ವೃತ್ತಿ ಕೌಶಲ– ತರಬೇತಿ ಕೊರತೆಯಿಂದ ನಿರುದ್ಯೋಗ: ಸಚಿವ ಕೃಷ್ಣ ಬೈರೇಗೌಡ

7
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯ

ವೃತ್ತಿ ಕೌಶಲ– ತರಬೇತಿ ಕೊರತೆಯಿಂದ ನಿರುದ್ಯೋಗ: ಸಚಿವ ಕೃಷ್ಣ ಬೈರೇಗೌಡ

Published:
Updated:
Deccan Herald

ಕೋಲಾರ: ‘ವೃತ್ತಿ ಕೌಶಲ ಮತ್ತು ತರಬೇತಿ ಕೊರತೆಯಿಂದ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ಜಿಲ್ಲಾ ನಿರ್ಮಿತಿ ಕೇಂದ್ರ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಇಲ್ಲಿ ನಿರ್ಮಿಸಿರುವ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಒಂದೆಡೆ ವೃತ್ತಿಪರ ಕಾರ್ಮಿಕರ ಕೊರತೆಯಿದೆ. ಮತ್ತೊಂದೆಡೆ ಯುವಕರು ಕೆಲಸ ಸಿಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ವೃತ್ತಿ ಕೌಶಲ ಮತ್ತು ತರಬೇತಿ ಕೊರತೆ ಇದಕ್ಕೆ ಮುಖ್ಯ ಕಾರಣ’ ಎಂದು ತಿಳಿಸಿದರು.

‘ಕಟ್ಟಡ ಕಾರ್ಮಿಕರು, ಎಲೆಕ್ಟ್ರಿಷಿಯನ್‌ಗಳು ಹಾಗೂ ಬಡಗಿಗಳಿಗೆ ತರಬೇತಿ ನೀಡುತ್ತಿರುವುದರಿಂದ ಅವರ ವೃತ್ತಿ ಕೌಶಲ ಹೆಚ್ಚಿ ಉತ್ತಮ ಉದ್ಯೋಗಾವಕಾಶ ಸಿಗುತ್ತವೆ. ಅಲ್ಲದೇ, ಅವರಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಎಲ್ಲರೂ ಕಚೇರಿಯಲ್ಲೇ ಕುಳಿತು ಮಾಡುವ ಕೆಲಸ ಬಯಸುತ್ತಾರೆ. ಹೀಗಾಗಿ ಸಾಕಷ್ಟು ಉದ್ಯೋಗಾವಕಾಶ ಇದ್ದರೂ ಯುವಕರು ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಈ ಹಿಂದೆ ಕಿರಿಯರು ಕುಟುಂಬದ ಹಿರಿಯರಿಂದ ತರಬೇತಿ ಪಡೆದು ಕುಲ ಕಸುಬುಗಳಲ್ಲಿ ಪರಿಣಿತರಾಗುತ್ತಿದ್ದರು. ಆದರೆ, ಈಗ ಎಲ್ಲಿ ಹೋದರೂ ಗುಣಮಟ್ಟದ ತರಬೇತಿ ಕೇಳುತ್ತಾರೆ’ ಎಂದರು.

130 ಕೋಟಿ ಜನಸಂಖ್ಯೆ: ‘ದೇಶವು ಜನಸಂಖ್ಯೆಯಲ್ಲಿ ಬಹು ದೊಡ್ಡ ರಾಷ್ಟ್ರ. ಭಾರತದ ಜನಸಂಖ್ಯೆ 130 ಕೋಟಿಯ ಗಡಿ ದಾಟಿದೆ. ಇದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು ಶೇ 52ರಷ್ಟಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಯುವ ಮಾನವ ಸಂಪನ್ಮೂಲವಿದೆ. ಈ ಪ್ರಮಾಣ ಮುಂದಿನ 25 ವರ್ಷದಲ್ಲಿ ಮತ್ತಷ್ಟು ಹೆಚ್ಚಲಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ವಿವರಿಸಿದರು.

‘ಯುವಕ ಯುವತಿಯರಿಗೆ ಕೌಶಲ ತರಬೇತಿ ನೀಡುವುದು ಅನಿವಾರ್ಯ. ಈ ಕೇಂದ್ರದಲ್ಲಿ ಈಗಾಗಲೇ ಒಂದು ತಂಡ ತರಬೇತಿ ಪಡೆದಿದೆ. ಮುಂದಿನ ಒಂದು ತಿಂಗಳು 60 ಜನರಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ₹ 240 ಶಿಷ್ಯವೇತನ ಕೊಡುತ್ತೇವೆ. ನಿರ್ದಿಷ್ಟ ಕ್ಷೇತ್ರದಲ್ಲಿ ಹೆಚ್ಚಿನ ಕೌಶಲ ತರಬೇತಿ ಪಡೆಯುವುದು ಅತ್ಯಗತ್ಯ’ ಎಂದು ಮಾಹಿತಿ ನೀಡಿದರು.

5 ರೀತಿಯ ತರಬೇತಿ: ‘ಕೌಶಲಾಭಿವೃದ್ಧಿಗೆ ಆದ್ಯತೆ ಕೊಟ್ಟಿರುವ ರಾಜ್ಯ ಸರ್ಕಾರ ‘ಕೌಶಲ ಕರ್ನಾಟಕದಲ್ಲಿ’ ಯೋಜನೆಗೆ ಹೆಸರು ನೊಂದಾಯಿಲು ಅವಕಾಶ ಕಲ್ಪಿಸಿದೆ. ಜಿಲ್ಲೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೊಂದಾಯಿಸಿದ್ದು, ಇವರಿಗೆ 5 ರೀತಿಯ ಕೌಶಲ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವ ಗುರಿಯಿದೆ. ಕಟ್ಟಡ ಕಾರ್ಮಿಕರಿಗೆ ತರಬೇತಿ ನಂತರ ಪ್ರಮಾಣಪತ್ರ ನೀಡುತ್ತೇವೆ’ ಎಂದರು.

ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ತರಬೇತಿ ಪಡೆದ ಪಲಾನುಭವಿಗಳಿಗೆ ಪ್ರಮಾಣಪತ್ರ, ಉಪಕರಣ ಹಾಗೂ ಸುರಕ್ಷತಾ ಪೆಟ್ಟಿಗೆ ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಕುಮಾರ್, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ನಾರಾಯಣಗೌಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !