ಬಡ್ತಿ ಮೀಸಲಾತಿ ಕಾಯ್ದೆಗೆ ವಿರೋಧ: ‘ಅಸಹಕಾರ’ದ ಎಚ್ಚರಿಕೆ

7
’ಅಹಿಂಸಾ’ ವರ್ಗದ ನೌಕರರಿಂದ ಪ್ರತಿಭಟನೆ

ಬಡ್ತಿ ಮೀಸಲಾತಿ ಕಾಯ್ದೆಗೆ ವಿರೋಧ: ‘ಅಸಹಕಾರ’ದ ಎಚ್ಚರಿಕೆ

Published:
Updated:
Deccan Herald

ಬಾಗಲಕೋಟೆ: ಬಡ್ತಿ ಮೀಸಲಾತಿ ಕಾಯ್ದೆ 2018ರನ್ನು ಜಾರಿಗೊಳಿಸದಂತೆ ಆಗ್ರಹಿಸಿ ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಸಾಮಾನ್ಯ ವರ್ಗದ ಸರ್ಕಾರಿ ನೌಕರರ ಸಂಘಟನೆ ‘ಅಹಿಂಸಾ’ ಜಿಲ್ಲಾ ಘಟಕದ ನೇತೃತ್ವದಲ್ಲಿ ಗುರುವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸದಂತೆ ಆಗ್ರಹಿಸಿದರು. ನಂತರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ನಾಡಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಮೋಹನ ನಾಡಗೌಡ, ‘ ರಾಜ್ಯ ಸರ್ಕಾರ 1978ರಲ್ಲಿ ಮೊದಲ ಬಾರಿಗೆ ಬಡ್ತಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರಿಗೆ ಮೀಸಲಾತಿಗೆ ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶ ಡಿ ದರ್ಜೆಯಿಂದ ಎ ದರ್ಜೆಯ ನೌಕರರಿಗೂ ಇದೆ. ಈ ನೀತಿಯಿಂದ ಬಡ್ತಿ ಮೂಲಕ ಪಡೆಯುವ ಬಹುತೇಕ ಹುದ್ದೆಗಳು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಲಭಿಸಿ, ಶೇ 82ರಷ್ಟಿರುವ ಉಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಡ್ತಿ ನೀತಿಯನ್ನು ಸಾಮಾನ್ಯ ವರ್ಗದ ನೌಕರರು 1992ರಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದರು. ಮುಂದೆ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಲಾಯಿತು. ಅಂತಿಮವಾಗಿ 2017ರ ಫೆಬ್ರುವರಿಯಲ್ಲಿ ಸಾಮಾನ್ಯ ವರ್ಗಕ್ಕೂ ನ್ಯಾಯ ದೊರೆಕಿತು’ ಎಂದರು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಬಡ್ತಿ ಮೀಸಲಾತಿಯನ್ನು ಸರ್ಕಾರ ರದ್ದು ಪಡಿಸಿಲ್ಲ. ಆದರೆ ಜೇಷ್ಠತೆ ನೀಡಲು ಬರುವುದಿಲ್ಲ ಎಂದು ತಿಳಿಸಿದೆ. ನ್ಯಾಯಾಲಯ ತನ್ನ ಆದೇಶವನ್ನು ಆರು ತಿಂಗಳ ಒಳಗೆ ಜಾರಿ ಮಾಡಲು ತಿಳಿಸಿತ್ತು. ಆದರೆ ಅದನ್ನು ಸರ್ಕಾರ ಪಾಲಿಸಿಲ್ಲ. ಆ ಬಗ್ಗೆ ನ್ಯಾಯಾಂಗ ನಿಂದನಾ ಅರ್ಜಿ ಕೂಡಾ ಹಾಕಲಾಗಿದೆ. ಈಗಾಗಲೇ ನಾಲ್ಕೈದು ಬಾರಿ ಈ ವಿಚಾರ ಸಂಪುಟ ಸಭೆಯಲ್ಲೂ ಚರ್ಚೆಗೆ ಬಂದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ಬಡ್ತಿಯಲ್ಲಿ ಮೀಸಲಾತಿ ವಿರೋಧಿಸಿ ಕಳೆದ 26 ವರ್ಷದಿಂದ ಈ ಹೋರಾಟ ನಡೆಸಲಾಗುತ್ತಿದೆ. ಲಕ್ಷಾಂತರ ಮಂದಿ ನೌಕರರು ಬಡ್ತಿಯಿಂದ ವಂಚಿತರಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಬಂದು 20 ತಿಂಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ನ್ಯಾಯಾಲಯದ ಆದೇಶದಂತೆ ಈಗ ಯಥಾಸ್ಥಿತಿ ಕಾಪಾಡಬೇಕಿದೆ. ಆದರೆ ಸರ್ಕಾರ ಕಾಯ್ದೆ ಜಾರಿ ಮಾಡಲು ಹೊರಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘಟನೆಯ ಉಪಾಧ್ಯಕ್ಷರಾದ ಸಿ.ಎಚ್.ಕಟಗೇರಿ,  ಆರ್.ರಘುನಾಥ, ಕಾರ್ಯದರ್ಶಿ ವಿ.ಎನ್.ಪತ್ತಾರ, ಮಾಧ್ಯಮ ಕಾರ್ಯದರ್ಶಿ ವೈ.ಎಚ್.ಇದ್ದಲಗಿ, ದುಂಡಪ್ಪ ಏಳೆಮ್ಮಿ, ಮಹೇಶ ಕಕರಡ್ಡಿ, ರಾಘವೇಂದ್ರ ತಪಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !