ಗಡಿ ಜಿಲ್ಲೆಯಲ್ಲಿ ಕನ್ನಡ ಕಾರ್ಯಕ್ರಮ ಹೆಚ್ಚಲಿ: ಹೆಚ್ಚುವರಿ ಡಿಸಿ ಪುಷ್ಪಲತಾ

7
ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ಗಡಿ ಜಿಲ್ಲೆಯಲ್ಲಿ ಕನ್ನಡ ಕಾರ್ಯಕ್ರಮ ಹೆಚ್ಚಲಿ: ಹೆಚ್ಚುವರಿ ಡಿಸಿ ಪುಷ್ಪಲತಾ

Published:
Updated:
Deccan Herald

ಕೋಲಾರ: ‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಜಿಲ್ಲಾಡಳಿತದ ವತಿಯಿಂದ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಆಚರಣೆ ಸಂಬಂಧ ಇಲ್ಲಿ ಮಂಗಳವಾರ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಈ ಹಿಂದೆ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಕಳೆ ಇಲ್ಲವಾಗಿದೆ’ ಎಂದರು.

‘ಈ ಬಾರಿ ಕನ್ನಡ ರಾಜ್ಯೋತ್ಸವದ ವೇಳೆ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಮೆರುಗು ನೀಡಲು ಆನೆ ಕರೆಸುವ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸುತ್ತೋಲೆ ಹೊರಡಿಸಲಾಗುತ್ತದೆ’ ಎಂದು ವಿವರಿಸಿದರು.

ಕನ್ನಡ ನಾಮಫಲಕ: ‘ಜಿಲ್ಲೆಯಾದ್ಯಂತ ನ.1ರೊಳಗೆ ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಗೊಳಿಸಬೇಕು. ರಾಜ್ಯೋತ್ಸವದ ಮೆರವಣಿಗೆಯಲ್ಲಿ ಕನ್ನಡ ಭಾಷೆ ಮತ್ತು ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಸ್ತಬ್ಧ ಚಿತ್ರಗಳಲ್ಲಿ ಹಾಕಿಸಬೇಕು. ಪರಿಷತ್‌ ವತಿಯಿಂದ ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಮಂಕು ತಿಮ್ಮನ ಕಗ್ಗ ಪರಿಚಯಿಸಲು ವ್ಯವಸ್ಥೆ ಮಾಡುತ್ತೇವೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

ಡಾಂಬರು ಹಾಕಿಸಿ: ‘ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಬೇಕು, ಪ್ಲಾಸ್ಟಿಕ್ ಬಾವುಟ ಮತ್ತು ತೋರಣ ನಿಷೇಧಿಸಬೇಕು. ಬಹುಪಾಲು ರಸ್ತೆಗಳು ಗುಂಡಿಮಯವಾಗಿದ್ದು, ಇದರಿಂದ ಮೆರವಣಿಗೆಗೆ ತೊಂದರೆಯಾಗುತ್ತದೆ. ರಸ್ತೆಗಳಿಗೆ ಶೀಘ್ರವೇ ಡಾಂಬರು ಹಾಕಿಸಬೇಕು’ ಎಂದು ಜಿಲ್ಲಾ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಮನವಿ ಮಾಡಿದರು.

‘ಈ ಹಿಂದೆ ಕೋಲಾರದಲ್ಲಿನ ರಾಜ್ಯೋತ್ಸವವು ಎರಡನೇ ದಸರಾ ಎಂದೇ ಖ್ಯಾತಿ ಪಡೆದಿತ್ತು. ಸ್ತಬ್ಧ ಚಿತ್ರಗಳು ಸಾಕಷ್ಟು ಬರುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸ್ತಬ್ಧ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ. ಇಲಾಖೆ ಅಧಿಕಾರಿಗಳು ವಾಹನದಲ್ಲಿ ಕೇವಲ ಫ್ಲೆಕ್ಸ್‌ ಹಾಕಿಸುತ್ತಾರೆ. ಚಾಲಕರನ್ನು ಬಿಟ್ಟು ಯಾವುದೇ ಅಧಿಕಾರಿ, ಸಿಬ್ಬಂದಿ ಇರುವುದಿಲ್ಲ. ಈ ಸ್ಥಿತಿ ಬದಲಾಗಬೇಕು’ ಎಂದು ಕೋರಿದರು.

ಹಸಿರೀಕರಣದ ಕೂಗು: ‘ರಾಜ್ಯೋತ್ಸವದಲ್ಲಿ ಹಸಿರೀಕರಣದ ಕೂಗು ಮೊಳಗಬೇಕು. 10 ಕೋಟಿ ಬೀಜದುಂಡೆ ತಯಾರಿಕೆಗೆ ಯೋಜನೆ ರೂಪಿಸಿದ್ದು, ಪರಿಸರ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ರೋಟರಿ ಸಂಸ್ಥೆ ಸದಸ್ಯ ಪ್ರಕಾಶ್ ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !