ಕಾಂಗ್ರೆಸ್ ಅಧಿಕಾರ ಹಿಡಿಯಲೇ ಬೇಕು: ಶಾಸಕ ಡಾ.ಕೆ.ಸುಧಾಕರ್ ಸಲಹೆ

7
ಟಿಎಪಿಸಿಎಂಎಸ್‌ ಚುನಾವಣೆ ಪೂರ್ವಭಾವಿ ಸಭೆ

ಕಾಂಗ್ರೆಸ್ ಅಧಿಕಾರ ಹಿಡಿಯಲೇ ಬೇಕು: ಶಾಸಕ ಡಾ.ಕೆ.ಸುಧಾಕರ್ ಸಲಹೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ಆಡಳಿತ ಮಂಡಳಿಗೆ ಅಕ್ಟೋಬರ್ 25 ರಂದು ನಡೆಯುವ ಚುನಾವಣೆಯಲ್ಲಿ ಈ ಬಾರಿ ಶತಾಯಗತಾಯ ಕಾಂಗ್ರೆಸ್ ಅಧಿಕಾರ ಹಿಡಿಯಬೇಕು. ಪಕ್ಷದ ಕಾರ್ಯಕರ್ತರು, ಮುಖಂಡರು ಎಲ್ಲಾ ಸ್ಥಾನಗಳನ್ನು ಗೆಲ್ಲುವ ಪಣ ತೊಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಟಿಎಪಿಸಿಎಂಎಸ್‌ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಶೇ 80 ರಷ್ಟು ರೈತರು ಕೃಷಿ ನಂಬಿದ್ದಾರೆ. ಹಾಗಾಗಿ ಸಹಕಾರಿ ಸಂಸ್ಥೆಗಳು ಅವರ ಅಭಿವೃದ್ಧಿಗೆ ಪಣತೊಡಬೇಕೇ ಹೊರತು ಆ ಸಂಸ್ಥೆಯಿಂದ ವೈಯಕ್ತಿಕ ಲಾಭ ನೋಡುವವರನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು. ಟಿಎಪಿಸಿಎಂಎಸ್‌ನಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಒಳ್ಳೆಯ ಆಡಳಿತ ನೀಡಬೇಕು. ಆ ಮೂಲಕ ರೈತರಿಗೆ ಸುಲಭವಾಗಿ ಕಡಿಮೆ ದರದಲ್ಲಿ ರಸಗೊಬ್ಬರ ದೊರೆಯಬೇಕು. ಪಡಿತರ ವ್ಯವಸ್ಥೆ ಉತ್ತಮಗೊಳ್ಳಬೇಕು’ ಎಂದು ತಿಳಿಸಿದರು.

‘ಈ ಹಿಂದೆ ಟಿಎಪಿಸಿಎಂಎಸ್‌ನಲ್ಲಿ ಅವ್ಯವಸ್ಥೆ ಆಗುತ್ತಿದೆ ಎಂದು ಗೊತ್ತಿದ್ದರೂ ಜೆಡಿಎಸ್‌ ಮುಖಂಡರೊಬ್ಬರು ಸೂಪರ್‌ಸೀಡ್ ರದ್ದು ಪಡಿಸಲು ಪ್ರಯತ್ನಿಸಿ, ನ್ಯಾಯಾಲಯದ ತಡೆಯಾಜ್ಞೆ ತಂದರು. ಇಂದಿಗೂ ಕೆಲವರ ತಲೆಯಲ್ಲಿ ಆ ಸಂಘದಲ್ಲಿ ಜೆಡಿಎಸ್ ಮತಗಳೇ ಅಧಿಕವಾಗಿವೆ ಎಂಬ ಸತ್ಯಕ್ಕೆ ದೂರವಾದ ವಿಚಾರಗಳಿವೆ. ಅವುಗಳನ್ನು ತೆಗೆದು ಹಾಕಬೇಕು’ ಎಂದರು.

‘ಕಳೆದ ಚುನಾವಣೆ ಸಂದರ್ಭದಲ್ಲಿ ನನಗೆ ಸಹಕಾರ ಕ್ಷೇತ್ರ ಹೊಸದಾಗಿತ್ತು. ಅವತ್ತು ಅಭ್ಯರ್ಥಿಗಳನ್ನು ಒತ್ತಾಯ ಮಾಡಿ ನಿಲ್ಲಿಸುವ ಸ್ಥಿತಿ ಇತ್ತು. ಹೀಗಾಗಿ ನಾವು ಸೋತೆವು. ಈ ಬಾರಿ ಹಿರಿಯ ನಾಯಕರು ಸ್ವಚ್ಛ ಚಾರಿತ್ರ್ಯವಿರುವ ಉತ್ತಮ ಅಭ್ಯರ್ಥಿಗಳನ್ನು ಪ್ರೋತ್ಸಾಹಿಸಬೇಕು. ನಾಯಕತ್ವದ ಗುಣವಿರುವ ಶೇ 30ರಷ್ಟು ಯುವಕರನ್ನು ಆಯ್ಕೆ ಮಾಡಬಹುದು ಎಂದು ಸಲಹೆ ಮಾಡುತ್ತೇನೆ’ ಎಂದು ಹೇಳಿದರು.

‘ಈ ಬಾರಿ ಹಿರಿಯ ಸಹಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು. ನಾವು ಸ್ಫೂರ್ತಿ, ಸಹಕಾರ ಕೊಡುತ್ತೇವೆ. ಯಾರೂ ಈ ಚುನಾವಣೆ ಹಗುರವಾಗಿ ತೆಗೆದುಕೊಳ್ಳಬಾರದು. ಅತಿಯಾದ ಆತ್ಮವಿಶ್ವಾಸ, ಹಿಂಜರಿಕೆ ಎರಡೂ ಬೇಡ. ತುಂಬು ಹೃದಯದ ಆತ್ಮವಿಶ್ವಾಸ, ನಮ್ಮೆಲ್ಲರ ಒಗ್ಗಟ್ಟಿನಿಂದ ಈ ತಾಲ್ಲೂಕಿನಲ್ಲಿ ಮತ್ತೇ ಟಿಎಪಿಸಿಎಂಎಸ್‌ನಲ್ಲಿ ಅಧಿಕಾರ ಹಿಡಿಯಬೇಕು’ ಎಂದು ತಿಳಿಸಿದರು.

‘ಚುನಾವಣೆಯಲ್ಲಿ ತಂತ್ರಗಾರಿಕೆ ಬಹಳ ಮುಖ್ಯ. ಅದನ್ನು ನಾವು ಚೆನ್ನಾಗಿ ಅಳವಡಿಸಿಕೊಳ್ಳಬೇಕು. ನಾಳೆ ಅದಕ್ಕಾಗಿಯೇ ಹಿರಿಯರ ಸಭೆ ನಡೆಸೋಣ. ಸಾಮಾಜಿಕ ನ್ಯಾಯ ಕೊಡುವ ರೀತಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕು. ಫಲಿತಾಂಶ ಬರುವವರೆಗೂ ನಾವು ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕುಟುಂಬದ ಸದಸ್ಯರಂತೆ ನಾವೆಲ್ಲರೂ ಕೆಲಸ ಮಾಡಬೇಕು’ ಎಂದರು.

ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕ ಗೋವಿಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಮುಖಂಡರಾದ ಎಸ್.ಎಂ.ಮುನಿಯಪ್ಪ, ಜಿ.ಆರ್.ಶ್ರೀನಿವಾಸ್, ವೆಂಕಟನಾರಾಯಣಪ್ಪ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !