ಯುವಜನತೆಯಲ್ಲಿ ಮಾನಸಿಕ ಖಿನ್ನತೆ: ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಕಳವಳ

7
‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಪ್ತಾಹ’ ಕಾರ್ಯಕ್ರಮ

ಯುವಜನತೆಯಲ್ಲಿ ಮಾನಸಿಕ ಖಿನ್ನತೆ: ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಕಳವಳ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಆಧುನಿಕ ಸಮಾಜದಲ್ಲಿ ಯುವಜನತೆ ಹಾಗೂ ವಿದ್ಯಾವಂತರೇ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ವಿಷಾದನೀಯ’ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಸಪ್ತಾಹ’ ಉದ್ಘಾಟಿಸಿ ಅವರು ಮಾತನಾಡಿದರು.

‘ಶಾರೀರಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಆದರೆ ಇತ್ತೀಚೆಗೆ ಸುಮಾರು 15 ರಿಂದ 30 ವರ್ಷದ ಒಳಗಿನ ಯುವಜನರು ಹೆಚ್ಚು ಮಾನಸಿಕ ಖಿನ್ನತೆ ಒಳಗಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮ, ದುಶ್ಚಟ, ಅತಿಯಾದ ಮೊಬೈಲ್ ಬಳಕೆ ಯುವಜನರನ್ನು ದಾರಿ ತಪ್ಪಿಸುತ್ತಿವೆ’ ಎಂದು ಅಭಿಪ್ರಾಯಪಟ್ಟರು.

‘ಉತ್ತಮ ವಾತಾವರಣದಿಂದ ಮಾತ್ರ ಮಾನಸಿಕ ಆರೋಗ್ಯ ಸುಧಾರಿಸಲು ಸಾಧ್ಯ. ಹಾಗಾಗಿ ಇವತ್ತು ಉತ್ತಮ ವಾತಾವರಣ ನಿರ್ಮಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ. ಪೋಷಕರು ಮಕ್ಕಳಿಗೋಸ್ಕರ ಹೆಚ್ಚು ಸಮಯ ಮೀಸಲಿಡಬೇಕು. ಪ್ರತಿಯೊಬ್ಬರು ಯೋಗಾಭ್ಯಾಸ, ಧ್ಯಾನ ಮಾಡುವುದು ರೂಢಿಸಿಕೊಳ್ಳಬೇಕು. ಆಗ ಮಾತ್ರ ಸ್ವಸ್ಥ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್ ಅವರು ಮಾತನಾಡಿ, ‘ಉತ್ತಮ ಆರೋಗ್ಯ ದೈಹಿಕ ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನೂ ಒಳಗೊಂಡಿರುತ್ತದೆ. ಉತ್ತಮ ಆರೋಗ್ಯಕ್ಕೆ ಮೂಲ ಮದ್ದು, ಮಾನಸಿಕ ಆರೋಗ್ಯ. ಆದರೆ ಇಂದಿನ ಯುವಪೀಳಿಗೆ ಹಲವಾರು ಕಾರಣಗಳಿಂದಾಗಿ ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿದೆ’ ಎಂದರು.

ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘ಇಡೀ ವಿಶ್ವದಲ್ಲೇ ನಮ್ಮ ದೇಶ ಅತಿ ಹೆಚ್ಚು ಯುವ ಜನತೆ ಹೊಂದಿದೆ. ಈ ದೇಶದ ನಿಜವಾದ ಭವಿಷ್ಯವೇ ಯುವಜನರು. ಆದರೆ ಆ ಯುವಕರೇ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿ’ ಎಂದು ಹೇಳಿದರು.

‘ಅಧ್ಯಯನವೊಂದರ ಪ್ರಕಾರ ಇವತ್ತು ಜಗತ್ತಿನಲ್ಲಿ 200 ಕೋಟಿಗಿಂತಲೂ ಹೆಚ್ಚು ಜನರು ಫೇಸ್‌ಬುಕ್ ಬಳಕೆ ಮಾಡುತ್ತಿದ್ದಾರೆ. ಅದರ ಪ್ರಮಾಣ ಪ್ರತಿ ವರ್ಷ ಶೇ 11 ರಷ್ಟು ಹೆಚ್ಚಳವಾಗುತ್ತಿದೆ. 150 ಕೋಟಿ ಜನರು ವಾಟ್ಸಪ್‌ ಬಳಕೆ ಮಾಡುತ್ತಿದ್ದಾರೆ. ಅವರ ಪೈಕಿ ಶೇ 18 ರಷ್ಟು ಬಳಕೆದಾರರು 17 ರಿಂದ 25 ವರ್ಷದ ವಯೋಮಾನದರಾಗಿದ್ದಾರೆ’ ಎಂದು ತಿಳಿಸಿದರು.

‘ಭಾರತದಲ್ಲಿ ಶೇ 75 ರಷ್ಟು ಜನರು ಸಮಯವನ್ನು ತಮ್ಮ ಫೋನ್‌ಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಗಾಗಿಯೇ ಕಳೆಯುತ್ತಿದ್ದಾರೆ ಎಂದು ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ. ಅತಿಯಾಗಿರುವ ಸಾಮಾಜಿಕ ಜಾಲತಾಣಗಳ ಗೀಳು ಯುವಜನರಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಜತೆಗೆ ಭಾವನೆಗಳಿಗೆ ಬೆಲೆ ಇಲ್ಲದಂತಾಗುತ್ತಿದೆ’ ಎಂದು ವಿಷಾದಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಧರ್ ಮಾತನಾಡಿ, ‘ಯುವಪೀಳಿಗೆ ಓದುವ ಅಭ್ಯಾಸವನ್ನು ರೂಢಿ ಮಾಡಿಕೊಳ್ಳಬೇಕು. ಉತ್ತಮ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಇದು ಸಹಕಾರಿಯಾಗುತ್ತದೆ. ಹೆಚ್ಚು ಪುಸ್ತಕಗಳನ್ನು ಓದಿದರೆ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಜ್ಞಾನ ವೃದ್ಧಿಯಾದರೆ, ಜೀವನದಲ್ಲಿ ಬರುವಂತಹ ಸಮಸ್ಯೆಗಳನ್ನು ಎದುರಿಸಲು ಮಾರ್ಗ ಸಿಗುತ್ತದೆ. ಆಗ ಮಾನಸಿಕ ಒತ್ತಡಕ್ಕೆ ಒಳಗಾಗುವುದರಿಂದ ಪಾರಾಗಬಹುದು’ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್‌.ದೇವರಾಜ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಎನ್.ಚಂದ್ರಮೋಹನ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !