35 ದಿನದಲ್ಲಿ ನೀರು ಸಮಸ್ಯೆ ಪರಿಹಾರ: ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಭರವಸೆ

7
ಸಾರ್ವಜನಿಕರ ಕುಂದು ಕೊರತೆ ಸಭೆ

35 ದಿನದಲ್ಲಿ ನೀರು ಸಮಸ್ಯೆ ಪರಿಹಾರ: ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಭರವಸೆ

Published:
Updated:
Deccan Herald

ಕೋಲಾರ: ‘ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಿ 35 ದಿನದೊಳಗೆ ಎಲ್ಲಾ ವಾರ್ಡ್‌ಗಳಿಗೂ ನೀರು ಕೊಡುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಭರವಸೆ ನೀಡಿದರು.

ನಗರಸಭೆಯು ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ಕೊಡುತ್ತೇವೆ. ಯುಜಿಡಿ, ರಸ್ತೆ, ಚರಂಡಿ ಹೀಗೆ ನಗರವಾಸಿಗಳು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ನೀಡುತ್ತೇವೆ’ ಎಂದರು.

‘ನೀರಿನ ಸಮಸ್ಯಾತ್ಮಕ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು. ಹೊಸ ಮತ್ತು ದುರಸ್ತಿಯಾಗಿರುವ ಕೊಳವೆ ಬಾವಿಗಳಿಗೆ ಪಂಪ್ ಮೋಟರ್ ಅಳವಡಿಸಿ ಪೈಪ್‌ಲೈನ್‌ ಮೂಲಕ ನೀರು ಕೊಡುತ್ತೇವೆ. ಟ್ಯಾಂಕರ್‌ ನೀರು ಪೂರೈಕೆಗೆ ಅನುಮತಿ ನೀಡುವಂತೆ ಕೋರಿ ಜಿಲ್ಲಾಧಿಕಾರಿಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ನಗರಸಭೆಯಲ್ಲಿ 2 ಯುಜಿಡಿ ವಾಹನಗಳಿದ್ದು, ಬೆಳಿಗ್ಗೆಯಿಂದ ಸಂಜೆವರೆಗೂ ಕಾರ್ಯ ನಿರ್ವಹಿಸುತ್ತಿವೆ. ಈ ಎರಡೂ ವಾಹನಗಳಿಗೆ ತಲಾ ಇಬ್ಬರು ಚಾಲಕರನ್ನು ನೇಮಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹದವರೆಗೆ ಮೊದಲ ಪಾಳಿಯಲ್ಲಿ ಒಬ್ಬ ಚಾಲಕ ಮತ್ತು ಮಧ್ಯಾಹ್ನದ ನಂತರ ಎರಡನೇ ಪಾಳಿಯಲ್ಲಿ ಮತ್ತೊಬ್ಬ ಚಾಲಕ ಕೆಲಸ ಮಾಡುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಶಾಶ್ವತ ಪರಿಹಾರ: ‘ಕುಂದು ಕೊರತೆ ಸಭೆಯಲ್ಲಿ ನಗರದ ವಿವಿಧ ವಾರ್ಡ್‌ಗಳ ಸಾರ್ವಜನಿಕರು ಕುಡಿಯುವ ನೀರು, ಯುಜಿಡಿ, ರಸ್ತೆ, ಕಸದ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ದೂರು ನೀಡಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ’ ಎಂದು ತಿಳಿಸಿದರು.

‘ಜನನ ಮತ್ತು ಮರಣ ಪ್ರಮಾಣಪತ್ರ ಕೋರಿ 27 ಅರ್ಜಿ ಬಂದಿವೆ. ಅರ್ಜಿದಾರರಿಗೆ ಸ್ಥಳದಲ್ಲೇ ಅರ್ಧ ತಾಸಿನಲ್ಲಿ ಪ್ರಮಾಣಪತ್ರ ನೀಡಲಾಯಿತು. ಈ ಹಿಂದೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ ಅಂಚೆ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ಪ್ರಮಾಣಪತ್ರ ಕಳುಹಿಸಲಾಗಿದೆ. ಅದೇ ರೀತಿ ಇ–ಖಾತೆ ಅರ್ಜಿಗಳನ್ನು ಪರಿಶೀಲಿಸಿ ಅಂಚೆ ಮೂಲಕ ಅರ್ಜಿದಾರರಿಗೆ ದಾಖಲೆಪತ್ರ ರವಾನಿಸಲಾಗಿದೆ’ ಎಂದು ಹೇಳಿದರು.

ಒತ್ತುವರಿ ತೆರವಿಗೆ ಮನವಿ: ‘ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮುನೇಶ್ವರ ದೇವಸ್ಥಾನ ಮುಂಭಾಗದ ಜಾಗವನ್ನು ಕಾಂಗ್ರೆಸ್‌ನ ಪ್ರಭಾವಿ ನಾಯಕರು ಒತ್ತುವರಿ ಮಾಡಿದ್ದಾರೆ. ಆ ಒತ್ತುವರಿ ತೆರವುಗೊಳಿಸಿ ಜಾಗದ ಸುತ್ತ ತಂತಿ ಬೇಲಿ ಹಾಕಬೇಕು’ ಎಂದು ಕಠಾರಿಪಾಳ್ಯ ನಿವಾಸಿ ವಿ.ಮುರಳೀಧರ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

‘ಪುರಾತನ ಕಾಲದ ಮುನೇಶ್ವರ ದೇವಸ್ಥಾನಕ್ಕೆ ನಗರದಿಂದ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾಕಷ್ಟು ಭಕ್ತರು ಬರುತ್ತಾರೆ. ಅಂತಹ ಪವಿತ್ರ ಸ್ಥಳವನ್ನು ಭೂಗಳ್ಳರು ಕಬಳಿಸಿದ್ದಾರೆ. ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ದೇವಸ್ಥಾನದ ಜಾಗ ಉಳಿಸಬೇಕು’ ಎಂದು ಕೋರಿದರು.

ಯುಜಿಡಿ ಸಮಸ್ಯೆ: ‘5ನೇ ವಾರ್ಡ್‌ ವ್ಯಾಪ್ತಿಯ ಕನಕನಪಾಳ್ಯ, ಕುರುಬರಪೇಟೆಯಲ್ಲಿ ಯುಜಿಡಿ ಸಮಸ್ಯೆ ಗಂಭೀರವಾಗಿದೆ. ಬಡಾವಣೆಯ ಹಲವು ಮನೆಗಳಿಗೆ ಯುಜಿಡಿ ಕೊಳಚೆ ನೀರು ಮತ್ತು ಮಲಮೂತ್ರ ಹರಿದು ಬರುತ್ತಿದೆ. ಮನೆ ನಲ್ಲಿಯಲ್ಲೂ ಕೊಳಚೆ ನೀರು ಬರುತ್ತಿದೆ. ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಡ್ಡಾದಿಡ್ಡಿ ಅಗೆಯಲಾಗಿದ್ದು, ಓಡಾಟಕ್ಕೆ ಸಮಸ್ಯೆಯಾಗಿದೆ’ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

‘28ನೇ ವಾರ್ಡ್‌ ವ್ಯಾಪ್ತಿಯ ವಿಭೂತಿಪುರ ಮತ್ತು ಸತ್ಯಮ್ಮ ಬಡಾವಣೆಯಲ್ಲಿ ನೀರಿನ ಸಮಸ್ಯೆಯಿದೆ. ಬಡಾವಣೆಯ ನಲ್ಲಿಗಳಲ್ಲಿ ನೀರು ಬಂದು ವರ್ಷವಾಗಿದೆ. ಮತ್ತೊಂದೆಡೆ ಟ್ಯಾಂಕರ್‌ ನೀರು ಪೂರೈಸುತ್ತಿಲ್ಲ. ಯುಜಿಡಿ ಮುಚ್ಚಳಗಳು ಹಾಳಾಗಿವೆ. ನಗರಸಭೆ ಅಧಿಕಾರಿಗಳು ಸೌಜನ್ಯಕ್ಕೂ ಬಡಾವಣೆಗೆ ಬಂದು ಸಮಸ್ಯೆ ಪರಿಶೀಲಿಸಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೃತಕ ಅಭಾವ: ‘ಸತ್ಯಮ್ಮ ಬಡಾವಣೆಯಲ್ಲಿ 2 ದಶಕದಿಂದ ವರ್ಷಗಳಿಂದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನ ಸೌಕರ್ಯವಿಲ್ಲ. ಬಡಾವಣೆಯ ಕೊಳವೆ ಬಾವಿಯಲ್ಲಿ ನೀರಿದ್ದರೂ ಪಂಪ್‌ ಮೋಟರ್‌ ಕೆಟ್ಟಿರುವ ಕಾರಣ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ. ನಗರಸಭೆ ಆಡಳಿತ ಯಂತ್ರ ನಮ್ಮ ಪಾಲಿಗೆ ಸತ್ತಿದೆ’ ಎಂದು ನಿವಾಸಿಗಳು ಕಿಡಿಕಾರಿದರು.

‘ದಲಿತರ ಸ್ಮಶಾನಕ್ಕೆ ತಡೆಗೋಡೆ (ಕಾಂಪೌಂಡ್‌) ನಿರ್ಮಿಸದ ಕಾರಣ ಅಕ್ಕಪಕ್ಕದವರು ಒತ್ತುವರಿ ಮಾಡಿದ್ದಾರೆ. ಇದಕ್ಕೆ ನಗರಸಭೆಯ ನಿರ್ಲಕ್ಷ್ಯವೇ ಕಾರಣ. ಶೇ 24.10ರ ಅನುದಾನದಲ್ಲಿ ಸ್ಮಶಾನದ ಸುತ್ತ ಶೀಘ್ರವೇ ಕಾಂಪೌಂಡ್ ನಿಮಿಸಬೇಕು. ಇಲ್ಲದಿದ್ದರೆ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯರಾದ ಪ್ರಸಾದ್ ಬಾಬು, ಸೋಮಶೇಖರ್, ಆಯುಕ್ತ ಸತ್ಯನಾರಾಯಣ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !