ಕೋಲಾರ: ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ರಸ್ತೆಗೆ ಟೊಮೆಟೊ ಸುರಿದು ಧರಣಿ

7

ಕೋಲಾರ: ಬೆಂಬಲ ಬೆಲೆ ಘೋಷಿಸಲು ಒತ್ತಾಯಿಸಿ ರಸ್ತೆಗೆ ಟೊಮೆಟೊ ಸುರಿದು ಧರಣಿ

Published:
Updated:
Deccan Herald

ಕೋಲಾರ: ಟೊಮೆಟೊ ಹಾಗೂ ಚೆಂಡು ಹೂವಿಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಮಂಗಳವಾರ ಧರಣಿ ನಡೆಸಿದರು.

ಕೆಎಸ್ಆರ್‌ಟಿಸಿ ವೃತ್ತದಲ್ಲಿ ರಸ್ತೆಗೆ ಟೊಮೆಟೊ ಸುರಿದು ರೈತರ ಆತ್ಮಹತ್ಯೆಯ ಅಣಕು ಪ್ರದರ್ಶನ ನಡೆಸಿದ ಧರಣಿನಿರತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಟೊಮೆಟೊ ಹಾಗೂ ಚೆಂಡು ಹೂವಿನ ಬೆಲೆ ದಿಢೀರ್‌ ಕುಸಿದಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ದಿಕ್ಕು ತೋಚದಂತಾಗಿದೆ. ಬಡ್ಡಿ ಸಾಲ ಮಾಡಿ ಟೊಮೆಟೊ, ಚೆಂಡು ಹೂವು ಬೆಳೆದ ರೈತರು ಸಾಲದ ಕಂತು ಹಾಗೂ ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ’ ಎಂದು ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಟೊಮೆಟೊ ಜಿಲ್ಲೆಯ ಪ್ರಮುಖ ಬೆಳೆ. ಬಹುಪಾಲು ರೈತರು ಬರ ಪರಿಸ್ಥಿತಿ ನಡುವೆಯೂ ಕೊಳವೆ ಬಾವಿ ಕೊರೆಸಿ ಟೊಮೆಟೊ ಬೆಳೆಯುತ್ತಿದ್ದಾರೆ. ಒಂದೆಡೆ ಬೆಲೆ ಕುಸಿತವು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮತ್ತೊಂದೆಡೆ ಕೀಟಬಾಧೆಯಿಂದ ಬೆಳೆ ಹಾಳಾಗಿದೆ. ಮಾರುಕಟ್ಟೆಯಲ್ಲಿ ದಲ್ಲಾಳಿಗಳು ತೂಕದಲ್ಲಿ ಮೋಸ ಮಾಡಿ ರೈತರನ್ನು ಶೋಷಿಸುತ್ತಿದ್ದಾರೆ’ ಎಂದು ದೂರಿದರು.

ರೈತಪರ ಕಾಳಜಿಯಿಲ್ಲ: ‘ಟೊಮೆಟೊ ಮತ್ತು ಚೆಂಡು ಹೂವು ಬೆಳೆಗೆ ಖರ್ಚು ಮಾಡಿದ ಬಂಡವಾಳ ಸಹ ವಾಪಸ್‌ ಬಂದಿಲ್ಲ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರಗಳು ಅನ್ನದಾತರ ಜೀವನದ ಜತೆ ಚೆಲ್ಲಾಟವಾಡುತ್ತಿವೆ. ರೈತರ ಸಮಸ್ಯೆಯು ಪಕ್ಷಗಳಿಗೆ ರಾಜಕೀಯದ ವಸ್ತುವಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ರೈತಪರ ಕಾಳಜಿಯಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.

‘ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹಾಗೂ ಮಂಡಿ ಮಾಲೀಕರ ಕಮಿಷನ್‌ ದಂಧೆ ಮಿತಿ ಮೀರಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಕಂಪನಿಗಳು ರೈತರ ರಕ್ತ ಹೀರುತ್ತಿವೆ. ಕಾರ್ಪೊರೇಟ್‌ ಕಂಪನಿಗಳ ಹಾಗೂ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತವೆ. ವರ್ತಕರು, ದಲ್ಲಾಳಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ಬಡ ರೈತರನ್ನು ಶೋಷಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಇ–ಟೆಂಡರ್: ‘ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ವೈಜ್ಞಾನಿಕ ಬೆಲೆ ಘೋಷಣೆ ಮಾಡಿ ರೈತರ ಹಿತ ಕಾಯಬೇಕು. ಎಪಿಎಂಸಿಯಲ್ಲಿ ಕಮಿಷನ್‌ ದಂಧೆಗೆ ಕಡಿವಾಣ ಹಾಕಬೇಕು. ಇ–ಟೆಂಡರ್ ಮೂಲಕ ಕೃಷಿ ಉತ್ಪನ್ನಗಳ ಹರಾಜು ನಡೆಸಬೇಕು. ಕೃಷಿಕರ ಪರವಾದ ಬೆಳೆ ವಿಮೆ ನೀತಿ ಜಾರಿಗೊಳಿಸಬೇಕು. ಸ್ವಾಮಿನಾಥನ್ ಆಯೋಗದ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಪುರುಷೋತ್ತಮ್, ನಾರಾಯಣಸ್ವಾಮಿ, ಶ್ರೀನಿವಾಸ್, ನಾಗರಾಜಪ್ಪ, ಸಾಗರ್, ರಂಜಿತ್, ವೆಂಕಟೇಶಪ್ಪ, ಹರೀಶ್, ಅನಿಲ್, ಹರಿಕುಮಾರ್, ಆಂಜಿನಪ್ಪ, ನಾಗೇಶ್, ರಾಜು ಪಾಲ್ಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !