ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಸರಗಳ್ಳನ ಬಂಧನ

7

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಸರಗಳ್ಳನ ಬಂಧನ

Published:
Updated:
Deccan Herald

ಮಂಗಳೂರು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆ ತಂಡ ಕಟ್ಟಿಕೊಂಡು ಬಂದು ಸರಗಳವು ಮಾಡುತ್ತಿದ್ದ ಕುಖ್ಯಾತ ಸರಗಳ್ಳನೊಬ್ಬನನ್ನು ವಾಮಂಜೂರು ಬಳಿ ಮಂಗಳವಾರ ಬಂಧಿಸಿರುವ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು, 140 ಗ್ರಾಂ. ಚಿನ್ನಾಭರಣ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

‘ಸುರತ್ಕಲ್‌ ಸಮೀಪದ ಕಾಟಿಪಳ್ಳ ಎರಡನೇ ಬ್ಲಾಕ್‌ ಈದ್ಗಾ ಮಸೀದಿ ಬಳಿಯ ನಿವಾಸಿ ಶಾಕಿಬ್‌ ಅಲಿಯಾಸ್‌ ಸಾಬು (25) ಬಂಧಿತ ಆರೋಪಿ. ಸಹಚರರ ಜೊತೆ ಸೇರಿಕೊಂಡು ಸರಗಳವು ಮಾಡಲು ಹೊಂಚು ಹಾಕುತ್ತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಮ, ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಮ್‌ಸುಂದರ್‌ ಮತ್ತು ಸಿಬ್ಬಂದಿ ಈತನನ್ನು ಬಂಧಿಸಿದ್ದಾರೆ. ಜೊತೆಗಿದ್ದ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್‌ ತಿಳಿಸಿದ್ದಾರೆ.

ಈತ ಕಾರ್ಕಳ ತಾಲ್ಲೂಕಿನ ಇರ್ವತ್ತೂರು ಎಂಬಲ್ಲಿ ಏಪ್ರಿಲ್‌ 5ರಂದು ನಡೆದು ಹೋಗುತ್ತಿದ್ದ ಕರಿಯ ಮೂಲ್ಯ ಎಂಬುವವರ ಕತ್ತಿನಲ್ಲಿದ್ದ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದ. ಜುಲೈ 15ರಂದು ಉಡುಪಿ ಜಿಲ್ಲೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲಾರ್‌ ಕಾನ್‌ ಎಂಬಲ್ಲಿ ಆಲಿಸ್‌ ಕುಟಿನ್ಹೋ ಎಂಬ ವೃದ್ಧೆಯ ಕತ್ತಿನಲ್ಲಿದ್ದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿದ್ದ. ಆಗಸ್ಟ್‌ 16ರಂದು ಮೂಡುಬಿದಿರೆಯ ಸುಭಾಷ್‌ನಗರದಲ್ಲಿ ಯಶೋದಾ ಎಂಬುವವರ ಅಂಗಡಿಗೆ ನೆಲಗಡಲೆ ಖರೀದಿ ನೆಪದಲ್ಲಿ ಹೋಗಿ ಅವರ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ಇದೇ ಆರೋಪಿ ಆ.29ರಂದು ಕಾರ್ಕಳ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಕ್ಕುಂದೂರು ಹಾರ್ಜಡ್ಡು ಎಂಬಲ್ಲಿ ಗೀತಾ ಕಿಣಿ ಎಂಬುವವರ ಸರ ಕಸಿದುಕೊಂಡು ಹೋಗಿದ್ದ. ಆ.30ರಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರೆಂಜಾಳ ಮಾರಿಗುಡಿ ಎಂಬಲ್ಲಿ ಗೌರಿ ನಾಯಕ್‌ ಎಂಬುವವರ ಕರಿಮಣಿ ಸರ ಸುಲಿಗೆ ಮಾಡಿದ್ದ ಎಂದು ಕಮಿಷನರ್‌ ತಿಳಿಸಿದ್ದಾರೆ.

ಆರೋಪಿಯ ಬಳಿಯಿಂದ ಐದು ಚಿನ್ನದ ಸಎ, ಎರಡು ಕರಿಮಣಿ ಸರ ಮತ್ತು ಎರಡು ಚಿನ್ನದ ಪೆಂಡೆಂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನಾಭರಣಗಳ ಮೌಲ್ಯ ₹ 4.15 ಲಕ್ಷ. ಒಂದು ಮಾರುತಿ ರಿಟ್ಜ್ ಕಾರು ಹಾಗೂ ಎರಡು ಮೊಬೈಲ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಶಾಕಿಬ್‌ ವಿರುದ್ಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ ಮತ್ತು ಕಳ್ಳತನ ಆರೋಪದಡಿ ಆರು ಪ್ರಕರಣಗಳಿವೆ. ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಬೈಕ್‌ ಕಳವು ಪ್ರಕರಣ ದಾಖಲಾಗಿದೆ. ಆರೋಪಿ ಮತ್ತು ವಶಪಡಿಸಿಕೊಂಡ ಸ್ವತ್ತುಗಳನ್ನು ಮೂಡುಬಿದಿರೆ ಠಾಣೆ ಪೊಲೀಸರ ವಶಕ್ಕೆ ನೀಡಲಾಗಿದೆ. ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !