ಕೆ.ಆರ್‌.ರಸ್ತೆ: ವಿಪರೀತ ಟ್ರಾಫಿಕ್‌, ಸಂಚಾರ ಸವಾಲು

7
ದಾರಿಯುದ್ದಕ್ಕೂ ಬ್ಯಾಂಕ್‌ ಶಾಖೆಗಳು, ಶಾಲೆ, ನರ್ಸಿಂಗ್‌ ಹೋಂ, ಸರ್ಕಾರಿ ಕಚೇರಿಗಳು

ಕೆ.ಆರ್‌.ರಸ್ತೆ: ವಿಪರೀತ ಟ್ರಾಫಿಕ್‌, ಸಂಚಾರ ಸವಾಲು

Published:
Updated:
Deccan Herald

ಮಂಡ್ಯ: ಶಾಲೆ, ಆಸ್ಪತ್ರೆ, ಬ್ಯಾಂಕ್‌, ದೇವಾಲಯ, ಸಭಾಂಗಣವನ್ನೊಳಗೊಂಡ ಕೃಷ್ಣರಾಜ ರಸ್ತೆಯಲ್ಲಿ ನಿತ್ಯವೂ ಟ್ರಾಫಿಕ್‌ ಕಿರಿಕಿರಿ ಹೆಚ್ಚುತ್ತಿದ್ದು ಶಾಲಾ ಮಕ್ಕಳು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಕೆ.ಆರ್‌.ರಸ್ತೆ ನಗರದ ಪ್ರಮುಖ ಭಾಗಗಳಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ವಿವಿ ರಸ್ತೆ, ಗಾಂಧಿ ಭವನದ ಮುಂಭಾಗದಿಂದ ಆರಂಭವಾಗಿ ಡಿಡಿಪಿಐ ಕಚೇರಿ, ಆರ್‌.ಪಿ ರಸ್ತೆ, ವಿನೋಬಾ ರಸ್ತೆ, ಕಾರ್ಮೆಲ್‌ ಕಾನ್ವೆಂಟ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿವರೆಗೂ ಸಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯಿತಿ, ನ್ಯಾಯಾಲಯ, ಉಪ ನೋಂದಣಾಧಿಕಾರಿ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ ಸಂಪರ್ಕಿಸಲು ಬಹುತೇಕ ಜನರು ಕೆ.ಆರ್‌.ರಸ್ತೆಯಲ್ಲೇ ಸಾಗಬೇಕು. ಆದರೆ ಕಿರಿದಾದ ರಸ್ತೆ, ವಿಪರೀತ ವಾಹನ ಸಂಚಾರದಿಂದಾಗಿ ರಸ್ತೆಯಲ್ಲಿ ಸಾಗುವುದು ಸಾಹಸವೇ ಆಗಿದೆ.

ಇದೇ ರಸ್ತೆಯಲ್ಲಿರುವ ವ್ಯಾಸರಾಜ (ಸೋಸಲೆ) ಶಾಖಾ ಮಠದ ಮುಂದೆ ಪ್ರತಿ ಗುರುವಾರ ಜನಸಾಗರವೇ ಸೇರುತ್ತದೆ. ರಸ್ತೆಯುದ್ದಕ್ಕೂ ವಾಹನ ನಿಲ್ಲಿಸಿರುತ್ತಾರೆ. ಇದರಿಂದ ಇಲ್ಲಿ ಓಡಾಡುವ ಸಾರ್ವಜನಿಕರು ಕಡುಕಷ್ಟ ಅನುಭವಿಸುತ್ತಾರೆ. ವಿಶೇಷ ಪೂಜೆ, ಪುನಸ್ಕಾರಗಳು ಇದ್ದರೆ ವಿವಿ ರಸ್ತೆವರೆಗೂ ಜನಸಾಗರ ಸೇರುತ್ತದೆ. ಆಗ ಕೆ.ಆರ್‌.ರಸ್ತೆ ಸಂಚಾರ ಸವಾಲಿನ ವಿಷಯವಾಗಿದೆ. ಮಠದ ಎದುರಿನಲ್ಲೇ ಗಾಂಧಿ ಭವನವಿದ್ದು ಅಲ್ಲಿ ಕಾರ್ಯಕ್ರಮಗಳು ನಡೆಯುತ್ತಿದ್ದಾಗ ರಸ್ತೆಯಲ್ಲೇ ವಾಹನಗಳು ನಿಂತಿರುತ್ತವೆ.

ಪಿಎಲ್‌ಡಿ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ ಶಾಖೆಗಳು ಕೆ.ಆರ್‌.ರಸ್ತೆಯಲ್ಲೇ ಇದ್ದು ಇಲ್ಲಿಗೆ ಬರುವ ಗ್ರಾಹಕರು ಟ್ರಾಫಿಕ್‌ ಕಿರಿಕಿರಿಯಿಂದ ಮುಕ್ತವಾಗಿಲ್ಲ. ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದ ಕಾರಣ ರಸ್ತೆ ಬದಿಯಲ್ಲೇ ನಿಲ್ಲಿಸಬೇಕು. ಇಷ್ಟೇ ಅಲ್ಲದೆ ಗುಪ್ತಾ ನರ್ಸಿಂಗ್‌ ಹೋಂ, ನಂದಿನಿ ಸರ್ಸಿಂಗ್‌ ಹೋಂ, ಕೆ.ವಿ.ಶಂಕರಗೌಡ ಸ್ಮಾರಕ ಆಸ್ಪತ್ರೆ ಇಲ್ಲೇ ಇದ್ದು ಆಸ್ಪತ್ರೆಗೆ ಬರುವ ರೋಗಿಗಳು ವಾಹನ ನಿಲ್ಲಿಸಲು ಪರದಾಡುವ ವಾತಾವರಣವಿದೆ.

‘ಕೆ.ಆರ್‌.ರಸ್ತೆಯಲ್ಲಿ ಗಾಡಿ ನಿಲ್ಲಿಸುವುದು ಮತ್ತು ನಿಲ್ಲಿಸಿದ ಗಾಡಿಯನ್ನು ತೆಗೆಯುವುದು ಸಾಹಸದ ವಿಷಯ. ಇಲ್ಲಿ ಟ್ರಾಫಿಕ್‌ ಪೊಲೀಸರು ಇಲ್ಲದ ಕಾರಣ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಸುಭಾಷ್‌ ನಗರದ ಹಿರಿಯ ನಾಗರಿಕ ಶಿವರಾಜೇಗೌಡ ಹೇಳಿದರು.

ಶಾಲಾ ಮಕ್ಕಳಿಗೆ ಸಮಸ್ಯೆ: ಕೆ.ಆರ್‌.ರಸ್ತೆಯಲ್ಲಿ ಲಕ್ಷ್ಮಿ ಜನಾರ್ಧನ ಶಾಲೆ ಹಾಗೂ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿಜಿಎಂಎಸ್‌)ಗಳಿವೆ. ಬೆಳಿಗ್ಗೆ ಶಾಲೆ ಆರಂಭವಾಗುವ ಸಮಯ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ಶಾಲಾ ಮಕ್ಕಳು ರಸ್ತೆದಾಟಲು ಅಪಾರ ಸಮಸ್ಯೆ ಅನುಭವಿಸುತ್ತಾರೆ.

ಇದರ ಜೊತೆಗೆ ಕೆ.ಆರ್‌.ರಸ್ತೆ ಹಾಗೂ ಪಕ್ಕದ ಅಡ್ಡ ರಸ್ತೆಗಳಲ್ಲಿ 15ಕ್ಕೂ ಹೆಚ್ಚು ಚಾಟ್ಸ್‌, ಪಾನಿಪುರಿ, ಗೋಬಿ ಮಂಚೂರಿ, ಬಿರಿಯಾನಿ ಅಂಗಡಿಗಳು ತಲೆಎತ್ತಿವೆ. ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆ ಇಲ್ಲಿ ಘಮಘಮಿಸುವ ಪರಿಮಳ ಹೊರಬರುತ್ತದೆ. ಕುರುಕಲು ತಿಂಡಿ ಸವಿಯುವ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಟ್ರಾಫಿಕ್‌ ನಿಯಂತ್ರಣವಿಲ್ಲದ ಕಾರಣ ವಾಹನ ಸವಾರರು ಕಷ್ಟ ಅನುಭವಿಸುತ್ತಾರೆ.

‘ಕೆ.ಆರ್.ರಸ್ತೆಯಲ್ಲಿ ನಿತ್ಯ ಟ್ರಾಫಿಕ್‌ ಸಿಬ್ಬಂದಿ ನಿಯೋಜಿಸುವುದು ಕಷ್ಟ. ಆದರೆ ವಿಶೇಷ ಸಂದರ್ಭಗಳಲ್ಲಿ, ಜನಸಂದಣಿ ಹೆಚ್ಚಾಗಿದ್ದಾಗ ಟ್ರಾಫಿಕ್‌ ನಿಯಂತ್ರಣ ಮಾಡಲಾಗುವುದು’ ಎಂದು ಸಂಚಾರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಕೆ.ಎಸ್‌.ನಿರಂಜನ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !