ಜಿಲ್ಲೆಗೆ ಬಂದ ಜಲಧಾರೆ: ಜನರ ಸಂಭ್ರಮ

7
ಕೆ.ಸಿ ವ್ಯಾಲಿ ಯೋಜನೆ: ನೀರು ಹರಿವು ಪುನರಾರಂಭ

ಜಿಲ್ಲೆಗೆ ಬಂದ ಜಲಧಾರೆ: ಜನರ ಸಂಭ್ರಮ

Published:
Updated:
Deccan Herald

ಕೋಲಾರ: ಕೋರಮಂಗಲ– ಚಲ್ಲಘಟ್ಟ (ಕೆ.ಸಿ ವ್ಯಾಲಿ) ಯೋಜನೆಗೆ ಎದುರಾಗಿದ್ದ ಕಾನೂನಾತ್ಮಕ ತೊಡಕು ನಿವಾರಿಸಿ ನೀರು ಹರಿಸುವುದನ್ನು ಪುನರಾರಂಭಿಸಿದ ಬಳಿಕ ಜಿಲ್ಲೆಗೆ ಶನಿವಾರ ಸುಮಾರು 130 ಎಂಎಲ್‌ಡಿ ನೀರು ಹರಿದು ಬಂದಿದ್ದು, ಜನರಲ್ಲಿ ಸಂಭ್ರಮ ಮನೆ ಮಾಡಿದೆ.

ಬೆಂಗಳೂರಿನಿಂದ ಕಾಲುವೆ ಮೂಲಕ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ನೀರು ಹರಿದು ಬರುತ್ತಿರುವುದನ್ನು ಕಂಡು ರಾಜಕೀಯ ಮುಖಂಡರು, ಸಾರ್ವಜನಿಕರು ಹಾಗೂ ರೈತರು ಸಂತಸ ವ್ಯಕ್ತಪಡಿಸಿದರು. ಕೆರೆಗೆ ನೀರು ಬರುತ್ತಿರುವ ಸುದ್ದಿ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಕೆರೆಯ ಬಳಿ ಬಂದರು. ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ನೀರಿಗಿಳಿದು ಸಂಭ್ರಮಿಸಿದರು.

ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಪೂರ್ಣಗೊಂಡ ಬಳಿಕ ಜೂನ್‌ 2ರಿಂದ ಜುಲೈ 17ರವರೆಗೆ ತಾಲ್ಲೂಕಿನ ಲಕ್ಷ್ಮೀಸಾಗರ, ಉದ್ದಪ್ಪನಹಳ್ಳಿ, ಜೋಡಿ ಕೃಷ್ಣಾಪುರ, ನರಸಾಪುರ ಹಾಗೂ ದೊಡ್ಡವಲ್ಲಭಿ ಕೆರೆಗೆ ನೀರು ಹರಿಸಲಾಗಿತ್ತು. ಜುಲೈ 17ರಂದು ಲಕ್ಷ್ಮೀಸಾಗರ ಕೆರೆ ಹಾಗೂ ಹಾಗೂ ಕಾಲುವೆಯ ನೀರಿನಲ್ಲಿ ನೊರೆ ಕಾಣಿಸಿಕೊಂಡಿತ್ತು.

ಬುರುಗು ಮಿಶ್ರಿತ ನೀರಿನಿಂದ ಲಕ್ಷ್ಮೀಸಾಗರ ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು. ಈ ಸಂಬಂಧ ಸ್ಥಳೀಯರು ಸಣ್ಣ ನೀರಾವರಿ ಇಲಾಖೆ ಹಾಗೂ ಕೆ.ಸಿ ವ್ಯಾಲಿ ಯೋಜನೆ ಅಧಿಕಾರಿಗಳಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಜುಲೈ 18ರಂದು ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿತ್ತು.

ಆ ನಂತರ ನೀರಾವರಿ ಹೋರಾಟಗಾರರು ಯೋಜನೆಯ ನೀರಿನ ಶುದ್ಧತೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಹೈಕೋರ್ಟ್‌ ನೀರಿನ ಶುದ್ಧತೆ ಖಾತ್ರಿಪಡಿಸುವವರೆಗೂ ಯೋಜನೆಯಿಂದ ಜಿಲ್ಲೆಗೆ ನೀರು ಹರಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಅರ್ಜಿ ಸಂಬಂಧ ಸುದೀರ್ಘ ವಿಚಾರಣೆ ನಡೆದು ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ಆದೇಶ ಮಾರ್ಪಾಡು ಮಾಡಿ ಯೋಜನೆಯಿಂದ ನೀರು ಹರಿಸುವಂತೆ ಸೆ.28ರಂದು ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪುನಃ ನೀರು ಹರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !