ಹಿಂಡಲಗಾ ಕೈದಿಗಳಿಂದ ಭತ್ತದ ಬೇಸಾಯ

7
ಮನ ಪರಿವರ್ತನೆಗಾಗಿ ಕೃಷಿ ಚಟುವಟಿಕೆ

ಹಿಂಡಲಗಾ ಕೈದಿಗಳಿಂದ ಭತ್ತದ ಬೇಸಾಯ

Published:
Updated:
Deccan Herald

ಬೆಳಗಾವಿ: ಕೈದಿಗಳು ಹಾಡುವುದು, ಕವಿತೆ ರಚಿಸುವುದು, ಅಭಿನಯಿಸುವುದನ್ನು ಕೇಳಿರಬಹುದು; ನೋಡಿರಲೂಬಹುದು. ಆದರೆ, ಕೃಷಿ ಮಾಡುವುದನ್ನು ನೋಡಿದ್ದೀರಾ? ಇಲ್ಲಿನ ಹಿಂಡಲಗಾದಲ್ಲಿರುವ ಕೇಂದ್ರ ಕಾರಾಗೃಹದ ಆರು ಮಂದಿ ಕೈದಿಗಳಿಗೆ ಭತ್ತದ ಬೇಸಾಯದ ಅವಕಾಶವನ್ನು ಅಧಿಕಾರಿಗಳು ಕಲ್ಪಿಸಿದ್ದಾರೆ.

ಕೈದಿಗಳ ಮನಪರಿವರ್ತನೆಗಾಗಿ ಹಲವು ಚಟುವಟಿಕೆಗಳನ್ನು ಕಾರಾಗೃಹದ ಅಧಿಕಾರಿಗಳು ಕೈಗೊಳ್ಳುವುದು ಸಾಮಾನ್ಯ. ಇಲ್ಲಿ ಕೃಷಿ ಚಟುವಟಿಕೆಗಳಲ್ಲಿ ಜೈಲು ಹಕ್ಕಿಗಳನ್ನು ತೊಡಗಿಸುವ ಮೂಲಕ, ಅವರ ಮನಪರಿವರ್ತನೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.

‘ಕಾರಾಗೃಹದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ, ಇಲಾಖೆಗೆ ಸೇರಿದ ಆರು ಎಕರೆ ಪ್ರದೇಶದಲ್ಲಿ ಭತ್ತವನ್ನು ಕೈದಿಗಳಿಂದಲೇ ಬೆಳೆಸಲಾಗುತ್ತಿದೆ. ಭೂಮಿ ಹದ ಮಾಡುವುದರಿಂದ ಹಿಡಿದು ಎಲ್ಲ ಕೆಲಸಗಳನ್ನೂ ಇವರೇ ಮಾಡಿದ್ದಾರೆ. ಕೈದಿಗಳು ನಾಲ್ಕು ಗೋಡೆಗಳ ಮಧ್ಯೆ ಇದ್ದಾಗ ಹೇಗಿರುತ್ತಾರೆ? ಹೊರಗಡೆ ಇದ್ದಾಗ ಅವರ ನಡವಳಿಕೆ ಹೇಗಿರುತ್ತದೆ ಎನ್ನುವುದನ್ನು ಪರೀಕ್ಷಿಸುವ ಕಾರ್ಯವನ್ನೂ ಈ ಮೂಲಕ ಮಾಡಲಾಗುತ್ತಿದೆ’ ಎಂದು ಕಾರಾಗೃಹದ ಸೂಪರಿಂಟೆಂಡೆಂಟ್ ಟಿ.ಪಿ.ಶೇಷ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಿಕ್ಷೆಯ ಕೊನೆಯ ಹಂತದಲ್ಲಿರುವ ಕೈದಿಗಳನ್ನು ಆಯ್ಕೆ ಮಾಡಿ ನಿಯೋಜಿಸಿದ್ದೇವೆ. ಕಾರಾಗೃಹದಲ್ಲಿ ಗರಿಷ್ಠ ಭದ್ರತೆಯ ವಾತಾವರಣದಲ್ಲಿ ಇರುವ ಅವರಿಗೆ ಗದ್ದೆಯಲ್ಲಿ ಕೆಲಸ ಮಾಡುವಾಗ ಕನಿಷ್ಠ ಭದ್ರತೆ ನಿಯೋಜಿಸಲಾಗುತ್ತದೆ. ಇಬ್ಬರು ಸಿಬ್ಬಂದಿ ಮಾತ್ರ ಅವರ ಮೇಲೆ ನಿಗಾ ವಹಿಸುತ್ತಾರೆ. ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿದೆಯೇ ಎನ್ನುವುದನ್ನು ಗಮನಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಕೆಲಸ ಮಾಡಿದ ದಿನದಂದು ಅವರಿಗೆ ತಲಾ ₹ 125 ಕೂಲಿ ನೀಡಲಾಗುವುದು. ಹೊರಗಿದ್ದಾಗ ಇವರಾರೂ ತಪ್ಪಿಸಿಕೊಳ್ಳುವ ಯತ್ನ ಮಾಡಿಲ್ಲ .ಇಲ್ಲಿನ ಭತ್ತವನ್ನು ಕೈದಿಗಳ ಊಟಕ್ಕಾಗಿಯೇ ಬಳಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !