ನಾರಾಯಣಸ್ವಾಮಿ ಅಧ್ಯಕ್ಷ, ವೆಂಕಟೇಶ್ ಉಪಾಧ್ಯಕ್ಷ

7
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಸಾರಥಿಗಳ ಆಯ್ಕೆಯಲ್ಲಿ ಶಾಸಕರಾದ ಸುಧಾಕರ್ ಮೇಲುಗೈ, ವಿ.ಮುನಿಯಪ್ಪನಿಗೂ ‘ಜೈ’

ನಾರಾಯಣಸ್ವಾಮಿ ಅಧ್ಯಕ್ಷ, ವೆಂಕಟೇಶ್ ಉಪಾಧ್ಯಕ್ಷ

Published:
Updated:
Deccan Herald

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಹಿರಿಯಣ್ಣನಹಳ್ಳಿ ನಾರಾಯಣಸ್ವಾಮಿ ಅಧ್ಯಕ್ಷರಾಗಿ, ಶಿಡ್ಲಘಟ್ಟ ತಾಲ್ಲೂಕು ಬೆಳ್ಳೂಟಿ ವೆಂಕಟೇಶ್ ಅವರು ಉಪಾಧ್ಯಕ್ಷರಾಗಿ ಶನಿವಾರ ಅವಿರೋಧ ಆಯ್ಕೆಯಾದರು.

ಶನಿವಾರ ನಿಗದಿಯಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಪೂರ್ವಭಾವಿಯಾಗಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಮತ್ತು ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರ ನಡುವೆ ನಡೆದ ಒಪ್ಪಂದದಿಂದಾಗಿ ಎಪಿಎಂಸಿ ನೂತನ ಸಾರಥಿಗಳ ಆಯ್ಕೆ ಯಾವುದೇ ಅಸಮಾಧಾನಗಳಿಲ್ಲದೆ ಸಮನ್ವಯದಿಂದ ನಡೆಯಿತು.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 8 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 5 ನಿರ್ದೇಶಕರು ಮತ್ತು ಸರ್ಕಾರದ 3 ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಂತೆ ಒಟ್ಟು 16 ನಿರ್ದೇಶಕರನ್ನು ಆಡಳಿತ ಮಂಡಳಿ ಹೊಂದಿದೆ.

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮತದಾನ ನಡೆದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಅವರ ಪೈಕಿ ಶಾಸಕರ ಡಾ.ಕೆ.ಸುಧಾಕರ್ ಅವರ ಬೆಂಬಲಿಗರಾದ ಮಂಡಿಕಲ್ಲು ಕ್ಷೇತ್ರದ ನಿರ್ದೇಶಕ ಎಚ್‌.ವಿ.ಗೋವಿಂದಸ್ವಾಮಿ ಅವರು ಅಧ್ಯಕ್ಷರಾಗಿ, ರೆಡ್ಡಿಗೊಲ್ಲವಾರಹಳ್ಳಿ ಕ್ಷೇತ್ರದ ನಿರ್ದೇಶಕ ವೆಂಕಟಕೃಷ್ಣಪ್ಪ (ಜಾಲಪ್ಪ) ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಅಧ್ಯಕ್ಷ, ಉಪಾಧ್ಯಕ್ಷರ 20 ತಿಂಗಳ ಅಧಿಕಾರಾವಧಿ ಕೊನೆಗೊಂಡಿದ್ದರಿಂದ ಎರಡನೇ ಅವಧಿಯ ಆಯ್ಕೆಗೆ ಚುನಾವಣೆ ಘೋಷಣೆಯಾಗಿತ್ತು. ಎಪಿಎಂಸಿ ಚುಕ್ಕಾಣಿ ಹಿಡಿಯಲು ಶಾಸಕರಾದ ಸುಧಾಕರ್ ಮತ್ತು ಮುನಿಯಪ್ಪ ಅವರ ನಡುವೆ ಪೈಪೋಟಿ ಏರ್ಪಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ಶನಿವಾರ ಬೆಳಿಗ್ಗೆ ನಗರ ಹೊರವಲಯದ ಪರಿವೀಕ್ಷಣಾ ಮಂದಿರದಲ್ಲಿ ಶಾಸಕ ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರೆಲ್ಲರೂ ಸಭೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯ ತೀರ್ಮಾನ ಕೈಗೊಂಡರು.

ಬಳಿಕ ನಿರ್ದೇಶಕರೆಲ್ಲರೂ ಎಪಿಎಂಸಿ ಕಚೇರಿಗೆ ಬಂದು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಚುನಾವಣಾಧಿಕಾರಿ ನರಸಿಂಹಮೂರ್ತಿ, ಸಹಾಯಕ ಚುನಾವಣಾಧಿಕಾರಿ ಅಜೀತ್‌ ಕುಮಾರ್ ರೈ ಅವರು ಅವಿರೋಧ ಆಯ್ಕೆಯಾದವರ ಹೆಸರು ಘೋಷಿಸಿದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿದರು.

ಈ ಚುನಾವಣೆಯ ಫಲಿತಾಂಶ ನೋಡಿದರೆ ಸುಧಾಕರ್ ಅವರು ಪುನಃ ಎಪಿಎಂಸಿಯಲ್ಲಿ ಮೇಲುಗೈ ಸಾಧಿಸಿದರೆ, ಮುನಿಯಪ್ಪ ಅವರ ಅಭ್ಯರ್ಥಿಗೆ ಕೂಡ ಆಡಳಿತ ಮಂಡಳಿ ನಿರ್ದೇಶಕರೆಲ್ಲರೂ ‘ಜೈ’ ಎಂದಿದ್ದು ಸ್ಪಷ್ಟವಾಗಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯಣ್ಣನಹಳ್ಳಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್ ಅವರನ್ನು ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಸುಧಾಕರ್, ‘ಜಿಲ್ಲಾ ಕೇಂದ್ರದ ಮಾರುಕಟ್ಟೆಯನ್ನು ರೈತಸ್ನೇಹಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲ ನಿರ್ದೇಶಕರು ಶ್ರಮಿಸಬೇಕು. ಅದಕ್ಕೆ ಅಗತ್ಯ ಸಹಕಾರ ನಾನು ನೀಡುತ್ತೇನೆ. ಮುಖ್ಯವಾಗಿ ಇವತ್ತು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಆಟಾಟೋಪಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಜತೆಗೆ ಮೂಲಸೌಕರ್ಯ ಕಲ್ಪಿಸಬೇಕಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್‌.ಕೇಶವರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !