ಸಾಹಿತಿ ಶಿವರಾಮ ಕಾರಂತರು ವಿಶ್ವಕೋಶ: ಉಪನ್ಯಾಸಕ ಶ್ರೀನಿವಾಸ್‌ಪ್ರಸಾದ್‌ ಬಣ್ಣನೆ

7
ಕಾರಂತರ ಜನ್ಮ ದಿನಾಚರಣೆ

ಸಾಹಿತಿ ಶಿವರಾಮ ಕಾರಂತರು ವಿಶ್ವಕೋಶ: ಉಪನ್ಯಾಸಕ ಶ್ರೀನಿವಾಸ್‌ಪ್ರಸಾದ್‌ ಬಣ್ಣನೆ

Published:
Updated:
Deccan Herald

ಕೋಲಾರ: ‘ಸಾಹಿತಿ ಶಿವರಾಮ ಕಾರಂತರು ಸಾಹಿತ್ಯಕವಾಗಿ ಮಾಡಿದ ಕೆಲಸವನ್ನು ಯಾವುದೇ ವಿಶ್ವವಿದ್ಯಾಲಯದಿಂದಲೂ ಮಾಡಲು ಸಾಧ್ಯವಿಲ್ಲ. ಕಾರಂತರು ವಿಶ್ವಕೋಶವಿದ್ದಂತೆ’ ಎಂದು ಕೆಜಿಎಫ್‌ನ ಜೈನ್ ಕಾಲೇಜಿನ ಉಪನ್ಯಾಸಕ ಡಿ.ಎಸ್.ಶ್ರೀನಿವಾಸ್‌ಪ್ರಸಾದ್‌ ಬಣ್ಣಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವರಾಮ ಕಾರಂತರ 116ನೇ ಜನ್ಮ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ‘ಕಾರಂತರು 427 ವಿವಿಧ ಕೃತಿಗಳನ್ನು ರಚಿಸಿದ್ದಾರೆ. ಯುಗ ಪ್ರವರ್ತಕ ಹಾಗೂ ಸೃಜನಶೀಲರೂ ಆಗಿರುವ ಅವರ ಬಗ್ಗೆ ಸಾವಿರ ಮಂದಿ ಪಿ.ಎಚ್‌ಡಿ ಮಾಡಬಹುದು’ ಎಂದರು.

‘ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದ್ದ ಕಾರಂತರು ಆಧುನಿಕ ಭಾರತದ ರವೀಂದ್ರನಾಥ ಠಾಕೂರ್. ಗಿಡಮೂಲಿಕೆ, ವಿಜ್ಞಾನ, ಸಾಹಿತ್ಯ, ಸಂಸ್ಕೃತಿ, ಭಾಷೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡ ಅವರು ಸರಳಜೀವಿ. ಅವರು ಪರಿಸರವಾದಿಯಾಗದೆ ಪರಿಸರ ವಾಸಿಯಾಗಿದ್ದರು’ ಎಂದು ಸ್ಮರಿಸಿದರು.

ಮೇರು ಪರ್ವತ: ‘ಪ್ರಕೃತಿಯ ಸೊಬಗು ಸವಿದು ಸಾಹಿತ್ಯ ರಚಿಸಿದವರಲ್ಲಿ ಕಾರಂತಜ್ಜ ಸಹ ಒಬ್ಬರು. ಅವರ ಕಾಲದ ಪರಿಸರ ಸೌಂದರ್ಯ ಈಗ ಇಲ್ಲದಿರುವುದು ವಿಷಾದನೀಯ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.

‘ಶಿವರಾಮ ಕಾರಂತರನ್ನು ಕವಿ ಅಥವಾ ಸಾಹಿತಿ ಎನ್ನುವುದಕ್ಕಿಂತ ದಾರ್ಶನಿಕ ಎನ್ನುವುದು ಒಳಿತು. ಓದು ಮೊಟಕುಗೊಳಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಮಹಾನ್ ಚೇತನ ಅವರು. ಕಡಲ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಅವರು ಕನ್ನಡ ಸಾಹಿತ್ಯ- ಹಾಗೂ ಸಂಸ್ಕೃತಿಯ ಮೇರು ಪರ್ವತ’ ಎಂದು ಹೇಳಿದರು.

‘ಪ್ರಕೃತಿಯ ಪಿಸುಮಾತು ಗ್ರಹಿಸಿ ತಮ್ಮ ಸಾಹಿತ್ಯದೊಳಗೆ ನಿರೂಪಿಸಿದ ಕನ್ನಡದ ಕೆಲವೇ ಬರಹಗಾರರಲ್ಲಿ ಕಾರಂತರು ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅಗ್ರಮಾನ್ಯರು. ಕಾರಂತರ ಬದುಕೆಂದರೆ ಅದು ಇಡೀ ಭಾರತದ ಚರಿತ್ರೆ. ಅವರು 20ನೇ ಶತಮಾನದ ಎಲ್ಲಾ ಘಟ್ಟಗಳನ್ನು ಕಂಡವರು. ಅವರ ಸಾಹಿತ್ಯ ಮತ್ತು ವಿಚಾರವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಆದ್ಯ ಕರ್ತವ್ಯ’ ಎಂದರು.

ಸೃಜನಶೀಲ ವ್ಯಕ್ತಿ: ‘ನಾಡು, ನುಡಿ ಬೆಳವಣಿಗೆಯಲ್ಲಿ ಸಾಹಿತಿಗಳ ಪಾತ್ರ ಹಿರಿದು. ಕನ್ನಡ ಸಾಹಿತ್ಯಕ್ಕೆ 2,000 ವರ್ಷಗಳ ಇತಿಹಾಸವಿದೆ. ನಾಡು ಕಂಡ ಶ್ರೇಷ್ಠ ಮತ್ತು ಸೃಜನಶೀಲ ವ್ಯಕ್ತಿ ಕಾರಂತರಾಗಿದ್ದು, ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಕೈ ಹಾಕದ ಕ್ಷೇತ್ರವಿಲ್ಲ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯಪಟ್ಟರು.

‘ಕಾರಂತರು ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಶ್ರಮಿಸಿದರು. ಅಲ್ಲದೇ, ತಾವೇ ಯಕ್ಷಗಾನ ಕಲಿತು ರಂಗದ ಮೇಲೆ ಸಾಕಷ್ಟು ಪ್ರಯೋಗ ಮಾಡಿದ್ದರು. ಯಕ್ಷಗಾನ ತಂಡ ಕಟ್ಟಿಕೊಂಡು ವಿದೇಶದಲ್ಲೂ ಈ ಕಲೆ ಪ್ರಚುರಪಡಿಸುವ ಪ್ರಯತ್ನ ಮಾಡಿದ್ದರು. ಸಮಾಜ ಸುಧಾರಣೆ ನಿಟ್ಟಿನಲ್ಲಿ ವೇಶ್ಯಾವಿವಾಹ ಮಾಡಿಸಿದ್ದರು’ ಎಂದು ಹೇಳಿದರು.

ರವಿ ಕಾಲೇಜು ಕಾರ್ಯದರ್ಶಿ ಗೋಪಾಲಪ್ಪ, ನಿರ್ದೇಶಕ ಜಿ.ನರೇಶ್‌ಬಾಬು, ಪ್ರಾಂಶುಪಾಲ ಟಿ.ನರಸಿಂಹಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳಾದ ಮುನಿರತ್ನಪ್ಪ, ವೀರವೆಂಕಟಪ್ಪ, ಅಶ್ವತ್ಥ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಿ.ಶ್ರೀನಿವಾಸ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !