ಹಕ್ಕುಪತ್ರ ನೀಡಿಕೆ ವಿಳಂಬ: ಬಿಟಿಡಿಎಗೆ ಚಾಟಿ ಬೀಸಿದ ಗ್ರಾಹಕರ ವೇದಿಕೆ

7
₹1 ಲಕ್ಷ ಪರಿಹಾರ ನೀಡಲು ಸೂಚನೆ

ಹಕ್ಕುಪತ್ರ ನೀಡಿಕೆ ವಿಳಂಬ: ಬಿಟಿಡಿಎಗೆ ಚಾಟಿ ಬೀಸಿದ ಗ್ರಾಹಕರ ವೇದಿಕೆ

Published:
Updated:

ಬಾಗಲಕೋಟೆ: ಖರೀದಿದಾರರ ಹೆಸರಿಗೆ ನಿವೇಶನದ ಹಕ್ಕುಪತ್ರ ನೀಡಲು ವಿಳಂಬ ಮಾಡಿದ ಕಾರಣ ದೂರುದಾರರಿಗೆ ₹1 ಲಕ್ಷ ಪರಿಹಾರ ನೀಡುವಂತೆ ಇಲ್ಲಿನ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಟಿಡಿಎ) ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಏನಿದು ಪ್ರಕರಣ:

ಬೀಳಗಿ ತಾಲ್ಲೂಕು ಅರಕೇರಿಯ ತಿಮ್ಮಣ್ಣ ಮಸರಡ್ಡಿ ಹಾಗೂ ಬಾಗಲಕೋಟೆ ತಾಲ್ಲೂಕು ತುಳಸಗೇರಿಯ ಶ್ರೀನಿವಾಸ ಸಂಕರಟ್ಟಿ ಜಂಟಿ ಪಾಲುದಾರಿಕೆಯಲ್ಲಿ ಇಲ್ಲಿನ ನವನಗರದ ಸೆಕ್ಟರ್ ನಂ 5 ರಲ್ಲಿ ಯಲ್ಲಪ್ಪ ಜಕಾತಿ ಎಂಬುವವರಿಂದ ನಿವೇಶನ ಖರೀದಿಸಿದ್ದಾರೆ.

ಮೂಲ ಮಾಲೀಕರ ಹೆಸರು ತೆಗೆದು ತಮ್ಮ ಹೆಸರಿನಲ್ಲಿ ಹಕ್ಕುಪತ್ರ ನೀಡುವಂತೆ 2017ರ ನವೆಂಬರ್ 30ರಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿ, ಶುಲ್ಕ ಪಾವತಿಸಿದ್ದರೂ ಸಂಬಂಧಿಸಿದವರು ಹಕ್ಕುಪತ್ರ ಕೊಟ್ಟಿಲ್ಲ ಎನ್ನಲಾಗಿದೆ.

’ಅರ್ಜಿ ಸ್ವೀಕರಿಸಿದ 45 ದಿನಗಳೊಳಗೆ ವಿಲೇವಾರಿ ಮಾಡಬೇಕು ಎಂಬ ನಿಯಮವಿದ್ದರೂ ಐದು ತಿಂಗಳು ಕಾಲ ಸತಾಯಿಸಲಾಗಿದೆ. ಇದು ಸೇವಾ ನ್ಯೂನ್ಯತೆ’ ಎಂದು ಆರೋಪಿಸಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಹಾಗೂ ಪುನರ್ವಸತಿ ಅಧಿಕಾರಿ ವಿರುದ್ಧ ಕಳೆದ ಜೂನ್ 6ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.

ದೂರಿನಲ್ಲಿ ಏನಿದೆ?
’ಸದರಿ ನಿವೇಶನದಲ್ಲಿ ₹2 ಕೋಟಿ ವೆಚ್ಚದಲ್ಲಿ ಮನೆ ಕಟ್ಟುವ ಯೋಜನೆ ಹೊಂದಿದ್ದೇವೆ. ಬಿಟಿಡಿಎ ನಿಗದಿತ ಅವಧಿಯಲ್ಲಿ ಹಕ್ಕುಪತ್ರ ಕೊಡದ ಕಾರಣ ಮನೆಕಟ್ಟುವುದು ವಿಳಂಬವಾಗಿದೆ. ಈ ಅವಧಿಯಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ವೆಚ್ಚ ಹೆಚ್ಚಳವಾಗಿದೆ. ಹಾಗಾಗಿ ಕಾಮಗಾರಿಗೆ ಈಗ ಮೊದಲಿಗಿಂತ ₹15 ಲಕ್ಷ ಹೆಚ್ಚು ವ್ಯಯಿಸಬೇಕಿದೆ. ಇದು ಬಿಟಿಡಿಎ ಸೇವಾನ್ಯೂನ್ಯತೆಯಿಂದ ನಮಗೆ ಆದ ನಷ್ಟ. ಹಾಗಾಗಿ ಹಾನಿಯ ಮೊತ್ತದ ಜೊತೆಗೆ ಮಾನಸಿಕ ವ್ಯಥೆಗೆ ₹2 ಲಕ್ಷ ಹಾಗೂ ₹5000 ದೂರಿನ ಖರ್ಚು ಕೊಡಿಸುವಂತೆ’ ಗ್ರಾಹಕರ ವೇದಿಕೆಗೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷೆ ಕೆ.ಶಾರದಾ, ’ಪರಿಹಾರ ಮೊತ್ತದ ಜೊತೆಗೆ ದೂರಿನ ಖರ್ಚು ₹5 ಸಾವಿರ ನೀಡಬೇಕು. ಆದೇಶ ಹೊರಬಿದ್ದ 30 ದಿನಗಳಲ್ಲಿ ದೂರುದಾರರಿಗೆ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ಹಕ್ಕಪತ್ರ ಕೊಡುವವರೆಗೂ ಪ್ರತಿ ದಿನಕ್ಕೆ ₹100ರಂತೆ ದಂಡ ಕೊಡಬೇಕು’ ಎಂದು ಎದುರುದಾರರಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪ‍ಡೆಯಲು ಬಿಟಿಡಿಎ ಮುಖ್ಯ ಎಂಜಿನಿಯರ್ ಸೈಯದ್ ಇಸಾಕ್ ಅಪ್ಸರ್ ಅವರನ್ನು ಸಂಪರ್ಕಿಸಲು ‘ಪ್ರಜಾವಾಣಿ’ ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !