ಅಂಧಾಧುನ್: ‘ಕುರುಡುತನ’ದ ಭಲೇ ಆಟ

7

ಅಂಧಾಧುನ್: ‘ಕುರುಡುತನ’ದ ಭಲೇ ಆಟ

Published:
Updated:
Deccan Herald

ಚಿತ್ರ: ಅಂಧಾಧುನ್ (ಹಿಂದಿ)
ನಿರ್ಮಾಣ: ವಯಕಾಮ್ 18 ಮೋಷನ್ ಪಿಕ್ಚರ್ಸ್, ಮ್ಯಾಚ್‌ಬಾಕ್ಸ್‌ ಪಿಕ್ಚರ್ಸ್
ನಿರ್ದೇಶನ: ಶ್ರೀರಾಮ್ ರಾಘವನ್
ತಾರಾಗಣ: ಆಯುಷ್ಮಾನ್ ಖುರಾನಾ, ತಬು, ರಾಧಿಕಾ ಆಪ್ಟೆ, ಅನಿಲ್ ಧವನ್, ಜಾಕಿರ್ ಹುಸೇನ್, ಮಾನವ್ ವಿಜ್.

–––

ಡಯಲ್ ಮೇಲಿನ ಪರದ ತೆಗೆದು, ಮುಳ್ಳು ಮುಟ್ಟಿ ನೋಡಿ ಸಮಯ ತಿಳಿಯುವ ನಾಯಕನ ಕಣ್ಣಿಗೆ ಕಪ್ಪು ಕನ್ನಡಕ. ಪಿಯಾನೊ ಮುಂದೆ ಕುಳಿತ ಅವನು ಧ್ಯಾನಸ್ಥ. ಕೆ.ವಿ. ತಿರುಮಲೇಶರ ‘ಮುಖಾಮುಖಿ’ ಪದ್ಯ ನೆನಪಿಸುವಂತೆ ಎದುರಲ್ಲಿ ಕುಳಿತ ಬಿಳಿ–ಕಪ್ಪು ಬಣ್ಣದ ಬೆಕ್ಕಿನ ಅರಿವೇ ಅವನಿಗೆ ಇಲ್ಲದಂತೆ ಪಿಯಾನೊ ಸಂಗೀತದೊಳಗೆ ಒಂದಾಗುವನು. ಅವನು ನಿಜಕ್ಕೂ ಅಂಧನೇ? ಇಲ್ಲವೆನಿಸುತ್ತದೆ ಎಂದು ನಾವು ಅಂದುಕೊಳ್ಳಲು ಕಾರಣಗಳು ಬೇಗ ಸಿಗುತ್ತವೆ. ಹದಿನಾಲ್ಕನೇ ವಯಸ್ಸಿನಲ್ಲಿ ಕ್ರಿಕೆಟ್ ಚೆಂಡು ಬಡಿದು ಕಣ್ಣಿನ ನರ ಹಾಳಾಗಿ ಕುರುಡಾಗಿರುವುದಾಗಿ ಪದೇ ಪದೇ ಹೇಳುವ ಅವನು, ಆಮೇಲೆ ನಿಜಕ್ಕೂ ಅಂಧನಾಗುತ್ತಾನೆ.

ನಾಯಕನ ‘ಕುರುಡುತನ’ ಇಡೀ ಸಿನಿಮಾದಲ್ಲಿ ನಮ್ಮ ಕುರುಡುತನವೂ ಹೌದಾಗಿಬಿಡುತ್ತದೆ. ನಿರ್ದೇಶಕ ಶ್ರೀರಾಮ್ ರಾಘವನ್ ‘ನಿಯೊ ನಾಯ್ರ್’ (ಅಪರಾಧದ ಥ್ರಿಲ್ಲರ್‌ಗಳನ್ನು ಮುರಿದು ಹೇಳುವ ಕ್ರಮದಲ್ಲಿ ತಯಾರಿಸಿದ ಸಿನಿಮಾಗಳನ್ನು ಅಮೆರಿಕ 1940–50ರ ದಶಕದಲ್ಲಿ ತಂದಿತಲ್ಲ; ಅವಕ್ಕೆ ಹೀಗೆನ್ನುತ್ತಾರೆ) ಚಿತ್ರಕಥೆಯನ್ನು ಹೇಳಿರುವ ಕ್ರಮ ಪೂರ್ಣ ಅನನ್ಯ.

ಸಿನಿಮಾ ಶುರುವಾಗುವುದು ಎಲೆಕೋಸಿನ ಹೊಲದಲ್ಲಿ. ಕೋವಿ ಹಿಡಿದ ರೈತ ಹಾರುವ ಬೂದುಬಣ್ಣದ ಮೊಲಕ್ಕೆ ಗುರಿಯಿಕ್ಕುತ್ತಾನೆ. ಮೈಲುಗಲ್ಲಿನ ಪಕ್ಕ ತುಸು ನಿಲ್ಲುವ ಮೊಲಕ್ಕೆ ಅದು ತಾಕಿತೋ ಇಲ್ಲವೋ ಎನ್ನುವುದು ಗೊತ್ತಾಗದೆ ‘ಶಾಟ್’ ಕಟ್ ಆಗುತ್ತದೆ. ಆ ‘ಶಾಟ್’ನ ಮುಂದಿನ ಭಾಗವನ್ನು ನಿರ್ದೇಶಕರು ನಮಗೆ ತೋರಿಸುವುದು ಸಿನಿಮಾ ಮುಗಿಯಲು ಇನ್ನೈದು ನಿಮಿಷ ಇರುವಾಗ.

ಇಡೀ ಸಿನಿಮಾ ಆಕಸ್ಮಿಕಗಳ ಸರಮಾಲೆ. ಪ್ರೇಮಿ ಒಲಿಯುವುದು, ಸಂಗೀತ ಪ್ರದರ್ಶನಕ್ಕೆ ಅವಕಾಶ ಹುಡುಕಿಕೊಂಡು ಬರುವುದು, ಹಳೆ ಕಾಲದ ನಟನ ವಿಶ್ವಾಸ ದಕ್ಕುವುದು, ಅದೇ ನಟನ ಕೊಲೆಗೆ ಸಾಕ್ಷಿಯಾಗಬೇಕಾಗುವುದು, ಅದು ಸಿಲುಕಿಸುವ ಸಿಕ್ಕುಗಳು...ಇವೆಲ್ಲವೂ ಸಿನಿಮಾದ ಮೇಲ್ಮಟ್ಟದ ತಿರುವುಗಳು. ಗೆರೆಯ ಬಿಂದುಗಳು ಸಾಗುವ ದಿಕ್ಕನ್ನು ಪ್ರೇಕ್ಷಕರಾದ ನಾವು ತುಸುವೂ ಊಹಿಸಲಾರೆವು. ‘ಯಾವುದನ್ನೂ ಸಸ್ಪೆನ್ಸ್ ಮಾಡದೆ, ಮುಂದೆ ನೀವು ಅಂದುಕೊಳ್ಳದ ಏನನ್ನೋ ತೋರಿಸುವೆ’ ಎನ್ನುವ ನಿರ್ದೇಶಕರ ಧಾರ್ಷ್ಯ ಸಿನಿಮಾದ ಜೀವಾಳ.

ಅರ್ಜಿತ್ ಬಿಸ್ವಾಸ್, ಪೂಜಾ ಲಾದಾ ಸೂರ್ತಿ, ಯೋಗೇಶ್ ಚಂದೇಕರ್, ಹೇಮಂತ್ ರಾವ್ ಇವರೆಲ್ಲ ವಿಪರೀತ ತಲೆ ಉಪಯೋಗಿಸಿ ಚಿತ್ರಕಥೆ ರೂಪಿಸಿದ್ದಾರೆ. ಕಣ್ಣೆವೆಯಿಕ್ಕದಂತೆ ನೋಡಿಸಿಕೊಳ್ಳುವ ‘ಶಾಟ್‌’ಗಳನ್ನು ಕೆ.ಯು. ಮೋಹನನ್‌ ಕ್ಯಾಮೆರಾ ಕಟ್ಟಿಕೊಟ್ಟಿರುವ ಬಗೆ ಕಾಡುವಂತಿದೆ. ಬರೆದಿರುವುದಲ್ಲದೆ ಸಂಕಲನದ ಜಾಣ್ಮೆಯನ್ನೂ ತೋರಿರುವ ಪೂಜಾ ಲಾದಾ ಸೂರ್ತಿ ಕೆಲಸದ ಕಾಣ್ಕೆ ಕೂಡ ದೊಡ್ಡದು.

ಹಳೆಯ ನಟ ಅನಿಲ್ ಧವನ್ ಅವರ ಗತಕಾಲದ ಸಿನಿಮಾಗಳ ಸರಕನ್ನೂ ಈ ಚಿತ್ರಕ್ಕೆ ಅನ್ವಯಿಸಿರುವ ಕ್ರಮಕ್ಕೂ ಶಹಬ್ಬಾಸ್ ಹೇಳಬೇಕು. ಅಪರಾಧಗಳ ಮೇಲೆ ಅಪರಾಧವನ್ನು ಧೈರ್ಯವಾಗಿ ಮಾಡುತ್ತಲೇ ನಿರುಮ್ಮಳವಾಗಿ ಇರುವ ತಬು ವೃತ್ತಿಬದುಕಿನ ವಿಭಿನ್ನ ಪಾತ್ರವಿದು. ‘ಹೆಚ್ಚು ಟೆನ್ಷನ್ ಕೊಡಬೇಡ... ನನಗೆ ಮೊಡವೆ ಬರುತ್ತದೆ’ ಎಂದು ಕಣ್ಣರಳಿಸುವ ರಾಧಿಕಾ ಆಪ್ಟೆ ಸಹಜ ಸುಂದರಿ. ಆಯುಷ್ಮಾನ್ ಖುರಾನಾ ಸಂಗೀತಗಾರರೂ ಆಗಿರುವುದರಿಂದ ಪಿಯಾನೊ ಎದುರೂ ಸಹಜ. ಕುರುಡನಂತೆ ಹೆಜ್ಜೆ ಇಡುವಾಗಲೂ ಸಹಜ. ನಟನಾಗಿ ಒಂದು ಹ್ಯಾಂಗ್‌ಓವರ್‌ನಲ್ಲಿದ್ದ ಅವರನ್ನು ಈ ಪಾತ್ರ ಅದರಿಂದಾಚೆಗೆ ಎಳೆದುತಂದಿದೆ. ಅತಿ ಗಂಭೀರ ನಡಿಗೆಯ ಸಿನಿಮಾಗೆ ಬೇಕಾದ ಸಂಗೀತದ ರಿಲೀಫ್ ಅನ್ನು ಅಮಿತ್ ತ್ರಿವೇದಿ ಅಚ್ಚುಕಟ್ಟಾಗಿ ಒದಗಿಸಿದ್ದಾರೆ.

ಕನ್ನಡದ ನಿರ್ದೇಶಕ ‘ದುನಿಯಾ ಸೂರಿ’ಯ ಕ್ರೌರ್ಯಪ್ರೀತಿಯನ್ನೇ ಆವಾಹಿಸಿಕೊಂಡಂಥವರು. ಅದೇ ಧೋರಣೆ ಇರುವ ಶ್ರೀರಾಮ್ ರಾಘವನ್ ಅವರನ್ನು ಈ ವಿಷಯದಲ್ಲಿ ‘ಸೂರಿ ಕಸಿನ್’ ಎನ್ನಬಹುದು. ಕಥಾ ನೇಯ್ಗೆಯ ಕುಶಲತೆಯ ಜೊತೆಗೇ ಅವರು ಕತ್ತಲ ಬದುಕಿನ ರಕ್ತಸಿಕ್ತ ಸತ್ಯಗಳನ್ನು ಹಸಿಹಸಿಯಾಗಿ ತೋರಿದ್ದಾರೆ. ಕೊನೆಗೆ ನಾಯಕನಿಗೆ ದೃಷ್ಟಿ ಬಂದಿತೇ? ಅದು ಮುಖ್ಯ ಅಲ್ಲವೇ ಅಲ್ಲ. ನಮ್ಮ ದೃಷ್ಟಿಗೆ ಮೀರಿದ ಕಥನ ಕುತೂಹಲವನ್ನು ಮೊಗೆದುಕೊಂಡು ಹೊರಬಂದಿರುತ್ತೇವೆ ಎನ್ನುವುದಷ್ಟೆ ಸತ್ಯ.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !