ಆಮ್ಲಜನಕ ಕೊರತೆ: ಮೀನುಗಳ ಸಾವಿಗೆ ಕಾರಣ

7
ಟೇಕಲ್‌ ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯ ಪುಷ್ಕರಣಿಯಲ್ಲಿ ದುರಂತ

ಆಮ್ಲಜನಕ ಕೊರತೆ: ಮೀನುಗಳ ಸಾವಿಗೆ ಕಾರಣ

Published:
Updated:
Deccan Herald

ಕೋಲಾರ: ನಗರದ ಟೇಕಲ್‌ ರಸ್ತೆ ಬಳಿಯ ವೇಣುಗೋಪಾಲಸ್ವಾಮಿ ದೇವಾಲಯದ ಪುಷ್ಕರಣಿಯಲ್ಲಿ 48 ತಾಸಿನಲ್ಲಿ ಸುಮಾರು 8 ಸಾವಿರ ಮೀನುಗಳು ಮೃತಪಟ್ಟಿದ್ದು, ಮೀನುಗಳ ಸಾವಿಗೆ ಆಮ್ಲಜನಕ ಕೊರತೆ ಕಾರಣ ಎಂದು ಗೊತ್ತಾಗಿದೆ.

2017ರ ಅಂತ್ಯದಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದರಿಂದ ವೇಣುಗೋಪಾಲಸ್ವಾಮಿ ದೇವಾಲಯ ಪುಷ್ಕರಣಿ ತುಂಬಿತ್ತು. ಬಳಿಕ ಮೀನುಗಾರಿಕೆ ಇಲಾಖೆ ವತಿಯಿಂದ ಕಾಟ್ಲಾ, ರೋಹು, ಮೃಗಾಲ್‌, ಹುಲ್ಲು ಗೆಂಡೆ, ಸಾಮಾನ್ಯ ಗೆಂಡೆ ಮತ್ತು ಬೆಳ್ಳಿ ಗೆಂಡೆ ತಳಿಯ 10 ಸಾವಿರಕ್ಕೂ ಹೆಚ್ಚು ಮೀನು ಮರಿಗಳನ್ನು ಪುಷ್ಕರಣಿಗೆ ಬಿಡಲಾಗಿತ್ತು. ಮೀನು ಮರಿಗಳು 5 ಕೆ.ಜಿ ಗಾತ್ರವರೆಗೆ ಬೆಳೆದಿದ್ದವು.

ಪುಷ್ಕರಣಿ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಸೆಪ್ಟೆಂಬರ್‌ ತಿಂಗಳಲ್ಲಿ ಗೌರಿ–ಗಣೇಶ ಹಬ್ಬ ಆಚರಿಸಿ ಗಣೇಶ ಮೂರ್ತಿಗಳನ್ನು ಈ ಪುಷ್ಕರಣಿಯಲ್ಲಿ ವಿಸರ್ಜನೆ ಮಾಡಿದ್ದರು. ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಯುಕ್ತ ಬಣ್ಣ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ಪುಷ್ಕರಣಿ ನೀರು ಕಲುಷಿತಗೊಂಡಿತ್ತು.

ಮತ್ತೊಂದೆಡೆ ಸ್ಥಳೀಯರು ಹಾಗೂ ಸುತ್ತಮುತ್ತಲ ಹೋಟೆಲ್‌ಗಳ ಕೆಲಸಗಾರರು ಪುಷ್ಕರಣಿಯಲ್ಲಿ ಕಸ ಸುರಿದಿರುವ ಕಾರಣ ನೀರು ಕಲುಷಿತಗೊಂಡು ಹಸಿರು ಬಣ್ಣಕ್ಕೆ ತಿರುಗಿತ್ತು. ತ್ಯಾಜ್ಯ ಹಾಗೂ ವಿಷಕಾರಿ ರಾಸಾಯನಿಕಗಳಿಂದ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೀನುಗಳ ಉಸಿರಾಟಕ್ಕೆ ಸಮಸ್ಯೆಯಾಗಿ ಗುರುವಾರ ಸಂಜೆಯಿಂದ ಸಾಯಲಾರಂಭಿಸಿದ್ದವು.

ನಗರಸಭೆಯು ಈ ಪುಷ್ಕರಣಿ ನಿರ್ವಹಣೆ ಮಾಡುತ್ತಿದ್ದು, ಮೀನುಗಳ ಮಾರಣಹೋಮದ ಸಂಬಂಧ ಸಾರ್ವಜನಿಕರು ನಗರಸಭೆ ಸಹಾಯವಾಣಿಗೆ ಶುಕ್ರವಾರ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೂ ನಗರಸಭೆಯ ಯಾವುದೇ ಅಧಿಕಾರಿ ಪುಷ್ಕರಣಿಗೆ ಭೇಟಿ ನೀಡಿರಲಿಲ್ಲ.

ಮೀನುಗಳ ತೆರವು: ಮೀನುಗಳ ಸಾವಿನ ಸುದ್ದಿ ತಿಳಿದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶನಿವಾರ ಪುಷ್ಕರಣಿ ಪರಿಶೀಲಿಸಿದರು. ಆ ವೇಳೆಗಾಗಲೇ ಪುಷ್ಕರಣಿಯಲ್ಲಿನ ಶೇ 90ರಷ್ಟು ಮೀನುಗಳು ಮೃತಪಟ್ಟು ನೀರಿನ ಮೇಲೆ ತೇಲುತ್ತಿದ್ದವು.

ಸಿಬ್ಬಂದಿಯು ದೋಣಿಗಳ ಸಹಾಯದಿಂದ ಪುಷ್ಕರಣಿಗೆ ಇಳಿದು ಸತ್ತ ಮೀನುಗಳನ್ನು ಬಲೆ ಮೂಲಕ ಹೊರ ತೆಗೆದರು. ಅಲ್ಲದೇ, ತ್ಯಾಜ್ಯ ತೆರವುಗೊಳಿಸಿದರು. ಕಲುಷಿತ ನೀರು ದುರ್ನಾತ ಬೀರುತ್ತಿದ್ದು, ಸಿಬ್ಬಂದಿಯು ನೀರಿಗೆ ಉಪ್ಪು ಮತ್ತು ಸುಣ್ಣದ ಪುಡಿ ಸುರಿದರು. ಸತ್ತ ಮೀನುಗಳನ್ನು ಟ್ರ್ಯಾಕ್ಟರ್‌ನಲ್ಲಿ ನಗರದ ಹೊರವಲಯಕ್ಕೆ ಸಾಗಿಸಿ ಗುಂಡಿ ತೆಗೆದು ಹೂಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !