಗರ ಪ್ರದೇಶ ಮತ್ತು ಹೆದ್ದಾರಿಗಳಲ್ಲಿ ಗುಜರಿ ವಸ್ತು, ಮರಳು, ಸಿಮೆಂಟ್‌, ಜಲ್ಲಿ ಸಾಗಿಸುವ ಲಾರಿಗಳು ಹೊದಿಕೆ ಅಳವಡಿಸಿಕೊಳ್ಳುವುದನ್ನು ಕಡ್ಡಾಯ ಮಾಡುವಂತೆ ಮಣ್ಣಗುಡ್ಡೆಯ ನಿವಾಸಿಯೊಬ್ಬರು ಒತ್ತಾಯಿಸಿದರು.

‘ನೆಹರೂ ಮೈದಾನದಿಂದ ರೈಲ್ವೆ ನಿಲ್ದಾಣದವರೆಗಿನ ಮಾರ್ಗದಲ್ಲಿ ಜೇಬುಗಳ್ಳರ ಹಾವಳಿ ಹೆಚ್ಚಿದೆ. ಭಾನುವಾರದ ದಿನಗಳಂದು ಕಳ್ಳರು ಮಾರುಕಟ್ಟೆ ಪ್ರದೇಶಕ್ಕೆ ಬಂದು ಕೂಲಿ ಕಾರ್ಮಿಕರ ಹಣ ಕದಿಯುತ್ತಾರೆ’ ಎಂಬ ದೂರು ಬಂತು. ಪ್ರತ್ಯೇಕ ಕಾರ್ಯಾಚರಣೆ ನಡೆಸುವುದಾಗಿ ಸುರೇಶ್‌ ತಿಳಿಸಿದರು.

ಡಿಸಿಪಿ ಉಮಾ ಪ್ರಶಾಂತ್‌, ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಶಿವಪ್ರಕಾಶ್, ಸಬ್‌ ಇನ್‌ಸ್ಪೆಕ್ಟರ್ ಕಮಲಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !