ಲೇಔಟ್‌ ನಿರ್ಮಾಣ: ಕಡಿಮೆ ದರದಲ್ಲಿ ನಿವೇಶನ: ಶಾಸಕ ಶ್ರೀನಿವಾಸಗೌಡ ಭರವಸೆ

7
ನಗರಾಭಿವೃದ್ಧಿ ಪ್ರಾಧಿಕಾರದ ಸಭೆ

ಲೇಔಟ್‌ ನಿರ್ಮಾಣ: ಕಡಿಮೆ ದರದಲ್ಲಿ ನಿವೇಶನ: ಶಾಸಕ ಶ್ರೀನಿವಾಸಗೌಡ ಭರವಸೆ

Published:
Updated:
Deccan Herald

ಕೋಲಾರ: ‘ನಗರದ ಹೊರವಲಯದಲ್ಲಿ ಮತ್ತೊಂದು ಲೇಔಟ್ ನಿರ್ಮಿಸಿ ಬಡವರು ಮತ್ತು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ನಿವೇಶನ ಸಿಗುವಂತೆ ಮಾಡಲಾಗುವುದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ (ಕೆಯುಡಿಎ) ಸಭೆಯಲ್ಲಿ ಮಾತನಾಡಿ, ‘ಜನರಿಗೆ ಅನುಕೂಲವಾಗುವ ಕಡೆ ಜಮೀನು ಗುರುತಿಸಿ ಸುಲಭ ದರದಲ್ಲಿ ನಿವೇಶನ ಸಿಗುವಂತೆ ಮಾಡುತ್ತೇವೆ’ ಎಂದರು.

‘ನಗರದ ಹೊರ ಭಾಗದಲ್ಲಿ 21 ಕಿ.ಮೀ ವರ್ತುಲ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಜಮೀನು ಸ್ವಾಧೀನಕ್ಕೆ ಅಗತ್ಯವಿರುವ ₹ 88 ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

‘ಮೊದಲ ಹಂತದಲ್ಲಿ 6.50 ಕಿ.ಮೀ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಲು ತೀರ್ಮಾನಿಸಲಾಗಿದೆ. ಮೊದಲ ಹಂತದ ವರ್ತುಲ ರಸ್ತೆಯು ಮಾಲೂರು ಬೈಪಾಸ್‌ನಿಂದ ಅಂತರಗಂಗೆ ಬೆಟ್ಟದ ತಪ್ಪಲು, ಖಾದ್ರಿಪುರ, ಚಿಕ್ಕಬಳ್ಳಾಪುರ ರಸ್ತೆ, ಚಿಂತಾಮಣಿ–ಶ್ರೀನಿವಾಸಪುರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗಲಿದೆ’ ಎಂದು ವಿವರಿಸಿದರು.

ಪಿಪಿಪಿ ಮಾದರಿ: ‘2ನೇ ಹಂತ ಮತ್ತು 3ನೇ ಹಂತದ ರಸ್ತೆ ನಿರ್ಮಾಣಕ್ಕೆ ಟೋಟಲ್ ಸ್ಟೇಷನ್ ಸರ್ವೆ ಮಾಡಲು ಸೂಚಿಸಲಾಗಿದೆ. ತಾಲ್ಲೂಕಿನ ಗದ್ದೆಕಣ್ಣೂರು ಸಮೀಪ 215 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರಿ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಬಡಾವಣೆಯಲ್ಲಿ ಶೇ 50ರಷ್ಟು ಪಾಲು ಭೂಮಾಲೀಕರದ್ದು ಹಾಗೂ ಉಳಿದ 50ರಷ್ಟು ಭಾಗ ಪ್ರಾಧಿಕಾರದ್ದು’ ಎಂದು ಮಾಹಿತಿ ನೀಡಿದರು.

‘ದೇವರಾಜು ಅರಸು ಬಡಾವಣೆಯಲ್ಲಿನ 144 ಮೂಲೆ ನಿವೇಶನಗಳ ಹರಾಜಿಗೆ ಅನುಮತಿ ನೀಡಲಾಗಿದೆ. ಬಡಾವಣೆಗೆ ಈಗಾಗಲೇ ಯುಜಿಡಿ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ ಹರಾಜು ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು.

‘ಕೆಯುಡಿಎ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿರುವ ನಿವೇಶನಗಳ ನಿಯಮಾವಳಿ ಪರಿಶೀಲಿಸಿ ಅಭಿವೃದ್ಧಿಗೆ ನಕ್ಷೆ ಅನುಮೋದನೆ ನೀಡಲು ಅನುಮತಿ ನೀಡಲಾಗಿದೆ. ಕೆಯುಡಿಎಯಲ್ಲಿ 15 ವಿವಿಧ ಹುದ್ದೆ ಸೃಜಿಸಲು ಕೋರಿಕೆ ಬಂದ ಹಿನ್ನೆಲೆಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಮತ್ತು ಕಾಯಂ ಆಗಿ ಸಿಬ್ಬಂದಿ ನೇಮಿಸಿಕೊಳ್ಳಲು ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದರು.

ಕ್ರಿಯಾ ಯೋಜನೆ: ‘ಟಮಕ ಬಡಾವಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ. ಪ್ರಾಧಿಕಾರದ ಮುಂದಿನ ಸಭೆಯಲ್ಲಿ ರಸ್ತೆ ನಿರ್ಮಾಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಕೆಯುಡಿಎ ಆಯುಕ್ತ ಮಾಜುದ್ದೀನ್ ಖಾನ್ ಹೇಳಿದರು.

ಪ್ರಾಧಿಕಾರದ ಸದಸ್ಯರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಬದ್ರಿನಾಥ್, ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೆ.ಎಂ.ವಿ.ಸ್ವಾಮಿ, ನಗರಸಭೆ ಆಯುಕ್ತ ಟಿ.ಆರ್.ಸತ್ಯನಾರಾಯಣ ಪಾಲ್ಗೊಂಡಿದ್ದರು.

ಅಂಕಿ ಅಂಶಗಳು.....
* 21 ಕಿ.ಮೀ ವರ್ತುಲ ರಸ್ತೆ
* ₹ 88 ಕೋಟಿ ಅನುದಾನ ಅಗತ್ಯ
* 6.50 ಕಿ.ಮೀ ಮೊದಲ ಹಂತದ ರಸ್ತೆ
* 215 ಎಕರೆ ಪ್ರದೇಶದಲ್ಲಿ ಬಡಾವಣೆ
* 144 ಮೂಲೆ ನಿವೇಶನ ಹರಾಜು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !